ಲಿಂಗಾಯತ ನಾಯಕ ಶೆಟ್ಟರ್‌ಗೆ ಬಿಜೆಪಿಯಿಂದಾದ ಅವಮಾನ ಯಾವ ನಾಯಕನಿಗೂ ಆಗದಿರಲಿ: ಸಿದ್ದು

Public TV
1 Min Read
Siddaramaiah 7

ಬೆಂಗಳೂರು: ಲಿಂಗಾಯತ (Lingayats) ಸಮಾಜದ ಪ್ರಮುಖ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಬಿಜೆಪಿ (BJP) ನಡೆಸಿಕೊಂಡ ರೀತಿ ಯಾವ ಪಕ್ಷದ ಯಾವ ನಾಯಕರಿಗೂ ಆಗಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

Jagadish Shettar 2

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಿ ಕಣ್ಣೀರು ಹಾಕುವಂತೆ ಬಿಜೆಪಿ ಮಾಡಿತ್ತು. ಈಗ ಜಗದೀಶ್ ಶೆಟ್ಟರ್ ಅವರಿಗೂ ಅವಮಾನ ಮಾಡಿ ಪಕ್ಷ ತೊರೆಯುವಂತೆ ಮಾಡಿದೆ. ಇಂತಹ ಪರಿಸ್ಥಿತಿ ಯಾವ ಪಕ್ಷದ ಯಾವ ನಾಯಕನಿಗೂ ಎದುರಾಗಬಾರದು ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿಕೊಂಡು ‘ಕೈ’ ಸೇರ್ಪಡೆ : ಶೆಟ್ಟರ್

ಜಗದೀಶ್ ಶೆಟ್ಟರ್ ಅವರ ಮೇಲೆ ಯಾವುದೇ ಆರೋಪ ಇಲ್ಲದೆ ಟಿಕೆಟ್ ತಪ್ಪಿಸಿದ್ದಾರೆ. ಇದು ದುರುದ್ದೇಶದಿಂದ ಕೂಡಿದ ನಿರ್ಧಾರ. ಶೆಟ್ಟರ್ ಒಬ್ಬ ಸ್ವಾಭಿಮಾನಿ ರಾಜಕಾರಣಿ, ಅಂತಹ ನಾಯಕನ ಸ್ವಾಭಿಮಾನಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಬಿಜೆಪಿ ನಡೆದುಕೊಂಡಿದೆ. ಈ ರೀತಿಯ ಅನ್ಯಾಯ ಶೆಟ್ಟರ್‍ಗೆ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಗದೀಶ್ ಶೆಟ್ಟರ್ ಅವರಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಟಿಕೆಟ್ ನೀಡದೆ ಇರುವುದು ದೊಡ್ಡ ಅವಮಾನ. ಅವರ ತೇಜೋವಧೆಗೆ ಬಿಜೆಪಿ ಈ ರೀತಿ ಮಾಡಿದೆ. ಅದನ್ನು ಸಹಿಸಲಾಗದೆ ಅವರು ಕಾಂಗ್ರೆಸ್‍ಗೆ (Congress) ಬಂದಿದ್ದಾರೆ. ಅವರಿಗಿನ್ನೂ 67 ವರ್ಷ. ಅವರನ್ನು ಬಿಜೆಪಿ ವ್ಯವಸ್ಥಿತವಾಗಿ ಹೊರಗಡೆ ಹಾಕಿದೆ. ಇದೇ ರೀತಿ ಬಿಜೆಪಿ ಲಿಂಗಾಯತರನ್ನು ಹೊರಗೆ ಹಾಕುವ ಸಂಚು ರೂಪಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ತೊರೆದು ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆ

Share This Article