ರಾಯಚೂರು: ಜಿಲ್ಲೆಯ ಮಾನ್ವಿ (Manvi) ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಟಿಕೆಟ್ ಫೈಟ್ ಜೋರಾಗಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ನಾಯಕ್ (B.V.Nayak) ವಿರುದ್ಧ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಬಂಡಾಯದ ಎಚ್ಚರಿಕೆ ನೀಡಿದ್ದಾರೆ.
ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಕೂಗು ಕೇಳಿ ಬಂದಿದೆ. ಎಸ್‍ಟಿ ಮೀಸಲು ಕ್ಷೇತ್ರದಲ್ಲಿ ಸ್ಥಳೀಯರಲ್ಲದವರಿಗೆ ಟಿಕೆಟ್ ನೀಡಬಾರದು ಎಂದು ರಾಜ್ಯ ಹೈಕಮಾಂಡ್‍ಗೆ ಒತ್ತಾಯ ಮಾಡಲಾಗಿದೆ. ಮಾಜಿ ಸಂಸದ ಬಿ.ವಿ.ನಾಯಕ್‍ಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸವದತ್ತಿ ಕ್ಷೇತ್ರದಲ್ಲಿ ಮತ್ತೆ ಬಂಡಾಯದ ಬೆಂಕಿ ಹೊತ್ತಿಸಿದ ಸೌರಭ್ ಚೋಪ್ರಾ
ಎಲ್ಲಾ ವ್ಯವಸ್ಥೆ ಮಾಡಿದ ಮೇಲೆ ಇಲ್ಲಿ ಯಾರೋ ಬಂದು ಸೇರುವಂತೆ ಆಗಬಾರದು. ಇಲ್ಲೇ ಕೆಲಸ ಮಾಡುತ್ತಿರುವವರಿಗೆ ಟಿಕೆಟ್ ಸಿಗಬೇಕು ಎಂದು ಮಾಜಿ ಶಾಸಕ ಹಾಗೂ ಟಿಕೆಟ್ ಆಕಾಂಕ್ಷಿ ಜಿ.ಹಂಪಯ್ಯ ನಾಯಕ್ (G.Hampayya Nayak) ಅಧ್ಯಕ್ಷರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಹೊರಗಿನವರು ಕ್ಷೇತ್ರಕ್ಕೆ ಬರಬಾರದು ಎಂದು ಬಸನಗೌಡ ಬ್ಯಾಗವಾಟ್‍ರವರನ್ನು ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿದ್ದೇವೆ. ಮತ್ತೆ ಅದು ಮರುಕಳಿಸಬಾರದು ಎಂದು ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಅನ್ಯ ಕ್ಷೇತ್ರದವರಿಗೆ ಹೈಕಮಾಂಡ್ ಮಣೆ ಹಾಕಬಾರದು ಎಂದು ಮಾಜಿ ಸಂಸದ ಬಿ.ವಿ.ನಾಯಕ್ ವಿರುದ್ಧ ಕೈ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಜಿ.ಹಂಪಯ್ಯ ನಾಯಕ್, ವೈ.ಶರಣಯ್ಯ ನಾಯಕ್, ಹಾಗೂ ಬಿ.ವಿ ನಾಯಕ್ ನಡುವೆ ಟಿಕೆಟ್‍ಗಾಗಿ ಪೈಪೋಟಿ ಇದೆ. ರಾಜಾವಸಂತ ನಾಯಕ್, ಲಕ್ಷ್ಮಿದೇವಿ ನಾಯಕ್ ಸಹ ಟಿಕೆಟ್‍ಗಾಗಿ ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್ ತನ್ನ ಎರಡೂ ಪಟ್ಟಿಯಲ್ಲಿ ಟಿಕೆಟ್ ಘೋಷಿಸದ ಹಿನ್ನೆಲೆ ಈಗ ಸ್ಥಳೀಯ ಆಕಾಂಕ್ಷಿಗಳಲ್ಲಿ ಆತಂಕ ಶುರುವಾಗಿದೆ.
ದೇವದುರ್ಗ, ಮಾನ್ವಿ, ರಾಯಚೂರು ಗ್ರಾಮೀಣ ಮೂರು ಕಡೆ ಟಿಕೆಟ್‍ಗೆ ಅರ್ಜಿ ಹಾಕಿರುವ ಬಿ.ವಿ.ನಾಯಕ್ ಹೈಕಮಾಂಡ್ ಎಲ್ಲಿ ಟಿಕೆಟ್ ಕೊಟ್ಟರು ಸ್ಪರ್ಧಿಸುತ್ತೇನೆ ಎನ್ನುತ್ತಿದ್ದಾರೆ. ಈಗಾಗಲೇ ರಾಯಚೂರು ಗ್ರಾಮೀಣಕ್ಕೆ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕ ಬಸನಗೌಡ ದದ್ದಲ್‍ಗೆ ಟಿಕೆಟ್ ಘೋಷಣೆಯಾಗಿದೆ. ಸ್ವಕ್ಷೇತ್ರ ದೇವದುರ್ಗದ (Devadurga) ಬಗ್ಗೆ ಬಿ.ವಿ.ನಾಯಕ್ ಅಷ್ಟಾಗಿ ಆಸಕ್ತಿ ಹೊಂದಿಲ್ಲ. ಹೀಗಾಗಿ ಬಿ.ವಿ.ನಾಯಕ್‍ಗೆ ಮಾನ್ವಿ ಟಿಕೆಟ್ ಸಿಗಬಹುದು ಎಂದು ಟಿಕೆಟ್ ಆಕಾಂಕ್ಷಿಗಳು ಹಾಗೂ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಹಾಲಿ ಶಾಸಕರಿರುವ ಲಿಂಗಸುಗೂರು ಕ್ಷೇತ್ರ ಸೇರಿ 5 ಕ್ಷೇತ್ರಗಳಲ್ಲಿ ಟಿಕೆಟ್ ಗೊಂದಲವಿದೆ. ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯಲ್ಲಿ ಗೊಂದಲ ನಿವಾರಿಸುವ ಪ್ರಯತ್ನ ಮಾಡಬಹುದು. ಆದರೆ ಸದ್ಯದ ತೀವ್ರ ಪೈಪೋಟಿ ಗಮನಿಸಿದರೆ ಒಂದಷ್ಟು ಆಕಾಂಕ್ಷಿಗಳು ಬಂಡಾಯ ಏಳುವ ಸಾಧ್ಯತೆಗಳಿವೆ. ಇದನ್ನೂ ಓದಿ: ಕೈತಪ್ಪಿದ ಮೊಳಕಾಲ್ಮೂರು ‘ಕೈ’ ಟಿಕೆಟ್- ಬೆಂಬಲಿಗರ ಸಭೆಯಲ್ಲಿ ಆಕಾಂಕ್ಷಿ ಯೋಗೀಶ್ ಬಾಬು ಕಣ್ಣೀರು