ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್

Public TV
1 Min Read
CHIKKABALLAPUR MASS MARRIAGE 1

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಚುನಾವಣಾ ರಣಕಣ ರಂಗೇರಿದೆ. ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷಗಳ ಮುಖಂಡರು ಹೊಸ ಹೊಸ ಆಮಿಷ ನೀಡಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ವಧುವಿಗೆ ಸೀಮೆಹಸು, ಫ್ರೀ ಸ್ಕೀಂ, ವರನಿಗೆ ಕೊಳವೆ ಬಾವಿಯ ಆಫರ್. ಅಷ್ಟೇ ಅಲ್ಲದೇ ಮದುವೆಗೆ ಬಂದವರಿಗೆ ಭರ್ಜರಿ ಬಾಡೂಟ ಬಡಿಸಲಾಗಿದೆ.

CHIKKABALLAPUR MASS MARRIAGE 6

ಹೌದು, ಬಾಗೇಪಲ್ಲಿ ಕಾಂಗ್ರೇಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (Congress MLA S N Subba Reddy), ಪ್ರತಿವರ್ಷದಂತೆ ಈ ವರ್ಷವೂ 501 ಉಚಿತ ಸಾಮೂಹಿಕ ಮದುವೆ (Mass Marriage) ಸಮಾರಂಭವನ್ನು ಹಮ್ಮಿಕೊಂಡಿದ್ರು. ಶಾಸಕರ ಪುತ್ರ ಅಭಿಷೇಕ ಸೇರಿದಂತೆ 212 ಜೋಡಿಗಳು ನವಜೀವನಕ್ಕೆ ಕಾಲಿಟ್ರು. ನವ ವಿವಾಹಿತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಶುಭ ಹಾರೈಸಿದ್ರು.

CHIKKABALLAPUR MASS MARRIAGE

ಸಾಮೂಹಿಕ ಕಲ್ಯಾಣಕ್ಕೆ ಯುವಕ-ಯುವತಿಯರನ್ನು ಸೆಳೆಯಲು ಶಾಸಕ ಸುಬ್ಬಾರೆಡ್ಡಿ ಮಾಸ್ಟರ್ ಪ್ಲಾನ್ ರೂಪಿಸಿದ್ರು. ವಧುವಿಗೆ 50 ಸಾವಿರ ರೂಪಾಯಿ ಮೌಲ್ಯದ ಒಂದು ಸೀಮೆಹಸು ಗಿಫ್ಟ್ ಆಗಿ ಕೊಟ್ರು. ವರನಿಗೆ ಗಂಗಾಕಲ್ಯಾಣ ಯೋಜನೆಯಡಿ ಬೋರ್ ವೆಲ್ (Borewell), ಜಮೀನು ಮಂಜೂರು ಆಫರ್ ನೀಡಿದ್ರು. ಇದರಿಂದ ನೂರಾರು ಜನ ಮದುವೆಗೆ ಅರ್ಜಿ ಸಲ್ಲಿಸಿದ್ರು. 212 ಜೋಡಿಗಳಿಗೆ ಮಾತ್ರ ಮದುವೆಗೆ ಅವಕಾಶ ನೀಡಲಾಯಿತು. ಇದನ್ನೂ ಓದಿ: ಹೆಚ್‌ಡಿಕೆ ಸಿಎಂ ಆಗಲು ಕಾಂಗ್ರೆಸ್ ತ್ಯಾಗ ಮಾಡಿತ್ತು – ಡಿಕೆಶಿ

CHIKKABALLAPUR MASS MARRIAGE 4

ಸಾಮೂಹಿಕ ಮದುವೆಯಲ್ಲಿ ಬಾಲ್ಯ ವಿವಾಹ ನಡೆಯಬಹುದು ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಪ್ರತಿಯೊಂದು ಜೋಡಿಯ ದಾಖಲೆ ಹಾಗೂ ಮದುವೆ ನೋಂದಣಿ ಪರಿಶೀಲಿಸಿ, ಕಂಕಣ ಭಾಗ್ಯಕ್ಕೆ ಅವಕಾಶ ನೀಡಲಾಯ್ತು. ಸಾಮೂಹಿಕ ವಿವಾಹಗಳಿಗೆ ಬಂದ ಜನರಿಗೆ ದಾರಿಯುದ್ದಕ್ಕೂ ಉಚಿತ ಎಳನೀರು, ಜ್ಯೂಸ್, ಐಸ್ ಕ್ರೀಂ, ಬಾಳೆಹಣ್ಣು ವಿತರಿಸಿ ಭರ್ಜರಿ ಬಾಡೂಟ ಉಣಬಡಿಸಿದ್ರು.

CHIKKABALLAPUR MASS MARRIAGE 5

ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗಾಗಿ ರಾಜಕೀಯ ನಾಯಕರು ಮುಂದಾಗಿದ್ದು, ಜನರಿಗೆ ಉಚಿತ ಉಡುಗೊರೆಗಳ ಮಹಾಪೂರವನ್ನೇ ನೀಡಿ ರಣತಂತ್ರ ರೂಪಿಸ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *