ತುಮಕೂರು: ರಾಜಕಾರಣದಲ್ಲಿ ಜಾತಿ ಮತ್ತು ದುಡ್ಡಿನ ಬಲವೇ ಪ್ರಮುಖ ಪಾತ್ರ ವಹಿಸುತ್ತದೆ. ಅಭಿವೃದ್ಧಿ ನೋಡಿ ಮತ ಹಾಕುವ ಆದ್ಯತೆಯ ಪ್ರಮಾಣ ಕಡಿಮೆ. ಪ್ರಬಲ ಜಾತಿಯ ಮತಗಳೇ ನಿರ್ಣಾಯಕವಾಗಿ, ಕ್ಷೇತ್ರದಿಂದ ಸ್ಪರ್ಧಿಸಿದ ಪ್ರಬಲ ಸಮುದಾಯದ ಅಭ್ಯರ್ಥಿಯೇ ಗೆಲ್ಲೋದು ಹೆಚ್ಚು. ಆದರೆ ಅಪರೂಪಕ್ಕೆ ಎಂಬಂತೆ ಜಾತಿ ಪ್ರಾಬಲ್ಯ ಇಲ್ಲದೇ ಇದ್ದರೂ ಗೆದ್ದು ಸಚಿವ ಸ್ಥಾನ ಅಲಂಕರಿಸಿದವರೂ ಇದ್ದಾರೆ.
ಸಮುದಾಯದ ಮತ ನಂಬದೇ ಸರಳತೆ, ಕ್ಷೇತ್ರದ ಜನರೊಂದಿಗಿನ ಆಪ್ತತೆ ಹಾಗೂ ಅಭಿವೃದ್ಧಿ ಕೆಲಸದ ಮೂಲಕ ತಿಪಟೂರು (Tiptur) ಶಾಸಕ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಬಿಜೆಪಿಯಿಂದ (BJP) ಎರಡು ಬಾರಿ ಗೆದ್ದು ಸಚಿವರಾಗಿದ್ದಾರೆ.
Advertisement
Advertisement
ಸಚಿವ ಬಿ.ಸಿ.ನಾಗೇಶ್ ಬ್ರಾಹ್ಮಣ ಸಮುದಾಯದವರು. ತಿಪಟೂರು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಇದೆ. ಸರಿಸುಮಾರು 68 ಸಾವಿರ ನೊಳಂಬ ಲಿಂಗಾಯತರ ಮತಗಳಿವೆ. ಬ್ರಾಹ್ಮಣ ಸಮುದಾಯದ ಮತ ಕೇವಲ 5-8 ಸಾವಿರದ ಆಸುಪಾಸು. ಆದರೂ ಲಿಂಗಾಯತ ಸಮುದಾಯದ ಕಾಂಗ್ರೆಸ್ ಮಾಜಿ ಶಾಸಕ ಕೆ.ಷಡಕ್ಷರಿ ಅವರನ್ನು ಪರಾಭವಗೊಳಿಸಿ ಬಿ.ಸಿ.ನಾಗೇಶ್ ಎರಡು ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ.
Advertisement
ತಿಪಟೂರು ತಾಲೂಕಿನವರಾದ ಬಿ.ಸಿ. ನಾಗೇಶ್ ಅವರು, 2008 ಮತ್ತು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಬೆಂಗಳೂರಿನ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ (ಬಿ.ಇ) ಪದವೀಧರರಾಗಿರುವ ಬಿ.ಸಿ ನಾಗೇಶ್ ಅವರು ಕಾಲೇಜು ದಿನಗಳಲ್ಲೇ ಜನ ಸೇವೆ ಮಾಡುವ ಉದ್ದೇಶದಿಂದ ಸಾರ್ವಜನಿಕ ಜೀವನಕ್ಕೆ ಧುಮುಕಿದರು.
Advertisement
ಸ್ವಾತಂತ್ರ್ಯ ಭಾರತದ ಕರಾಳ ಘಟನೆಗಳಲ್ಲಿ ಒಂದಾದ ‘ತುರ್ತು ಪರಿಸ್ಥಿತಿ’ ಹೇರಿಕೆ ವಿರುದ್ಧ ಹೋರಾಟ ನಡೆಸಿದ ಬಿ.ಸಿ. ನಾಗೇಶ್ ಅವರು ಸೆರೆಮನೆ ವಾಸ ಅನುಭವಿಸಿದ್ದಾರೆ. ಬಿ.ಸಿ. ನಾಗೇಶ್ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಪೂರ್ಣಾವಧಿ ಕಾರ್ಯಕರ್ತರಾಗಿ, ಎಬಿವಿಪಿ ಬೆಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶದ ಹಿತಕ್ಕಾಗಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸ್ವಯಂ ಸೇವಾ ಸಂಘದ (RSS) ಸ್ವಯಂ ಸೇವಕರಾಗಿ ಬಿ.ಸಿ. ನಾಗೇಶ್ ಅವರು ಅವಿರತ ದುಡಿದಿದ್ದಾರೆ. ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ತುಮಕೂರು ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿಯನ್ನು ನಿಭಾಯಿಸಿರುವ ಬಿ.ಸಿ. ನಾಗೇಶ್ ಹಿಡಿದ ಅಭಿವೃದ್ಧಿ ಕೆಲಸ ಮಾಡಿಯೇ ತೀರುವ ಛಾತಿ ಇದ್ದವರು.
ಶಿಕ್ಷಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಅಮೂಲಾಗ್ರ ಬದಲಾವಣೆ ತಂದರು. 15 ಸಾವಿರ ಶಿಕ್ಷಕರ ನೇಮಕ, 10 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಮಾಡಿ ಸದ್ದು ಮಾಡಿದ್ದಾರೆ. ಅತಿಥಿ ಶಿಕ್ಷಕರ ಗೌರವ ಸಂಭಾವನೆ ಹೆಚ್ಚಳ, ಬಿಸಿಯೂಟ ನೌಕರರ ಸಂಬಳವೂ ಹೆಚ್ಚಿಸಿ ಕೈಹಿಡಿದಿದ್ದಾರೆ. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಗುಬ್ಬಿ ಶ್ರೀನಿವಾಸ್ ಇಂದು ರಾಜೀನಾಮೆ
ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತ ಬಳಿಕ ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸದ ಮೇಲೂ ಸಚಿವರು ತೀರಾ ನಿಗಾ ಇರಿಸಿದ್ದರು. ಹೊನ್ನವಳ್ಳಿ ಏತನೀರಾವರಿ ಯೋಜನೆಯ ಎರಡನೇ ಹಂತದ ಅನುಷ್ಠಾನ. ರಾಷ್ಟ್ರೀಯ ಹೆದ್ದಾರಿ 206 ಚತುಷ್ಪಥ ನಿರ್ಮಾಣಕ್ಕೆ 32 ಕೋಟಿ ರೂ., ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 180 ಕೋಟಿ ರೂ. ವೆಚ್ಚದಲ್ಲಿ ಹತ್ತಾರು ಕೆರೆಗಳಿಗೆ ನೀರು ಹರಿಸಿದ್ದಾರೆ. ತಿಪಟೂರು ನೊಣವಿನಕೆರೆ ರಸ್ತೆ, ತಿಪಟೂರು ಹುಳಿಯಾರು ರಸ್ತೆ, ತಿಪಟೂರು-ಹಾಸನ ರಸ್ತೆ ಹೀಗೆ ನೂರಾರು ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡಿದ್ದಾರೆ. ದಿ. ಹಾಸ್ಯ ನಟ ನರಸಿಂಹರಾಜು ಅವರ ರಂಗಮಂದಿರ, ಶಾಲಾ ಕಾಲೇಜು ಕಟ್ಟಡ ಹೀಗೆ ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡ ಬಿ.ಸಿ.ನಾಗೇಶ್ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ.
ಆದಾಗ್ಯೂ ಪಠ್ಯಪುಸ್ತಕ ರಚನಾ ಸಮಿತಿ ವಿವಾದ, ಹಿಜಬ್ ವಿವಾದಗಳಿಂದ ಸಚಿವರಿಗೆ ಸ್ವಲ್ಪ ಹಿನ್ನಡೆಯಾದರೂ ಈ ಬಾರಿ ಚುನಾವಣೆಯಲ್ಲಿ ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಪುತ್ರ ಶೀಘ್ರವೇ ಕಾಂಗ್ರೆಸ್‌ಗೆ ಸೇರ್ಪಡೆ