ಸಿದ್ದರಾಮಯ್ಯಗೆ ರೆಡ್ ಸಿಗ್ನಲ್ – ಕೋಲಾರ ಕಾಂಗ್ರೆಸ್‌ನಲ್ಲಿ ಮತ್ತೆ ಆರಂಭವಾಯ್ತು ಗುಂಪುಗಾರಿಕೆ

Public TV
3 Min Read
SIDDARAMAIAH 1 4

ಕೋಲಾರ : ಕೋಲಾರ ಸ್ಪರ್ಧೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೆ ಸರಿಯುವ ಸೂಚನೆ ನೀಡಿರುವ ಹಿನ್ನಲೆಯಲ್ಲಿ, ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೋಲಾರದಲ್ಲಿ ಸಿದ್ದು ಬದಲಿಗೆ ಕಾಂಗ್ರೆಸ್‌ನಿಂದ (Congress) ಅಭ್ಯರ್ಥಿ ಯಾರು ಎನ್ನುವ ಕುರಿತು ಚರ್ಚೆ‌ ಜೋರಾಗಿದ್ದು, ಮತ್ತೊಮ್ಮೆ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಬಣ ರಾಜಕೀಯ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದೆ.

ವಿಪಕ್ಷ ನಾಯಕ‌ ಸಿದ್ದರಾಮಯ್ಯ (Siddaramaiah) ಕೋಲಾರ (Kolar) ಕ್ಷೇತ್ರದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಕೋಲಾರ ಕಾಂಗ್ರೆಸ್ ವಲಯದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿದೆ. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತವನ್ನು ಜ.9ರಂದು‌ ಕೋಲಾರದಲ್ಲಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಕೋಲಾರದಲ್ಲಿ ಸಿದ್ದು ಸ್ಪರ್ಧೆಗೆ ಪೂರ್ವ‌ ತಯಾರಿಯನ್ನು ಮಾಡಲಾಯಿತು.

Congress 1

ವಾರ್ಡ್ ಸಭೆಗಳು, ಗ್ರಾಮಾಂತರ‌ ಸಭೆಗಳು ಸೇರಿದಂತೆ‌ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಹೈಕಮಾಂಡ್ ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಅಷ್ಟೊಂದು ಸೇಫ್ ಅಲ್ಲ, ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದೆ ಎನ್ನಲಾಗಿದೆ. ಇದರಿಂದ ಸಿದ್ದರಾಮಯ್ಯ ಕೋಲಾರದಿಂದ ಯೂಟರ್ನ್ ಹೊಡೆದ ಮೇಲೆ ಕೋಲಾರದ ಕಾಂಗ್ರೆಸ್ ವಲಯದಲ್ಲಿ ಸಿದ್ದು ಬದಲಿಗೆ ಯಾರು ಕಾಂಗ್ರೆಸ್ ಅಭ್ಯರ್ಥಿ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ಜೊತೆಗೆ ಕೆ.ಹೆಚ್​.ಮುನಿಯಪ್ಪ ಮತ್ತು ರಮೇಶ್​ ಕುಮಾರ್​ ಬಣಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಲು ಮತ್ತೆ ಸಕ್ರಿಯವಾಗಿವೆ.

ಈಗಾಗಲೇ ಕೋಲಾರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳ ಲಿಸ್ಟ್‌ನಲ್ಲಿ ಎ.ಶ್ರೀನಿವಾಸ್​, ಎಲ್​.ಎ.ಮಂಜುನಾಥ್​, ಬ್ಯಾಲಹಳ್ಳಿ ಗೋವಿಂದಗೌಡ, ಊರುಬಾಗಿಲು ಶ್ರೀನಿವಾಸ್​, ಚಿಕ್ಕರಾಯಪ್ಪ, ಕೊತ್ತೂರು ಮಂಜುನಾಥ್​, ವಿ.ಆರ್​ ಸುದರ್ಶನ್​ ಸೇರಿ ಹಲವು ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇವೆಲ್ಲವನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಕೋಲಾರದ ಬಣ ರಾಜಕೀಯಕ್ಕೆ ತಿಲಾಂಜಲಿ‌‌ ಇಡಲು ಕೆ.ಎಚ್.ಬಣ ಮತ್ತು ರಮೇಶ್ ಕುಮಾರ್ ಬಣ ಎರಡರಲ್ಲೂ ಗುರುತಿಸಿಕೊಂಡಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಜೊತೆ ಡಿಕೆಶಿ ಮಾತುಕತೆ ನಡೆಸಿ ಚುನಾವಣೆಗೆ ಸಜ್ಜಾಗುವಂತೆ‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಗೋವಿಂದಗೌಡ ಹೇಳೋದೆ ಬೇರೆ. ಸಿದ್ದರಾಮಯ್ಯ ಬರದೆ, ಹೈಕಮಾಂಡ್​ ಸೂಚನೆ ಕೊಟ್ಟರೆ ತಾವು ಸ್ಪರ್ಧೆಗೆ ಸಿದ್ಧ ಎಂದಿದ್ದಾರೆ.

DK Shivakumar 2

ಸಿದ್ದರಾಮಯ್ಯ ಕೋಲಾರದಿಂದ ಹಿಂದೆ ಸರಿದ‌ ಹಿನ್ನೆಲೆಯಲ್ಲಿ ಮತ್ತೆ ಜಿಲ್ಲೆಯ ಬಣ ರಾಜಕೀಯಗಳು ಮುನ್ನೆಲೆಗೆ ಬರುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಇಷ್ಟು ದಿನ ಸಿದ್ದರಾಮಯ್ಯ ಬರ್ತಾರೆ ಎನ್ನುವ ಕಾರಣಕ್ಕೆ ಬೂದಿ ಮುಚ್ಚಿದ ಕೆಂಡದಂತಿದ್ದ ನಾಯಕರ ಮುನಿಸು ಹಾಗೂ ಬಣ ರಾಜಕೀಯ ಮತ್ತೆ ಮುನ್ನೆಲೆಗೆ ಬಂದು ಕೆ.ಹೆಚ್​ ಮುನಿಯಪ್ಪ ತಮ್ಮ ಸೋಲಿನ ಸೇಡು ತೀರಿಸಿಕೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇನ್ನು ಸಿದ್ದು ಕೋಲಾರಕ್ಕೆ ಬರುವುದಿಲ್ಲ ಅಂದರೆ ಕಾಂಗ್ರೆಸ್​ ಪಕ್ಷಕ್ಕೂ ಕೂಡಾ ಜಿಲ್ಲೆಯಲ್ಲಿ ಹಿನ್ನೆಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಹಾಗಾಗಿ ಈ ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಡಿ.ಕೆ ಶಿವಕುಮಾರ್ ಕಾಂಗ್ರೆಸ್​ ಪಕ್ಷವನ್ನು ಉಳಿಸಿ, ಎಲ್ಲರನ್ನು ಸರಿದೂಗಿಸಿಕೊಂಡು ಹೋಗಬಲ್ಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಅಭ್ಯರ್ಥಿ ಫೈನಲ್​ ಆಗುತ್ತಿದ್ದಂತೆ ಸಿದ್ದರಾಮಯ್ಯ ಕೋಲಾರಕ್ಕೆ ಬರುವುದಿಲ್ಲ ಎನ್ನುವುದನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅದಕ್ಕೆ ಪೂರಕ ಎಂಬಂತೆ ಈಗಾಗಲೇ ಸಿದ್ದರಾಮಯ್ಯರನ್ನು ಭಾನುವಾರ ಭೇಟಿ ಮಾಡಿದ್ದ ನಾಯಕರು ಕೋಲಾರ ಹಾಗೂ ವರುಣ 2 ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವಂತೆಯೂ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜ್ಯಕ್ಕೆ ಬರಲಿರುವ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿ ಸ್ಪರ್ಧೆ ಮಾಡಲು ಕಳಿಸುವಂತೆ ಮನವಿ ಮಾಡಲಿದ್ದಾರೆ. ಈ ಕುರಿತು ಈಗಾಗಲೇ ದಲಿತ ಮುಖಂಡರು ಹಾಗೂ ಕಾಂಗ್ರೆಸ್​ ಮುಖಂಡರು ಸಭೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರತ ಧ್ವಜ ಕೆಳಗಿಳಿಸಿ ಖಲಿಸ್ತಾನ್‌ ಧ್ವಜ ಹಾರಿಸಿದ ಪ್ರತ್ಯೇಕತಾವಾದಿಗಳು – ಭಾರತ ಸರ್ಕಾರ ಬೇಸರ

ಒಟ್ಟಿನಲ್ಲಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆಯಿಂದ ತಣ್ಣಗಾಗಿದ್ದ ಬಣ ರಾಜಕೀಯ, ಸಿದ್ದು ಯೂ ಟರ್ನ್ ನಂತರ ಬಣ ರಾಜಕೀಯ ಆರಂಭವಾಗುವ ಜೊತೆಗೆ ಮುಂದೆ‌‌ ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರು ಅನ್ನುವ ಕುತೂಹಲ ಮತ್ತು ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಜೊತೆಗೆ ಸಿದ್ದರಾಮಯ್ಯ ಅವರನ್ನು ಇಲ್ಲಿಗೆ ಕರೆತರಬೇಕು ಎನ್ನುವ ಪ್ರಯತ್ನಗಳು ನಡೆಯುತ್ತಿರುವುದಂತು ಸುಳ್ಳಲ್ಲ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಇಂದು ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಆಟೋ ಮುಷ್ಕರ

Share This Article
1 Comment

Leave a Reply

Your email address will not be published. Required fields are marked *