– ಅರಕಲಗೂಡು ಕ್ಷೇತ್ರದ ಜೆಡಿಎಸ್‍ನಲ್ಲಿ ಅಪಸ್ವರ
ಹಾಸನ: ಜೆಡಿಎಸ್ (JDS) ಭದ್ರಕೋಟೆ ಹಾಸನ ಜೆಲ್ಲೆಯಲ್ಲಿ ಗೊಂದಲ ಮುಂದುವರಿದಿದೆ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಇದೆಲ್ಲದರ ನಡುವೆ ಮಂಗಳವಾರದಿಂದ 5 ದಿನಗಳ ಕಾಲ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ (Panchayatre Yatre) ನಡೆಯಲಿದೆ.
ಹೌದು, ಹಾಸನ ಜಿಲ್ಲೆ ಜೆಡಿಎಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಹಾಸನ ಟಿಕೆಟ್ ಗೊಂದಲ ಮುಂದುವರಿದಿದೆ. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalinge Gowda), ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ (At Ramaswamy) ಜೆಡಿಎಸ್ ಪಕ್ಷ ತೊರೆದಿದ್ದಾರೆ. ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಸಾಗಲಿದೆ.
ಎ.ಮಂಜು ಜೆಡಿಎಸ್ ಸೇರ್ಪಡೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಅಧ್ಯಕ್ಷತೆಯಲ್ಲಿ ಜೆಡಿಎಸ್ ಪ್ರಮುಖರ ಸಭೆ ನಡೆಸಲಾಯಿತು. ಸಭೆಯಲ್ಲಿ ಎ.ಮಂಜು ಅಭ್ಯರ್ಥಿಯಾದರೆ ಹೇಗೆ ಎಂಬ ಅಭಿಪ್ರಾಯ ಸಂಗ್ರಹಿಸಲಾಯ್ತು. ಆದರೆ ಸಭೆಯಲ್ಲಿ ಮಾಜಿ ಸಚಿವ ಎ.ಮಂಜುಗೆ ಟಿಕೆಟ್ ಕೊಡಲು ಅಪಸ್ವರ ಕೇಳಿ ಬಂದಿದೆ. ಎ.ಟಿ.ರಾಮಸ್ವಾಮಿ ಪಕ್ಷದಲ್ಲಿ ಹಿಂದೆ ಸರಿದಂತಾಗಿದೆ. ಎ. ಮಂಜುಗೆ ಟಿಕೆಟ್ ಕೊಟ್ರೆ ನಮ್ಮ ಕಾರ್ಯಕರ್ತರಿಗೆ ಅವಕಾಶ ಸಿಗಲ್ಲ ಅಂತ ಅಸಮಾಧಾನ ಹೊರಹಾಕಿದ್ರು. ಕೆಲವರು ವಿರೋಧಿಸಿದ್ರೆ, ಇನ್ನೂ ಕೆಲವರು ಬೆಂಬಲ ಸೂಚಿಸಿದ್ರು. ಇದನ್ನೂ ಓದಿ: ಮೋದಿ ಸ್ವಾಗತ ವೇಳೆ ಫೈಟರ್ ರವಿ- ಪ್ರಧಾನಿ ಹುದ್ದೆಗೆ ಕಳಂಕವೆಂದು ಕುಟುಕಿದ ಕಾಂಗ್ರೆಸ್
ಆದರೆ ರೇವಣ್ಣ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಮಂಜು ಹೆಸರು ಘೋಷಣೆ ಮಾಡಿದ್ರು. ಅಧಿಕೃತವಾಗಿ ದೇವೇಗೌಡರು, ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಅದಕ್ಕೆ ಸಮ್ಮತಿ ಇದೆ. ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಎ.ಮಂಜಣ್ಣ ಅವರು ನಿಲ್ತಾರೆ ಅಂತ ರೇವಣ್ಣ ಹೇಳಿದ್ರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದಿನಿಂದ ಪಂಚರತ್ನ ಯಾತ್ರೆ ಆರಂಭವಾಗಲಿದೆ. ಇಂದು ಚನ್ನರಾಯಪಟ್ಟಣ, ನಾಳೆ ಅರಸೀಕೆರೆ, ನಾಡಿದ್ದರು ಹೊಳೆನರಸೀಪುರ ಹೀಗೆ ಅರಕಲಗೂಡು, ಸಕಲೇಶಪುರದಲ್ಲಿ ಪಂಚರತ್ನ ನಡೆಯಲಿದೆ. ಆದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕಗ್ಗಂಟಿನಿಂದ ಪಂಚರತ್ನ ಯಾತ್ರೆ ನಿಗದಿ ಮಾಡಿಲ್ಲ.