ರಾಯಚೂರು: ನಮ್ಮೂರಲ್ಲಿ ಬಿಜೆಪಿಯವರೇ ಗಲಾಟೆ ಮಾಡಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ಶುಕ್ರವಾರ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮನಹುಂಡಿಯಲ್ಲಿ ನಡೆದ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಕಾರ್ಯಕರ್ತರ ನಡುವಿನ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೂ ನಮ್ಮೂರಲ್ಲಿ ಗಲಾಟೆ ಆಗಿರಲಿಲ್ಲ, ಯಾವ ಪಕ್ಷದವರು ಬಂದರೂ ನಮ್ಮ ಊರಿನ ಜನ ಇದುವರೆಗೂ ಗಲಾಟೆ ಮಾಡಿಲ್ಲ. ಮತಗಳಿಕೆಯ ರಾಜಕಾರಣಕ್ಕಾಗಿ ಅವರೇ ಗಲಾಟೆ ಮಾಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮನಹುಂಡಿಯಲ್ಲಿ ಕಾರು-ಬೈಕ್ ಡಿಕ್ಕಿಯಿಂದ ಜಗಳ: ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ
Advertisement
Advertisement
ಕಾಂಗ್ರೆಸ್ ಕಾರ್ಯಕರ್ತರು ನನಗೆ ಜೈಕಾರ ಕೂಗುತ್ತಿದ್ದರು. ಬಿಜೆಪಿಗರು ಸುಮ್ಮನೆ ಹೋಗದೆ ಗಲಾಟೆ ಮಾಡಿದ್ದಾರೆ. ಅವರು ದೂರು ಕೊಟ್ಟರೆ ನಮ್ಮವರು ದೂರು ಕೊಡುತ್ತಾರೆ. ಯಾರೇ ಆಗಲಿ ಪ್ರಚಾರದ ವೇಳೆ ಗಲಾಟೆ ಮಾಡುವುದು ತಪ್ಪು ಎಂದಿದ್ದಾರೆ.
Advertisement
ಪ್ರತಾಪ್ ಸಿಂಹ (Pratap Simha) ಯಾರು? ಅವರಿಗೂ ನಮ್ಮ ಕ್ಷೇತ್ರಕ್ಕೂ ಸಂಬಂಧವಿಲ್ಲ. ಜಾತಿ ರಾಜಕೀಯ ಯಾರು ಮಾಡುತ್ತಿದ್ದಾರೆ? ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಎಲ್ಲಾ ವರ್ಗಗಳಿಗೂ ಯೋಜನೆಗಳನ್ನು ಕೊಟ್ಟಿದ್ದೇನೆ ಎಂದಿದ್ದಾರೆ.
Advertisement
ಪ್ರಧಾನಿ ಮೋದಿ (Narendra Modi) ಟೀಕೆ ವಿಚಾರವಾಗಿ, ಅವರು ಹತಾಶೆಯಿಂದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಬಹಳ ಲಘುವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸುವುದಿಲ್ಲ ಎಂದು ಸಿಎಂ ಹಾಗೂ ಪಿಎಂ ಆದವರು ಹತಾಶೆಯಿಂದ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದೇವೆ. 160 ಅಂಶಗಳಲ್ಲಿ 158 ಭರವಸೆ ಈಡೇರಿಸಿದ್ದೇವೆ. ಆದರೆ ರಾಜ್ಯದಲ್ಲಿ ಬಿಜೆಪಿ 600 ಭರವಸೆ ನೀಡಿತ್ತು, ಇದುವರೆಗೂ 55 ಮಾತ್ರ ಈಡೇರಿಸಿದ್ದಾರೆ. ಬಿಜೆಪಿ ಜನರಿಗೆ ಸುಳ್ಳು ಹೇಳಿ ದ್ರೋಹ ಮಾಡಿರುವುದು ಜನರಿಗೆ ಗೊತ್ತಿದೆ ಎಂದು ತಿವಿದಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಕೊಡಬಾರದು, ಸರ್ಕಾರಕ್ಕೆ ಹೊರೆ ಆಗುತ್ತದೆ. ರಾಜ್ಯ ಸಾಲದಲ್ಲಿ ಮುಳುಗುತ್ತದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಸಾಲಗಾರ ರಾಜ್ಯವನ್ನು ಮಾಡಿದ್ದೇ ಬಿಜೆಪಿಯವರು. 5.64 ಲಕ್ಷ ಕೋಟಿ ರೂ. ಸಾಲ ಬಿಜೆಪಿ ಅವಧಿಯಲ್ಲಿ ಆಗಿದೆ. 70 ವರ್ಷದಲ್ಲಿ ಆದ ಸಾಲ 2.42 ಲಕ್ಷ ಕೋಟಿ ರೂ. ಆದರೆ, ನರೇಂದ್ರ ಮೋದಿ 9 ವರ್ಷ 152 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ 53.11 ಲಕ್ಷ ಕೋಟಿ ರೂ. ಸಾಲ ಇತ್ತು ಎಂದಿದ್ದಾರೆ.
ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳನ್ನು ಈಡೇರಿಸಲು 50 ರಿಂದ 60 ಸಾವಿರ ಕೋಟಿ ರೂ. ಖರ್ಚಾಗುತ್ತದೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ. ಎಲ್ಲಾ ಲೆಕ್ಕಾಚಾರ ಹಾಕಿ ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಆದರೆ ಬಿಜೆಪಿ 2014 ರಲ್ಲಿ ನೀಡಿದ ಭರವಸೆಯಲ್ಲಿ ಎಷ್ಟು ಈಡೇರಿಸಿದೆ? ಯುವಕರಿಗೆ ಉದ್ಯೊಗ ಕೊಟ್ಟಿದ್ದೀರಾ, ರೈತರ ಆದಾಯ ದುಪ್ಪಟ್ಟು ಮಾಡಿದ್ದೀರಾ? ಎಂದು ಕುಟುಕಿದರಲ್ಲದೇ, ಕಾಂಗ್ರೆಸ್ ಪ್ರಣಾಳಿಕೆ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿಯವರು (Basavaraj Bommai) ಸಾರ್ವಜನಿಕ ವೇದಿಕೆಗೆ ಬಂದು ಚರ್ಚೆ ಮಾಡಲಿ ಎಂದು ಸವಾಲು ಎಸೆದಿದ್ದಾರೆ.
ಸಂಸದ ತೇಜಸ್ವಿ ಸೂರ್ಯನಿಗೆ ನಾನು ಅಮವಾಸ್ಯೆ ಎಂದು ಕರೆಯುತ್ತೇನೆ. ಸಂವಿಧಾನವನ್ನು ಸುಟ್ಟು ಹಾಕುತ್ತೇನೆ ಎಂದಿದ್ದ. ರೈತರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗುತ್ತೆ ಎನ್ನುತ್ತಾನೆ. ಬಿಜೆಪಿ ಸರ್ಕಾರ ಅಂಬಾನಿ, ಅದಾನಿ ಸೇರಿ ಉದ್ಯಮಿಗಳ 12 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಇದರಿಂದ ದೇಶ ಹಾಳಾಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಖರ್ಗೆ (Mallikarjun Kharge) ವಿಷ ಸರ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತೆ ಅದರ ಬಗ್ಗೆ ಚರ್ಚೆ ಅನಗತ್ಯ. ಕಾಂಗ್ರೆಸ್‍ನಲ್ಲಿ ಸಿಎಂ ಖುರ್ಚಿ ಕಚ್ಚಾಟ ಇಲ್ಲ. ಬಿಜೆಪಿಯಲ್ಲಿ ಅದು ಶುರುವಾಗಿದೆ. ನಮ್ಮಲ್ಲಿ ಮುಂಚಿತವಾಗಿ ಸಿಎಂ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮನಹುಂಡಿ ಏನು ಸಿದ್ದರಾಮಯ್ಯ ಸಂಸ್ಥಾನನಾ?: ಪ್ರತಾಪ್ ಸಿಂಹ ಕಿಡಿ