ಉಡುಪಿ: ಭಗವಾನ್ ಶ್ರೀಕೃಷ್ಣ ಪರಮಾತ್ಮ ಭಕ್ತರ ಆರಾಧ್ಯ ದೇವರು. ದ್ವಾಪರದ ಕೃಷ್ಣ ಒಬ್ಬ ಚಾಣಾಕ್ಷ ರಾಜಕಾರಣಿ ಎಂದೇ ಜನಜನಿತ. ಕೃಷ್ಣನೂರಿನ ರಾಜಕಾರಣ ಕೂಡಾ ಹಾಗೆಯೇ ಇಲ್ಲಿ ನಡೆದ 15 ಚುನಾವಣೆಯಲ್ಲಿ ನಾಲ್ಕು ಪಕ್ಷಗಳನ್ನು ಮತದಾರರು ಗೆಲ್ಲಿಸಿದ್ದಾರೆ. ಪ್ರಬಲ ಜಾತಿ ಬಲ ಇಲ್ಲದೆಯೂ ಗೆಲ್ಲಿಸಿರುವುದು ವಿಶೇಷ.
ಒಂದು ಕಾಲದಲ್ಲಿ ಕಾಂಗ್ರೆಸ್ (Congress) ಭದ್ರಕೋಟೆಯಾಗಿದ್ದ ಉಡುಪಿ ವಿಧಾನಸಭಾ ಕ್ಷೇತ್ರ (Udupi Assembly Constituency) ಈಗ ಭಾರತೀಯ ಜನತಾ ಪಕ್ಷದ ಗಟ್ಟಿ ಕ್ಷೇತ್ರ. ಗ್ರಾಮ ಪಂಚಾಯತ್‌ನಿಂದ ಸಂಸದರವರೆಗೆ ಬಿಜೆಪಿಯ ಭದ್ರ ಕೋಟೆಯಾಗಿ ಬದಲಾಗಿದೆ. ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಇಬ್ಬರು ಮೊಗವೀರ ಅಭ್ಯರ್ಥಿಗಳು ಮುಖಾಮುಖಿಯಾಗುತ್ತಿದ್ದಾರೆ. ಕಾಂಗ್ರೆಸ್ ಉದ್ಯಮಿಯನ್ನು ಕಣಕ್ಕಿಳಿಸಿದರೆ ಬಿಜೆಪಿ (BJP) ಹಿಂದುತ್ವದ ಅಸ್ತ್ರವನ್ನು ಪ್ರಯೋಗ ಮಾಡಿದೆ.
Advertisement
ಕರಾವಳಿ ಜಿಲ್ಲೆ ಉಡುಪಿಯ ಈ ಬಾರಿಯ ಚುನಾವಣೆ ಎಂದೆಂದೂ ಕಂಡರಿಯಾದ ಹೊಸತನದ ಚುನಾವಣೆಯಾಗಿದೆ. ಅಧಿಕಾರದಲ್ಲಿದ್ದ 5 ಬಿಜೆಪಿ ಶಾಸಕರ ಪೈಕಿ ಈ ಬಾರಿ 4 ಜನಕ್ಕೆ ಮತ್ತೆ ಸ್ಪರ್ಧಿಸುವ ಅವಕಾಶ ಸಿಕ್ಕಿಲ್ಲ. ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನಿವೃತ್ತಿಗು ಲಿಂಕ್ ಇದೆ. ಬಂಟ ಸಮುದಾಯದ ನಾಯಕ ಹಾಲಾಡಿ ರಾಜೀನಾಮೆ ಕೊಟ್ಟಾಗ ಇಡೀ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗಿದೆ. ಸಾಮಾಜಿಕ ನ್ಯಾಯ ಎಂದು ಬಿಂಬಿಸುವ ಜಾತಿಯ ಆಧಾರಿತ ಟಿಕೆಟ್ ಹಂಚಿಕೆಯಲ್ಲೂ ಬದಲಾವಣೆಯಾಗಿದೆ. ಉಡುಪಿ ಶಾಸಕ ರಘುಪತಿ ಭಟ್ ಮೂರು ಬಾರಿ ಸ್ಪರ್ಧೆ ಮಾಡಿದ್ದು ಮೂರು ಬಾರಿಯೂ ಗೆದ್ದಿದ್ದರು. ಈ ಬಾರಿ ಟಿಕೆಟ್ ತಪ್ಪಿದೆ. ಕಾಪು ಮೇಲೆ ಕಣ್ಣಿಟ್ಟಿದ್ದ ಮೊಗವೀರ ನಾಯಕ, ಸಹಕಾರಿ ಕ್ಷೇತ್ರದ ಯಶ್ ಪಾಲ್ ಸುವರ್ಣಗೂ (Yashpal Suvarna)ಉಡುಪಿ ಟಿಕೆಟ್ ಸಿಕ್ಕಿದೆ.
Advertisement
Advertisement
ಉಡುಪಿ ಬಿಜೆಪಿಯ ಭದ್ರ ಕೋಟೆ. ಇಲ್ಲಿ ಅಭ್ಯರ್ಥಿ ಮುಖ್ಯ ಆಗುವುದಿಲ್ಲ ಪಕ್ಷವೇ ಮುಖ್ಯ. ಉಡುಪಿ ನಗರಸಭೆ ದಕ್ಷಿಣ ಭಾರತದಲ್ಲೇ ಬಿಜೆಪಿ ಅಧಿಕಾರ ಪಡೆದ ಮೊದಲ ಸ್ಥಳೀಯ ಆಡಳಿತ ಸಂಸ್ಥೆ.
Advertisement
ಯಶ್ ಪಾಲ್ ಸುವರ್ಣ
ಹಿಂದುತ್ವದ ಹೋರಾಟದಿಂದ ಉದ್ಭವವಾದ ಮೊಗವೀರ ನಾಯಕ. ಬಿಕಾಂ ಶಿಕ್ಷಣವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಡೆದಿದ್ದಾರೆ. ಕರಾವಳಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕರಾವಳಿಯಲ್ಲಿ ಹಿಂದುತ್ವದ ಹೋರಾಟದ ಮೂಲಕ ಬಿಜೆಪಿ ತನ್ನ ಸ್ಥಾನವನ್ನು ನಿಧಾನಕ್ಕೆ ಭದ್ರಪಡಿಸುತ್ತಾ ಹೋಗಿದೆ. ಸಂಘ ಪರಿವಾರ ಹಿಂದೂ ಯುವ ಸೇನೆ ಸಂಘಟನೆಯ ಮೂಲಕ ಯಶ್ ಪಾಲ್ ಸುವರ್ಣ ಪ್ರವರ್ಧಮಾನಕ್ಕೆ ಬಂದವರು. ಉಡುಪಿಯ ಪ್ರಬಲ ಮೊಗವೀರ ಸಮುದಾಯ ಕಾಂಗ್ರೆಸ್ ಪಕ್ಷದ ಜೊತೆ ಇದ್ದಂತ ಸಂದರ್ಭದಲ್ಲಿ ಯುವಕರನ್ನು ಬಿಜೆಪಿಗೆ ಸೆಳೆದವರಲ್ಲಿ ಮತ್ತು ಮೊಗವೀರ ನಾಯಕನಾಗಿ ಯಶ್ ಪಾಲ್ ಸುವರ್ಣ ಕಾಣಿಸಿಕೊಳ್ಳುತ್ತಿದ್ದಾರೆ.
ಆದಿ ಉಡುಪಿ ಬೆತ್ತಲೆ ಪ್ರಕರಣ, ಹಿಜಬ್ (Hijab) ವಿರುದ್ಧದ ಹೋರಾಟ, ಸಾವರ್ಕರ್ ಸರ್ಕಲ್ ಹೋರಾಟ ಧರ್ಮ ದಂಗಲ್ ಮೂಲಕ ಪ್ರಕರ ಹಿಂದುತ್ವವಾದಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕನಾಗಿ ಅಧ್ಯಕ್ಷನಾಗಿದ್ದಾರೆ. ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಜನಮನಗಳಿಸಿದ್ದಾರೆ.
ಧನಾತ್ಮಕ ಅಂಶಗಳು
ಉಡುಪಿಯ 226 ಬೂತ್ ಗಳಲ್ಲೂ ಬಿಜೆಪಿ ಶಕ್ತಿಯುತವಾಗಿದ್ದು ಅಭ್ಯರ್ಥಿ ಜೊತೆ ಯುವ ಕಾರ್ಯಕರ್ತರ ದಂಡು ಇದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಇದೆ. ಹಿಂದುತ್ವವಾದಿ ಒಬ್ಬ ಶಾಸಕರಾಗಿ ಬರಬೇಕು ಎಂಬ ಕೆಲ ಜನರ ನಿರೀಕ್ಷೆ ಇದೆ. ಸಹಕಾರಿ ಕ್ಷೇತ್ರದಲ್ಲಿ ಇರುವುದರಿಂದ ಎಲ್ಲಾ ವರ್ಗದ ಜನರ ವಿಶ್ವಾಸಗಳಿಸಿಕೊಂಡಿದ್ದಾರೆ. ಎರಡು ಬಾರಿ ನಗರಸಭೆಯ ಸದಸ್ಯನಾಗಿ ಆಯ್ಕೆಯಾದ ಅನುಭವವಿದ್ದು ಪಕ್ಷದ ಸಂಘ ಪರಿವಾರದ ಸಂಪೂರ್ಣ ಬೆಂಬಲ ಸಿಕ್ಕಿದೆ.
ಋಣಾತ್ಮಕ ಅಂಶಗಳು
ರಫ್ ಆಂಡ್ ಟಫ್ ಅಭ್ಯರ್ಥಿ. ಹಿಂದುತ್ವದ ಹೋರಾಟದಲ್ಲಿರುವ ಕಾರಣ ಮುಸ್ಲಿಂ ಕ್ರೈಸ್ತ ಮತಗಳು ಬೀಳುವುದು ಅನುಮಾನ. ಬ್ರಹ್ಮಾವರ ತಾಲೂಕಿನಲ್ಲಿ ಯಶ್ ಪಾಲ್ ಪರಿಚಿತ ಹೆಸರಲ್ಲ. ಭಾಷಣ ಮೂಲಕ ಜನರನ್ನು ಸೆಳೆಯುವ ಶಕ್ತಿ ಕಡಿಮೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯ ಚಟುವಟಿಕೆ ಮಾಡಿಕೊಂಡಿದ್ದರು. ಅಚ್ಚರಿಯ ರೀತಿಯಲ್ಲಿ ಕೊನೆ ಕ್ಷಣದಲ್ಲಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.
ಪ್ರಸಾದ್ ರಾಜ್ ಕಾಂಚನ್
ಕಾಂಗ್ರೆಸ್ (Congress) ಉಡುಪಿಯಲ್ಲಿ ಈ ಬಾರಿ ಹೊಸ ಮುಖವನ್ನು ಪರಿಚಯಿಸಿದೆ. ಉದ್ಯಮಿ ಆಗಿರುವ ಪ್ರಸಾದ್ ಕಾಂಚನ್ (Prasad Raj Kanchan) ಎಂಬಿಎ ಪದವಿಯನ್ನು ಪಡೆದಿದ್ದಾರೆ. ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಕುಟುಂಬದಿಂದ ಬಂದಿರುವ ಪ್ರಸಾದ್ ಕಾಂಚನ್ ಗೆ ಸಕ್ರಿಯ ರಾಜಕಾರಣ ಇದೇ ಮೊದಲು.
ಸಂಪೂರ್ಣವಾಗಿ ಕಾಂಗ್ರೆಸ್ ಹಿಡಿತದಲ್ಲಿದ್ದ ಉಡುಪಿ ವಿಧಾನಸಭಾ ಕ್ಷೇತ್ರ 2004ನೇ ಇಸವಿಯ ನಂತರ ಬಿಜೆಪಿಯ ಪಾಲಾಗಿದೆ. ಒಂದು ಬಾರಿ ವಿಎಸ್ ಆಚಾರ್ಯ ಗೆದ್ದದ್ದು ಬಿಟ್ಟರೆ ನಿರಂತರವಾಗಿ ಕಾಂಗ್ರೆಸ್ ಉಡುಪಿಯಲ್ಲಿ ಅಧಿಕಾರ ನಡೆಸಿದೆ. ಎರಡನೇ ಮತ್ತು ಮೂರನೆಯ ತಲೆಮಾರನ್ನು ಬೆಳೆಸದೆ ಇರುವ ಕಾರಣ ಈ ಬಾರಿ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಾಗಿತ್ತು. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಚುನಾವಣೆಯ ಸಂದರ್ಭ ವಿಪರೀತವಾಗಿ ಬೀಸಿದರೆ, ಅತ್ಯಾಶ್ಚರ್ಯ ಎಂಬಂತೆ ಉಡುಪಿಯಲ್ಲಿ ಕಾಂಗ್ರೆಸ್ ಗೆಲ್ಲಬಹುದು. ಸದ್ಯದ ಮಟ್ಟಿಗೆ ಸಂಘಟನೆ, ಪ್ರಚಾರದಲ್ಲಿ ಬಿಜೆಪಿ ಬಹಳ ಮುಂಚೂಣಿಯಲ್ಲಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಎಷ್ಟೇ ಪ್ರಬಲವಾಗಿದ್ದರೂ, ಸುಮಾರು 40,000 ಮತಗಳು ಕಾಂಗ್ರೆಸ್ ಬುಟ್ಟಿಯೊಳಗೆ ಇದೆ. ಬಿಜೆಪಿ ಸರಕಾರದ ಭ್ರಷ್ಟಾಚಾರ ವಿಚಾರವೇ ಕಾಂಗ್ರೆಸ್ ನ ಪ್ರಮುಖ ಅಸ್ತ್ರವಾಗಿದ್ದು, ಶಾಸಕ ರಘುಪತಿ ಭಟ್ ಗೆ ಬಿಜೆಪಿ ಟಿಕೆಟ್ ಕೊಡದಿರುವುದು ಕೆಲ ಬಿಜೆಪಿ ಮತಗಳು ಕಾಂಗ್ರೆಸ್‌ಗೆ ಹೋಗಿ ಪ್ಲಸ್ ಆಗಬಹುದು. ಹೊಸ ಮುಖದ ಪ್ರಯೋಗವನ್ನು ಕಾಂಗ್ರೆಸ್ ಮಾಡಿರುವುದರಿಂದ ಕೆಲ ವಿದ್ಯಾವಂತ ಮತ್ತು ನಗರ ಭಾಗದ ಮತಗಳು ಪ್ರಸಾದ್ ರಾಜ್ ಕಾಂಚನ್ ಸಿಗಬಹುದು.
ಧನಾತ್ಮಕ ಅಂಶಗಳು:
ಎಂಬಿಎ ಪದವಿ ಓದಿದ ಉದ್ಯಮಿಗೆ ಟಿಕೆಟ್ ನೀಡಲಾಗಿದೆ. ಶಿಕ್ಷಣ, ಆರೋಗ್ಯ, ಉಡುಪಿಯ ಬೆಳವಣಿಗೆ ಮಾತು. ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ತಾಲೂಕಿನ ಒಡನಾಟ ಹೊಂದಿದ್ದಾರೆ. ಮೃದು ಸ್ವಭಾವದ ಅಭ್ಯರ್ಥಿಯಾಗಿರುವ ಇವರು 8 ಟಿಕೆಟ್ ಆಕಾಂಕ್ಷಿಗಳ ಪೈಕಿ ಆರು ಜನ ಪ್ರಸಾದ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.
ಋಣಾತ್ಮಕ ಅಂಶಗಳು
ಉಡುಪಿಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ. ಆಸ್ಕರ್ ಫರ್ನಾಂಡಿಸ್ ಮೃತಪಟ್ಟ ನಂತರ ನಾವಿಕ ಇಲ್ಲದಂತದಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಬಿಜೆಪಿಗೆ ಸಡ್ಡು ಹೊಡೆಯುವ ಅಭ್ಯರ್ಥಿ ಇಲ್ಲ. ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಿದ ನಂತರ ಕಾಂಗ್ರೆಸ್ ಮತ್ತಷ್ಟು ಬಲಹೀನವಾಗಿದೆ ಅಭ್ಯರ್ಥಿಯ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಯ ಸಮಯದಲ್ಲಿ ಪಕ್ಷ ಸಂಘಟನೆಯಾಗುತ್ತಿದೆ.
ಬಂಡಾಯ ಅಭ್ಯರ್ಥಿ
ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಕೃಷ್ಣಮೂರ್ತಿ ಆಚಾರ್ಯ ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 18 ವರ್ಷದ ಹಿಂದೆ ಹಿಂದೂ ಯುವ ಸೇನೆಯಲ್ಲಿ ಬಿಜೆಪಿಯಲ್ಲಿ ಸಕ್ರಿಯ ರಾಗಿದ್ದ ಕೃಷ್ಣಮೂರ್ತಿ 2004ರ ನಂತರ ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಬಂದಿದ್ದರು ಜಾತಿ ಆಧಾರಿತ ಟಿಕೆಟ್ ಹಂಚಿಕೆಯಿಂದ ಕೃಷ್ಣಮೂರ್ತಿ ಆಚಾರ್ಯಗೆ ಸರ್ವೆ ಮತ್ತು ಕಾರ್ಯಕರ್ತರ ಒಲವಿದ್ದರೂ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ಮತಗಳನ್ನು ಕೃಷ್ಣಮೂರ್ತಿ ಆಚಾರ್ಯ ಸೆಳೆಯಲಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ/ ಜೆಡಿಎಸ್ ಈವರೆಗೆ ಖಾತೆ ತೆರೆದಿಲ್ಲ. ಈ ಬಾರಿ ಜೆಡಿಎಸ್ ದಕ್ಷತ್‌ಗೆ ಟಿಕೆಟ್ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಉಡುಪಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಜಂಟಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಅವರನ್ನು ಕಣಕ್ಕೆ ಇಳಿಸಿತ್ತು. ಈ ಸಂದರ್ಭ ಕಾಂಗ್ರೆಸ್, ಪ್ರಮೋದ್ ಮಧ್ವರಾಜ್ ಅವರ ವರ್ಚಸ್ಸು, ಜೆಡಿಎಸ್ ನ ಮತಗಳು ಸೇರಿ 57 ಸಾವಿರ ಮತಗಳು ಬಿದ್ದಿದ್ದವು.
ಜಾತಿ ಲೆಕ್ಕಾಚಾರ
ಮೊಗವೀರ 50 ಸಾವಿರ, ಬಿಲ್ಲವ 45 ಸಾವಿರ, ಬಂಟ 35 ಸಾವಿರ, ಮುಸ್ಲಿಂ 20 ಸಾವಿರ, ಕ್ರೈಸ್ತ 12 ಸಾವಿರ, ಪರಿಶಿಷ್ಟ ಜಾತಿ ಮತ್ತು ಪಂಗಡ 25 ಸಾವಿರ, ಬ್ರಾಹ್ಮಣ ಮತ್ತು ಕೊಂಕಣಿ 20 ಸಾವಿರ, ಇತರ 3 ಸಾವಿರ ಮತಗಳಿವೆ.
ಯಾವ ಪಕ್ಷ ಎಷ್ಟು ಬಾರಿ ಗೆದ್ದಿದೆ?
ಕಾಂಗ್ರೆಸ್ 9, ಬಿಜೆಪಿ 4, ಪಿಎಸ್‌ಪಿ 1, ಕ್ರಾಂತಿರಂಗ 1 ಬಾರಿ ಗೆದ್ದುಕೊಂಡಿದೆ
ಶಾಸಕರ ವಿವರ:
1953 – ಟಿ.ಎ ಪೈ – ಕಾಂಗ್ರೆಸ್
1957 – ಯು.ಎಸ್ ನಾಯಕ್ – ಪಿಎಸ್ ಪಿ
1962 – ಮಲ್ಪೆ ಮಧ್ವರಾಜ್- ಕಾಂಗ್ರೆಸ್
1967 – ಎಸ್ ಕೆ ಅಮೀನ್- ಕಾಂಗ್ರೆಸ್
1972 – ಮನೋರಮಾ ಮಧ್ವರಾಜ್- ಕಾಂಗ್ರೆಸ್
1978 – ಮನೋರಮಾ ಮಧ್ವರಾಜ್- ಕಾಂಗ್ರೆಸ್
1983 – ಡಾ. ವಿಎಸ್ ಆಚಾರ್ಯ- ಬಿಜೆಪಿ
1985 – ಮನೋರಮಾ ಮಧ್ವರಾಜ್- ಕಾಂಗ್ರೆಸ್
1989- ಮನೋರಮಾ ಮಧ್ವರಾಜ್- ಕಾಂಗ್ರೆಸ್
1994 – ಯು. ಆರ್ ಸಭಾಪತಿ- ಕ್ರಾಂತಿರಂಗ
1999 – ಯು. ಆರ್ ಸಭಾಪತಿ- ಕಾಂಗ್ರೆಸ್
2004 – ರಘುಪತಿ ಭಟ್- ಬಿಜೆಪಿ
2008 – ರಘುಪತಿ ಭಟ್- ಬಿಜೆಪಿ
2013 – ಪ್ರಮೋದ್ ಮಧ್ವರಾಜ್- ಕಾಂಗ್ರೆಸ್
2018 – ರಘುಪತಿ ಭಟ್ – ಬಿಜೆಪಿ