– ಹೌದು, ನಾನು ಲೂಟಿ ರವಿ, ಕೋಟಿ ರವಿನೇ, ಆ ಲೂಟಿ-ಕೋಟಿ ಏನು?
ಚಿಕ್ಕಮಗಳೂರು: ಹಿಂದುತ್ವದ ಅಡಿಯಲ್ಲಿ ವಿಧಾನಸೌಧ ಪ್ರವೇಶಿಸಿದ ಸಿಟಿ ರವಿ ಸತತ ನಾಲ್ಕು ಬಾರಿ ಗೆದ್ದು ಈಗ ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಟಿ ರವಿ ದತ್ತಪೀಠದ ಹೋರಾಟವನ್ನೇ ರಾಜಕೀಯದ ಮೆಟ್ಟಿಲು ಮಾಡಿಕೊಂಡು ಎಬಿವಿಪಿಯಿಂದ ರಾಷ್ಟ್ರ ರಾಜಕಾರಣಕ್ಕೆ ಹೋದ ಅಪ್ಪಟ ರಾಜಕೀಯ ವ್ಯವಹಾರಸ್ಥ.
ಮಾಜಿ ಸಚಿವ ಸಗೀರ್ ಅಹಮದ್ ಅವರ ಎದುರು ನಿರಂತರವಾಗಿ ಮೂರು ಬಾರಿ ಸೋಲುಂಡರೂ ಏಳು-ಬೀಳು-ಸೋಲುಗಳ ಮಧ್ಯೆಯು 2004ರಲ್ಲಿ ವಿಧಾನಸೌಧ ಪ್ರವೇಶಿಸಿದ ಸಿ.ಟಿ.ರವಿ ಮತ್ತೆಂದೂ ಹಿಂದಿರುಗಿ ನೋಡಲಿಲ್ಲ. 2004, 2008, 2013, 2018 ನಾಲ್ಕು ಬಾರಿ ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದು ಎರಡು ಬಾರಿ ಸಚಿವರು ಆಗಿದ್ದಾರೆ. 20 ವರ್ಷಗಳ ರಾಜಕೀಯ ಜೀವನದಲ್ಲಿ ಕೊಟ್ಟ ಮಾತಿನಂತೆ ತನ್ನ ಬೆಳವಣಿಗೆಗೆ ಪೂರಕವಾದ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಿಸಿ ಹತ್ತಿದ ಏಣಿಯನ್ನು ಒದೆಯದೇ ದತ್ತಾತ್ರೇಯ ಋಣ ತೀರಿಸಿ, ಇದೀಗ ಮತ್ತದೇ ದತ್ತಾತ್ತೇಯ ಹಾಗೂ ಅಭಿವೃದ್ಧಿ ಆಧಾರದ ಮೇಲೆ ಐದನೇ ಬಾರಿ ವಿಧಾನಸೌಧ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ.
ಹಾಗೇ ನೋಡಿದರೆ ಲಿಂಗಾಯುತರು, ಕುರುಬರು, ಮುಸಲ್ಮಾನರು ಹಾಗೂ ಹಿಂದುಳಿದ ವರ್ಗಗಳ ಮತಗಳಿಗೆ ಹೋಲಿಸಿಕೊಂಡರೆ ಸಿ.ಟಿ.ರವಿಗೆ ಸಮುದಾಯದ ಮತಗಳು ಅಂತ ಇರೋದು ಕೇವಲ 15 ಸಾವಿರ. ಲಿಂಗಾಯುತರು 38 ಸಾವಿರ, ಕುರುಬರು-ಮುಸ್ಲಿಮರು 30 ಸಾವಿರ ಮತಗಳಿವೆ. ಹಿಂದುಗಳಿದ ವರ್ಗಗಳ ಮತಗಳು ಸರಿಸುಮಾರು 50 ಸಾವಿರ. ಆದರೆ ಸಿ.ಟಿ.ರವಿ ಪ್ರತಿನಿಧಿಸುವ ಒಕ್ಕಲಿಗ ಸಮುದಾಯಕ್ಕೆ ಕೇವಲ 15 ಸಾವಿರ ಮತಗಳಿವೆ. 2004ರಲ್ಲಿ ಸಿ.ಟಿ.ರವಿ ಮೊದಲ ಬಾರಿ ಗೆದ್ದಾಗ 35 ಸಾವಿರ ಒಕ್ಕಲಿಗ ಮತಗಳಿದ್ದವು. ಅದಾದ ಬಳಿಕ ಕ್ಷೇತ್ರ ವಿಂಗಡಣೆಯ ಬಳಿಕ ಇವರಿಗೆ ಉಳಿದ ಜಾತಿ ಮತಗಳು 15 ಸಾವಿರಕ್ಕೆ ಇಳಿಕೆಯಾಗಿದೆ. ಆ 15 ಸಾವಿರ ಮತಗಳು ಸಿ.ಟಿ.ರವಿ ಬಿದ್ದಿವೆ, ಬೀಳುತ್ತವೆ ಅನ್ನೋದು ಶುದ್ಧ ಸುಳ್ಳು. ಆದರೂ ನಾಲ್ಕು ಬಾರಿ ಗೆಲುವಿನ ಹಿಂದೆ ಹಲವಾರು ಕಾರಣಗಳು ಸಿಗುತ್ತವೆ.
ಚಿಕ್ಕಮಾಗರವಳ್ಳಿ ತಿಮ್ಮೇಗೌಡ ರವಿ ರಾತ್ರೋರಾತ್ರಿ ಸಿ.ಟಿ.ರವಿ ಆದದ್ದಲ್ಲ. ಜೆಡಿಎಸ್, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರಲ್ಲಿ ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟಿ ಬೆಳೆಸಿದ ಹಲವು ನಾಯಕರಲ್ಲಿ ಸಿ.ಟಿ.ರವಿ ಕೂಡ ಒಬ್ಬರು. ಮೂರು ಬಾರಿ ಸೋತಾಗಲೂ ಹೋರಾಡಿದ್ದಾರೆ. ಹೊಡೆದಾಡಿದ್ದಾರೆ. ಪೊಲೀಸರ ಲಾಠಿ-ಬೂಟಿನೇಟು ತಿಂದಿದ್ದಾರೆ. ಜೈಲಲ್ಲಿ ಮುದ್ದೆ ಮುರಿದಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಮೂರು ಬಾರಿ ಸೋಲಿಲ್ಲದ ಸರದಾರರಾಗಿದ್ದ ಸಗೀರ್ ಅಹಮದ್ ಎದುರು ಸಿ.ಟಿ.ರವಿಗೆ ಚುನಾವಣೆ ಎದುರಿಸೋದು ಸುಲಭದ ಮಾತಾಗಿರಲಿಲ್ಲ. ಹಣ-ಜಾತಿ-ತೋಳ್ಬಲ ಯಾವುದೂ ಇರಲಿಲ್ಲ. ಸಿ.ಟಿ.ರವಿ ಅವೆಲ್ಲವನ್ನೂ ತಂದುಕೊಟ್ಟದ್ದು ದತ್ತಪೀಠದ ಹೋರಾಟ. ಸಿ.ಟಿ.ರವಿಗೆ ಮಾತ್ರವಲ್ಲ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರನ್ನು ಮುನ್ನೆಲೆಗೆ ತಂದು ಕೊಟ್ಟಿದ್ದೇ ಈ ಹೋರಾಟ. 2004ರಲ್ಲಿ ಮೊದಲ ಬಾರಿಗೆ ಗೆದ್ದ ಬಳಿಕ ಮತ್ತೆಂದೂ ಹಿಂದೆ ತಿರುಗಿ ನೋಡುವ ಪರಿಸ್ಥಿತಿ ಬರಲಿಲ್ಲ. ಜಾತಿ ಬಲ ಇಲ್ಲದಿದ್ದರೂ ಬಲಿಷ್ಠ ಕಾರ್ಯಕರ್ತರ ಪಡೆ, ದತ್ತಪೀಠದ ಹೋರಾಟ ಅವರನ್ನ ಇಲ್ಲಿಗೆ ತಂದು ನಿಲ್ಲಿಸಿದೆ.
ಕೇವಲ ಸಗೀರ್ ಅಹಮದ್ ಅಷ್ಟೇ ಅಲ್ಲದೆ ಕುರುಬ ಸಮುದಾಯ ಗಾಯತ್ರಿ ಶಾಂತೇಗೌಡ, ಶಾಂತೇಗೌಡ, ಒಕ್ಕಲಿಗ ಸಮುದಾಯ ಹಾಗೂ ಚಿಕ್ಕಮಗಳೂರು ತಾಲೂಕಿನ ಕಣಿವೆ ಭಾಗದಲ್ಲಿ ಬಲಿಷ್ಠ ಹಿಡಿತ ಸಾಧಿಸಿದ್ದ ದಿ.ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ, ಬಿ.ಎಲ್.ಶಂಕರ್ ಇವರನ್ನೆಲ್ಲಾ ಎದುರಿಸಿಕೊಂಡು ಜಾತಿ ಮತಗಳಿಲ್ಲದಿದ್ದರೂ ಅಭಿವೃದ್ಧಿಯ ಮತಗಳಿಂದ ಶಾಸಕರಾಗಿದ್ದ ಸಿ.ಟಿ.ರವಿ ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಕಾನ್ಸ್‌ಟೇಬಲ್ ಆಯ್ಕೆ
30 ಸಾವಿರ ಕುರುಬ ಸಮುದಾಯದ ಮತಗಳ ಜೊತೆ, ಕಾಂಗ್ರೆಸ್ಸಿನ ಸಂಪ್ರಾದಾಯಿಕ ಮತಗಳ ಗಾಯತ್ರಿ ಶಾಂತೇಗೌಡ ಕೂಡ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. 2018ರಲ್ಲಿ ಸಿ.ಟಿ.ರವಿಯನ್ನ ಸೋಲಿಸಲೇಬೇಕು ಎಂದು ಕಾಂಗ್ರೆಸ್ ವಾಗ್ಮಿ ಬಿ.ಎಲ್.ಶಂಕರ್ ಅವರನ್ನ ಕಣಕ್ಕಿಳಿಸಿದ್ದರೆ, ಜೆಡಿಎಸ್ ಪಕ್ಷದ ಮತಗಳ ಜೊತೆ ಲಿಂಗಾಯಿತ ಮತಗಳು ಒನ್ ಸೈಡಾದರೆ ಗೆಲುವು ಸಾಧಿಸಬಹುದು ಎಂದು ಲಿಂಗಾಯಿತ ಸಮುದಾಯದ ಬಿ.ಎಚ್.ಹರೀಶ್‍ರನ್ನ ಕಣಕ್ಕಿಳಿಸಿತ್ತು. ಆದರೆ, ಆಗಲೂ ಸಿ.ಟಿ.ರವಿ 25 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದರು.
ಸಿ.ಟಿ.ರವಿಗೆ ಮಾತೇ ಬಂಡವಾಳ ಅನ್ನೋದು ಗುಟ್ಟಾಗೇನು ಉಳಿದಿಲ್ಲ. ಅದು ಬರೆದಿಟ್ಟ ಸತ್ಯ. ಕಟ್ಟಿಟ್ಟ ಬುತ್ತಿ. ಆದರೆ, ಕ್ಷೇತ್ರದ ಮಟ್ಟಿಗೆ ಸಣ್ಣ ಸಮುದಾಯದ ಸಿ.ಟಿ.ರವಿ ಆ ಮಾತಿನ ಬಂಡವಾಳವನ್ನೇ ರಾಜಕೀಯದ ಕೃಷಿ ಮಾಡೋದಕ್ಕೆ ಬಳಸಿಕೊಂಡ ಪರಿಣಾಮವೇ ಇಂದು ರಾಷ್ಟ್ರಮಟ್ಟದ ನಾಯಕರಾಗೋದಕ್ಕೆ ಸಾಧ್ಯವಾಗಿದೆ. ಎದುರಾಳಿಗಳಿಗೆ ಸಿ.ಟಿ.ರವಿಯನ್ನ ಮಣಿಸೋದಕ್ಕೆ ಸಾಧ್ಯವಾಗದಿರೋದಕ್ಕೆ ಅದೂ ಒಂದು ಕಾರಣವಾಗಿರೋದು ಅಷ್ಟೇ ಸತ್ಯ. ತನ್ನ ವಿಭಿನ್ನವಾದ ಮಾತಿನ ಶೈಲಿ, ನಿರರ್ಗಳವಾದ ಮಾತು, ಜನರೊಂದಿಗೆ ಬೆರೆಯುವ ರೀತಿ ಹಾಗೂ ಹಿಂದುತ್ವವನ್ನ ಮೈಗತ್ತಿಸಿಕೊಂಡ ಪರಿ ಕೂಡ ಅವರನ್ನ ಜಾತ್ಯಾತೀತ ನಾಯಕ ಹಾಗೂ ಸೋಲಿಲ್ಲದ ಸರದಾರನಾಗೋಕೆ ಸಾಧ್ಯವಾಗಿಸಿದೆ. ವಿರೋಧ ಪಕ್ಷಗಳಲ್ಲಿ ಬಲಿಷ್ಠ ನಾಯಕತ್ವ, ಹೊಂದಾಣಿಕೆಯ ಮನೋಭಾವ ಇಲ್ಲದಿರೋದು ಕೂಡ ಸಿ.ಟಿ.ರವಿ ಅವರನ್ನು ವರ್ಷದಿಂದ ವರ್ಷಕ್ಕೆ ಗಟ್ಟಿಗೊಳಿಸುತ್ತಲೇ ಇದೆ.
ವಿರೋಧ ಪಕ್ಷಗಳು ಸಿ.ಟಿ.ರವಿಯನ್ನ ಕೋಟಿ ರವಿ, ಲೂಟಿ ರವಿ ಎಂದೆಲ್ಲಾ ಬಣ್ಣಿಸುತ್ತಿದ್ದಾರೆ. ಅದನ್ನ ಸಿ.ಟಿ.ರವಿ ಕೂಡ ಒಪ್ಪಿಕೊಳ್ಳುತ್ತಿದ್ದಾರೆ. ನಾನು ಲೂಟಿ ರವಿನೂ ಹೌದು. ಕೋಟಿ ರವಿಯೂ ಹೌದು ಎಂದು ಅವರೇ ಒಪ್ಪಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿಯೂ ಮತದಾರರು ನನ್ನನ್ನ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಲೀಡ್‍ನಲ್ಲಿ ಗೆಲ್ಲಿಸುತ್ತಿದ್ದಾರೆ. ನಾನು ಅವರ ನಂಬಿಕೆ-ಪ್ರೀತಿಯನ್ನ ಲೂಟಿ ಮಾಡಿರೋ ಲೂಟಿ ರವಿ. ಸರ್ಕಾರ ಯಾವುದೇ ಇರಲಿ. ಯಾರೇ ಮುಖ್ಯಮಂತ್ರಿ ಇದ್ದರೂ ಕಾಡಿ-ಬೇಡಿ ಕೋಟಿ-ಕೋಟಿ ಅನುದಾನ ತಂದಿದ್ದಾನೆ. ಅದಕ್ಕೆ ನಾನು ಕೋಟಿ ರವಿಯೂ ಹೌದು ಎಂದು ವಿರೋಧ ಪಕ್ಷದ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಚಿಕ್ಕಮಗಳೂರು ಜನ ಜಾತಿ-ಮತ-ಧರ್ಮ ನೋಡದೇ ಬೆಳೆಸಿದ್ದರಿಂದ ಸಿ.ಟಿ.ರವಿ ಬೆಳೆದಿರೋದು ಗುಟ್ಟಾಗೇನು ಉಳಿದಿಲ್ಲ. ಜನರ ನಂಬಿಕೆಯನ್ನ ಎಲ್ಲೂ ಹುಸಿಗೊಳಿಸದೇ ಬುದ್ಧಿವಂತಿಕೆಯಿಂದ ಸಿಟಿ ರವಿ ಮ್ಯಾನೇಜ್ ಮಾಡಿಕೊಂಡು ಬರುತ್ತಿದ್ದಾರೆ.
ಎಂದಿನಂತೆ ಈ ಬಾರಿಯೂ ಜನ ಬದಲಾವಣೆ ಅಂತಿದ್ದಾರೆ. ಆದರೆ ಅಷ್ಟೇ ಜನ ಈ ಸಲ ಸಾಕಷ್ಟು ಕೆಲಸ ಮಾಡಿದ್ದಾರೆ ಅವರೇ ಇರಲಿ ಎಂಬ ಮಾತುಗಳು ಬಲವಾಗಿವೆ. ಪಬ್ಲಿಕ್ ಟಿವಿಯ ಬುಲೆಟ್ ರಿಪೋರ್ಟರ್ ಸಂದರ್ಭದಲ್ಲೂ ಮೆಡಿಕಲ್ ಕಾಲೇಜು, ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ, ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ. ಹಳ್ಳಿಗಳ ಸಿಮೆಂಟ್ ರಸ್ತೆ, ಮನೆ ಬಾಗಿಲಿಗೆ ಕುಡಿಯೋ ನೀರಿನ ಅಮೃತ್ ಕುಡಿಯೋ ನೀರಿನ ಯೋಜನೆ ಸೇರಿದಂತೆ ಜನ ಹಲವು ಯೋಜನೆಗಳ ಫಲಾನುಭವಿಗಳಾಗಿದ್ದು ಮತ್ತೆ ಸಿ.ಟಿ.ರವಿಯನ್ನು ಜಾತಿ ಮೀರಿದ ನಾಯಕನಾಗಿಸಲು ಹೊರಟಿದ್ದಾರೆ.
ಸಿ.ಟಿ.ರವಿಯನ್ನ ಜಾತ್ಯಾತೀತ ನಾಯಕನನ್ನಾಗಿಸಿರುವುದರಲ್ಲಿ ಕಾಂಗ್ರೆಸ್-ಜೆಡಿಎಸ್ ಪಾತ್ರವೂ ದೊಡ್ಡದ್ದು. ಎರಡೂ ಪಕ್ಷಗಳು ಒಂದೊಂದು ಚುನಾವಣೆಯಲ್ಲಿ ಒಬ್ಬಬ್ಬ ಕ್ಯಾಂಡಿಡೇಟ್ ತಂದು ನಿಲ್ಲಿಸಿ ಸಿ.ಟಿ.ರವಿಯನ್ನ ಬೆಳೆಸುತ್ತಿದ್ದಾರೆ. 2008ರಲ್ಲಿ ಕಾಂಗ್ರೆಸ್‍ನಿಂದ ಶಾಂತೇಗೌಡ, 2013ರಲ್ಲಿ ಗಾಯತ್ರಿ ಶಾಂತೇಗೌಡ, 2018ರಲ್ಲಿ ಬಿ.ಎಲ್.ಶಂಕರ್. ಇನ್ನು ಈ ಸಲ ಸಿ.ಟಿ.ರವಿ ಆಪ್ತ ತಮ್ಮಯ್ಯ ಎಂದು ಹೇಳಲಾಗುತ್ತಿದೆ. ಇನ್ನು ಜೆಡಿಎಸ್ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸಿ.ಟಿ.ರವಿ ಬೆಳವಣಿಗೆಯಲ್ಲಿ ಅವರ ಪಾತ್ರ ಎಷ್ಟಿದೆಯೋ ಅಷ್ಟೇ ಪಾತ್ರ ವಿರೋಧ ಪಕ್ಷಗಳದ್ದೂ ಇದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಾರಿಯೂ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಸಿ.ಟಿ.ರವಿ ಐದನೇ ಬಾರಿ ವಿಧಾನಸೌಧ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದ್ದಾರೆ.