ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಬಿಜೆಪಿ (BJP) ಗೆಲ್ಲಲಾಗದ ಕ್ಷೇತ್ರ ಇದ್ದುದ್ದು ಮೂಡುಬಿದಿರೆ (Moodbidri). ಜೈನ ಕಾಶಿ, ಶಿಕ್ಷಣ ಕಾಶಿ ಎಂದೆಲ್ಲ ಖ್ಯಾತಿವೆತ್ತ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ 2018ರಲ್ಲಿ ಖಾತೆ ತೆರೆದ ಬಿಜೆಪಿ ಈ ಬಾರಿ ಅದನ್ನು ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದೆ.
ಹಿಂದುತ್ವ, ಮೋದಿ ಅಲೆಯ ನೆರವಿನೊಂದಿಗೆ ಬಿಜೆಪಿಯಿಂದ ಉಮಾನಾಥ ಕೋಟ್ಯಾನ್ 29,799 ಮತಗಳ ಬಾರಿ ಅಂತರದಿಂದ ಕಾಂಗ್ರೆಸ್‌ನ (Congress) ಅಭಯಚಂದ್ರ ಜೈನ್ ಅವರನ್ನು ಸೋಲಿಸಿದ್ದರು. ಸತತ 4 ಬಾರಿ ಗೆದ್ದು ಸಚಿವರೂ ಆಗಿದ್ದ ಅಭಯಚಂದ್ರರಿಗೆ ಈ ಸೋಲಿನೊಂದಿಗೆ ಮರ್ಮಾಘಾತವಾಗಿತ್ತು. ಗೆದ್ದು ಬೀಗಿದ ಉಮಾನಾಥ ಕೋಟ್ಯಾನ್ ತಮ್ಮ ಅಧಿಕಾರಯುತ ಶೈಲಿಯ ಆಡಳಿತದಿಂದ ಜನಮೆಚ್ಚುಗೆ ಗಳಿಸಿದ್ದಾರೆ. ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಇವು ಕೈಹಿಡಿಯಬಹುದು ಎಂಬುದು ಕೋಟ್ಯಾನ್ ನಿರೀಕ್ಷೆ.
ಈ ನಡುವೆ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿರುವ ಸುದರ್ಶನ ಮೂಡುಬಿದ್ರೆ ಕಳೆದ ಬಾರಿಯಂತೆ ಈ ಸಲವೂ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಅವರ ಓಡಾಟ ಹೆಚ್ಚಾಗಿದ್ದು, ಮೂಲೆ ಮೂಲೆಗಳಿಗೂ ಸುತ್ತಿ ಯುವಕರನ್ನು ಸಂಘಟಿಸುತ್ತಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಕ್ಷೇತ್ರದಿಂದ ಸ್ಪರ್ಧೆಗೆ ತೀವ್ರ ಆಸಕ್ತಿ ಹೊಂದಿರುವವರು ಯಾರೂ ಇದ್ದಂತಿಲ್ಲ. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಗದೀಶ್ ಅಧಿಕಾರಿ ವಿವಾದಗಳಿಂದಾಗಿ ಹಿಂದೆ ಬಿದ್ದಿದ್ದಾರೆ.
ಕಳೆದ ಚುನಾವಣೆಗೂ ಮೊದಲೇ ಅಭಯಚಂದ್ರ ಜೈನ್ (Abhay Chandra Jain) ಕ್ಷೇತ್ರದಲ್ಲಿ ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದ್ದರು. ಮಿಥುನ್ ರೈ ಉತ್ತರಾಧಿಕಾರಿ ಎಂದೂ ಹೇಳಿದ್ದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ಷೇತ್ರಕ್ಕೆ ಐವನ್ ಡಿಸೋಜ ಪ್ರವೇಶವಾಗಿ ಗಲಾಟೆ ಗೌಜಿಗಳು ಗೊಂದಲಗಳು ನಡೆದಿದ್ದವು. ರಾಜ್ಯ ನಾಯಕರ 2 ಬಣಗಳ ನಡುವಿನ ಮೇಲಾಟವಾಗಿಯೂ ಚಿತ್ರಣ ಬದಲಾಗಿತ್ತು. ಕೊನೆಗೆ ವರಿಷ್ಠರ ಒತ್ತಡಕ್ಕೆ ಮಣಿದು ಅಭಯಚಂದ್ರ ಜೈನ್ ಸ್ಪರ್ಧಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ಈ ಬಾರಿಯಂತೂ ಮಿಥುನ್ ರೈಯೇ ಅಭ್ಯರ್ಥಿ ಎಂದು ಜೈನ್ ಪಕ್ಷದ ವೇದಿಕೆಗಳಲ್ಲಿ ಹೇಳುತ್ತಿದ್ದಾರೆ. ಅಂತೆಯೇ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತವಲಯದ ಮಿಥುನ್ ರೈಗೆ ಟಿಕೆಟ್ ನೀಡಿದೆ. ಇದನ್ನೂ ಓದಿ: ಕರ್ಪೂರ ಬೆಳಗಿ, ಈಡುಗಾಯಿ ಹೊಡೆದು ಸರ್ಕಾರಿ ವಾಹನ ಬೀಳ್ಕೊಟ್ಟ ಸಚಿವ ನಾರಾಯಣಗೌಡ
ಮೂಡುಬಿದಿರೆ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,96,832. ಬಿಲ್ಲವ ಸಮುದಾಯದ ಅತಿ ಹೆಚ್ಚು ಮತದಾರರು ಇರುವ ಕ್ಷೇತ್ರಗಳಲ್ಲಿ ಇದೂ ಒಂದು. ಮುಸ್ಲಿಂ ಮತದಾರರ ಸಂಖ್ಯೆ ಆಸುಪಾಸು 40 ಸಾವಿರ. ಸುಮಾರು 30 ಸಾವಿರ ಕ್ರಿಶ್ಚಿಯನ್ ವೋಟುಗಳಿವೆ. ಜೈನ ಸಮುದಾಯದವರ ಸಂಖ್ಯೆಯೂ ಗಮನಾರ್ಹ. ಹಾಗಾಗಿ ಕಾಂಗ್ರೆಸ್-ಬಿಜೆಪಿಯಿಂದ ಯಾರು ನಿಂತರೂ ಜಾತಿ ವಿಚಾರ ಒಂದಷ್ಟು ಪ್ರಭಾವ ಬಿದ್ದೇ ಬೀರುತ್ತದೆ. ಕಾಂಗ್ರೆಸ್ ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿ ಬಿಲ್ಲವ ಸಮುದಾಯದ ಉಮಾನಾಥ್ ಕೋಟ್ಯಾನ್ ಅವರನ್ನೇ ಕಣಕ್ಕಿಳಿಸುತ್ತಾ, ಬೇರೇನಾದರೂ ತಂತ್ರ ಹೆಣೆಯುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಪೂರ್ಣ ಬಹುಮತ : ಎಬಿಪಿ ಸಿ- ವೋಟರ್ ಸಮೀಕ್ಷೆ