ನಾಲ್ಕನೇಯ ಬಾರಿ ಗೆಲ್ತಾರಾ ಖಾದರ್‌ ? ಮಂಗಳೂರಿನಲ್ಲಿ ಈ ಬಾರಿ ಬಿಜೆಪಿ ಕೊಡುತ್ತಾ ಠಕ್ಕರ್‌?

Public TV
2 Min Read
ut khader 1

ಮಂಗಳೂರು: ಇಡೀ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಬಿಜೆಪಿ (BJP) ಆವರಿಸಿದ್ದರೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ನ್ನು (Congress) ಮಣಿಸಲು ಕಮಲ ಪಾಳಯಕ್ಕೆ ಸಾಧ್ಯವಾಗಿಲ್ಲ. 2013ರ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರ ಹೊರತುಪಡಿಸಿ ದಕ್ಷಿಣ ಕನ್ನಡದಲ್ಲಿ 7 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿತ್ತು. ಆದರೆ 2018ರಲ್ಲಿ ಯು.ಟಿ. ಖಾದರ್ (UT Khader) ಉಳಿಸಿಕೊಂಡಿದ್ದ ಮಂಗಳೂರು ಕ್ಷೇತ್ರವನ್ನು ಹೊರತುಪಡಿಸಿ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ವಶದಲ್ಲಿದ್ದ ಸ್ಥಾನಗಳನ್ನು ಬಿಜೆಪಿ ವಶಪಡಿಸಿಕೊಂಡಿದೆ.

1957ರಿಂದ 2008ರವರೆಗೆ, ಇಂದಿನ ಮಂಗಳೂರು ಕ್ಷೇತ್ರವನ್ನು ಉಳ್ಳಾಲ (Ullala) ಕ್ಷೇತ್ರ ಎಂದು ಕರೆಯಲಾಗುತ್ತಿತ್ತು.1957ರಿಂದ ಮಂಗಳೂರು ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಏಕೆಂದರೆ ಈ ಅವಧಿಯಲ್ಲಿ ನಡೆದ 15 ಚುನಾವಣೆಗಳಲ್ಲಿ ಪಕ್ಷವು 12 ಬಾರಿ ಗೆದ್ದಿದೆ ಮತ್ತು 1994ರಲ್ಲಿ ಬಿಜೆಪಿಯ ಜಯರಾಮ ಶೆಟ್ಟಿ 24,412 ಮತಗಳನ್ನು ಪಡೆದು ಸ್ಥಾನವನ್ನು ಗೆದ್ದಿದ್ದರು. ಯು. ಟಿ. ಖಾದರ್ 2007ರಿಂದ ಮಂಗಳೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಇದೀಗ 2023ರ ಚುನಾವಣೆಯಲ್ಲಿ 5ನೇ ಅವಧಿಯ ಮೇಲೆ ಕಣ್ಣಿಟ್ಟಿದ್ದಾರೆ. ಖಾದರ್ ಅವರು 2007ರಲ್ಲಿ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಕ್ಷೇತ್ರವನ್ನು ಗೆದ್ದಿದ್ದರು. ಇದನ್ನೂ ಓದಿ: ರಾಜೀನಾಮೆ ಕೊಟ್ಟು ಸ್ಪರ್ಧೆ ಮಾಡ್ತೀನಿ: ಈಶ್ವರಪ್ಪಗೆ ಬಿಜೆಪಿ MLC ಆಯನೂರು ಮಂಜುನಾಥ್‌ ಸವಾಲ್‌

bjp flag e1665156864461

ತಾವು ಶಾಸಕರಾಗಿದ್ದ ಅವಧಿಯಲ್ಲಿ ಖಾದರ್ ಅವರು ಯಾವುದೇ ವಿವಾದಗಳಿಗೆ ಕಾರಣರಾಗದೇ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬಂದಿದ್ದಾರೆ. ಉಳ್ಳಾಲದಲ್ಲಿ ಮುಂಚೂಣಿಯಲ್ಲಿ ಮುನ್ನಡೆಯುತ್ತಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಪರಿವರ್ತನೆಗೆ ಕಾರಣರಾಗಿದ್ದಾರೆ. ಖಾದರ್ ಅವರು ಉಳ್ಳಾಲದ ಜನರಲ್ಲಿ ವಿಶ್ವಾಸ ಗಳಿಸಿದ್ದು, ಬಿಜೆಪಿಗೆ ಗೆಲ್ಲಲು ಕಠಿಣ ಕ್ಷೇತ್ರವಾಗಿ ಪರಿಣಮಿಸಿದೆ. 2018ರಲ್ಲಿ ಬಿಜೆಪಿಯನ್ನು 19,109 ಮತಗಳ ಅಂತರದಿಂದ ಸೋಲಿಸುವಲ್ಲಿ ಖಾದರ್ ಯಶಸ್ವಿಯಾಗಿದ್ದರು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಖಾದರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚಿನ ದಿನಗಳಲ್ಲಿ ತಮ್ಮ ವಿರುದ್ಧ ಹಲವಾರು ಆರೋಪಗಳು ಬಂದರೂ, ಖಾದರ್ ಅವರು ತಮ್ಮ ವಿರುದ್ಧ ನಡೆಯುವ ಯಾವುದೇ ರೀತಿಯ ಪರಿಸ್ಥಿತಿಯನ್ನು ಶಾಂತ ಮತ್ತು ಸಂಯಮದಲ್ಲಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿ ಮಂಗಳೂರು ಕ್ಷೇತ್ರದಲ್ಲಿ ಖಾದರ್ ವಿರುದ್ಧ ಬಿಜೆಪಿ ಸಂತೋಷ್ ಕುಮಾರ್ ಬೋಳಿಯಾರ್, ಸತೀಶ್ ಕುಂಪಲ ಮತ್ತು ಶರಣ್ ಪಂಪ್‌ವೆಲ್ ಸೇರಿದಂತೆ ಇತರ ಸಂಭಾವ್ಯರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಕ್ಷೇತ್ರದ ಶಾಸಕರಾಗಿ ದಾಖಲೆಯ ನಾಲ್ಕನೇ ಅವಧಿಯ ಮೇಲೆ ಕಣ್ಣಿಟ್ಟಿರುವ ಖಾದರ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.

ಇನ್ನುಳಿದಂತೆ ಮಂಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ಗೆ ಶಕ್ತಿಯೇ ಇಲ್ಲ. ಹೀಗಿದ್ದರೂ ಎಸ್‌ಡಿಪಿಐ ಕೆಲವೆಡೆ ಬಹಳ ಶಕ್ತಿಯುತವಾಗಿದ್ದು, ಇದು ಇತರ ಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್‌ಗೆ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ. ಒಟ್ಟಾರೆಯಾಗಿ ಸದ್ಯ ಇಲ್ಲಿ ಶಾಸಕ ಯು.ಟಿ ಖಾದರ್ ಸತತ ಗೆಲುವು ಸಾಧಿಸಿ ಬಿಜೆಪಿಯ ನಿದ್ದೆಗೆಡಿಸಿದ್ದಾರೆ. ಖಾದರ್ ವಿರುದ್ಧ ಕಣಕ್ಕಿಳಿಸಿ ಗೆಲುವು ಪಡೆಯುವಂತಹ ಸೂಕ್ತ ಹಾಗೂ ಪ್ರಭಾವೀ ನಾಯಕನ ಕೊರತೆ ವಿಪಕ್ಷಗಳಲ್ಲಿ ಎದ್ದುಕಾಣುತ್ತಿದೆ. ಈ ಸವಾಲು ಸವಾಲನ್ನು ಹೇಗೆ ಎದುರಿಸುತ್ತೆ ಪ್ರತಿಪಕ್ಷಗಳು ಕಾದು ನೋಡಬೇಕಷ್ಟೇ.

Share This Article