ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಆರಂಭವಾಗಿದೆ. ಆದರೆ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಜನರು ಅಸ್ತವ್ಯಸ್ಥಗೊಂಡಿದ್ದು, ರಾತ್ರಿ ಸುರಿದ ಮಳೆಯಿಂದಾಗಿ ಇಂದು ಮತದಾನಕ್ಕೂ ಅಡ್ಡಿ ಉಂಟು ಮಾಡಿದೆ.
ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ. ರಾತ್ರಿ ಸುರಿದ ಮಳೆಯ ಪರಿಣಾಮ ಸಿ.ವಿ.ರಾಮನ್ ನಗರದ ಬೂತ್ ನಂಬರ್ 122 ರ ಮತಗಟ್ಟೆ ತುಂಬ ನೀರು ತುಂಬಿದೆ. ಇದರಿಂದ ಚುನಾವಣಾ ಸಿಬ್ಬಂದಿ ನೀರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಮತದಾನ ಮಾಡಲು ಬರುವ ಮತದಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಬೆಳಗಿನ ಅವಧಿಯಲ್ಲೇ ಬಿರುಸಿನ ಮತದಾನ ನಡೆಯುವ ಸಾಧ್ಯತೆಯಿದೆ.
Advertisement
ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಲಕ್ಷದ್ವೀಪ ಮತ್ತು ತಮಿಳುನಾಡು ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣ ಹಾಗೂ ಉತ್ತರ ಕರ್ನಾಟಕದಿಂದ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಟ್ರಫ್ (ಮೋಡಗಳ ಸಾಲು) ನಿರ್ಮಾಣ ವಾಗಿರುವ ಹಿನ್ನೆಲೆಯಲ್ಲಿ ಮಳೆಯಾಗುತ್ತಿದೆ. ಇನ್ನೂ ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡಿನ ಭಾಗ ಮತ್ತು ಉತ್ತರ ಕರ್ನಾಟಕದಲ್ಲಿ ಕೂಡ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement