ಹಾಸನ ಟಿಕೆಟ್ ಫೈಟ್‍ಗೆ ಮೂರನೇ ವ್ಯಕ್ತಿ ಎಂಟ್ರಿ- ರಾಜೇಗೌಡ ಪರ ರೇವಣ್ಣ ಫ್ಯಾಮಿಲಿ ಬ್ಯಾಟಿಂಗ್

Public TV
3 Min Read
HASSAN JDS 2

ಹಾಸನ: ವಿಧಾನಸಭಾ ಕ್ಷೇತ್ರದ ಟಿಕೆಟ್‍ಗಾಗಿ ಭವಾನಿ ರೇವಣ್ಣ (Bhavani Revanna) ಹಾಗೂ ಎಚ್.ಪಿ ಸ್ವರೂಪ್ (H.P Swaroop) ನಡುವೆ ಟಿಕೆಟ್‍ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಟಿಕೆಟ್ ಪ್ರಹಸನಕ್ಕೆ ಇನ್ನೂ ಕೂಡ ತೆರೆ ಬಿದ್ದಿಲ್ಲ. ಇದೀಗ ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನುವಂತೆ ಮೂರನೇ ವ್ಯಕ್ತಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

HASSAN JDS 4

ಎರಡು ಬಾರಿ ಕಾಂಗ್ರೆಸ್‍ (Congress) ನಿಂದ ಸ್ಪರ್ಧಿಸಿ ಎಚ್.ಎಸ್ ಪ್ರಕಾಶ್ (H S Prakash) ವಿರುದ್ಧ ಸೋತು ನಂತರ ಜೆಡಿಎಸ್‍ಗೆ ಸೇರಿದ್ದ ಮಾಜಿ ಹುಡಾ ಅಧ್ಯಕ್ಷ ಕೆ.ಎಂ ರಾಜೇಗೌಡರಿಗೆ ಮಣೆ ಹಾಕಲು ದಳಪತಿಗಳು ಮುಂದಾಗಿದ್ದಾರೆ. ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ (HD Devegowda) ರು ಹಾಗೂ ಎಚ್.ಡಿ ಕುಮಾರಸ್ವಾಮಿ (H D Kumaraswamy) ಕೆ.ಎಂ.ರಾಜೇಗೌಡರ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ಎಚ್.ಪಿ.ಸ್ವರೂಪ್‍ಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ.

HASSAN JDS 1

ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕಿತ್ತಾಟ ತಾರಕಕ್ಕೇರಿದ್ದು, ಟಿಕೆಟ್ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾರ್ಯಕರ್ತ ಸ್ವರೂಪ್ ಮತ್ತು ರೇವಣ್ಣ ಪತ್ನಿ ಭವಾನಿ ಹೆಸರಿನ ಜೊತೆಗೆ ಮತ್ತೊಂದು ಹೆಸರು ಕೇಳಿ ಬಂದಿದೆ. ಸ್ವರೂಪ್ ಪ್ರಕಾಶ್ ಹೆಸರು ಮನದಲ್ಲಿಟ್ಟುಕೊಂಡು ಕಾರ್ಯಕರ್ತನಿಗೆ ಟಿಕೆಟ್ ಅಂತಿರುವ ಎಚ್.ಡಿ ಕುಮಾರಸ್ವಾಮಿಗೆ ಬ್ರದರ್ ಎಚ್.ಡಿ.ರೇವಣ್ಣ ಫ್ಯಾಮಿಲಿ ಟಕ್ಕರ್ ಕೊಡಲು ಮುಂದಾಗಿದೆ. ಸ್ವರೂಪ್ ಹೆಸರಿನ ಜೊತೆಗೆ ಜೆಡಿಎಸ್ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ ಹೆಸರನ್ನು ಪ್ರಸ್ತಾಪಿಸಿದೆ. ಈ ಮೂಲಕ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎನ್ನುವುದಾದರೆ ರಾಜೇಗೌಡರಿಗೆ ಕೊಡಿ ಎಂಬ ಹೊಸ ದಾಳ ಉರುಳಿಸಿದ್ದಾರೆ.

HASSAN JDS

ಹಿರಿಯ ನಾಯಕ, ಕಾರ್ಯಕರ್ತನ ಹೆಸರು ಪ್ರಸ್ತಾಪಿಸಿ ಹೆಚ್‍ಡಿಕೆಯನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಫ್ಯಾಮಿಲಿ ಇಕ್ಕಟ್ಟಿಗೆ ಸಿಲುಕಿಸಿದೆ. ಭವಾನಿಗೆ ಟಿಕೆಟ್ ಇಲ್ಲ ಎಂದು ಎಚ್‍ಡಿಕೆ ಖಡಕ್ ಆಗಿ ಹೇಳಿದ್ದು, ಭವಾನಿಗೆ ಟಿಕೆಟ್ ಸಿಗದಿದ್ದರೆ ಸ್ವರೂಪ್‍ಗೂ ಬೇಡ ಎಂದು ರೇವಣ್ಣ ಕುಟುಂಬ ಪಟ್ಟು ಹಿಡಿದಿದೆ. ಹಾಗಾಗಿಯೇ ತಮ್ಮ ಆಪ್ತ, ಹಿರಿಯ ನಾಯಕ ಹಾಗೂ ದೇವೇಗೌಡರ ಜೊತೆಗೂ ಹೆಚ್ಚು ಒಡನಾಟ ಹೊಂದಿರುವ ರಾಜೇಗೌಡರಿಗೆ ಟಿಕೆಟ್ ಕೊಡಿಸಲು ಮೆಗಾಪ್ಲಾನ್ ಮಾಡಿದ್ದಾರೆ. ಭವಾನಿಗೆ ಟಿಕೆಟ್ ತಪ್ಪಿಸಿ ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಜಿಲ್ಲೆಯಲ್ಲಿ ರೇವಣ್ಣರ ಪ್ರಾಬಲ್ಯ ಕುಗ್ಗುವ ಆತಂಕ ಎದುರಾಗಿದ್ದು, ತಮ್ಮನ್ನು ಲೆಕ್ಕಿಸದೆ ಟಿಕೆಟ್‍ಗಾಗಿ ಪೈಪೋಟಿ ನಡೆಸುತ್ತಿರುವ ಸ್ವರೂಪ್‍ಗೆ ರೇವಣ್ಣ ಅಡ್ಡಗಾಲಾಗಿದ್ದಾರೆ. ಏನೇ ಆದ್ರೂ ಸ್ವರೂಪ್, ರಾಜೇಗೌಡ ಗೊಂದಲದ ನಡುವೆ ಕೊನೆ ಗಳಿಗೆಯಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಡಿಸುವ ತಂತ್ರಕ್ಕೆ ಮುಂದಾಗಿದೆ. ಹಾಗಾಗಿ ಇದೇ ಮಾನದಂಡ ಮುಂದಿಟ್ಟುಕೊಂಡು ಸ್ವರೂಪ್‍ಗೆ ಟಿಕೆಟ್ ಬೇಡ ಬೇರೆಯವರಿಗೆ ಕೊಡಿ ಎಂದು ರೇವಣ್ಣ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

HASSAN JDS 3

ಈ ಬಗ್ಗೆ ಕೆ.ಎಂ ರಾಜೇಗೌಡ ಪ್ರತಿಕ್ರಿಯಿಸಿದ್ದು, ದೇವೇಗೌಡರು ಹಾಗೂ ಕುಮಾರಸ್ವಾಮಿ ನನ್ನೊಂದಿಗೆ ಮಾತಾಡಿದ್ದಾರೆ. ಎಲ್ಲರೂ ಒಟ್ಟಿಗೆ ನನ್ನ ಪರ ನಿಲ್ಲುವುದಾದರೆ ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಕ್ಷ ಬಿಟ್ಟು ಜೆಡಿಎಸ್ ಸೇರಿದ್ದೆ. 2 ಬಾರಿ ಟಿಕೆಟ್ ಕೈ ತಪ್ಪಿತು ಈಗ ಅವಕಾಶ ಬಂದಿದೆ. ಭವಾನಿ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ನಾನು ಟಿಕೆಟ್ ಕೇಳಿರಲಿಲ್ಲ. ಸ್ವರೂಪ್‍ಗೂ ದುಡುಕಬೇಡ, ರೇವಣ್ಣ ಕುಟುಂಬದ ವಿರುದ್ಧ ಹೋಗಬೇಡ ಎಂದಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಲೆ ಇಲ್ಲ, ಯಾವುದೇ ಸಿನಿಮಾ ಸ್ಟೈಲ್‌ನಲ್ಲೂ ರಾಜಕಾರಣ ನಡೆಯಲ್ಲ: ಮುನಿರತ್ನ

HASSAN JDS 4

ಒಟ್ಟಾರೆ ಸಾಮಾನ್ಯ ಕಾರ್ಯಕರ್ತನ ಹೆಸರಿನಲ್ಲಿ ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಭವಾನಿ ಬೆಂಬಲಿಗರು ಸಿಡಿದೇಳುವ ಭೀತಿಯಿಂದ ರೇವಣ್ಣ ಫ್ಯಾಮಿಲಿ ಹೊಸ ಅಸ್ತ್ರ ಪ್ರಯೋಗಿಸಿ ಹೆಚ್‍ಡಿಕೆಯನ್ನು ಪೇಚಿಗೆ ಸಿಲುಕಿಸಿದೆ. ಇತ್ತ ದೇವೇಗೌಡರ ಅಂಗಳದಲ್ಲಿ ಟಿಕೆಟ್ ಚೆಂಡು ಬಿದ್ದಿದ್ದು ಹಾಸನದಲ್ಲಿ ಪಂಚರತ್ನ ಯಾತ್ರೆ ಮುಗಿಯುವ ವೇಳೆಗೆ ಅಂತಿಮವಾಗುತ್ತಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *