ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Vidhan Sabha Election) ಕೆಲ ತಿಂಗಳಿದ್ದರೂ ಈಗಲೇ ಜೆಡಿಎಸ್(JDS) 93 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, 2023ರ ಚುನಾವಣೆಗೆ ಜೆಡಿಎಸ್ ಪಟ್ಟಿ ಬಿಡುಗಡೆ ಬಗ್ಗೆ ಹಲವರು ಪ್ರಶ್ನೆ ಕೇಳಿದ್ದರು. ಈ ಕಾರಣಕ್ಕೆ ಇಂದು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.
ಜಿ.ಟಿ.ದೇವೇಗೌಡರಿಗೆ ಚಾಮುಂಡೇಶ್ವರಿಯಲ್ಲಿ ಟಿಕೆಟ್ ಸಿಕ್ಕಿದರೆ ಹುಣಸೂರಿನಲ್ಲಿ ಜಿಟಿಡಿ ಪುತ್ರ ಹರೀಶ್ ಗೌಡಗೆ ಸಿಕ್ಕಿದೆ. ಚನ್ನಪಟ್ಟಣದಿಂದ ಎಚ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ, ರಾಮನಗರದಿಂದ ನಿಖಿಲ್ ಸ್ಪರ್ಧಿಸಲಿದ್ದಾರೆ.
ಹಾಸನ ಜಿಲ್ಲೆಯ ಟಿಕೆಟ್ ಘೋಷಣೆಯಾಗಿಲ್ಲ. ಈ ಜಿಲ್ಲೆಯ ಟಿಕೆಟ್ ಹಂಚಿಕೆಯ ಅಧಿಕಾರವನ್ನು ದೇವೇಗೌಡ ಮತ್ತು ರೇವಣ್ಣಗೆ ಕೊಟ್ಟಿದ್ದಾರೆ.
ಪಂಚರತ್ನ ರಥಯಾತ್ರೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಕುಮಾರಸ್ವಾಮಿ ಗೈರಾಗಿದ್ದು, ಉಪ ನಾಯಕ ಬಂಡೆಪ್ಪ ಕಾಶಂಪೂರ್ ನೇತೃತ್ವದಲ್ಲಿ ಸದನದ ಚರ್ಚೆಯಲ್ಲಿ ಭಾಗವಹಿಸಲು ಜೆಡಿಎಸ್ ನಿರ್ಧಾರ ತೆಗೆದುಕೊಂಡಿದೆ.