ಗದಗ: ವಿಧಾನಸಭೆ ಚುನಾವಣೆಯ ಮತದಾನಕ್ಕೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗದಗ ಮತ ಕ್ಷೇತ್ರವು ರಣ-ಕಣವಾಗಿ ಸಿದ್ಧಗೊಂಡಿದೆ. ಗದಗ ವಿಧಾನಸಭೆ ಕ್ಷೇತ್ರದ ಇತಿಹಾಸವನ್ನು ಮೆಲುಕು ಹಾಕಿದಾಗ, ಹಲವಾರು ಕುತೂಹಲದ ಅಂಶಗಳು ಕಾಣಸಿಗುತ್ತವೆ.
ಮುಖ್ಯವಾಗಿ ಕೆ.ಹೆಚ್. ಪಾಟೀಲ್ ಅವರು 1967ರ ತಮ್ಮ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು, ನಂತರ 1972ರಲ್ಲಿ ಕಾಂಗ್ರೆಸ್‍ನಿಂದ ಶಾಸಕರಾಗಿದ್ದರು. ನಂತರ 1978ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮುನಿಸಿಕೊಂಡು ರೆಡ್ಡಿ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ಕೆ. ಹೆಚ್. ಪಾಟೀಲ್‍ರನ್ನು ಸಿ.ಎಸ್. ಮುತ್ತಿನಪೆಂಡಿಮಠ ಸೋಲಿಸಿದರು. ಅವರ ಮಗನಾದ ಹೆಚ್.ಕೆ ಪಾಟೀಲ್‍ರನ್ನು ಕ್ಷೇತ್ರದವರೇ ಅಲ್ಲದ ಶ್ರೀಶೈಲಪ್ಪ ಬಿದರೂರ ಸೋಲಿಸಿದ ಘಟನೆಗಳು ಕ್ಷೇತ್ರದಲ್ಲಿ ಮರೆಯದ ವಿಷಯಗಳಾಗಿವೆ.
Advertisement
Advertisement
ಗದಗ (Gadag) ಕ್ಷೇತ್ರ ಕಾಂಗ್ರೆಸ್‍ನ ಭದ್ರ ಕೋಟೆಯಾಗಿದೆ. 1957 ರಿಂದ 2018ರವರೆಗೆ ಜರುಗಿದ 15 ವಿಧಾನಸಭೆ ಚುನಾವಣೆಗಳ (Election) ಪೈಕಿ, ಕೇವಲ 3 ಚುನಾವಣೆಯಲ್ಲಿ ಕಾಂಗ್ರೆಸ್ಸೇತರರು ಜಯಭೇರಿ ಬಾರಿಸಿದ್ದಾರೆ. ಉಳಿದ 12 ಚುನಾವಣೆಯಲ್ಲಿ ಕಾಂಗ್ರೆಸ್ ಪಾರಮ್ಯ ಮೆರೆದಿದೆ. ಮೊದಲೆರಡು ಚುನಾವಣೆಯಲ್ಲಿ ಕಾಂಗ್ರೆಸ್‍ನ ಕೆ.ಪಿ. ಎಂಬುವರು ಗದಗ ಶಾಸಕರಾಗಿದ್ದರು. ನಂತರ ಹುಲಕೋಟಿಯ ಕೆ.ಹೆಚ್. ಪಾಟೀಲ್ ಪೂರ್ಣ ನಾಲ್ಕು ಅವಧಿ (20 ವರ್ಷ) ಶಾಸಕರಾಗಿದ್ದರು. 1992ರಲ್ಲಿ ಕೆ.ಹೆಚ್. ಪಾಟೀಲ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ ಡಿ.ಆರ್. ಪಾಟೀಲ್ ಸ್ಪರ್ಧಿಸಿ ಜಯಗಳಿಸಿದರು. ಆದರೆ 2 ವರ್ಷಕ್ಕೆ ಶಾಸಕ ಸ್ಥಾನದ ಅವಧಿ ಪೂರ್ಣಗೊಂಡಿತು. ನಂತರ 1994, 1999, 2004ರಲ್ಲಿ ಡಿ.ಆರ್. ಪಾಟೀಲ್ ಗೆಲುವು ಸಾಧಿಸಿದರಲ್ಲದೇ, ಒಟ್ಟು 17 ವರ್ಷ ಗದಗ ಕ್ಷೇತ್ರದ ಶಾಸಕರಾಗಿದ್ದರು.
Advertisement
ಸತತ 20 ವರ್ಷಗಳ ಕಾಲ ವಿಧಾನಪರಿಷತ್ ಸದಸ್ಯರಾಗಿದ್ದ ಹೆಚ್.ಕೆ. ಪಾಟೀಲ್ ಅವರು ನೀರಾವರಿ, ಕಾನೂನು ಸಂಸದೀಯ ಇಲಾಖೆ, ಅರಣ್ಯ ಸಚಿವರಾಗಿ, ಪ್ರತಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಪ್ರಥಮ ಬಾರಿಗೆ 2008ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದರು. 2013ರ ಚುನಾವಣೆಯಲ್ಲಿ ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದರು.
Advertisement
ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ 2018ರ ಚುನಾವಣೆಯಲ್ಲೂ ಗೆಲುವು ಸಾಧಿಸುವ ಮೂಲಕ ಸತತ 2ನೇ ಬಾರಿ ಗೆಲುವು ಸಾಧಿಸಿದರು. 2023ರ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಹ್ಯಾಟ್ರಿಕ್ ಜಯದ ತವಕದಲ್ಲಿದ್ದಾರೆ. ಗದಗ ಮತಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬುದನ್ನು ಸಾಬೀತು ಮಾಡುತ್ತಲೇ ಬಂದಿದೆ.
ಕೆ.ಹೆಚ್. ಪಾಟೀಲರು ಶಾಸಕರು, ಸಚಿವರಾಗಿದ್ದ ಅವಧಿಯಲ್ಲಂತೂ ಕಾಂಗ್ರೆಸ್ ಜನಪ್ರಿಯತೆ ಉತ್ತುಂಗದಲ್ಲಿತ್ತು. ಅವರ ನೇರ ನಡೆ, ನುಡಿ, ದಾಢಸಿತನ ಮತ್ತು ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದ ಅವರು `ಹುಲಕೋಟಿ ಹುಲಿ’ ಎನಿಸಿಕೊಂಡರು. ಕೆ.ಹೆಚ್. ಪಾಟೀಲರ ನಂತರ ಡಿ.ಆರ್. ಪಾಟೀಲ್, ಆನಂತರ ಹೆಚ್.ಕೆ. ಪಾಟೀಲ್ ಅವರು ತಮ್ಮ ಚುನಾವಣೆ ರಣನೀತಿಗಳು, ತಂತ್ರಗಾರಿಕೆಯಿಂದ ರಾಜಕೀಯ ಅಸ್ತಿತ್ವ ಕಾಯ್ದುಕೊಂಡಿದ್ದಾರೆ. ಹೀಗಾಗಿ ಹುಲಕೋಟಿಯ ಪಾಟೀಲ್ ಮನೆತನ ಇಲ್ಲಿಯವರೆಗೆ 47 ವರ್ಷಗಳ ಕಾಲ ಇಲ್ಲಿ ಆಡಳಿತ ನಡೆಸಿದೆ.
ಅಚ್ಚರಿಯ ಗೆಲುವು: ದೇಶದಲ್ಲಿ ತುರ್ತು ಪರಿಸ್ಥಿತಿ ಬಳಿಕ (1978) ಜರುಗಿದ ಚುನಾವಣೆಯಲ್ಲಿ ಜೆಎನ್‍ಪಿ ಪಾರ್ಟಿಯಿಂದ ಕಣಕ್ಕಿಳಿದಿದ್ದ ಸಿ.ಎಸ್. ಮುತ್ತಿನಪೆಂಡಿಮಠ ಅವರು ಕೆ.ಹೆಚ್. ಪಾಟೀಲರ (KH Patil) ವಿರುದ್ಧ ಗೆಲುವು ಸಾಧಿಸಿದ್ದು ಅಚ್ಚರಿ ಮೂಡಿಸಿತು. ನಂತರ 1983ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಸಿ.ಎಸ್. ಮುತ್ತಿನಪೆಂಡಿಮಠ ಅವರು ಮತ್ತೆ ಶಾಸಕರಾಗಿ ಪುನರಾಯ್ಕೆಗೊಂಡರು.
ನಂತರ 2008ರ ಚುನಾವಣೆಯಲ್ಲಿ ಬಿಜೆಪಿಯಿಂದ (BJP) ಶ್ರೀಶೈಲಪ್ಪ ಬಿದರೂರ ಅವರು ಕಾಂಗ್ರೆಸ್ (Congress) ಅಭ್ಯರ್ಥಿ ಹೆಎಚ್.ಕೆ. ಪಾಟೀಲರ (HK Patil) ವಿರುದ್ಧ ಗೆಲುವು ಸಾಧಿಸಿದರು. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿಕಾಯಿ ವಿರುದ್ಧ ಕಾಂಗ್ರೆಸ್‍ನ ಹೆಚ್.ಕೆ ಪಾಟೀಲರು ಕೇವಲ 1,867 ಮತಗಳಿಂದ ಮಾತ್ರ ಗೆದ್ದಿರುವುದು ಅಚ್ಚರಿಯ ವಿಷಯ. ಇದನ್ನೂ ಓದಿ: ರಾಮನವಮಿಯ ಧ್ವಜದಲ್ಲಿ ಮಾಂಸದ ತುಂಡು – ಜಮ್ಶೆಡ್‌ಪುರದಲ್ಲಿ ಹಿಂಸಾಚಾರ
ಗದಗ ಮತಕ್ಷೇತ್ರದ ಮತದಾರರ ಸಂಖ್ಯೆ ಕಳೆದ 60 ವರ್ಷಗಳಲ್ಲಿ ಹತ್ತು ಪಟ್ಟು ಹೆಚ್ಚಿದೆ. 1952ರಲ್ಲಿ ಜರುಗಿದ ಪ್ರಥಮ ವಿಧಾನಸಭೆ ಚುನಾವಣೆಯಲ್ಲಿ 21,877 ಮತದಾರ ಸಂಖ್ಯೆ ಇತ್ತು. 2023ರ ಚುನಾವಣೆಯಲ್ಲಿ ಒಟ್ಟು 2,18,862 ಮತದಾರರಿದ್ದಾರೆ.
ಕಾಂಗ್ರೆಸ್‍ನ ಹಾಲಿ ಶಾಸಕ ಹೆಚ್.ಕೆ ಪಾಟೀಲ್ 2023ರ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕ್ಷೇತ್ರ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಇತ್ತ ಬಿಜೆಪಿ ಭರ್ಜರಿ ಕ್ಯಾಪೇನ್ ನಡೆಸಿ ಕಾಂಗ್ರೆಸ್ ಭದ್ರಕೋಟೆ ಛಿದ್ರ ಮಾಡಲು ಸಜ್ಜಾಗಿದೆ. ಒಟ್ಟಿನಲ್ಲಿ ಗದಗ ಮತಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಈ ಬಾರಿ ಛಿದ್ರವಾಗುತ್ತಾ? ಅಥವಾ ಭದ್ರಕೋಟೆ ಸುಭದ್ರವಾಗಿ ಉಳಿಯುತ್ತಾ? ಕಾದು ನೋಡಬೇಕಿದೆ. ಇದನ್ನೂ ಓದಿ: ಯುರೋಪ್ ರಾಷ್ಟ್ರಗಳು ಅಮೆರಿಕ ಅವಲಂಬನೆ ಬಿಡಬೇಕು : ಫ್ರಾನ್ಸ್ ಅಧ್ಯಕ್ಷ