ಬೆಂಗಳೂರು: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangala) ಎರಡು ರಾಷ್ಟ್ರೀಯ ಹೆದ್ದಾರಿ ಮೂಲಕ 17 ಜಿಲ್ಲೆಯ ಸಂಪರ್ಕಿಸುವ ಬೆಂಗಳೂರು ನಗರದ ಹೆಬ್ಬಾಗಿಲು. ಇದು ಮೀಸಲು ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಇದುವರೆಗೂ ಮೂರು ಚುನಾವಣೆಗಳು ನಡೆದಿವೆ. 4ನೇ ಚುನಾವಣೆಗೆ ಕ್ಷೇತ್ರ ಸಜ್ಜಾಗಿದ್ದು, ಬೆಂಗಳೂರು ನಗರದ ಹೆಬ್ಬಾಗಿಲನ್ನು ಯಾರು ತೆರೆಯುತ್ತಾರೆ ಎಂಬ ಕುತೂಹಲ ಮೂಡಿದೆ.
ಮೀಸಲು ಕ್ಷೇತ್ರವಾಗಿರುವ ನೆಲಮಂಗಲದಲ್ಲಿ ಎಸ್ಸಿ-ಎಸ್ಟಿ ಸಮುದಾಯವೇ ಪ್ರಾಬಲ್ಯ ಹೊಂದಿದೆ. ನಂತರದ ಸ್ಥಾನದಲ್ಲಿ ಒಕ್ಕಲಿಗ ಸಮುದಾಯವಿದೆ. ಈ ಸಮುದಾಯಗಳ ಮತಬೇಟೆಗೆ ಪ್ರಮುಖ ರಾಜಕೀಯ ಪಕ್ಷಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ. ಕಳೆದ ಎರಡು ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ (JDS) ನೆಲ ಭದ್ರಪಡಿಸಿಕೊಂಡಿತ್ತು. ಆ ಮೂಲಕ ಜೆಡಿಎಸ್‌ನ ಹಾಲಿ ಶಾಸಕ ಶ್ರೀನಿವಾಸಮೂರ್ತಿ (K.Srinivasa Murthy) ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಪಕ್ಷಗಳು ಹೊಸ ಮುಖಗಳಿಗೆ ಮಣೆ ಹಾಕಿವೆ. ಗೆಲುವು ಯಾರದ್ದಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಎಲೆಕ್ಷನ್ ಹೊತ್ತಿನಲ್ಲೇ ಡಿಕೆಶಿಗೆ ಶಾಕ್ – CBI ತನಿಖೆಗೆ ಕೋರ್ಟ್ ಅಸ್ತು
Advertisement
Advertisement
4ನೇ ಚುನಾವಣೆಗೆ ಅಖಾಡ ಸಿದ್ಧ
ನೆಲಮಂಗಲ ಕ್ಷೇತ್ರಕ್ಕೆ 2008 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ವಿ. ನಾಗರಾಜ್ ಗೆಲುವು ಸಾಧಿಸಿದ್ದರು. 2013 ರಲ್ಲಿ ಜೆಡಿಎಸ್‌ನ ಡಾ. ಕೆ. ಶ್ರೀನಿವಾಸಮೂರ್ತಿ ಜಯ ಗಳಿಸಿದ್ದರು. 2018 ರಲ್ಲಿ ಮತ್ತೆ ಡಾ. ಕೆ. ಶ್ರೀನಿವಾಸಮೂರ್ತಿ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದರು.
Advertisement
2018ರ ಚುನಾವಣಾ ಫಲಿತಾಂಶ ಏನಿತ್ತು?
ಜೆಡಿಎಸ್‌ನ ಡಾ. ಕೆ. ಶ್ರೀನಿವಾಸಮೂರ್ತಿ ಅವರು 69,277 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಆರ್.ನಾರಾಯಣಸ್ವಾಮಿ ಅವರು 44,956 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಬಿಜೆಪಿಯ ಎಂ.ವಿ. ನಾಗರಾಜ್ ಅವರು 42,689 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಇದನ್ನೂ ಓದಿ: 13 ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್
Advertisement
ನೆಲಮಂಗಲ ಮತದಾರರ ಸಂಖ್ಯೆ ಎಷ್ಟು?
ಮೀಸಲು ಕ್ಷೇತ್ರ ನೆಲಮಂಗಲದಲ್ಲಿ 2,15,272 ಒಟ್ಟು ಮತದಾರರಿದ್ದಾರೆ. ಅವರ ಪೈಕಿ ಪುರುಷರು- 1,06,436 ಹಾಗೂ ಮಹಿಳೆಯರು- 1,08,758 ಮತದಾರರಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಹಾಲಿ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ, ಕಾಂಗ್ರೆಸ್‌ನಿಂದ ಎನ್.ಶ್ರೀನಿವಾಸ್ ಹಾಗೂ ಬಿಜೆಪಿಯಿಂದ ಸಪ್ತಗಿರಿ ಶಂಕರ್ ನಾಯಕ್ ಕಣದಲ್ಲಿದ್ದಾರೆ.
ಕ್ಷೇತ್ರದ ಅಭ್ಯರ್ಥಿಗಳ ಪ್ಲಸ್, ಮೈನಸ್ ಏನು?
ಜೆಡಿಎಸ್: ಹಾಲಿ ಶಾಸಕ ಡಾ.ಕೆ. ಶ್ರೀನಿವಾಸ ಮೂರ್ತಿ ಅವರು ಸೌಮ್ಯ ಸ್ವಭಾವದ ರಾಜಕಾರಣಿ. ಎಲ್ಲಾ ಜನರ ಕೈಗೂ ಸಿಕ್ಕುವ ಶಾಸಕ. ಯಾವುದೇ ಅಕ್ರಮ, ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ನೀಡಲ್ಲ. ಜೆಡಿಎಸ್ ಪಕ್ಷ ಮತ್ತು ಕುಮಾರಸ್ವಾಮಿ ವಿಚಾರವಾಗಿ ಕ್ಷೇತ್ರದ ಜನತೆಯಲ್ಲಿ ಅನುಕಂಪದ ಅಭಿಮಾನ ಇದೆ. ಇದು ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಬಹುದು. ಇನ್ನೂ ಜೆಡಿಎಸ್ ಮೈನಸ್ ಏನು ಎಂಬುದನ್ನು ಗಮನಿಸಿದರೆ, ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡುವಲ್ಲಿ ಹಾಲಿ ಶಾಸಕ ವಿಫಲವಾಗಿರುವುದು, ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಸಿಗದೆ ಅಭಿವೃದ್ಧಿ ಕಡಿಮೆಯಾಗಿರುವುದು, ಬಿಎಂಎಲ್ ಕಾಂತರಾಜು ಕಾಂಗ್ರೆಸ್ ಸೇರ್ಪಡೆಯಿಂದಾಗಿ ಜೆಡಿಎಸ್‌ಗೆ ಸ್ವಲ್ಪ ಹಿನ್ನಡೆ ಆಗಬಹುದು ಎಂಬುದು ರಾಜಕೀಯ ಪರಿಣಿತರ ಲೆಕ್ಕಾಚಾರ.
ಕಾಂಗ್ರೆಸ್: ಬಿಎಂಎಲ್ ಕಾಂತರಾಜು ಟೀಂ ಕಾಂಗ್ರೆಸ್ ಸೇರ್ಪಡೆಯಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಒಳಜಗಳದಿಂದ ದೂರಾಗಿದ್ದ ನಾಯಕರನ್ನು ಒಟ್ಟುಗೂಡಿಸುವಿಕೆಯಲ್ಲಿ ಪಕ್ಷ ಸಫಲವಾಗಿದೆ. ಕ್ಷೇತ್ರದಲ್ಲಿ ಉಡುಗೊರೆ ಹಂಚಿಕೆ ಮಾಡಿ ಮಾತದಾರರನ್ನು ಸೆಳೆಯಲಾಗುತ್ತಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಇರುವ ಕಾರಣ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಬಹುದು. ಇನ್ನೂ ಮೈನಸ್ ಅನ್ನೋದಾದರೆ, ಕಾಂಗ್ರೆಸ್ ಕಣಕ್ಕಿಳಿಸಿರುವ ಅಭ್ಯರ್ಥಿ ಸ್ಥಳೀಯರಲ್ಲ. ಅವರು ಹೊರಗಿನಿಂದ ಬಂದವರು. ಸ್ಥಳೀಯರಿಗೆ ಟಿಕೆಟ್ ಕೊಡದೇ ಇರುವುದರಿಂದ ಪಕ್ಷಕ್ಕೆ ಬಂಡಾಯದ ಬಿಸಿಯಿದೆ. ಹಿರಿಯ ನಾಯಕ ದಿವಂಗತ ಅಂಜನಮೂರ್ತಿ ಬೆಂಬಲಿಗರು ದೂರ ಉಳಿದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಮೊದಲೇ ಸಿಎಂ ಅಭ್ಯರ್ಥಿ ಘೋಷಣೆ ಮಾಡೋ ಸಂಸ್ಕೃತಿ ಇಲ್ಲ: ಸೋಮಣ್ಣಗೆ ಸಿದ್ದು ತಿರುಗೇಟು
ಬಿಜೆಪಿ: ಮಾಜಿ ಸಚಿವ ಶಂಕರ್ ನಾಯಕ್ ಪುತ್ರ ಈ ಬಾರಿ ಕಣದಲ್ಲಿದ್ದಾರೆ. ಶಂಕರ್ ನಾಯಕ್ ಅವರು ನೆಲಮಂಗಲ ಅಭಿವೃದ್ಧಿಗೆ ಶ್ರಮಿಸಿದ ನಾಯಕ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸ ಹಾಗೂ ಆರ್‌ಎಸ್‌ಎಸ್ ಪ್ರಾಬಲ್ಯದಿಂದ ಟಿಕೆಟ್ ಘೋಷಣೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿರುವುದು ಪಕ್ಷದ ಕಡೆ ಮತದಾರರು ಒಲವು ಹೊಂದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಇನ್ನೂ ಬಿಜೆಪಿ ಮೈನಸ್ ಪಾಯಿಂಟ್ ಎಂದರೆ, ಈ ಬಾರಿ ಹೊಸ ಮುಖಕ್ಕೆ ಮಣೆ ಹಾಕಿರುವುದು, ಬೂತ್ ಮಟ್ಟದಲ್ಲಿ ಮುಖಂಡರ ಕೊರತೆ, ಜನರ ಬಳಿ ಹೋಗದೇ ತಂದೆಯ ಹೆಸರು ಬಳಸಿಕೊಂಡು ಚುನಾವಣೆ ಕಣದಲ್ಲಿದ್ದಾರೆ ಅಭ್ಯರ್ಥಿ ಎಂಬ ಆರೋಪ. ಟಿಕೆಟ್ ತಪ್ಪಿದ ನಾಗರಾಜು, ಹೊಂಬಯ್ಯ, ಎಂ.ಎನ್ ರಾಮ್‌ರಿಂದ ಒಳಗೊಳಗೆ ಬಂಡಾಯದ ಭೀತಿ ಇದೆ ಎಂದು ವಿಶ್ಲೇಷಿಸಲಾಗಿದೆ.
ಟ್ರೆಂಡ್- ಶೇ. ಮತ ಅಥವಾ ಲೀಡ್ ಇರೋ ಪಕ್ಷ
ಜೆಡಿಎಸ್- 45 ಪರ್ಸೆಂಟ್
ಕಾಂಗ್ರೆಸ್- 35 ಪರ್ಸೆಂಟ್
ಬಿಜೆಪಿ- 20 ಪರ್ಸೆಂಟ್
ಜಾತಿವಾರು ಲೆಕ್ಕಾಚಾರ ಏನು?
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ: 70,000, ಒಕ್ಕಲಿಗ: 45,000, ಲಿಂಗಾಯತ: 35,000, ಕುರುಬರು: 10,000, ಮುಸ್ಲಿಂ: 8,000, ಬೋವಿ: 15,000, ಇತರರು: 22,000 ಮತಗಳಿವೆ.