ಉಡುಪಿ: ಚುನಾವಣೆ ಘೋಷಣೆಯಾದ ಕೂಡಲೇ ಅಭ್ಯರ್ಥಿಗಳು ನಾಯಕರು ಬಿರುಸಿನ ಪ್ರಚಾರ ಶುರು ಮಾಡಿದ್ದಾರೆ. ದೈವ, ದೇವರೂ ಕೂಡ ಮಾಮೂಲಿಗಿಂತ ಹೆಚ್ಚಾಗಿ ರಾಜಕಾರಣಿಗಳಿಗೆ ಈಗ ನೆನಪಾಗುತ್ತಿದ್ದಾರೆ. ಉಡುಪಿ ಜಿಲ್ಲೆ ಕಾಪುವಿನ ಇಬ್ಬರು ಅಭ್ಯರ್ಥಿಗಳು ಒಂದೇ ದೈವದ ಮೊರೆ ಹೋಗಿ ಗೆಲುವಿನ ವರ ಕೇಳಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಉಡುಪಿ ಜಿಲ್ಲೆಯ ಪೈಕಿ ಜಿದ್ದಿನ ಕಣ. ಕಾಂಗ್ರೆಸ್ ನಿಂದ ವಿನಯಕುಮಾರ್ ಸೊರಕೆ, ಬಿಜೆಪಿಯಿಂದ ಲಾಲಾಜಿ ಮೆಂಡನ್ ಕಣದಲ್ಲಿದ್ದಾರೆ. ಈ ಬಾರಿ ಇಬ್ಬರಿಗೂ ನೆಕ್ ಟೂ ನೆಕ್ ಫೈಟ್ ಇದೆ. ಕಳೆದ ಬಾರಿ ಒಂದೂವರೆ ಸಾವಿರ ಮತಗಳಿಂದ ಸೋತ ಲಾಲಾಜಿ ಈ ಬಾರಿ ರಾಜಕೀಯ ಮರುಜೀವದ ಪಣ ತೊಟ್ಟಿದ್ದಾರೆ. ಅಭಿವೃದ್ಧಿ ಕಾರ್ಯ ನನ್ನ ಗೆಲುವಿಗೆ ಕಾರಣವಾಗುತ್ತದೆ ಎಂದು ಸೊರಕೆ ಹೇಳಿದ್ದಾರೆ.
Advertisement
Advertisement
ಈ ನಡುವೆ ಇಬ್ಬರೂ ನಾಯಕರು ಒಂದೇ ದೈವದ ಮೊರೆ ಹೋಗಿದ್ದು, ಈ ಬಾರಿ ಆಶೀರ್ವಾದ ಮಾಡಿ ಅಂತ ಬೇಡಿಕೊಂಡಿದ್ದಾರೆ. ಶಿರ್ವ ಗ್ರಾಮದ ಸೊರ್ಪು ಶ್ರೀ ಬ್ರಹ್ಮ ಮುಗೇರ್ಕಳ ದೈವಸ್ಥಾನದಲ್ಲಿ ವರ್ಷಾವಧಿ ಕೋಲ ಸೇವೆ ನಡೆದಿದೆ. ಅಲೇರ ಪಂಜುರ್ಲಿ ಕೋಲ ನಡೆಯುತ್ತಿರುವ ಸಂದರ್ಭ ಮಾಜಿ ಸಚಿವ ಸೊರಕೆ ದೈವದ ಬಳಿ ಆಶೀರ್ವಾದ ಕೇಳಿದ್ದಾರೆ. ಇದಕ್ಕೆ ದೈವ ಒಳ್ಳೆಯದಾಗುತ್ತದೆ ಎಂದು ಅಭಯ ನೀಡಿದೆ.
Advertisement
ಕೆಲವೇ ಕ್ಷಣಗಳಲ್ಲಿ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ದೈವಸ್ಥಾನಕ್ಕೆ ಬಂದಿದ್ದಾರೆ. ದೈವ ಮತ್ತು ದರ್ಶನಪಾತ್ರಿ ಗೆ ಕೈ ಮುಗಿದು ಈ ಬಾರಿ ಆಶೀರ್ವಾದ ಮಾಡಬೇಕು. ಜನಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ದೈನ್ಯತೆಯಿಂದ ವಿನಂತಿ ಮಾಡಿದ್ದಾರೆ. ದೈವ ಹಾಗೂ ಪಾತ್ರಿ ಲಾಲಾಜಿ ಮೆಂಡನ್ ಗೂ ಆಶೀರ್ವಾದ ನೀಡಿದೆ. ಗೆಲುವಿನ ಉತ್ಸಾಹದೊಂದಿದೆ ಲಾಲಾಜಿ ಮೆಂಡನ್ ತೆರಳಿದ್ದಾರೆ.
Advertisement
ಒಳ್ಳೆಯದ್ದು ಮಾಡಿದ್ರೆ ಒಳ್ಳೆಯದಾಗುತ್ತದೆ, ನಿಮ್ಮ ಬೆನ್ನ ಹಿಂದೆ ನಾನಿದ್ದೇನೆ. ಸತ್ಯ, ಧರ್ಮ ನ್ಯಾಯವಿದ್ದಲ್ಲಿ ಗೆಲುವು ಇದೆ ಎಂದು ನುಡಿ ಕೊಟ್ಟಿದೆ. ಹೀಗಾಗಿ ಇಬ್ಬರೂ ನಾಯಕರೂ ಪ್ರಸಾದ ಸ್ವೀಕರಿಸಿ ಅಲ್ಲಿಂದ ತೆರಳಿದ್ದಾರೆ. ದೈವ, ದೇವರ ಬಳಿ ಹೋದ ಎಲ್ಲರಿಗೂ ಒಳ್ಳೆದಾಗಲಿ ಎಂಬ ಆಶೀರ್ವಾದ ಸಿಗುತ್ತದೆ. ಆದ್ರೆ ಮೇ 12 ರಂದು ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬ ಮೇಲೆ ಇಬ್ಬರು ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.