ಕಲಬುರಗಿ: ಇದು ನಂಬಿಕೆಯೋ, ಪ್ರತೀತಿಯೋ ಅಥವಾ ಅಚ್ಚರಿಯೋ ಗೊತ್ತಿಲ್ಲ. ಆದರೂ ನಂಬಲೇಬೇಕಾದ ಸಂಗತಿ. ಜಿಲ್ಲೆಯ ಚಿಂಚೋಳಿ (Chincholi) ವಿಧಾನಸಭಾ ಚುನಾವಣೆಯಲ್ಲಿ (Election) ಯಾವ ಪಕ್ಷ ಗೆಲ್ಲುವುದೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎನ್ನುವ ಪ್ರತೀತಿ ಹಲವು ದಶಕಗಳಿಂದಲೂ ನಿಜವಾಗಿದೆ.
1957ರಲ್ಲಿ ವೀರೇಂದ್ರ ಪಾಟೀಲ್ ಕಾಂಗ್ರೆಸ್ (Congress) ಪಕ್ಷದಿಂದ ಆಯ್ಕೆಯಾದಾಗಿನಿಂದ ಇಂದು ಬಿಜೆಪಿ (BJP) ಶಾಸಕರಾದ ಡಾ.ಅವಿನಾಶ್ ಜಾಧವ್‍ವರೆಗೂ ಇದು ನಿಜವಾಗಿದೆ. 1957ರಿಂದ 1967ರ ವರೆಗೆ ನಡೆದ ಚುನಾವಣೆಯಲ್ಲಿ ವೀರೇಂದ್ರ ಪಾಟೀಲರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಹ್ಯಾಟ್ರಿಕ್ ಜಯಗಳಿಸಿದ್ದರು. ಆಗ ಕ್ರಮವಾಗಿ ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ ಸಿ.ಎಂ ಆಗಿದ್ದರು. ಬಳಿಕ 1972ರಿಂದ 1983ರ ವರೆಗೆ ದೇವೇಂದ್ರಪ್ಪ ಘಾಳೆಪ್ಪ ಕಾಂಗ್ರೆಸ್‍ನಿಂದ ಆಯ್ಕೆಯಾಗಿ, ಡಿ.ದೇವರಾಜ ಅರಸು, ಆರ್.ಗುಂಡೂರಾವ್ ಸಿಎಂ ಆಗಿದ್ದರು. ಇದನ್ನೂ ಓದಿ: ಎರಡೇ ಕುಟುಂಬಗಳಿಗೆ ಮಣೆಹಾಕುತ್ತಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ
Advertisement
Advertisement
1989ರಲ್ಲಿ ಕಾಂಗ್ರೆಸ್‍ನ ವೀರೇಂದ್ರ ಪಾಟೀಲ್ ಚಿಂಚೋಳಿಯಿಂದ ಆಯ್ಕೆಯಾಗಿ ಅವರೇ ಸಿಎಂ ಆದರು. 1994ರಲ್ಲಿ ದಳದಿಂದ ವೈಜನಾಥ ಪಾಟೀಲ್ ಶಾಸಕರಾದರೆ, ದೇವೇಗೌಡರು ಸಿಎಂ ಆಗಿ ಅಧಿಕಾರ ಹಿಡಿಯುತ್ತಾರೆ. 1999ರಲ್ಲಿ ವೀರೇಂದ್ರ ಪಾಟೀಲ್ ಪುತ್ರ ಕೈಲಾಸನಾಥ ಪಾಟೀಲ್ ಕಾಂಗ್ರೆಸ್‍ನಿಂದ ಆಯ್ಕೆಯಾಗಿ, ಎಸ್.ಎಂ.ಕೃಷ್ಣ ಸಿಎಂ ಆಗಿದ್ದರು.
Advertisement
2004ರಲ್ಲಿ ಈ ಕ್ಷೇತ್ರ ಜೆಡಿಎಸ್ (JDS) ಪಾಲಾಯಿತು. ಇಲ್ಲಿ ದಳದಿಂದ ವೈಜನಾಥ ಪಾಟೀಲ್ ಶಾಸಕರಾದರೆ, ಅದೇ ಪಕ್ಷದಿಂದ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುತ್ತಾರೆ. 2008ರಲ್ಲಿ ಮೀಸಲು ಮತಕ್ಷೇತ್ರವಾದ ಬಳಿಕ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಗೆದ್ದಿದ್ದು. ಆಗ ಸುನೀಲ್ ವಲ್ಯಾಪುರೆ ಶಾಸಕರಾದರೆ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದರು. 2013ರಲ್ಲಿ ಡಾ.ಉಮೇಶ್ ಜಾಧವ್ ಕಾಂಗ್ರೆಸ್‍ನಿಂದ ಆಯ್ಕೆಯಾದರೆ, ಸಿದ್ದರಾಮಯ್ಯ ಸಿಎಂ ಆಗಿದ್ದರು.
Advertisement
ಬೈ ಎಲೆಕ್ಷನ್‍ನಲ್ಲೂ ನಿಜವಾಯ್ತು!
2018ರಲ್ಲಿ ಕಾಂಗ್ರೆಸ್‍ನಿಂದ ಡಾ.ಉಮೇಶ್ ಜಾಧವ್ ಎರಡನೇ ಬಾರಿಗೆ ಆಯ್ಕೆಯಾದರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದರು. ಶಾಸಕರಾಗಿದ್ದ ಜಾಧವ್ ಅವರು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾದರು. ಬಳಿಕ ಇಲ್ಲಿ ಉಪಚುನಾವಣೆ ನಡೆದು ಬಿಜೆಪಿಯಿಂದ ಜಾಧವ್ ಪುತ್ರ ಡಾ.ಅವಿನಾಶ್ ಆಯ್ಕೆಯಾದರು. ಅಚ್ಚರಿ ಎಂದರೆ, ಸರಕಾರ ಪತನವಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಅದಕ್ಕಾಗಿ ಈ ಕ್ಷೇತ್ರವೆಂದರೆ ರಾಜಕೀಯ ಪಕ್ಷಗಳಿಗೆ ಅಚ್ಚುಮೆಚ್ಚು. ಈ ಕ್ಷೇತ್ರದಲ್ಲಿ ಗೆಲ್ಲಲು ಪೈಪೋಟಿ ನಡೆಸುತ್ತವೆ. ಇದನ್ನೂ ಓದಿ: ರಾಜ್ಯಕ್ಕೆ ಇಬ್ಬರು ಸಿಎಂಗಳನ್ನ ಕೊಟ್ಟ ಹೆಗ್ಗಳಿಕೆ ಶಿಗ್ಗಾಂವಿ ಕ್ಷೇತ್ರದ್ದು