ಗದಗ: ಜಿಲ್ಲೆಯ ಮೀಸಲು ಕ್ಷೇತ್ರ ಶಿರಹಟ್ಟಿಯ (Shirahatti) ಬಿಜೆಪಿಯಲ್ಲಿ (BJP) ಬಂಡಾಯ ಶುರುವಾಗಿದೆ. ಹಾಲಿ ಶಾಸಕ ರಾಮಣ್ಣ ಲಮಾಣಿ (Ramappa Lamani) ವಿರುದ್ಧ ಸ್ವಪಕ್ಷದ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಕ್ಷೇತ್ರದ ಜನ ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದಾರೆ.
1983ರಲ್ಲಿಯೂ ಬಂಡಾಯ ಕಹಳೆ ಮೊಳಗಿ ಕ್ಷೇತ್ರದಲ್ಲಿ ಬಾರಿ ಅಚ್ಚರಿಯ ಬೆಳವಣಿಗೆ ಆಗಿತ್ತು. ಈಗ 2023ರಲ್ಲಿ ಅಂದರೆ, 40 ವರ್ಷದ ನಂತರ ಮತ್ತೆ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಕಹಳೆ ಮೊಳಗಿಸುವ ಲಕ್ಷಣಗಳಿವೆ. ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ ಈಗಲೇ ಭಿನ್ನಮತ ಸ್ಪೋಟವಾಗಿದೆ. ಇದನ್ನೂ ಓದಿ: ರಾಷ್ಟ್ರ ರಾಜಕಾರಣಕ್ಕೆ ಹೋಗಲು ಯತ್ನಿಸಿ ಸೋತರು; ರಾಜ್ಯ ರಾಜಕಾರಣದಲ್ಲೇ ಗೆಲುವು ಕಂಡರು!
Advertisement
Advertisement
ಹಾಲಿ ಶಾಸಕರಿಗೆ ಟಿಕೆಟ್ ಕೊಡಬೇಡಿ ಎಂದು ಅತೃಪ್ತ ಕಾರ್ಯಕರ್ತರಿಂದ ಶಕ್ತಿ ಪ್ರದರ್ಶನದ ಮೂಲಕ ರಾಜ್ಯ ಹಾಗೂ ಕೇಂದ್ರ ಹೈಕಮಾಂಡ್‍ಗೆ ಸಂದೇಶ ರವಾನಿಸಿದ್ದಾರೆ. ಇದೇ ಏ.3 ರಂದು ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಜಗದ್ಗುರು ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಕ್ಷೇತ್ರದ ಬಿಜೆಪಿ ಅತೃಪ್ತ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಿದ್ದರು.
Advertisement
ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲೂಕಿನ ಬಿಜೆಪಿ ಮಾಜಿ ಶಾಸಕರ ವಿರುದ್ಧ ಮಾಜಿ ಹಾಗೂ ಹಾಲಿ ಜಿ.ಪಂ, ತಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಈ ಮೂರು ತಾಲೂಕಿನ ಅನೇಕ ಗ್ರಾಮಗಳ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಒಟ್ಟಾಗಿ ಶಾಸಕರ ವಿರುದ್ಧ ಶಕ್ತಿ ಪ್ರದರ್ಶನ ನಡೆಸಿದ್ದರು. ಈ ಬಾರಿ ರಾಮಣ್ಣ ಲಮಾಣಿಗೆ ಟಿಕೆಟ್ ಕೊಡಬೇಡಿ ಎಂದು ರಾಜ್ಯ ಹಾಗೂ ಕೇಂದ್ರ ಹೈಕಮಾಂಡ್‍ಗೆ ನೇರವಾಗಿ ಸಂದೇಶ ರವಾನಿಸಿದ್ದಾರೆ.
Advertisement
ಕ್ಷೇತ್ರದಲ್ಲಿ ಬಿಜೆಪಿಯಿಂದ ಒಟ್ಟು 10 ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆದರೆ ಶಾಸಕ ರಾಮಣ್ಣ ಹೊರತಾಗಿ ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ ಅಂತಹ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲ್ಲಿಸುತ್ತೇವೆ. ಹಾಲಿ ಶಾಸಕರಿಗೆ ಟಿಕೆಟ್ ನೀಡಿದರೆ ಇನ್ನುಳಿದ 9 ಜನ ಬಿಜೆಪಿ ಆಕಾಂಕ್ಷಿಗಳನ್ನು ಒಟ್ಟುಗೂಡಿಸಿ ಒಬ್ಬರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲ್ಲಿಸುತ್ತೆವೆ. ಶಾಸಕ ರಾಮಣ್ಣನನ್ನು ಸೋಲಿಸುತ್ತೇವೆ ಎಂಬ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ (Election) 30 ಸಾವಿರ ಮತಗಳ ಲೀಡ್‍ನಲ್ಲಿ ಗೆದ್ದಿದ್ದ ಶಾಸಕರಿಗೆ ಸಚ್ಚಾರಿತ್ರ್ಯ ಇಲ್ಲ. ಅವರ ದುರ್ನಡತೆಯ ಕಾರಣದಿಂದ ಕಾರ್ಯಕರ್ತರು ಬೇಸತ್ತಿದ್ದಾರೆ. ಎಲ್ಲಾ ಕೆಲಸಕ್ಕೂ ಕುಟುಂಬಸ್ಥರ ಹಸ್ತಕ್ಷೇಪ ಹಾಗೂ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಪಕ್ಷದ ನಾಯಕರು, ಕಾರ್ಯಕರ್ತರ ಕಡೆಗಣನೆ, ಗುತ್ತಿಗೆದಾರರಿಗೆ ಮಣೆ ಹಾಕುವುದರಿಂದ ಜನ ಶಾಸಕರ ವಿರುದ್ಧ ತಿರುಗಿದ್ದಾರೆ.
ಶಾಸಕರಿಗೆ 73 ವರ್ಷ ವಯಸ್ಸಾಗಿದೆ. ಹೊಸ ಅಭ್ಯರ್ಥಿಗೆ ಅವಕಾಶ ಸಿಗಬೇಕು. ಶಾಸಕರ ಸಂಬಂಧಿಗಳ ಲಂಚದ ದಾಹದಿಂದ ಕ್ಷೇತ್ರದ ಜನಕ್ಕೆ ಸಮಸ್ಯೆಯಾಗಿದೆ. ಇಂತಹ ಅನಕ್ಷರಸ್ಥ ಶಾಸಕ ನಮಗೆ ಬೇಡ ಎಂದು ಬಹಿರಂಗವಾಗಿ ಕಾರ್ಯಕರ್ತರು ಬಂಡಾಯ ಎದ್ದಿದ್ದಾರೆ.
1983ರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದಲ್ಲಿ ಹೀಗೆ ಬಂಡಾಯದ ಬಾವುಟ ಹಾರಿಸಲಾಗಿತ್ತು. ಕಾಂಗ್ರೆಸ್ (Congress) ಪಕ್ಷದಿಂದ ಗೋಳಪ್ಪ ಉಪನಾಳ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದ್ದರು. ಆಗ ಆರ್.ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದರು. ಆದರೂ ಕ್ಷೇತ್ರದ ಜನಾಭಿಪ್ರಾಯ ತಳ್ಳಿಹಾಕಿ ಕುಂದಗೋಳದ ನಾನಾಸಾಹೇಬ್ ಕುಲಕರ್ಣಿ ಅವರಿಗೆ ಕಾಂಗ್ರೆಸ್ ಪಕ್ಷ ಮಣೆ ಹಾಕಿತ್ತು. ಅದರ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು ಒಟ್ಟಾಗಿ ಗೋಳಪ್ಪ ಉಪನಾಳ ಅವರನ್ನು ಪಕ್ಷೇತರರಾಗಿ ನಿಲ್ಲಿಸಿ ಬಹುಮತಗಳಿಂದ ಆರಿಸಿ ತಂದಿದ್ದರು. ಅಕಸ್ಮಾತ್ ಬಿಜೆಪಿ ಹಾಲಿ ಶಾಸಕನಿಗೆ ಟಿಕೆಟ್ ನೀಡಿದರೆ 1983 ರಲ್ಲಿ ಆದ ಬಂಡಾಯ ಕಹಳೆ 2023ರಲ್ಲೂ ಮರುಕಳಿಸುವ ಲಕ್ಷಣಗಳಿವೆ.
ಕ್ಷೇತ್ರದಲ್ಲಿ ಅನ್ಯ ಪಕ್ಷಕ್ಕಿಂತ ಸ್ವಪಕ್ಷದಿಂದಲೇ ಪ್ರಬಲವಾದ ವಿರೋಧಿ ಅಲೆಯನ್ನು ಶಾಸಕ ರಾಮಪ್ಪ ಲಮಾಣಿ ಎದುರಿಸುತ್ತಿದ್ದಾರೆ. ಒಟ್ಟಿನಲ್ಲಿ ಶಿರಹಟ್ಟಿ ಕ್ಷೇತ್ರದಲ್ಲಿ ಮುಂಖಡರ ಹಠಾವೋ ಬಿಜೆಪಿ ಬಚಾವೋ ಅಭಿಯಾನ ಶುರುವಾಗಿದೆ. ಇದನ್ನೂ ಓದಿ: ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಕೇದಾರಲಿಂಗಯ್ಯ