ಆನೇಕಲ್: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ(Sharath Bachegowda) ಹಾಗೂ ಸಚಿವ ಎಂಟಿಬಿ ನಾಗರಾಜ್(MTB Nagaraj) ವೇದಿಕೆಯಲ್ಲಿ ಪರಸ್ಪರ ಮಾತಿನ ಚಕಮಕಿಯನ್ನು ನಡೆಸಿದ್ದಾರೆ.
ಹೊಸಕೋಟೆ(Hosakote) ತಾಲೂಕಿನ ಮುತ್ಸಂದ್ರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದರು. ಸಚಿವರು ಭಾಷಣ ಮಾಡಿ ವೇದಿಕೆಯಿಂದ ಹೊರಡುತ್ತಿದ್ದ ವೇಳೆಯಲ್ಲಿ ಶಾಸಕರಾದ ಶರತ್ ಬಚ್ಚೇಗೌಡ ಹೊಸಕೋಟೆ ಸಮಸ್ಯೆಗಳನ್ನು ನಾನು ಹೇಳುತ್ತೇನೆ ಕೇಳಿಸಿಕೊಂಡು ಹೋಗಬೇಕು. ಮುಖ್ಯಮಂತ್ರಿಗಳಿಗೆ ಸಭೆಯಲ್ಲಿ ಇದನ್ನು ಹೇಳಿ ಬಗೆಹರಿಸಿ ಕೊಡಿ ಎಂದು ಹೇಳಿದ್ದಾರೆ. ಈ ವೇಳೆಯಲ್ಲಿ ಸಚಿವರು ಹಾಗೂ ಶಾಸಕ ಶರತ್ ಬಚ್ಚೇಗೌಡ ನಡುವೆ ವೇದಿಕೆಯ ಮೇಲೆ ವಾಕ್ ಸಮರ ನಡೆಯಿತು. ಇದನ್ನೂ ಓದಿ: ಸಿಟಿ ರವಿಗಿಂತ ಹೆಚ್ಚಿನ ಹಿಂದೂ ನಾನು – ಕರಾವಳಿಯಲ್ಲಿ ಸಿದ್ದರಾಮಯ್ಯ ಹಿಂದೂ ಜಪ
ನಿಮ್ಮ ಭಾಷಣ ಕೇಳಿದ್ದೇನೆ. ನನ್ನ ಭಾಷಣದಲ್ಲಿ ಸಮಸ್ಯೆಗಳ ಪಟ್ಟಿಯನ್ನು ಓದುತ್ತೇನೆ ಕೇಳಿಸಿಕೊಂಡು ಸಿಎಂ ಸಭೆಯಲ್ಲಿಟ್ಟು ಪರಿಹರಿಸಿ ಅಂತಾ ಎಂಟಿಬಿಗೆ ವೇದಿಕೆಯಲ್ಲೇ ಠಕ್ಕರ್ ಕೊಟ್ಟಿದ್ದಾರೆ. ಇದಕ್ಕೆ ಮತ್ತೊಂದು ಮೈಕ್‌ನಲ್ಲಿ ಸಮಸ್ಯೆಗಳ ಪಟ್ಟಿಕೊಡಿ ಎಂದು ಹೇಳಿ ಎಂಟಿಬಿ ವೇದಿಕೆಯಿಂದ ಇಳಿದಿದ್ದಾರೆ.
ಎಂಟಿಬಿ ಇಳಿಯತ್ತಿದ್ದಂತೆ ವೇದಿಕೆ ಮೇಲೆಯಿಂದಲೇ ಸಚಿವರಿಗೆ ಶರತ್ ಬಚ್ಚೇಗೌಡ ಧಿಕ್ಕಾರ ಕೂಗಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಸಭೆಗೆ ಬಂದಿದ್ದ ಜನರ ಬಳಿ ಸಮಸ್ಯೆ ಹೇಳಿಕೊಳ್ಳಬಾರದೇ? ಸಿಎಂ ಹತ್ರ ಇವರು ಕೆಲಸ ಮಾಡಿಸಲಿ ಎಂದು ತಿರುಗೇಟು ನೀಡಿದ್ದಾರೆ.
ಕಂದಾಯ ಇಲಾಖೆ ವತಿಯಿಂದ ನಡೆಸುವ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗೈರಾಗಿದ್ದರೂ ಕನಿಷ್ಠಪಕ್ಷ ಶಾಸಕರು ಹಾಗೂ ಸಚಿವರು ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರು ಮನವಿ ಮಾಡಲು ಸ್ಥಳಕ್ಕೆ ಬಂದಿದ್ದರು. ಆದರೆ ಕಿತ್ತಾಟವನ್ನು ನೋಡಿದ ಸಾರ್ವಜನಿಕರು ಬೇಸರದಿಂದ ವಾಪಸ್ ತೆರಳಿದ್ದಾರೆ.