ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ

Public TV
2 Min Read
sr bommai jagadish shettar

ಹುಬ್ಬಳ್ಳಿ: ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಹುಬ್ಬಳ್ಳಿ – ಧಾರವಾಡ (Hubballi – Dharwad) ಸೆಂಟ್ರಲ್ ವಿಧಾನಸಭಾ ಕ್ಷೇತ್ರ ನೀಡಿದೆ.

ಸದ್ಯ ಬಿಜೆಪಿ (BJP) ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಸತತವಾಗಿ ಜಗದೀಶ್ ಶೆಟ್ಟರ್ (Jagadish Shettar) ಗೆಲ್ಲುತ್ತಾ ಬಂದಿದ್ದಾರೆ. ಇದಕ್ಕೂ ಮೊದಲು ಈ ಕ್ಷೇತ್ರ ಹುಬ್ಬಳ್ಳಿ-ಧಾರವಾಡ ಗ್ರಾಮೀಣ ಕ್ಷೇತ್ರವಾಗಿತ್ತು. ಆಗ ಎಸ್.ಆರ್ ಬೊಮ್ಮಾಯಿ (S. R. Bommai) ಅವರು ಇದೇ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

bjp flag

ಎಸ್.ಆರ್ ಬೊಮ್ಮಾಯಿ: ಹಾವೇರಿ ಜಿಲ್ಲೆಯ ಶಿಗ್ಗಾಂವ್‌ ತಾಲೂಕಿನ ಕಾರಡಗಿಯಲ್ಲಿ ಜನಿಸಿದ ಎಸ್.ಆರ್ ಬೊಮ್ಮಾಯಿಯವರು ಸದ್ಯ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ (Basavarj Bommai) ಅವರ ತಂದೆ. ಎಸ್.ಆರ್ ಬೊಮ್ಮಾಯಿಯವರು 1988ರ ಆಗಸ್ಟ್ 12 ರಿಂದ 1989ರ ಏಪ್ರಿಲ್ 21ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಇಂದಿನ ಸೆಂಟ್ರಲ್ ಕ್ಷೇತ್ರ ಅಂದಿನ ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರವಾಗಿತ್ತು. 1962ರಲ್ಲಿ ತಮ್ಮ ಕ್ಷೇತ್ರ ಬದಲಾಯಿಸಿದ ಎಸ್‌.ಆರ್‌.ಬೊಮ್ಮಾಯಿ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಮತ್ತೆ 1967ರಲ್ಲಿ ಸ್ಪರ್ಧಿಸಿದ ಎಸ್‌.ಆರ್‌.ಬೊಮ್ಮಾಯಿ ಅದೇ ಕುಂದಗೋಳದಿಂದ 20,291 ಮತಗಳಿಂದ ಗೆಲುವು ಸಾಧಿಸಿದರು. 1978ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಜೆಎನ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಸ್‌.ಆರ್‌.ಬೊಮ್ಮಾಯಿ ಗೆಲುವು ಸಾಧಿಸಿದರು. ನಂತರ 1983, 85ರ ಚುನಾವಣೆಯಲ್ಲಿಯೂ ಜಯಗಳಿಸಿದ್ದಾರೆ.

1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌.ಸಾಂಡ್ರಾ ವಿರುದ್ಧ ಸೋಲು ಅನುಭವಿಸಿದರು. 1985ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದ ಎಸ್.ಆರ್.ಬೊಮ್ಮಾಯಿ ರಾಜ್ಯದ 11ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಜಗದೀಶ್ ಶೆಟ್ಟರ್: ಹುಬ್ಬಳ್ಳಿ ಗ್ರಾಮೀಣ ಅಂದರೆ ಇಂದಿನ ಸೆಂಟ್ರಲ್ ಕ್ಷೇತ್ರದಿಂದ 1994 ರಲ್ಲಿ ಬಿಜೆಪಿಯಿಂದ ರಾಜಕೀಯ ಆರಂಭಿಸಿದ ಶೆಟ್ಟರ್ ಅಂದಿನಿಂದ ಇಂದಿನವರೆಗೆ ಸತತವಾಗಿ ಆರು ಬಾರಿ ಜಯಗಳಿಸಿದ್ದಾರೆ. ರಾಜ್ಯದ 27ನೇ ಮುಖ್ಯಮಂತ್ರಿಯಾಗಿ 2012ರ ಜುಲೈ 12 ರಿಂದ 2013 ಮೇ 13ರ ತನಕ ಆಡಳಿತ ನಡೆಸಿದ್ದಾರೆ.

hubballi jagadish shettar

1990ರಲ್ಲಿ ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಶೆಟ್ಟರ್‌ 1994ರಲ್ಲಿ ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದರು. ಅದೇ ವರ್ಷ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿ ಹುಬ್ಬಳ್ಳಿ ಗ್ರಾಮಾಂತರ ಪ್ರದೇಶದ ಶಾಸಕರಾದರು. ನಂತರ 1999, 2004, 2008, 2012, 2018ರಲ್ಲಿ ಸತತವಾಗಿ ಇದೇ ಸೆಂಟ್ರಲ್ ಕ್ಷೇತ್ರದಿಂದ ಶೆಟ್ಟರ್ ಬಿಜೆಪಿಯಿಂದಲೇ ಜಯಗಳಿಸುತ್ತಾ ಬಂದಿದ್ದಾರೆ. ಇದನ್ನೂ ಓದಿ: ಆಮ್ ಆದ್ಮಿ ಪಕ್ಷದಿಂದ ಯುವ ನಿರ್ದೇಶಕ, ನಟನಿಗೆ ಟಿಕೆಟ್ ಘೋಷಣೆ

ಹುಬ್ಬಳ್ಳಿ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಲ್ಲಿ 1,21,731 ಪುರುಷರು ಇದ್ದರೆ, 1,20,972 ಮಹಿಳೆಯರು, 33 ಇತರೆ ಸೇರಿದಂತೆ ಒಟ್ಟು 2,42,736 ಮತದಾರರು ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *