ಚಿಕ್ಕೋಡಿ: ಚುನಾವಣೆ (Election) ಸಮೀಪಿಸುತ್ತಿದ್ದಂತೆ ಬಿಜೆಪಿ (BJP) ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಕಿತ್ತಾಟ ಜೋರಾಗಿದೆ. ಅದರಲ್ಲೂ ಈ ಬಾರಿ ಯಮಕನಮರಡಿ (Yemkanmardi) ಕ್ಷೇತ್ರದಲ್ಲಿ ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ಅವರನ್ನು ಸೋಲಿಸಲು ಜಿದ್ದಿಗೆ ಬಿದ್ದಿರುವ ಬಿಜೆಪಿ ಪಕ್ಷಕ್ಕೆ ಕ್ಷೇತ್ರದ ಟಿಕೆಟ್ ಗುದ್ದಾಟ ತಲೆನೋವಾಗಿ ಪರಿಣಮಿಸಿದೆ.
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಯಮಕನಮರಡಿ ಮತಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿಯವರನ್ನು ಈ ಬಾರಿ ಸೋಲೀಸಲೇ ಬೇಕು ಎಂದು ಸಂಘಪರಿವಾರದ ಮುಖಂಡರು ಹಾಗೂ ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಈಗಿನಿಂದಲೇ ಸತೀಶ್ ವಿರುದ್ಧ ಹಿಂದುತ್ವ ವಿರೋಧಿ ಅಲೆಯ ಅಸ್ತ್ರವನ್ನ ಬಳಸಲು ಮುಂದಾಗಿದ್ದಾರೆ. ಆದರೆ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಪರ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಮಾರುತಿ ಅಷ್ಟಗಿ ಹಾಗೂ ಯುವ ಮುಖಂಡ ಬಸವರಾಜ ಹುಂದ್ರಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಇಬ್ಬರ ಪೈಕಿ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ ಉಂಟುಮಾಡಿದೆ. ಇದನ್ನೂ ಓದಿ: ರಾಜ್ಯ ಬಿಜೆಪಿ ವಿರುದ್ಧ ಹೈಕಮಾಂಡ್ ಗರಂ
Advertisement
Advertisement
Advertisement
ಕಳೆದ ಬಾರಿ ಚುನಾವಣೆಯಲ್ಲಿ ಕೇವಲ 1400 ಮತಗಳ ಅಂತರದಿಂದ ಮಾರುತಿ ಅಷ್ಟಗಿ (Maruti Astagi) ಸೋಲು ಕಂಡಿದ್ದರು. ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಪಕ್ಷ ಸಂಘಟಿಸಿ ತನ್ನದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಈ ಬಾರಿ ಟಿಕೆಟ್ ಸಿಕ್ಕರೆ ಗೆಲುವು ನನ್ನದೆ ಎನ್ನುವ ವಿಶ್ವಾಸದಲ್ಲಿ ಅಷ್ಟಗಿ ಇದ್ದಾರೆ. ಯಮಕನಮರಡಿ ಮತಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು ಎನ್ನುವ ಸಂದೇಶವನ್ನ ಆರ್‍ಎಸ್‍ಎಸ್ (RSS) ಮುಖಂಡರು ಬಿಜೆಪಿ ವರಿಷ್ಠರಿಗೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ವರಿಷ್ಠರು ಯಮಕನಮರಡಿ ಮತಕ್ಷೇತ್ರದ ಜವಾಬ್ದಾರಿಯನ್ನು ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಜೊಲ್ಲೆ, ಹಾಗೂ ಲಕ್ಷ್ಮಣ ಸವದಿ ಹಾಗೂ ಕತ್ತಿ ಕುಟುಂಬಕ್ಕೆ ನೀಡಿದೆ.
Advertisement
ಕ್ಷೇತ್ರದಲ್ಲಿ ಹಿಂದುತ್ವದ ಅಲೆಯಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಸೋಲುಣಿಸಬೇಕು ಎನ್ನುವ ಲೆಕ್ಕಾಚಾರದಲ್ಲಿರುವ ಬಿಜೆಪಿ ಪಾಳಯಕ್ಕೆ ತಮ್ಮದೇ ಅಭಿಮಾನಿ ಬಳಗವನ್ನ ಹೊಂದಿರುವ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಚಿಂತೆಯಾಗಿದೆ. ಎರಡು ಚುನಾವಣೆಗಳಲ್ಲಿ ನಾನು ಟಿಕೆಟ್ ವಂಚಿತನಾಗಿದ್ದೇನೆ. ಈ ಬಾರಿ ಟಿಕೆಟ್ ನನಗೆ ಸಿಗಲಿದೆ ಎನ್ನುವ ವಿಶ್ವಾಸದಲ್ಲಿ ಬಸವರಾಜ ಹುಂದ್ರಿ ಇದ್ದಾರೆ. ಇಬ್ಬರನ್ನೂ ಸಮಾಧಾನ ಪಡಿಸಿ ಯಾರಿಗಾದರೂ ಟಿಕೆಟ್ ಸಿಗಲಿ ನಾವು ಬಿಜೆಪಿ ಪರ ಕೆಲಸ ಮಾಡುತ್ತೇವೆ ಎನ್ನುವ ಆಣೆ ಪ್ರಮಾಣವನ್ನ ಬಿಜೆಪಿ ವರಿಷ್ಠರು ಮಾಡಿಸುತ್ತಿದ್ದಾರೆ. ಯಮಕನಮರಡಿ ಮತಕ್ಷೇತ್ರದ ಬಿಜೆಪಿ ಪಾಳಯದಲ್ಲಿ ಒಬ್ಬರಿಗೆ ಟಿಕೆಟ್ ಸಿಕ್ಕರೆ ಇನ್ನೊಬ್ಬರು ಸಿಟ್ಟಾಗುವ ಸ್ಥಿತಿ ನಿರ್ಮಾಣವಾಗಿದೆ. ಟಿಕೆಟ್ ಸಿಗದೇ ಇರುವವರು ಒಳಗೊಳಗೆ ಪರಸ್ಪರ ಕಾಲೆಳುವ ಸಾಧ್ಯತೆಯ ಒತ್ತಡ ಬಿಜೆಪಿ ಮುಖಂಡರಲ್ಲಿ ನಿರ್ಮಾಣವಾಗಿದೆ. ಈ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ (Congress) ಪಕ್ಷ ಕಾಯ್ದು ಕುಳಿತಿದೆ. ಇದನ್ನೂ ಓದಿ: ಪ್ರಮುಖ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸಿಗುತ್ತಿಲ್ಲ ಅಭ್ಯರ್ಥಿಗಳು!