ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರಬಿಂದುವಾಗಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ (Mangalore South Assembly Constituency) 1994ರಿಂದ ಬಿಜೆಪಿಯ ಭದ್ರಕೋಟೆಯಾಗಿತ್ತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು 2013ರ ಚುನಾವಣೆಯಲ್ಲಿ ಕಾಂಗ್ರೆಸ್ (Congress) ತನ್ನ ಕೈವಶ ಮಾಡಿಕೊಂಡಿತ್ತು. ಇದಾದ ಬಳಿಕ 2018ರ ಚುನಾವಣೆಯಲ್ಲಿ ವೇದವ್ಯಾಸ್ ಕಾಮತ್ (Vedyasa Kamath) ಗೆಲುವಿನ ಮೂಲಕ ಕಮಲ ಪಾಳಯ ಮತ್ತೆ ಗೆದ್ದಿದೆಯಾದರೂ, ಈ ಬಾರಿಯ ಚುನಾವಣೆ ಅಷ್ಟು ಸುಲಭವಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ (BJP) ಮಧ್ಯೆ ಈ ಬಾರಿ ಟಫ್ ಫೈಟ್ ಇರೋದಂತೂ ಪಕ್ಕಾ.
ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 1957ರಿಂದ 2013ರ ವರೆಗೆ ನಡೆದ 14 ವಿಧಾನಸಭೆ ಚುನಾವಣೆಯಲ್ಲಿ ಒಂದು ಬಾರಿ ಜೈನ ಸಮುದಾಯದ ಧನಂಜಯ ಕುಮಾರ್ (1983) ಬಿಜೆಪಿಯಿಂದ ಗೆದ್ದದ್ದು ಬಿಟ್ಟರೆ ಉಳಿದೆಲ್ಲ ಚುನಾವಣೆಯಲ್ಲಿ ಕೊಂಕಣಿ ಭಾಷಿಗರೇ ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ.
Advertisement
ಕಾಂಗ್ರೆಸ್‌ನಿಂದ ಆಯ್ಕೆಯಾದ ವೈಕುಂಠ ಬಾಳಿಗ (1957), ಎಂ. ಶ್ರೀನಿವಾಸ ನಾಯಕ್ (1962), ಎಂ.ಎಸ್. ನಾಯಕ್ (1967) ಹಾಗೂ ನಾಲ್ಕು ಬಾರಿ ನಿರಂತರವಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿಯ ಎನ್. ಯೋಗೀಶ್ ಭಟ್ (1994, 1999, 2004, 2008) ಹಾಗೂ ಡಿ. ವೇದವ್ಯಾಸ್ ಕಾಮತ್ (2018) ಜಿಎಸ್‌ಬಿ ಸಮುದಾಯದ ಮುಖಂಡರಾಗಿದ್ದು, ಕೊಂಕಣಿ ಭಾಷಿಗರು. ಕಾಂಗ್ರೆಸ್‌ನಿಂದ ಆಯ್ಕೆಯಾದ ಎಲ್.ಸಿ. ಪಾಯಸ್ಸ್ (1952), ಎಡ್ಡಿ ಸಲ್ಡಾನ್ಹಾ (1972), ಪಿ.ಎಫ್. ರೊಡ್ರಿಗಸ್ (1978), ಬ್ಲೇಸಿಯಸ್ ಎಂ. ಡಿ’ಸೋಜಾ (1985, 1989), ಜೆ.ಆರ್. ಲೋಬೋ (2013) ಕ್ರೈಸ್ತ ಸಮುದಾಯದ ಮುಖಂಡರಾಗಿದ್ದು, ಅವರು ಕೂಡ ಕೊಂಕಣಿ ಭಾಷಿಗರು. ಇದನ್ನೂ ಓದಿ: ಅವಘಡ ತಪ್ಪಿಸಲು ರೈಲನ್ನೇ ನಿಲ್ಲಿಸಿದ ದಿಟ್ಟ ಮಹಿಳೆ!
Advertisement
Advertisement
ಈ ಕ್ಷೇತ್ರವು ಕೊಂಕಣಿ ಭಾಷೆ ಮಾತನಾಡುವ ಕ್ರೈಸ್ತ ಸಮುದಾಯ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ (GSB) ಸಮುದಾಯದ ಅತೀ ಹೆಚ್ಚು ಮತದಾರರನ್ನು ಹೊಂದಿದ್ದು ಈ ಕಾರಣದಿಂದಾಗಿಯೇ ರಾಜಕೀಯ ಪಕ್ಷಗಳು ಕೂಡ ಟಿಕೆಟ್ ಹಂಚಿಕೆ ವೇಳೆ ಇಲ್ಲಿ ಕೊಂಕಣಿ ಸಮುದಾಯದ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾ ಬಂದಿವೆ.
Advertisement
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 1994ರಿಂದ ಸತತ ನಾಲ್ಕು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಹಿರಿಯ ನಾಯಕ ಎನ್.ಯೋಗೀಶ್ ಭಟ್‌ಗೆ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಆಘಾತ ನೀಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಜಾನ್ ರಿಚರ್ಡ್ ಲೋಬೋ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದು ಬಿಜೆಪಿಗೆ ಭಾರೀ ಮುಜುಗರ ಉಂಟು ಮಾಡಿತ್ತು. ಆದರೆ ಈ ಸೋಲಿನಿಂದ ಪಾಠ ಕಲಿತು ಎಚ್ಚೆತ್ತ ಕಮಲಪಾಳಯ 2018ರ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಬದಲಾಯಿಸಿ ಅದೃಷ್ಟ ಪರೀಕ್ಷೆಗಿಳಿದಿತ್ತು. ನೂತನ ಅಭ್ಯರ್ಥಿ ವೇದವ್ಯಾಸ್ ಕಾಮತ್‌ರನ್ನು ಕಣಕ್ಕಿಳಿಸಿದ್ದ ಬಿಜೆಪಿ ಮಂಗಳೂರು ದಕ್ಷಿಣ ಕ್ಷೇತ್ರವನ್ನು ಮರಳಿ ಪಡೆದಿತ್ತು.
ಬಿಜೆಪಿ ಈ ಬಾರಿ ತನ್ನ ಅಭ್ಯರ್ಥಿ ಬದಲಾಯಿಸುವ ಸಾಹಸಕ್ಕೆ ಕೈಹಾಕುವ ಸಾಧ್ಯತೆ ಇಲ್ಲ. ಈ ಬಾರಿಯೂ ಮಂಗಳೂರು ದಕ್ಷಿಣ ಕ್ಷೇತ್ರದ ಹಾಲಿ ಶಾಸಕ ವೇದವ್ಯಾಸ್ ಕಾಮತ್ ಬಿಜೆಪಿ ಟಿಕೆಟ್ ಪಡೆಯುವುದು ಬಹುತೇಕ ಖಚಿತ. ಅಲ್ಲದೇ ಬಿಜೆಪಿಯಿಂದಲೂ ಜಿಎಸ್‌ಬಿ ಬ್ರಾಹ್ಮಣರು ಅಂದರೆ ಗೌಡ ಸಾರಸತ್ವ ಬ್ರಾಹ್ಮಣರಿಗೆ ಒಂದು ಕ್ಷೇತ್ರ ಮೀಸಲಿಡಲಾಗುತ್ತದೆ. ಇದು ಬಹುತೇಕ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿರುತ್ತದೆ. ವೇದವ್ಯಾಸ್ ಕಾಮತ್ ಕೂಡಾ ಅದೇ ಸಮುದಾಯದವರು. ಅಲ್ಲದೇ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ, ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಾರೆ ಹೀಗಿರುವಾಗ ಬಿಜೆಪಿಗೆ ವೇದವ್ಯಾಸ್ ಕಾಮತ್‌ಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ ಎನ್ನೋದು ಪಕ್ಷದೊಳಗಿನ ಲೆಕ್ಕಾಚಾರ.
ದಕ್ಷಿಣ ಕನ್ನಡದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿರುವ ಕಾಂಗ್ರೆಸ್‌ನಲ್ಲಿ ಈ ಕ್ಷೇತ್ರದಿಂದ ಕಣಕ್ಕಿಳಿಯಲು ಇಬ್ಬರು ಆಕಾಂಕ್ಷಿಗಳಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಒಂದೇ ಸಮುದಾಯದವರು ಎಂಬುವುದು ಮತ್ತೊಂದು ವಿಶೇಷ. ಕಾಂಗ್ರೆಸ್‌ನಲ್ಲಿ ಎರಡು ಟಿಕೆಟ್‌ಗಳನ್ನು ಕ್ರಿಶ್ಚಿಯನ್ ಸಮುದಾಯದ ನಾಯಕರಿಗೆಂದೇ ಮೀಸಲಿಡುತ್ತಾರೆ. ಅದರಲ್ಲಿ ಮಂಗಳೂರು ದಕ್ಷಿಣ ಕೂಡಾ ಒಂದು. ಈ ಕಾರಣಕ್ಕಾಗಿಯೇ ಕ್ರಿಶ್ಚಿಯನ್ ಸಮುದಾಯದವರಿಗೆ ಇಲ್ಲಿ ಟಿಕೆಟ್ ಸಿಗುತ್ತೆ. ಆದರೆ ಈ ಬಾರಿ ಅಭ್ಯರ್ಥಿಗಳ ಆಯ್ಕೆಯೇ ಕಾಂಗ್ರೆಸ್‌ಗೆ ಕಗ್ಗಂಟಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದಾರೆ. ಈ ಹಿಂದೆ 2008ರಲ್ಲಿ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 2013ರಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಹಿರಿಯ ನಾಯಕ ಜಾನ್ ರಿಚರ್ಡ್ ಲೋಬೋ ಕೂಡಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ತಮ್ಮ ಮೌನ ಕಾರ್ಯಶೈಲಿಯಿಂದಲೇ ಗುರುತಿಸಿಕೊಂಡಿರುವ ಲೋಬೋ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ. ಈ ನಡುವೆ ಕಾಂಗ್ರೆಸ್ ನಿಂದ ಬಿಲ್ಲವ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದ್ದು,ಬಿಲ್ಲವ ಮುಖಂಡ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಯುವ ವಕೀಲ ಪದ್ಮರಾಜ್ ಆರ್ ಅವರ ಹೆಸರು ಕೇಳಿ ಬಂದಿದೆ. ಈ ಬಾರಿ ಕ್ರೈಸ್ತ ಅಭ್ಯರ್ಥಿಯನ್ನು ಕೈ ಬಿಟ್ಟು ಬಿಲ್ಲವ ಅಭ್ಯರ್ಥಿ ಪದ್ಮರಾಜ್ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ ರಿಸಲ್ಟ್ ಸಿಕ್ಕಿದೆ.
ಇನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಶಕ್ತಿಯೇ ಇಲ್ಲ. ಎಸ್‌ಡಿಪಿಐಗೆ ಇಲ್ಲಿ ಗೆಲ್ಲುವಂತಹ ಸಾಮರ್ಥ್ಯ ಇಲ್ಲ. ಆದರೆ ಸೋಲಿಸುವ ಹಾಗೂ ಫಲಿತಾಂಶ ಬದಲಾಯಿಸುವ ತಾಕತ್ತು ಹೊಂದಿದೆ ಎಂಬುವುದು ಉಲ್ಲೇಖನೀಯ. ಹೀಗಾಗಿ ಎಸ್‌ಡಿಪಿಐ ಸ್ಪರ್ಧೆ ಇತರ ಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್‌ಗೆ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಈ ಬಾರಿ ಯಾರು ಈ ಕ್ಷೇತ್ರದಿಂದ ಆರಿಸಿ ಬರ್ತಾರೆ ಎನ್ನುವುದು ಕುತೂಹಲದ ಯಕ್ಷಪ್ರಶ್ನೆಯಾಗಿದೆ.