ಉಡುಪಿ: ಬಿಜೆಪಿ (BJP) ಯಲ್ಲಿ ನಾಲ್ಕು ಹೊಸ ಮುಖಗಳನ್ನು ಪ್ರಯೋಗ ಮಾಡಿ ಪಕ್ಷ ಯಶಸ್ವಿಯಾಗಿದೆ. ನಾಲ್ಕು ಹೊಸ ಮುಖಗಳಿಗೆ ಟಿಕೆಟ್‍ಗೆ ಮುನ್ನುಡಿ ಬರೆದಿದ್ದು ಕುಂದಾಪುರದ ವಾಜಪೇಯಿ ಹಾಲಾಡಿ. ಶಾಸಕ ಶ್ರೀನಿವಾಸ ಶೆಟ್ಟಿ (Haladi Srinivas Shetty) ಚುನಾವಣಾ ಕಣದಿಂದ ಪಕ್ಕಕ್ಕೆ ಸರಿದು ತನ್ನ ಗೆಳೆಯ ಕಿರಣ್ ಕುಮಾರ್ (Kiran Kumar Kodgi) ಗೆ ಅವಕಾಶಕೊಟ್ಟದ್ದರಿಂದ ಉಡುಪಿಯಲ್ಲಿ ನಾಲ್ಕು ಬದಲಾವಣೆಗಳು ಆಗಿವೆ. ನಾಲ್ಕು ಜನವೂ ಗೆದ್ದಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರ (Kundapura Vidhanasabha Constituency) ದ ಬಿಜೆಪಿ ಅಭ್ಯರ್ಥಿ ಎ. ಕಿರಣ್ ಕುಮಾರ್ ಕೊಡ್ಗಿ ಅವರು, 1,02,424 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 41,556 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು 60,868 ಮತಗಳನ್ನು ಪಡೆದಿದ್ದಾರೆ. 40,000ಕ್ಕೂ ಅಧಿಕ ಮತಗಳನ್ನು ಅಂತರ ಬಿಜೆಪಿ ಪಡೆಯಲು ಕಾರಣ ಹಾಲಾಡಿ ಶ್ರೀನಿವಾಸ ಶೆಟ್ಟಿ.
ನಿರಂತರ ಐದು ಚುನಾವಣೆಗಳನ್ನು ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ, 2023ರ ಚುನಾವಣೆಯಲ್ಲಿ ಗೆಳೆಯನ ಗೆಲುವಿಗಾಗಿ ಹೋರಾಟ ಮಾಡಿದಷ್ಟು ಹಿಂದೆಂದೂ ಮಾಡಿಲ್ಲ ಎಂದು ಕುಂದಾಪುರದ ಜನ ಮಾತನಾಡುತ್ತಿದ್ದಾರೆ. ಪ್ರತಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಒಂದೊಂದು ಬಹಿರಂಗ ಸಭೆಗಳನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ ನೇತೃತ್ವದಲ್ಲಿ ನಡೆದಿದೆ. ಕಿರಣ್ ಕುಮಾರ್ ಕೊಡಿ ಅವರನ್ನು ಗೆಲ್ಲಿಸಬೇಕು ಎಂದು ಈ ಬಾರಿ ಅವರು ಪಣತೊಟ್ಟಿದ್ದರು. ರಾಜ್ಯ ಬಿಜೆಪಿ ಮತ್ತು ಕೇಂದ್ರದ ಹೈಕಮಾಂಡ್ ರಾಜ್ಯದ ಟಿಕೆಟ್‍ಗಳನ್ನು ಫೈನಲ್ ಮಾಡಿದರೆ, ಕುಂದಾಪುರದ ಬಿಜೆಪಿ ಟಿಕೆಟ್ ಕಿರಣ್ ಕುಮಾರ್ ಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಹಾಲಾಡಿ.
ತನ್ನಂತೆ ದೊಡ್ಡ ಅಂತರದಲ್ಲಿ ಗೆಳೆಯ ಕಿರಣ್ ಕೊಡ್ಗಿ ಗೆಲ್ಲಬೇಕು ಅಂತ ಕಾಲಿಗೆ ಚಕ್ರ ಕಟ್ಟಿ ಓಡಾಟ ಮಾಡಿದ್ದರು. ಪ್ರಚಾರದ ನಡುವೆ ಕುಂದಾಪುರದಲ್ಲಿ ಬಂಟರು ಮಾತ್ರ ಗೆಲ್ಲೋದು ಅಂತ ಚರ್ಚೆಗಳು ಶುರುವಾದಾಗ ಅದನ್ನು ಹಾಲಾಡಿ ಸುಳ್ಳು ಮಾಡಿ 41,556 ಅಂತರದ ಗೆಲುವು ತಂದುಕೊಟ್ಟರು. ಇನ್ನುಳಿದಂತೆ ಜೆ.ಡಿ.ಎಸ್ ಅಭ್ಯರ್ಥಿ ರಮೇಶ್ 1,053, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ 1,257 ಹಾಗೂ ಪಕ್ಷೇತರ ಅಭ್ಯರ್ಥಿ ಜಿ. ಚಂದ್ರಶೇಖರ್ 728 ಮತಗಳನ್ನು ಪಡೆದಿರುತ್ತಾರೆ. ಒಟ್ಟು 1,141 ನೋಟಾ ಮತಗಳು ಚಲಾವಣೆಯಾಗಿರುತ್ತದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ, 60,868 ಜನರ ಮತ ಪಡೆದಿದ್ದೇನೆ. ಇದು ಬರೀ ಮತ ಅಲ್ಲ, ಅಷ್ಟು ಜನರ ಪ್ರೀತಿ. ಕ್ಷೇತ್ರದ ಮತದಾರರಿಗೆ ಧನ್ಯವಾದ. ಜನಾದೇಶಕ್ಕೆ ತಲೆ ಬಾಗುತ್ತೇನೆ. ಸಾಮಾಜಿಕ ಜೀವನದ ಚಟುವಟಿಕೆಗಳನ್ನು ಮುಂದುವರೆಸುತ್ತೇನೆ. ಜನರ ಜೊತೆಗೆ ಇರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಬಿಜೆಪಿಗೆ 5ಕ್ಕೆ 5 ಗೆಲುವು
ಕರಾವಳಿಯಲ್ಲಿ ಹಿಂದೆಂದೂ ಕಂಡರಿಯದ ಜಾತಿ ಲೆಕ್ಕಾಚಾರ, ಒಳಗೊಳಗೇ ಜಾತಿ ಅಭ್ಯರ್ಥಿ ಗೆ ಬೆಂಬಲ ಕೊಡಬೇಕೆಂಬ ಚರ್ಚೆಗಳು, ಒಳ ಏಟುಗಳು ಸಭೆಗಳು ಸಾಮಾಜಿಕ ಜಾಲತಾಣದ ವಾರ್ ಗಳು ನಡೆದಿವೆ. ಆದ್ರೆ ಕುಂದಾಪುರದ ಜನ ರಾಜಕಾರಣದಲ್ಲಿ ಜಾತಿಯಿಲ್ಲ ಜಾತ್ಯಾತೀತತೆಯನ್ನು ಗೆಲ್ಲಿಸಿದ್ದಾರೆ.