ನವದೆಹಲಿ: ಶನಿವಾರ ಸಂಜೆ 4 ಗಂಟೆಗೆ ಸುಪ್ರೀಂ ಕೋರ್ಟ್ ಬಿಎಸ್ ಯಡಿಯೂರಪ್ಪನವರಿಗೆ ಬಹುಮತ ಸಾಬೀತು ಪಡಿಸುವಂತೆ ಆದೇಶ ನೀಡಿದೆ.
ರಾಜ್ಯಪಾಲರು ಬಿಎಸ್‍ವೈಗೆ 15 ದಿನಗಳ ಒಳಗಡೆ ಬಹುಮತ ಸಾಬೀತು ಪಡಿಸಲು ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್.ಎ. ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.
Advertisement
ಎರಡು ಪಕ್ಷಗಳ ಪರ ಹಾಜರಿದ್ದ ವಕೀಲರು ಬಲವಾಗಿ ವಾದ ಮಂಡಿಸಿದರು. ಕುರಿತು ಕಾನೂನಿನ ಅಂಶಗಳನ್ನು ಉದಾಹರಣೆ ನೀಡಿ ಸಮರ್ಥನೆ ನೀಡಿದ್ದರು. ಆದ್ರೆ ಎರಡು ಕಡೆಯ ವಾದ, ಪ್ರತಿವಾದ ಅಲಿಸಿದ ನ್ಯಾಯಾಲಯ ಸಿಎಂ ಬಿಎಸ್‍ವೈಗೆ ನಾಳೆ ಸಂಜೆ 4 ಗಂಟೆ ವೇಳೆಗೆ ಬಹುಮತ ಸಾಬೀತು ಪಡಿಸುವಂತೆ ಆದೇಶ ನೀಡಿತು.
Advertisement
Advertisement
ವಾದ ಹೀಗಿತ್ತು:
ಆರಂಭದಲ್ಲಿ ಯಡಿಯೂರಪ್ಪ ಪರ ವಕೀಲ ಮುಕುಲ್ ರೋಹ್ಟಗಿ, ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡಿದೆ. ನಮ್ಮ ಬಳಿ ಬಿಎಸ್‍ವೈ ನೀಡಿರುವ ಬಹುಮತದ ಪತ್ರವಿದೆ. ವಿಧಾನಸಭಾ ಚುನಾವಣಾ ಪೂರ್ವ ಯಾವುದೇ ಮೈತ್ರಿ ಇರಲಿಲ್ಲ. ಆದರೆ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಅಲ್ಲದೇ ಈ ವೇಳೆ ಶಾಸಕರನ್ನು ಹೆದರಿಸಿ ರೆಸಾರ್ಟ್‍ಗೆ ಕರೆದೊಯ್ಯಲಾಗಿದೆ. ಕೂಡಲೇ ಶಾಸಕರನ್ನ ಮುಕ್ತಗೊಳಿಸಿ. ನಾವು ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧ ಎಂದು ತಮ್ಮ ವಾದ ಮಂಡಿಸಿದರು.
Advertisement
ಈ ವಾದಕ್ಕೆ ನ್ಯಾಯಮೂರ್ತಿ ಸಿಕ್ರಿ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಬಹುಮತ ಇರುವ ಪತ್ರವನ್ನು ನೀಡಿದೆ. ಮತ್ತೊಂದೆಡೆ ಬಿಎಸ್ ಯಡಿಯೂರಪ್ಪ ಅವರು ನನಗೆ ಬಹುಮತವಿದೆ ಎಂದು ಹೇಳಿದ್ದಾರೆ. ಯಾವ ಆಧಾರದಲ್ಲಿ ರಾಜ್ಯಪಾಲರು ಯಡಿಯೂರಪ್ಪಗೆ ಅವಕಾಶ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಮುಕುಲ್ ರೋಹ್ಟಗಿ, ಈ ನಿರ್ಧಾರ ರಾಜ್ಯಪಾಲರ ವಿವೇಚನೆಗೆ ಬಿಟ್ಟಿದ್ದು. ಯಾರು ಸ್ಥಿರ ಮತ್ತು ಜನಪ್ರಿಯ ಸರ್ಕಾರ ನೀಡುತ್ತಾರೆ ಎಂಬುದನ್ನು ವಿವೇಚಿಸಿ ರಾಜ್ಯಪಾಲರು ಅವಕಾಶ ನೀಡುತ್ತಾರೆ. ಅಲ್ಲದೇ ರಾಜ್ಯಪಾಲರು ಸರ್ಕಾರಿಯಾ ಆಯೋಗದ ನಿಯಮಾವಳಿಯನ್ನು ಅನುಸರಿಸಿದ್ದಾರೆ. ನಮ್ಮದು ಅತಿ ದೊಡ್ಡ ಪಕ್ಷ ಜೊತೆಗೆ ನಮಗೆ ಇತರರ ಬೆಂಬಲವೂ ಇದೆ. ಕಾಂಗ್ರೆಸ್ ಪತ್ರದಲ್ಲಿ ಕೆಲ ಶಾಸಕರ ಸಹಿ ಇಲ್ಲ. ಕಾಂಗ್ರೆಸ್ ನಿಂದ ಆಯ್ಕೆ ಆಗಿರುವ ಶಾಸಕ ಆನಂದ್ ಸಿಂಗ್ ಸಹಿ ಇಲ್ಲ ಎಂದು ಉದಾಹರಣೆ ನೀಡಿದರು.
ಬಿಜೆಪಿ ಪರ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ಅಂತಿಮವಾಗಿ ಇದು ನಂಬರ್ ಗೇಮ್. ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕು. ಯಾರಿಗೂ ಸಮಯ ಕೊಡಲು ಸಾಧ್ಯವಿಲ್ಲ. ನಾವು ಯಾವುದೇ ಪಕ್ಷದ ಪರವೂ ಇಲ್ಲ. ಯಾರಿಗೂ ಸಮಯ ನೀಡಲ್ಲ. ಮೊದಲು ವಿಶ್ವಾಸಮತ ಯಾಚನೆ ಆಗಲಿ. ಆಮೇಲೆ ಕಾನೂನಿನ ಅನ್ವಯ ತೀರ್ಮಾನ ಮಾಡೋಣ ಎಂದರು.
ನ್ಯಾಯ ಮೂರ್ತಿಗಳ ನಂಬರ್ ಗೇಮ್ ಗೆ ಉತ್ತರಿಸಿದ ಮುಕುಲ್, ಹೌದು ಅದು ನಿಜ. ವಿಧಾನಸಭೆಯಲ್ಲಿ ನಾವು ಬಹುಮತ ಸಾಬೀತು ಮಾಡುತ್ತೇವೆ ಎಂದರು.
ಈ ವೇಳೆ ಮಧ್ಯ ಪ್ರವೇಶಿದ ಕಾಂಗ್ರೆಸ್- ಜೆಡಿಎಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಚುನಾವಣಾ ಆಯೋಗ ಸಂಪೂರ್ಣ ಫಲಿತಾಂಶ ಘೋಷಣೆಗೂ ಮುನ್ನವೇ ಬಿಎಸ್ ಯಡಿಯೂರಪ್ಪ ಅವರು ನಮ್ಮದು ದೊಡ್ಡ ಪಕ್ಷ ಎಂದು ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದಾರೆ. ಇದು ಹೇಗೆ ಆಗುತ್ತದೆ? ಕಾಂಗ್ರೆಸ್, ಜೆಡಿಎಸ್ ಎಲ್ಲಾ 117 ಶಾಸಕರ ವಿವರ ನೀಡಿದೆ. ತಕ್ಷಣ ಮೊದಲು ವಿಶ್ವಾಸ ಮತಯಾಚನೆಗೆ ಅವಕಾಶ ನೀಡಿ. ಆದರೆ ಯಾವುದೇ ಹೆಸರುಗಳಿಲ್ಲದೇ ಬಿಎಸ್‍ವೈ ಬಹುಮತ ಇದೆ ಎನ್ನುತ್ತಿದ್ದಾರೆ. 78 ಶಾಸಕರ ಸಹಿ ಉಳ್ಳ ಬೆಂಬಲವಿರುವ ಯಾವುದೇ ಪತ್ರ ರಾಜ್ಯಪಾಲರಿಗೆ ಸಿಕ್ಕಿಲ್ಲ. ಕೇವಲ ಚುನಾವಣಾ ಆಯೋಗದಿಂದ ಡೌನ್‍ಲೋಡ್ ಮಾಡಿದ ಪಟ್ಟಿ ನೀಡಿದ್ದಾರೆ. ನ್ಯಾಯಾಲಯದ ನಿರ್ಧಾರದಂತೆ ನಾಳೆ ವಿಶ್ವಾಸಮತ ಯಾಚನೆಗೆ ನಮ್ಮ ಸಮ್ಮತವಿದೆ ಎಂದು ಸ್ಪಷ್ಟಪಡಿಸಿದರು.
ನ್ಯಾಯಾಲಯದ ಕ್ರಮವನ್ನು ಆಕ್ಷೇಪಿಸಿದ ವಕೀಲ ಮುಕುಲ್ ರೋಹ್ಟಗಿ, ಸುಪ್ರೀಂಕೋರ್ಟ್ ಏಕೆ ಬಹುಮತ ತೋರಿಸಬೇಕು. ಬಹುಮತವನ್ನು ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸುತ್ತೇವೆ. ನಾಳೆ ವಿಶ್ವಾಸಮತಯಾಚನೆ ಕಷ್ಟವಾಗುತ್ತೆ. ಸದ್ಯ ಹಂಗಾಮಿ ಸ್ಪೀಕರ್ ನೇಮಕ ಸಹ ನಡೆದಿಲ್ಲ ಎಂದು ಹೇಳಿದರು.
ಮುಕುಲ್ ರೋಹ್ಟಗಿ ವಾದಕ್ಕೆ ಸಹಮತ ನೀಡಲು ನಿರಾಕರಿಸಿದ ನ್ಯಾಯಾಮೂರ್ತಿಗಳು ನಾವು ಡಿಜಿಪಿಗೆ ಸೂಚನೆ ನೀಡುತ್ತೇವೆ. ಎಲ್ಲಾ ಶಾಸಕರು ಸದನದಲ್ಲಿ ಹಾಜರು ಇರುವಂತೆ ನೋಡಿಕೊಳ್ಳಿ. ಅವರ ಸುರಕ್ಷತೆ ನಿಮ್ಮ ಹೊಣೆ. ವಿಶ್ವಾಸಮತ ಯಾಚನೆ ಮಾಡುವವರೆಗೆ ಆಂಗ್ಲೋ ಇಂಡಿಯನ್ ಸದಸ್ಯನ ನಾಮ ನಿರ್ದೇಶನ ಮಾಡಬೇಡಿ. ನಾಳೆ ಸಂಜೆ 4 ಗಂಟೆಗೆ ವೇಳೆಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸದನದಲ್ಲಿ ವಿಶ್ವಾಸಮತಯಾಚನೆ ಮಾಡಬೇಕು ಎಂದು ತೀರ್ಪು ಪ್ರಕಟಿಸಿದರು.