ಮೈಸೂರು: ರಾಜ ಮನೆತನದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ (Srikantadatta Narasimharaja Wadiyar) ಅವರದ್ದು ವಿಶಿಷ್ಟ ವ್ಯಕ್ತಿತ್ವ. ಮೈಸೂರು (Mysuru) ಅರಸರ ವಂಶದ ಗೌರವಕ್ಕೆ ಯಾವುದೇ ಚ್ಯುತಿ ಬರದಂತೆ ಜೀವನ ಸಾಗಿಸಿದವರು. ರಾಜಕಾರಣಕ್ಕೆ ಬಂದರೂ ಕೂಡ ಹೆಸರು ಕೆಡಿಸಿಕೊಳ್ಳಲಿಲ್ಲ. ಸೋಲು ಗೆಲವು ಎರಡನ್ನೂ ಕಂಡರು ಸಹ ಎಲ್ಲವನ್ನೂ ಸಮಚಿತ್ತವಾಗಿ ಸ್ವೀಕರಿಸಿ ದೊಡ್ಡತನ ಪ್ರದರ್ಶಿಸಿದವರು. ಮೈಸೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಸೋಲು ಕಂಡಿದ್ದರು.
1984ರಲ್ಲಿ ಕಾಂಗ್ರೆಸ್‍ನಿಂದ (Congress) ಮೊದಲ ಬಾರಿಗೆ ಲೋಕಸಭಾ ಚುನಾವಣೆಯ ಕಣಕ್ಕೆ ಇಳಿದು 2,47,754 ಮತಗಳನ್ನು ಪಡೆದು ಗೆದ್ದರು. 1989ರಲ್ಲಿ ಎರಡನೇ ಬಾರಿಗೆ 3,84,888 ಮತ ಪಡೆದು ಲೋಕಸಭೆಗೆ ಆಯ್ಕೆಯಾದರು. 1991ರಲ್ಲಿ ಬಿಜೆಪಿಯಿಂದ (BJP) ಕಣಕ್ಕೆ ಇಳಿದಿದ್ದ ಒಡೆಯರ್ 20 ಸಾವಿರ ಮತಗಳ ಅಂತರದಿಂದ ಸೋತಿದ್ದರು. 1996ರಲ್ಲಿ ಮರಳಿ ಕಾಂಗ್ರೆಸ್‍ನಿಂದ ಅಭ್ಯರ್ಥಿ ಯಾಗಿ 2,58,299 ಮತ ಪಡೆದು ಮೂರನೇ ಬಾರಿಗೆ ಗೆದ್ದರು. 1999ರಲ್ಲಿ 3,38,051 ಮತಗಳನ್ನು ಪಡೆದು ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸಿದ್ದರು. 2004ರ ಚುನಾವಣೆಯಲ್ಲಿ 17 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದನ್ನೂ ಓದಿ: UPSCಯಿಂದ ನೇಮಕಗೊಂಡ ಅಧಿಕಾರಿಗಳು ಡಕಾಯಿತರು: ಕೇಂದ್ರ ಸಚಿವ
2006ರ ವೇಳೆಗೆ ಸಿದ್ದರಾಮಯ್ಯ (Siddaramaiah) ಅವರು ಜನತಾಪರಿವಾರ ಬಿಟ್ಟು ಕಾಂಗ್ರೆಸ್‍ಗೆ ಬಂದರು. ಆಗ ಒಡೆಯರ್ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡರು. ಏಕೆಂದರೆ ಅರಮನೆ ಸ್ವಾಧೀನ ವಿಚಾರದಲ್ಲಿ ಒಡೆಯರ್ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಒಡೆಯರ್ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದರೂ ಕೂಡ ಕೇಂದ್ರದಲ್ಲಿ ಮಂತ್ರಿಯಾಗಲಿಲ್ಲ. 1984ರಲ್ಲಿ ಮೊದಲ ಬಾರಿ ಗೆದ್ದಿದ್ದರಿಂದ ಕಾಂಗ್ರೆಸ್ ಸರ್ಕಾರ ಇದ್ದರೂ ಮಂತ್ರಿಗಿರಿ ಸಿಗಲಿಲ್ಲ. 1989ರಲ್ಲಿ ಎರಡನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ವಿ.ಪಿ. ಸಿಂಗ್ ನೇತೃತ್ವದ ಜನತಾದಳ ಸರ್ಕಾರ ಅಧಿಕಾರಕ್ಕೆ ಬಂತು. 1996ರಲ್ಲಿ ಮೂರನೇ ಬಾರಿ ಗೆದ್ದಾಗ ಎಚ್.ಡಿ. ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ನೇತೃತ್ವದ ಸಂಯುಕ್ತ ಸರ್ಕಾರ ಅಧಿಕಾರ ಬಂತು. 1999ರಲ್ಲಿ ಗೆದ್ದಾಗ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂತು. ಹೀಗಾಗಿ ಒಡೆಯರ್ ಅವರಿಗೆ ಮಂತ್ರಿಗಿರಿ ಕೈ ತಪ್ಪಿತ್ತು. ಇದನ್ನೂ ಓದಿ: ರಾಮನವಮಿಯ ಧ್ವಜದಲ್ಲಿ ಮಾಂಸದ ತುಂಡು – ಜಮ್ಶೆಡ್‌ಪುರದಲ್ಲಿ ಹಿಂಸಾಚಾರ