ಧಾರವಾಡ: ಜಿಲ್ಲೆಯ ನವಲಗುಂದ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಕಾರ್ಯಕ್ರಮದ ವೇದಿಕೆಗೆ ತೆರಳುವ ಮುನ್ನ ನವಲಗುಂದ ಹಳೆ ತಹಶೀಲ್ದಾರ ಕಚೇರಿಯ ಬಳಿಯಿರುವ ರಸ್ತೆ ಮೇಲಿನ ತಗಡಿನ ಶೆಡ್ಡಿನಲ್ಲಿರುವ ಹೋಟೆಲ್‌ಗೆ ದಿಢೀರ್ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದರು.
ಹೊಟೇಲ್ ಒಳಗೆ ಪ್ರವೇಶಿಸುತ್ತಿದ್ದಂತೆ ಆಶ್ಚರ್ಯಚಕಿತರಾದ ಹೋಟೆಲ್ ಒಡತಿ ಬಾಲನಾಗಮ್ಮ ರಂಗಸ್ವಾಮಿ, ಪ್ರಿಯಾಂಕಾ ಗಾಂಧಿ ಅವರನ್ನು ಸಂತೋಷದಿಂದ ಬರ ಮಾಡಿಕೊಂಡರು. ಹೋಟೆಲ್ (Hotel) ಪ್ರವೇಶಿಸಿದ ಭದ್ರತಾ ಸಿಬ್ಬಂದಿ ಹೋಟೆಲ್ ಮಾಲೀಕರು ಹಾಗೂ ಅವರ ಮಕ್ಕಳ ಮೊಬೈಲ್ ತೆಗೆದಿಡುವಂತೆ ಸೂಚಿಸಿ ಯಾರೂ ಒಳ ಹೋಗದಂತೆ ಸುತ್ತುವರೆದರು. 30 ನಿಮಿಷದವರೆಗೆ ಬಾಲನಾಗಮ್ಮ ಅವರ ಜತೆ ಚರ್ಚಿಸಿದ ಪ್ರಿಯಾಂಕಾ ಕೊನೆಗೆ ಹಾಲು ರಹಿತ ಚಹಾ ಸೇವಿಸಿ ಹೊರಬಂದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪರ ಯೋಗಿ ಭರ್ಜರಿ ಪ್ರಚಾರ – ರಾಮಮಂದಿರ ಉದ್ಘಾಟನೆಗೆ ಆಹ್ವಾನ
ನಂತರ ಮಾತನಾಡಿದ ಬಾಲನಾಗಮ್ಮ, ಪ್ರಿಯಾಂಕಾ ಅವರು ನಮ್ಮ ಹೋಟೆಲ್‌ಗೆ ಭೇಟಿ ನೀಡುತ್ತಾರೆಂಬ ವಿಷಯ ಗೊತ್ತೇ ಇರಲಿಲ್ಲ. ದಿಢೀರಾಗಿ ಭೇಟಿ ನೀಡಿದ್ದು ಅಚ್ಚರಿ ಮುಡಿಸಿದೆ. ನಮ್ಮ ದಿನದ ದುಡಿಮೆ ಹಾಗೂ ಈ ಸಣ್ಣ ಹೋಟೆಲ್‌ನಿಂದ ಬರುವ ಕಡಿಮೆ ಆದಾಯದಿಂದ ಹೇಗೆ ಕುಟುಂಬ ನಿರ್ವಹಣೆ ಮಾಡುತ್ತೀರಿ ಎಂಬೆಲ್ಲ ವಿಚಾರಗಳನ್ನು ಕೇಳಿದರು. 7 ಮಕ್ಕಳೊಂದಿಗೆ ಹೋಟೆಲ್ ನಿರ್ವಹಣೆಯಿಂದ ಕುಟುಂಬವನ್ನು ಮುನ್ನಡೆಸುತ್ತಿರುವುದಾಗಿ ಹೇಳಿದೆ. ಆಗ ಅವರು ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ವೇತನ ಹೆಚ್ಚಳ: ಪ್ರಿಯಾಂಕಾ ಗಾಂಧಿ ಹೊಸ ಗ್ಯಾರಂಟಿ ಘೋಷಣೆ