ಚಿಕ್ಕೋಡಿ: ಮಹಾರಾಷ್ಟ್ರದ (Maharshtra) ಗಡಿಗೆ ಹೊಂದಿರುವ ನಿಪ್ಪಾಣಿ (Nippani) ಮತಕ್ಷೇತ್ರದಲ್ಲಿ ಮರಾಠಿ ಭಾಷಿಕರ ಜೊತೆಗೆ ಮರಾಠಾ ಸಮುದಾಯ ಪ್ರಾಬಲ್ಯ ಹೊಂದಿದೆ. ಮರಾಠಾ ಸಮುದಾಯ ಹಾಗೂ ಲಿಂಗಾಯತರು ಈ ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದಾರೆ.
ನಿಪ್ಪಾಣಿ ಕ್ಷೇತ್ರದಲ್ಲಿ ಈ ಬಾರಿ ಸಚಿವೆ ಶಶಿಕಲಾ ಜೊಲ್ಲೆ (Shashikala Annasaheb Jolle) ಬಿಜೆಪಿ (BJP) ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ (Congress) ಪಕ್ಷದಿಂದ ಕಾಕಾಸಾಹೇಬ್ ಪಾಟೀಲ್ (Kakasaheb Patil) ಕಣಕ್ಕಿಳಿದಿದ್ದಾರೆ. ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಆಪ್ತ ಉತ್ತಮ್ ಪಾಟೀಲ್ (Uttam Patil) ಮಹಾರಾಷ್ಟ್ರದ ಶರದ್ ಪವಾರ್ ಅವರ ಎನ್‌ಸಿಪಿ (NCP) ಪಕ್ಷದಿಂದ ಅಖಾಡಕ್ಕೆ ಇಳಿದಿದ್ದಾರೆ. ಎನ್‌ಸಿಪಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯಲಿದೆ.
Advertisement
Advertisement
ಉತ್ತಮ್ ಪಾಟೀಲ್:
ಎನ್‌ಸಿಪಿ ಅಭ್ಯರ್ಥಿ ಉತ್ತಮ್ ಪಾಟೀಲ್ ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಿಪ್ಪಾಣಿ ಕ್ಷೇತ್ರದಲ್ಲಿ ಹಲವು ದಿನಗಳಿಂದ ಸಂಘಟನೆ ನಡೆಸಿ ತನ್ನದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಉತ್ತಮ್ ಪಾಟೀಲ್ ಟಿಕೆಟ್ ವಂಚಿತರಾದ ಬಳಿಕ ಎನ್‌ಸಿಪಿ ಪಕ್ಷದಿಂದ ಕಣಕ್ಕೆ ಇಳಿದಿದ್ದಾರೆ. ಶರದ್ ಪವಾರ್ ಅವರ ಪ್ರಾಬಲ್ಯದಿಂದ ಮರಾಠಿಗರ ಮತಗಳನ್ನು ಪಡೆಯುವ ಪ್ಲಾನ್ ಜೊತೆಗೆ ತಮ್ಮ ಸಮುದಾಯವಾದ ಜೈನರ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ವಿಶ್ವಾಸದಲ್ಲಿದ್ದಾರೆ. ಜಾರಕಿಹೊಳಿ ಕುಟುಂಬದ ಆಂತರಿಕ ಬೆಂಬಲ ಇವರಿಗೆ ಸಿಗಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮುಖಂಡರನ್ನೂ ತಮ್ಮ ಬಳಿ ಸೆಳೆದುಕೊಂಡಿರುವ ಇವರು ಹಿಂದುಳಿದ ಹಾಗೂ ದಲಿತ ಮತಗಳು ಕೈಹಿಡಿಯುವ ಲೆಕ್ಕಾಚಾರದಲ್ಲಿದ್ದಾರೆ.
Advertisement
ಕಾಕಾಸಾಹೇಬ್ ಪಾಟೀಲ್:
ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ್ ಪಾಟೀಲ್ ಮರಾಠಾ ಸಮುದಾಯಕ್ಕೆ ಸೇರಿದ್ದು, ಮರಾಠಾ ಸಮುದಾಯ ಕೈ ಹಿಡಿಯುವುದರ ಜೊತೆಗೆ ಕಾಂಗ್ರೆಸ್ ಪಕ್ಷದಿಂದ ಮತಗಳು ಬರುವ ನಿರೀಕ್ಷೆಯಲ್ಲಿದ್ದಾರೆ.
Advertisement
ಶಶಿಕಲಾ ಜೊಲ್ಲೆ:
ಲಿಂಗಾಯತ ಸಮುದಾಯಕ್ಕೆ ಸೇರಿರುವ ಶಶಿಕಲಾ ಜೊಲ್ಲೆಯವರಿಗೆ ಲಿಂಗಾಯತ ಮತಗಳು ಕೈ ಹಿಡಿಯುವುದರ ಜೊತೆಗೆ ಮರಾಠಾ ಸಮುದಾಯದವರು ಹಿಂದುತ್ವದ ಆಧಾರದ ಮೇಲೆ ಬಿಜೆಪಿ ಪರ ಇರಲಿದ್ದಾರೆ. ಜೊತೆಗೆ ತಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯಲಿವೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮತದಾರರು ಯಾರ ಪರ ಇರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಬಿಜೆಪಿ ಧನಾತ್ಮಕ ಅಂಶಗಳು:
ನಿಪ್ಪಾಣಿ ಕ್ಷೇತ್ರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಇದು ಚುನಾವಣೆಯಲ್ಲಿ ಗೆಲ್ಲಲು ಪ್ಲಸ್ ಪಾಯಿಂಟ್ ಆಗಲಿದೆ ಎನ್ನಲಾಗುತ್ತಿದೆ. ಅಲ್ಲದೇ ಕ್ಷೇತ್ರದಲ್ಲಿ ಶಾಸಕಿ ಫುಲ್ ಆ್ಯಕ್ಟಿವ್ ಆಗಿದ್ದು, ಸರ್ಕಾರದ ಪರವಾಗಿ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಾರೆ.
ಋಣಾತ್ಮಕ ಅಂಶಗಳು:
ಕೇಂದ್ರ ಸರ್ಕಾರದ ಬೆಲೆ ಏರಿಕೆಯ ಬಿಸಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಿದೆ. ಅಲ್ಲದೇ ಶಶಿಕಲಾ ಜೊಲ್ಲೆಯವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ ಮೊಟ್ಟೆ ಡೀಲ್ ವಿಚಾರದಲ್ಲಿ ಆರೋಪ ಹೊತ್ತಿದ್ದಾರೆ. ಇನ್ನೊಂದೆಡೆ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್ ಧನಾತ್ಮಕ ಅಂಶಗಳು:
ಕಾಂಗ್ರೆಸ್ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿಯಂತಹ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಕಳೆದ ಬಾರಿ ಕೇವಲ 8 ಸಾವಿರ ಮತಗಳ ಅಂತರದಲ್ಲಿ ಪರಾಭವ ಹೊಂದಿದ್ದ ಹಿನ್ನೆಯಲ್ಲಿ ಈ ಬಾರಿ ಅಧಿಕಾರಕ್ಕೇರುವ ಭರವಸೆಯನ್ನು ಹೊಂದಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ. ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತು ಜನರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಬಿಜೆಪಿಯ ಕುಟುಂಬ ರಾಜಕಾರಣದಿಂದ ಬೇಸತ್ತ ಜನರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಸಾಧ್ಯತೆಯಿದೆ.
ಋಣಾತ್ಮಕ ಅಂಶಗಳು:
ನಿಪ್ಪಾಣಿ ಕ್ಷೇತ್ರದಲ್ಲಿ ನಾಯಕತ್ವದ ಕೊರತೆಯಿದ್ದು, ಸರಿಯಾದ ಸಮಯಕ್ಕೆ ನಾಯಕರು ಸಿಗುತ್ತಿಲ್ಲ. ಇದರಿಂದಾಗಿ ಜನತೆ ಬಿಜೆಪಿಯತ್ತ ವಾಲುತ್ತಿದೆ. ಸತತವಾಗಿ ಬಿಜೆಪಿ ಎರಡು ಬಾರಿ ಗೆದ್ದಿರುವುದಿರಂದ ಕಾರ್ಯಕರ್ತರು ಉತ್ಸಾಹವನ್ನು ಕಳೆದುಕೊಂಡಿದ್ದಾರೆ.
ಎನ್‌ಸಿಪಿ ಧನಾತ್ಮಕ ಅಂಶಗಳು:
ಉತ್ತಮ್ ಪಾಟೀಲ್ ಜನರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಶರದ್ ಪವಾರ್ ವರ್ಚಸ್ಸಿನಿಂದ ಮರಾಠರ ಮತಗಳನ್ನು ಪಡೆಯುವ ವಿಶ್ವಾಸವಿದೆ. ಅಲ್ಲದೇ ಜೈನ ಸಮುದಾಯದವರು ಇವರಿಗೆ ಸಾಥ್ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆಗೆ ರಮೇಶ್ ಜಾರಕಿಹೊಳಿ ಕುಟುಂಬ ಇವರಿಗೆ ಆಂತರಿಕವಾಗಿ ಬೆಂಬಲ ಸೂಚಿಸಿದ್ದಾರೆ.
ಋಣಾತ್ಮಕ ಅಂಶಗಳು:
ಎನ್‌ಸಿಪಿ ಪಕ್ಷದಲ್ಲಿ ಹೊಸ ಮುಖಕ್ಕೆ ಟಿಕೆಟ್ ಕೊಟ್ಟಿರುವುದರಿಂದ ಜನರಲ್ಲಿ ಗೊಂದಲ ಮೂಡಿದೆ. ಅಲ್ಲದೇ ಪ್ರಬಲ ಸಮುದಾಯದ ಅಭ್ಯರ್ಥಿ ಇಲ್ಲದೇ ಇರುವ ಕಾರಣದಿಂದಾಗಿ ಜನರು ಮತ ನೀಡಲು ಹಿಂಜರಿಯುವ ಸಾಧ್ಯತೆಯಿದೆ.
ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ:
ನಿಪ್ಪಾಣಿ ಕ್ಷೇತ್ರದಲ್ಲಿ ಒಟ್ಟು 2,19,985 ಮತದಾರರಿದ್ದಾರೆ. ಇದರಲ್ಲಿ 1,11,253 ಪುರುಷ ಮತದಾರರಿದ್ದು, 1,08,723 ಮಹಿಳಾ ಮತದಾರರಿದ್ದಾರೆ.
ಯಾರ ವೋಟು ಎಷ್ಟು?
ಲಿಂಗಾಯತ: 40,000
ಮರಾಠಾ: 51,000
ಮುಸ್ಲಿಂ: 26,000
ಜೈನ: 22,000
ಹಾಲುಮತ: 21,000
ಎಸ್ಸಿ: 20,500
ಬ್ರಾಹ್ಮಣ: 3,200
ಎಸ್ಟಿ: 860
ಇತರೆ: 35,425