ಚಿಕ್ಕಮಗಳೂರು: ವರ್ಷದಿಂದ ವರ್ಷಕ್ಕೆ, ಚುನಾವಣೆಯಿಂದ ಚುನಾವಣೆಗೆ ರಾಜಕೀಯ ರಂಗ ರಣರಂಗವಾಗುತ್ತಿದೆ. ಅಧಿಕಾರದ ದಾಹ, ಸ್ವಪ್ರತಿಷ್ಠೆ, ಹಠ, ಚಟ, ಆಸೆಗಳು ರಾಜಕಾರಣಿಗಳಿಗೆ ರಾಜಕೀಯದ ಮೂಲ ಉದ್ದೇಶವನ್ನೇ ಮರೆಸಿರುವಂತಿದೆ. ಅದಕ್ಕೆ ಅನ್ಸತ್ತೆ ನೆಹರೂ ಅವರು ಎಲ್ಲೂ ಸಲ್ಲದವರು ರಾಜಕೀಯ ರಂಗದಲ್ಲಿ ಸಲ್ಲುತ್ತಾರೆ ಎಂದು ಹೇಳಿದ್ದು. ಸ್ವಾತಂತ್ರ್ಯ ಬಂದ ನಂತರ 1952ನೇ ಇಸವಿಯಿಂದ ನಡೆದ ಪ್ರತಿ ಚುನಾವಣೆಯೂ ಒಂದಿಲ್ಲೊಂದು ರೀತಿಯಲ್ಲಿ ದೇಶದ ಇತಿಹಾಸದಲ್ಲಿನ ಕರಾಳತೆಯನ್ನ ಅಚ್ಚಳಿಯದೇ ಉಳಿಸಿದೆ. ಪ್ರತಿ ಬಾರಿ ಚುನಾವಣೆ-ರಾಜಕೀಯ ಎಂದಾಗ ಇತಿಹಾಸದ ಪುಟಗಳ ಮೇಲೆ ಆ ಕರಿನೆರಳೊಂದು ಸದಾ ಬಿದ್ದೆ ಇರುತ್ತೆ. ಆ ಕರಿನೆರಳಿನ ಇತಿಹಾಸದಲ್ಲಿ ಕಂಡವರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡಿದ ರಾಜಕಾರಣಿಗಳು ಇದ್ದಾರೆ. ಯಾರದ್ದೋ ರಕ್ತದಲ್ಲಿ ತಮ್ಮ ಹೆಸರನ್ನ ಕೆತ್ತಿದ ಜನನಾಯಕರು ಇದ್ದಾರೆ. ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡಿದ ಮಹನೀಯರು ಇದ್ದಾರೆ. ಜನಸೇವೆಯಿಂದ ನಾಯಕರಾದವರು. ನಾಯಕರಾಗಿ ಜನಸೇವೆಯನ್ನೇ ಮರೆತವರು. ಇತಿಹಾಸದ ಪುಟಗಳಲ್ಲಿ ಎಲ್ಲರೂ ಒಟ್ಟೊಟ್ಟಿಗೆ ಇದ್ದಾರೆ.
ಆದರೆ, ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆ ತರೀಕೆರೆ (Tarikere) ತಾಲೂಕಿನ ಟಿ.ಬಸಪ್ಪ, ಟಿ.ಸಿ.ನಾಗಪ್ಪ ಎಂಬ ಇಬ್ಬರು ರಾಜಕಾರಣಿಗಳಿಲ್ಲದೆ, ಭಾರತದ ರಾಜಕೀಯ ಇತಿಹಾಸಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಸುಪ್ರೀಂ ಕೋರ್ಟಿನ ಕಾನೂನು ಪಡಸಾಲೆಯಲ್ಲಿ ಅವರು ಇಂದಿಗೂ ಜೀವಂತ. ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಇಂದಿಗೂ ಅವರ ಬಗ್ಗೆ ಮಾಹಿತಿ ಇದೆ. ರಾಜಕೀಯಕ್ಕೆ ಸಂಬಂಧಿಸಿದ ಕಾನೂನಿನ ಪುಸ್ತಕದಲ್ಲೂ ಅವರ ಬಗ್ಗೆ ಮಾಹಿತಿ ಇದೆ ಅಂತಾರೆ ದೊಡ್ಡವರು. ನಿಜಕ್ಕೂ ಇದು ಕನ್ನಡಿಗರು ಹೆಮ್ಮೆ ಪಡುವಂತಹ ವಿಷಯ. ಎಲ್ಲಿಯಾ ದೆಹಲಿ. ಎಲ್ಲಿಯ ತರೀಕೆರೆ. ಆಗಷ್ಟೆ ಸಿಕ್ಕಿದ್ದ ಸ್ವಾತಂತ್ರ್ಯ. ಬ್ರಿಟಿಷರು ಸಂಪೂರ್ಣವಾಗಿ ತಮ್ಮ ಗಂಟು-ಮೂಟೆಯನ್ನೂ ಕಟ್ಟಿದ್ದರೋ ಇಲ್ವೋ. ಆ ಸ್ವತಂತ್ರ ಭಾರತದ ಕಣ್ಮುಂದೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಾಲು-ಸಾಲು ಸಾವಿರ ಸವಾಲುಗಳು. ಅಂತಹ ಸವಾಲಿನ ಸಂದರ್ಭದಲ್ಲಿ ಕಾಫಿನಾಡ ತರೀಕೆರೆ ದೇಶದ ಘನ ನ್ಯಾಯಾಲಯದಲ್ಲಿ ಸದ್ದು ಮಾಡಿತ್ತು.
Advertisement
Advertisement
ರಾಜಕಾರಣಿಗಳ ರಾಜಕೀಯದ ಆಸೆ-ತೆವಲುಗಳ ಮಜಲುಗಳನ್ನೂ ಕಂಡಿದೆ. ರಾಜಕೀಯ ರಂಗದಲ್ಲೂ ಚಿಕ್ಕಮಗಳೂರಿನ ತರೀಕೆರೆ ಹೆಸರು ಸೂರ್ಯ-ಚಂದಿರರಿರುವವರೆಗೂ ಅಚ್ಚಳಿಯದೆ ಉಳಿದಿದೆ. ಮೇಲೆ ಹೇಳಿದಂತೆ, ಭಾರತೀಯ ರಾಜಕೀಯ ಟಿ.ನಾಗಪ್ಪ-ಟಿ.ಸಿ.ಬಸಪ್ಪ ಎಂಬ ಇಬ್ಬರು ರಾಜಕಾರಣಿಗಳಿಲ್ಲದೆ ಮುಗಿಯುವುದೆ ಇಲ್ಲ. ಯಾಕಂದ್ರೆ, 1947ರಲ್ಲಿ ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ 1952ರಲ್ಲಿ ನಡೆದಿತ್ತು. ಅಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಕಿಸಾನ್ ಮಜದೂರ್ ಪ್ರಜಾ ಪಕ್ಷದಿಂದ ಟಿ.ನಾಗಪ್ಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನಿಂದ ಟಿ.ಸಿ.ಬಸಪ್ಪ ಅಭ್ಯರ್ಥಿಯಾಗಿದ್ದರು. ಅಂದು ತರೀಕೆರೆಯಲ್ಲಿ ಇದ್ದದ್ದು ಕೇವಲ 38,619 ಮತಗಳು. ಅದರಲ್ಲಿ ಕಿಸಾನ್ ಮಜದೂರು ಪ್ರಜಾ ಪಕ್ಷದ ಟಿ.ನಾಗಪ್ಪ 8,093 ಮತಗಳನ್ನ ಪಡೆದಿದ್ದರು. ಕಾಂಗ್ರೆಸ್ಸಿನ ಟಿ.ಸಿ.ಬಸಪ್ಪ 8,059 ಮತಗಳನ್ನ ಪಡೆದು 34 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಈ ಸೋಲೇ ಅವರನ್ನು ಸುಪ್ರೀಂಕೋರ್ಟ್ (Supreme Court) ಕಟಕಟೆಗೆ ಕರೆದೊಯ್ದಿತ್ತು.
Advertisement
Advertisement
34 ಮತಗಳ ಅಂತರದಲ್ಲಿ ಸೋಲು ಕಂಡ ಟಿ.ಸಿ.ಬಸಪ್ಪ ಚುನಾವಣೆ ಹಾಗೂ ಚುನಾವಣೆಯ ಅಕ್ರಮವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇದು ಸುಪ್ರೀಂಕೋರ್ಟ್‍ನಲ್ಲಿ ದಾಖಲಾದ ದೇಶದ ಮೊದಲ ರಾಜಕೀಯ ಮೊಕದ್ದಮೆ ಕೂಡ. 34 ಮತಗಳ ಅಂತರದಲ್ಲಿ ಸೋಲು ಕಂಡ ಟಿ.ಸಿ.ಬಸಪ್ಪ ಚುನಾವಣೆಯಲ್ಲಿ (Election) ಅಕ್ರಮ ನಡೆದಿದೆ ಎಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 34 ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಟಿ.ಸಿ.ಬಸಪ್ಪ ಅವರನ್ನ ಗೆದ್ದಿದ್ದಾರೆ ಎಂದು ಆದೇಶ ನೀಡಿತ್ತು. ಇದರಿಂದ 34 ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಟಿ.ಸಿ.ಬಸಪ್ಪ ಸ್ವತಂತ್ರ ಭಾರತದ ಮೊದಲ ಚುನಾವಣೆಯಲ್ಲೇ ಚುನಾವಣೆಯ ಅಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಗೆದ್ದು ಶಾಸಕರಾಗಿದ್ದರು.
ಆದರೆ, ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಿ ಗೆದ್ದು ಶಾಸಕರಾದರೂ ಕೂಡ ಅವರು ಪೂರ್ಣ ಪ್ರಮಾಣದಲ್ಲಿ ಅಧಿಕಾರ ಅನುಭವಿಸಲು ಸಾಧ್ಯವಾಗಲಿಲ್ಲ. ಒಂದೆರಡು ವರ್ಷ ಶಾಸಕರಾಗಿದ್ದ ಟಿ.ಸಿ.ಬಸಪ್ಪ 1956ರಲ್ಲಿ ನಿಧನರಾದರು. ಅವರ ಮರಣದ ನಂತರ 1956ರಲ್ಲಿ ತರೀಕೆರೆಯಲ್ಲಿ ಉಪಚುನಾವಣೆ ನಡೆಯಿತು. ಇದು ದೇಶದಲ್ಲೇ ನಡೆದ ಮೊದಲ ಉಪಚುನಾವಣೆಯಾಗಿದೆ. ಆ ಚುನಾವಣೆಯಲ್ಲಿ ದಿ.ಟಿ.ಸಿ.ಬಸಪ್ಪನವರ ಸಹೋದರ ಟಿ.ಸಿ.ಶಾಂತಪ್ಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾದರು. ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಜಿಲ್ಲೆಯ ತರೀಕೆರೆ ಸುಪ್ರೀಂಕೋರ್ಟಿನಲ್ಲಿ ಸದ್ದು-ಸುದ್ದಿ ಮಾಡಿ, ದೇಶದ ಮೊದಲ ಉಪಚುನಾವಣೆಗೆ ನಡೆದ ಕ್ಷೇತ್ರ ಎಂದು ಭಾರತೀಯ ರಾಜಕೀಯ ರಂಗದಲ್ಲಿ ತನ್ನ ಹೆಸರನ್ನು ಸದಾ ಹಸಿರಾಗಿಸಿದೆ. ಇದರೊಂದಿಗೆ ದೇಶದ ಮೊದಲ ಚುನಾವಣೆಯಲ್ಲೇ ಕೋರ್ಟಿಗೆ ಹೋಗಿದ್ದು, ಉಪಚುನಾವಣೆ ನಡೆದಿದ್ದು, ಮೊದಲ ಚುನಾವಣೆಯಲ್ಲೇ ಮೂವರು ಶಾಸಕರನ್ನು ಕಂಡ ಕ್ಷೇತ್ರ ದೇಶದಲ್ಲಿ ಯಾವುದಾದರೂ ಇದ್ದರೆ ಅದು ಕಾಫಿನಾಡಿನ ತರೀಕೆರೆಯಾಗಿದೆ. ಇದನ್ನೂ ಓದಿ: ದೇವಿ ಹೇಳಿದಂತೆ ಎರಡು ಕ್ಷೇತ್ರದಲ್ಲಿ ನಿಲ್ಲಲು ಮುಂದಾದ್ರಾ ಸಿದ್ದರಾಮಯ್ಯ?
ಇದೇ ಚುನಾವಣೆಯಲ್ಲಿ ಟಿ.ಸಿ.ಬಸಪ್ಪ-ಟಿ.ನಾಗಪ್ಪ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಂದ್ರಶೇಖರಪ್ಪ 6,239 ಮತಗಳನ್ನ ಪಡೆದಿದ್ದರೆ. ಟಿ.ವಿ.ನರಸಿಂಗಪ್ಪ 1,644 ಮತಗಳನ್ನ ದಾಖಲಿಸಿದ್ದರು. ನಾಡಿಗ ಫಣಿಯಪ್ಪ ಎಂಬ ಮತ್ತೋರ್ವ ಪಕ್ಷೇತರ ಅಭ್ಯರ್ಥಿ 1,142 ಮತಗಳನ್ನ ಪಡೆದಿದ್ದರು. ಬ್ರಿಟಿಷರ ಕಾಲದಲ್ಲಿ ಕಾಫಿ ಹಾಗೂ ಸಾಂಬಾರ ಪದಾರ್ಥಗಳಿಂದ ವಿಶ್ವಭೂಪಟದಲ್ಲಿ ಹೆಸರಾಗಿದ್ದ ಚಿಕ್ಕಮಗಳೂರು ಜಿಲ್ಲೆ, ಬ್ರಿಟಿಷರು ಭಾರತ ಬಿಟ್ಟು ಹೋಗುತ್ತಿದ್ದಂತೆ ಅದೇ ಚಿಕ್ಕಮಗಳೂರಿನ ತರೀಕೆರೆ ಭಾರತೀಯ ರಾಜಕೀಯದ ಭೂಪಟದಲ್ಲಿ ತನ್ನದೇ ಆದ ಹೆಸರಿನಿಂದ ಅಚ್ಚಳಿಯದೇ ಉಳಿದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಹನಗಳ ಪರಿಶೀಲನೆ ಆರಂಭ – ಮೊದಲ ದಿನವೇ 10 ಕೆಜಿ ಬೆಳ್ಳಿ ವಶ