ಬೆಂಗಳೂರು: ಕಿಚ್ಚ ಸುದೀಪ್ (Sudeep) ಸಿಎಂ ಬೊಮ್ಮಾಯಿ (CM Bommai) ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದರಿಂದ ಸಹಜವಾಗಿಯೇ ಬಿಜೆಪಿಗೆ ಒಂದಿಷ್ಟು ಲಾಭ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಪ್ರಭಾವಿ ವಾಲ್ಮೀಕಿ ಸಮುದಾಯದ (Valmiki Community) ಮತಗಳ ಮೇಲೆ ಕಣ್ಣಿಟ್ಟಿರುವ ಸಿಎಂ ಬೊಮ್ಮಾಯಿ ಚುನಾವಣೆಯಲ್ಲಿ (Karnataka Election) ಸುದೀಪ್ ನೆರವು ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ರಾಜ್ಯದಲ್ಲಿ ಬಿಜೆಪಿ ಪರವಾಗಿ ಜನಸೇನಾನಿ, ತೆಲುಗು ನಟ ಪವನ್ ಕಲ್ಯಾಣ್ ಪ್ರಚಾರಕ್ಕೆ ಬರುವ ಸಾಧ್ಯತೆಯಿದೆ. ಈ ಸಂಬಂಧ ಪವನ್ ಕಲ್ಯಾಣ್ ಜೊತೆ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಇಂದು ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಖಾಸಗಿ ವಿಡಿಯೋ ಲೀಕ್ ಬೆದರಿಕೆ ಪತ್ರ ಬರೆದದ್ದು ಚಿತ್ರರಂಗದವರೆ : ಸುದೀಪ್
ಲೆಕ್ಕಾಚಾರ ಏನು?
ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಜನಸಂಖ್ಯೆ 50 ಲಕ್ಷಕ್ಕೂ ಹೆಚ್ಚು ಇದ್ದು ಬೀದರ್‌ನಿಂದ ಚಾಮರಾಜನಗರದವರೆಗೂ ವಾಲ್ಮೀಕಿ ಸಮುದಾಯದವರು ನೆಲೆಸಿದ್ದಾರೆ. 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮುದಾಯದ ಪ್ರಭಾವ ಇದ್ದು 15 ಮೀಸಲು ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮುದಾಯವೇ ನಿರ್ಣಾಯಕ.
ಪ್ರತಿ ಕ್ಷೇತ್ರಗಳಲ್ಲೂ ಅಂದಾಜು 15 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ. ಸಮುದಾಯದ ಜೊತೆಗೆ ಕಿಚ್ಚನ ಅಭಿಮಾನಿಗಳಿಂದಲೂ ಬಿಜೆಪಿಗೆ ಬೆಂಬಲ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಪವನ್ ಕಲ್ಯಾಣ್ ಯಾಕೆ?
ತೆಲುಗು ಭಾಷಿಕರನ್ನು ಸೆಳೆಯಲು ಪವನ್ ಕಲ್ಯಾಣ್ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸಲಿದೆ. ರಾಜ್ಯದ ಬೆಂಗಳೂರು ನಗರ, ಗ್ರಾಮೀಣ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್, ಕಲಬುರಗಿಯ ಒಟ್ಟು 60 ಕ್ಷೇತ್ರಗಳಲ್ಲಿ ತೆಲುಗು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ತೆಲುಗು ಭಾಷಿಕ ಮತದಾರರೇ ನಿರ್ಣಾಯಕರಾಗಿರುವ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಕರೆಸಲು ಬಿಜೆಪಿ ಮುಂದಾಗಿದೆ.