ಬೆಂಗಳೂರು: ಕರುನಾಡ ತೀರ್ಪಿಗೆ ಕ್ಷಣಗಣನೆ ಶುರುವಾಗಿದೆ. ಶನಿವಾರದ ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲಾ ಜಿಲ್ಲೆಗಳಲ್ಲಿ ಸಕಲ ಸಿದ್ಧತೆ ನಡೆಸಿದೆ.
ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿರುವ ಮತ ಎಣಿಕೆಗೆ ಆಯೋಗವು ಸಂಪೂರ್ಣವಾಗಿ ಸಿದ್ಧಗೊಂಡಿದೆ. ಬಿಗಿ ಭದ್ರತೆಯಲ್ಲಿ ಮತ ಯಂತ್ರಗಳಿಗೆ ಅಳವಡಿಸಿರುವ ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್‍ಗಳನ್ನು ಮತ ಎಣಿಕೆ ಕೇಂದ್ರಕ್ಕೆ ತಂದು ಎಣಿಕೆ ಮಾಡಲಾಗುತ್ತದೆ.
Advertisement
222 ಮತಕ್ಷೇತ್ರಗಳ ಮತ ಎಣಿಕೆಗಾಗಿ ರಾಜ್ಯಾದ್ಯಂತ 38 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 5 ಕಡೆ, ತುಮಕೂರಿನಲ್ಲಿ 3 ಕಡೆ ಹಾಗೂ ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ತಲಾ 2 ಕಡೆಗಳಲ್ಲಿ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ ತಲಾ ಒಂದೊಂದು ಕಡೆ ಮತ ಎಣಿಕೆ ಕಾರ್ಯ ನಡೆಯಲಿದೆ.
Advertisement
ಮತ ಎಣಿಕೆ ನಡೆಯುವ ದಿನದಂದು ಸುಗಮವಾಗಿ ಮತ ಎಣಿಕೆ ನಡೆಯಲು ಅನುವು ಮಾಡಿಕೊಡುವ ದೃಷ್ಟಿಯಿಂದ 222 ಮತಕ್ಷೇತ್ರಗಳಿಗೆ ಪರಿವೀಕ್ಷಕರನ್ನು ನೇಮಿಸಲಾಗಿದೆ. ಹಾಗೆಯೇ, ಹೆಚ್ಚುವರಿಯಾಗಿ ತಲಾ 14 ಮಂದಿಯಂತೆ ಮೈಕ್ರೋ ಅಬ್ಸರ್‍ವರ್ ಗಳನ್ನು ಪ್ರತಿ ಮತಕ್ಷೇತ್ರಕ್ಕೆ ನಿಯೋಜಿಸಲಾಗಿದೆ.
Advertisement
57,786 ಕಂಟ್ರೋಲ್ ಯೂನಿಟ್‍ಗಳನ್ನು ತೆರೆದು ಮತ ಎಣಿಕೆ ನಡೆಸಲಾಗುವುದು. ಹಾಗೆಯೇ, ಬಳಕೆಯಾದ 57,786 ವಿವಿಪ್ಯಾಟ್‍ಗಳ ಪೈಕಿ ಪ್ರತಿ ಮತಕ್ಷೇತ್ರಕ್ಕೆ ಒಂದರಂತೆ ಒಂದೊಂದು ವಿವಿಪ್ಯಾಟ್‍ಗಳನ್ನು ತೆರೆದು ಎಣಿಕೆ ಮಾಡಿ ಕಂಟ್ರೋಲ್ ಯೂನಿಟ್‍ನೊಂದಿಗಿನ ಫಲಿತಾಂಶವನ್ನು ತಾಳೆ ನೋಡಲಾಗುತ್ತದೆ.
Advertisement
ಮತ ಎಣಿಕೆ ಕಾರ್ಯಕ್ಕಾಗಿ ಸುಮಾರು 16,662 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪೈಕಿ 3,410 ಮತ ಎಣಿಕೆ ಮೇಲ್ವಿಚಾರಕರು, 3,410 ಎಣಿಕೆ ಸಹಾಯಕರು ಮತ್ತು 3,410 ಮೈಕ್ರೋ ಅಬ್ಸರ್‍ವರ್ ಗಳು ಇರಲಿದ್ದಾರೆ. ಸುಮಾರು 888 ಮಂದಿ ಅಂಚೆ ಮತಪತ್ರಗಳನ್ನು ಎಣಿಸಲಿದ್ದಾರೆ. ಇವರುಗಳ ಜೊತೆಗೆ ಹೆಚ್ಚುವರಿಯಾಗಿ 5,544 ಮಂದಿ ಭದ್ರತಾ ಕೊಠಡಿಯಿಂದ ಇವಿಎಂಗಳನ್ನು ಮತ ಎಣಿಕೆ ಕೇಂದ್ರಕ್ಕೆ ತರಲು ನಿಯೋಜಿಸಲಾಗಿದೆ.
ಪ್ರತಿ ಮತ ಕ್ಷೇತ್ರಕ್ಕೆ ಸುಮಾರು 80 ಮಂದಿ ಎಣಿಕೆ ಮಾಡುವವರನ್ನು ನಿಯೋಜಿಸಲಾಗಿದೆ. ಈ ಪೈಕಿ 14 ಮಂದಿ ಮತ ಎಣಿಕೆ ಮೇಲ್ವಿಚಾರಕರು, 14 ಎಣಿಕೆ ಸಹಾಯಕರು ಮತ್ತು 14 ಮೈಕ್ರೋ ಅಬ್ಸರ್‍ವರ್ ಗಳ ಕೂಡಿರುವ ತಂಡವಾಗಿ ಇವರು ನಿರ್ವಹಿಸಲಿದ್ದಾರೆ. ಈ ತಂಡದಲ್ಲಿ ಇರುವ ಹೆಚ್ಚುವರಿ 4 ಮಂದಿ ಅಂಚೆ ಮತಪತ್ರಗಳನ್ನು ಎಣಿಸಲಿದ್ದಾರೆ. ಪ್ರತಿ ಮತಕ್ಷೇತ್ರದಿಂದ 24 ಮಂದಿಯನ್ನು ಭದ್ರತಾ ಕೊಠಡಿಯಿಂದ ಮತ ಎಣಿಕೆ ಕೇಂದ್ರಕ್ಕೆ ಇವಿಎಂಗಳನ್ನು ಸಾಗಿಸಲು ನಿಯೋಜಿಸಲಾಗಿರುತ್ತದೆ.
ಮತ ಎಣಿಕೆ ನಡೆಯುವ 222 ಮತಕ್ಷೇತ್ರಗಳ ಪೈಕಿ ಸುಮಾರು 217 ಮತಕ್ಷೇತ್ರಗಳ ಮತ ಎಣಿಕೆಯು 14 ಟೇಬಲ್‍ಗಳಿಂದ ಕೂಡಿರುವ ಹಾಲ್‍ಗಳಲ್ಲಿ ನಡೆಯಲಿದೆ. ಇನ್ನುಳಿದ 5 ಮತಕ್ಷೇತ್ರಗಳ ಮತ ಎಣಿಕೆಯು 14 ಕ್ಕೂ ಹೆಚ್ಚು ಟೇಬಲ್‍ಗಳಿಂದ ಕೂಡಿರುವ ಹಾಲ್‍ನಲ್ಲಿ ನಡೆಯಲಿದೆ. ಈ ಮತಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದುದರಿಂದ ಹೆಚ್ಚುವರಿ ಟೇಬಲ್‍ಗಳ ಬಳಕೆಯಾಗುತ್ತಿದೆ.