ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದುತ್ವ, ಮೋದಿ ಅಲೆ, ಜಾತಿ, ಧರ್ಮ ದಂಗಲ್ ನಡುವೆ ಯಾವುದೇ ಪ್ರಭಾವವೂ ಇಲ್ಲದೇ 2018ರ ಚುನಾವಣೆಯಲ್ಲಿ ಹಳಿಯಾಳ (Haliyal) ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್.ವಿ ದೇಶಪಾಂಡೆ (RV Deshpande) 8ನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 25 ವರ್ಷಗಳ ಕಾಲ ಸಚಿವರಾಗಿ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಮಾಜಿ ಸಚಿವ ಆರ್.ವಿ ದೇಶಪಾಂಡೆ ಪ್ರತಿನಿಧಿಸುವ ಕ್ಷೇತ್ರ ಸಾಕಷ್ಟು ಕುತೂಹಲ, ಜಿದ್ದಾಜಿದ್ದಿಗೆ ಈ ಬಾರಿ ಸಾಕ್ಷಿಯಾಗಲಿದೆ.
ಅತ್ಯುತ್ತಮ ಶಾಸಕ ಪ್ರಶಸ್ತಿ ಗರಿ: ಆರ್.ವಿ.ದೇಶಪಾಂಡೆ 1983 ರಿಂದ ಸತತವಾಗಿ ಶಾಸಕರಾಗಿದ್ದಾರೆ. ಮೊದಲ ವರ್ಷದಲ್ಲೇ ಸಚಿವರೂ ಆಗಿದ್ದು ವಿಶೇಷ. 1994 ರವರೆಗೆ 4 ಬಾರಿ ಜನತಾ ಪರಿವಾರದಿಂದ ಗೆಲುವು ಸಾಧಿಸಿದ್ದ ಅವರು 1999ರಲ್ಲಿ ಕಾಂಗ್ರೆಸ್ (Congress) ಸೇರಿದರು. ಅಲ್ಲಿಂದ ಹಳಿಯಾಳ ಕ್ಷೇತ್ರವನ್ನು ಕಾಂಗ್ರೆಸ್‌ಮಯ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಬೆಂಬಲಿಗರ ಹಿಡಿತ ಸಾಧಿಸಿದ್ದಾರೆ. 2004, 2013 ಹಾಗೂ 2018 ರಲ್ಲಿಯೂ ಅವರು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು.
Advertisement
Advertisement
ಕಳೆದ 2 ಅವಧಿಯಲ್ಲಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿ ಹೆಸರಾದರು. ಸರ್ಕಾರದ ಅನುದಾನ ಮಾತ್ರವಲ್ಲದೇ ವಿವಿಧ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿರ್ವಹಣೆಯಲ್ಲಿ ಹಳಿಯಾಳದ ಕೆರೆಗಳ ಹೂಳೆತ್ತುವ ಕಾಮಗಾರಿ ನಡೆಸಿದರು. ಅಂಗನವಾಡಿಗಳಿಗೆ ಆಟದ ಸಾಮಗ್ರಿ ಪೂರೈಸಿದರು. ರೈತರಿಗೆ ವಿದೇಶಿ ತರಕಾರಿ ಬೀಜ, ಮಹಿಳೆಯರಿಗೆ ಹೊಲಿಗೆ ಯಂತ್ರ ಹೀಗೆ ಹಲವು ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ ಹಲವು ಸೇತುವೆಗಳನ್ನು ತಂದಿದ್ದಾರೆ. ಜಿ ಪ್ಲಸ್ 2 ಮನೆಗಳ ನಿರ್ಮಾಣ, ಕ್ರೀಡಾ ವಸತಿ ಶಾಲೆ ಮೇಲ್ದರ್ಜೆಗೆ, ಖೇಲೋ ಇಂಡಿಯಾ ಸೌಲಭ್ಯ ಹೀಗೆ ವಿವಿಧ ಮೂಲಗಳಿಂದ ಅನುದಾನ ತಂದಿದ್ದಾರೆ. ಶಾಸಕರ ನಿಧಿಯನ್ನು ಸಮರ್ಪಕವಾಗಿ ಬಳಸುವಲ್ಲಿ ಅವರ ಹೆಸರು ಮೇಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಅವರು ಅತ್ಯುತ್ತಮ ಶಾಸಕ ಎಂದು ವಿಧಾನಸಭೆಯಿಂದ ಪ್ರಶಸ್ತಿ ಪಡೆಯುವ ಮೂಲಕ ತಮ್ಮ ಸಾಧನೆಗೆ ಮತ್ತೊಂದು ಗರಿ ಸಿಕ್ಕಿಸಿಕೊಂಡಿದ್ದಾರೆ.
Advertisement
ಹಳಿಯಾಳ ಕ್ಷೇತ್ರ ಹೇಗಿದೆ?: ಎಂಟು ಬಾರಿ ಗೆಲುವು ಸಾಧಿಸಿ ಕರ್ನಾಟಕ ವಿಧಾನಸಭೆಯ ಅತಿ ಹಿರಿಯ ಶಾಸಕ ಎನಿಸಿಕೊಂಡಿರುವ ಆರ್.ವಿ.ದೇಶಪಾಂಡೆ ಮಣಿಸಲು ಅವರ ಶಿಷ್ಯರೇ ಪೈಪೋಟಿಗಿಳಿದಿದ್ದಾರೆ. ಇದುವರೆಗೆ ಹಳಿಯಾಳ ವಿಧಾನಸಭಾ ಕ್ಷೇತ್ರ ಸುನೀಲ್ ಹೆಗಡೆ- ದೇಶಪಾಂಡೆ ನಡುವಿನ ಜಂಗಿ ಕುಸ್ತಿಗೆ ಹೆಸರಾಗಿತ್ತು. ಜಿಲ್ಲೆಯಲ್ಲಿ ಅತಿ ಹೆಚ್ಚಿನ ರಾಜಕೀಯ ಕೆಸರೆರಚಾಟ ನಡೆಯುವ ಕ್ಷೇತ್ರ ಎಂದು ಪ್ರಸಿದ್ಧವಾಗಿತ್ತು. ಈಗ ಅವರ ಜತೆ ಮಾಜಿ ಎಂಎಲ್‌ಸಿ ಶ್ರೀಕಾಂತ ಘೋಟ್ನೇಕರ್ ಎಂಎಲ್‌ಎ ಸ್ಥಾನದ ಕಾಳಗಕ್ಕೆ ಕೈ ಹಾಕಿದ್ದಾರೆ. ಸದ್ಯ ಕಾಂಗ್ರೆಸ್‌ನಿಂದ ಅಧಿಕೃತವಾಗಿ ಕಾಲು ಹೊರಗಿಟ್ಟು ಘೋಟ್ನೇಕರ್ ಬಿಜೆಪಿ ಸೇರಲು ಪ್ರಯತ್ನ ನಡಸಿ ಸೋತ ನಂತರ ಇದೀಗ ಜೆಡಿಎಸ್ ಪಕ್ಷಕ್ಕೆ ಸೇರಿದ್ದು, ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ.
Advertisement
ಘೋಟ್ನೇಕರ್ ಮರಾಠ ಸಮುದಾಯದ ನಾಯಕ. ದೇಶಪಾಂಡೆ ಗರಡಿಯಲ್ಲಿ ಬೆಳೆದ ಅವರು ಎರಡು ಅವಧಿಗೆ ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ಬಾರಿ ವಿಧಾನಸಭೆ ಗುರಿಯಾಗಿಸಿಕೊಂಡು ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದ ಅವರು ಪರಿಷತ್ ಚುನಾವಣೆಯಿಂದ ಹಿಂದೆ ಸರಿದಿದ್ದರು. ದೇಶಪಾಂಡೆ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸುವುದು ಅಸಾಧ್ಯ ಎಂದರಿತ ಅವರು ತಿಂಗಳ ಹಿಂದೆ ಪಕ್ಷದಿಂದ ಹೊರನಡೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಹಳಿಯಾಳ ಕ್ಷೇತ್ರದಲ್ಲಿ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ತಮ್ಮ ಸಮುದಾಯದ ಅಜೆಂಡಾವನ್ನೇ ಮುಂದಿಟ್ಟುಕೊಂಡು ಅವರು ವಿಧಾನಸಭೆ ರಾಜಕೀಯಕ್ಕೆ ಕೈಹಾಕಿದ್ದಾರೆ. ಎದುರಾಳಿ ಇಬ್ಬರೂ ಅಭ್ಯರ್ಥಿಗಳು ಅತ್ಯಂತ ಸಣ್ಣ ಸಮುದಾಯಕ್ಕೆ ಸೇರಿದ್ದ, ಮರಾಠರಿಗೆ ಹಲವು ವರ್ಷಗಳಿಂದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ವಾದ ಅವರದ್ದು.
ದೇಶಪಾಂಡೆಗೆ ಸೋಲುಣಿಸಿದ್ದ ಶಿಷ್ಯ ಸುನಿಲ್ ಹೆಗಡೆ: ಪಕ್ಷ ಬದಲಿಸಿದರೂ ನಿರಂತರವಾಗಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ದೇಶಪಾಂಡೆ ಅವರಿಗೆ ಸೋಲಿನ ರುಚಿ ತೋರಿಸಿದವರು ಶಿಷ್ಯ ಸುನೀಲ್ ಹೆಗಡೆ. 2008ರಲ್ಲಿ ಸುನೀಲ್ ಹೆಗಡೆ ಜೆಡಿಎಸ್‌ನಿಂದ ಸ್ಪರ್ಧಿಸಿ 46,031 ಮತ ಪಡೆದು ಕಾಂಗ್ರೆಸ್ ಮಣಿಸಿದ್ದರು. 2013ರಲ್ಲೂ ಅವರು ಜೆಡಿಎಸ್‌ನಿಂದ ಸ್ಪರ್ಧೆಗಿಳಿದು ದೇಶಪಾಂಡೆ ಅವರಿಗೆ ಪ್ರಬಲ ಪೈಪೋಟಿ ನೀಡಿದರು. 2018ರಲ್ಲಿ ಬಿಜೆಪಿ ಸೇರಿ ಸ್ಪರ್ಧಿಸಿದ ಹೆಗಡೆ ಸೋಲು ಕಂಡರು. ಆದರೂ ಕ್ಷೇತ್ರದಲ್ಲಿ ಹೆಸರಿಗೆ ಮಾತ್ರವಿದ್ದ ಬಿಜೆಪಿ ಪ್ರಾಬಲ್ಯವನ್ನು ದ್ವಿಗುಣಗೊಳಿಸಿದರು. ಕಳೆದ ಐದು ವರ್ಷಗಳಿಂದ ಹಳಿಯಾಳ, ಜೊಯಿಡಾ, ದಾಂಡೇಲಿಯಲ್ಲಿ ನಿರಂತರ ಸಂಘಟನೆಯ ಮೂಲಕ ಸುನೀಲ್ ಹೆಗಡೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸದ್ಯಕ್ಕೆ ಪಕ್ಷದಲ್ಲಿ ಅವರನ್ನು ಹಿಂದಿಕ್ಕಬಲ್ಲ ಯಾವುದೇ ಅಧಿಕೃತ ಆಕಾಂಕ್ಷಿಗಳಿಲ್ಲ. ಹೀಗಾಗಿ ಈ ಬಾರಿ ಬಿಜೆಪಿಯಿಂದ ಸುನೀಲ್ ಹೆಗಡೆ ಸ್ಪರ್ಧೆ ಬಹುತೇಕ ಅಂತಿಮ ಎನ್ನಲಾಗುತ್ತಿದೆ.
ಇಬ್ಬರು ಶಿಷ್ಯರ ಎದುರು ದೇಶಪಾಂಡೆ ಕುಸ್ತಿ: ದೇಶಪಾಂಡೆ ಮೂಲತಃ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಬಿಜೆಪಿಯ ಸುನಿಲ್ ಹೆಗಡೆ ಕೂಡ ಅದೇ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಎಸ್.ಎಲ್ ಘೋಟ್ನೇಕರ್ (ಶ್ರೀಕಾಂತ್ ಲಕ್ಷ್ಮಣ್ ಘೋಟ್ನೆಕರ್) ಪ್ರಬಲ ಮರಾಠ ಜನಾಂಗದವರಾಗಿದ್ದಾರೆ. ಬಿಜೆಪಿಯ ಸುನಿಲ್ ಹೆಗಡೆ, ಜೆಡಿಎಸ್‌ನ ಘೋಟ್ನೇಕರ್ ಆರ್.ವಿ ದೇಶಪಾಂಡೆ ಗರಡಿಯಲ್ಲಿ ಪಳಗಿದವರಾಗಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಗುರು ಶಿಷ್ಯರ ಕಾಳಗಕ್ಕೆ ಸಾಕ್ಷಿಯಾಗಲಿದೆ.
ಕ್ಷೇತ್ರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರ ಸಂಖ್ಯೆ ಮೂರು ಸಾವಿರದಷ್ಟಿದೆ. ಮರಾಠ ಸಮುದಾಯದವರ ಸಂಖ್ಯೆ ಸರಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿದೆ. ಮುಸ್ಲಿಮರು 38 ಸಾವಿರದಷ್ಟು ಇದ್ದು, ಕ್ಷೇತ್ರದಲ್ಲಿ ಮರಾಠ ಹಾಗೂ ಮುಸ್ಲಿಂ ಸಮುದಾಯದ ಮತವೇ ನಿರ್ಣಾಯಕ. ಹೀಗಿರುವಾಗಲೂ ಅಲ್ಪ ಜನರಿರುವ ಗೌಡ ಸಾರಸ್ವತ (GSB) ಬ್ರಾಹ್ಮಣ ಸಮುದಾಯದಿಂದ ಆರ್.ವಿ ದೇಶಪಾಂಡೆ ಪ್ರತಿನಿಧಿಸುತ್ತಿದ್ದು 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿ 25 ವರ್ಷಗಳ ಕಾಲ ಸಚಿವರಾಗಿ ಅಧಿಕಾರ ಅನುಭವಿಸಿದ್ದರು.
ಸತತ ಗೆಲುವಿನ ಮೂಲಕ 25 ವರ್ಷ ಸಚಿವರಾದ ಆರ್.ವಿ ದೇಶಪಾಂಡೆ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದವರು. ಎಂಟಕ್ಕೂ ಹೆಚ್ಚು ವಿವಿಧ ಖಾತೆ ನಿರ್ವಹಣೆ ಮಾಡಿದ ಖ್ಯಾತಿ ಜೊತೆ ಎಲ್ಲಾ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರು. ಹೀಗಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವ ಅವಧಿಗೂ ಮುಂಚೆ ಆರ್.ವಿ ದೇಶಪಾಂಡೆಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಪ್ರಬಲ ಒತ್ತಾಯ ಕೇಳಿಬಂದಿತ್ತು. ಆದರೆ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು ಆರ್.ವಿ ದೇಶಪಾಂಡೆ.
ಪ್ರಭಾವಿ ಖಾತೆಗೆ ಆಸೆ ಪಡದೇ ಹೆಚ್ಚಾಗಿ ಪ್ರವಾಸೋದ್ಯಮ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ, ಉನ್ನತ ಶಿಕ್ಷಣ ಖಾತೆಗಳಿಗೆ ಸೀಮಿತವಾದರು. ಆದರೆ ಈವರೆಗೂ ತಾನೂ ಎಂದೂ ಕೂಡ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಎಂದು ಹೇಳದೇ ಕ್ಷೇತ್ರದಲ್ಲಿ ತಮಗೆ ದೊರೆತ ಸ್ಥಾನವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಜೊತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಲು ಕಾರಣೀಕರ್ತರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಗೆದ್ದ ಕ್ಷೇತ್ರ: ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ 1967ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ನಂತರದ ಎರಡು ಚುನಾವಣೆಗಳಲ್ಲಿ ವಿರೂಪಾಕ್ಷಪ್ಪ ಮಲ್ಲಪ್ಪ ವಾಡಿ ಶಾಸಕರಾದರು. 2008ರವರೆಗೆ ಕ್ಷೇತ್ರವು ಹಳಿಯಾಳ, ಯಲ್ಲಾಪುರ, ಮುಂಡಗೋಡ ವ್ಯಾಪ್ತಿಯನ್ನು ಹೊಂದಿತ್ತು. ಕ್ಷೇತ್ರ ಪುನರ್ ವಿಂಗಡನೆಯ ನಂತರ ಹಳಿಯಾಳ, ಜೊಯಿಡಾ ತಾಲೂಕುಗಳು ಕ್ಷೇತ್ರದ ವ್ಯಾಪ್ತಿಗೆ ಸೇರಿವೆ. ಈಗ ದಾಂಡೇಲಿ ಹೊಸ ತಾಲೂಕು ರಚನೆಯಾಗಿದೆ. ಪುರುಷರು 89,503 ಮಹಿಳೆಯರು 88,008 ಸೇರಿ 1,77,511 ಮತದಾರರಿದ್ದಾರೆ. ಮರಾಠರು, ಕುಣಬಿಗಳು, ಮುಸ್ಲಿಮರು ಇಲ್ಲಿನ ಬಹುಸಂಖ್ಯಾತ ನಿರ್ಣಾಯಕ ಮತದಾರರು.
2018ರಲ್ಲಿ ಯಾರಿಗೆ ಎಷ್ಟು ಮತ?
ಆರ್.ವಿ.ದೇಶಪಾಂಡೆ ಕಾಂಗ್ರೆಸ್- 61,577
ಸುನೀಲ್ ಹೆಗಡೆ ಬಿಜೆಪಿ- 56,437
ಕೆ.ಆರ್.ರಮೇಶ್ ಜೆಡಿಎಸ್- 72,09
ರಂಗೇರಿದ ಚುನಾವಣೆ ಕಣ: ಎಂಟು ಬಾರಿ ಗೆದ್ದ ಆರ್.ವಿ ದೇಶಪಾಂಡೆ ಇದು ನನ್ನ ಕೊನೆಯ ಚುನಾವಣೆ ಎಂದು ಕ್ಷೇತ್ರದ ಜನರಿಗೆ ಹೇಳುತಿದ್ದಾರೆ. ಇತ್ತ ಬಿಜೆಪಿಯ ಸುನೀಲ್ ಹೆಗಡೆ ಹಿಂದುತ್ವಕ್ಕೆ ಮತ ನೀಡಿ ಎನ್ನುತ್ತಿದ್ದರೆ ಜೆಡಿಎಸ್‌ನ ಘೋಟ್ನೇಕರ್ ಈವರೆಗೂ ಪ್ರಬಲ ಮರಾಠ ಸಮುದಾಯಕ್ಕೆ ಪ್ರಾಧಾನ್ಯತೆ ದೊರೆತಿಲ್ಲ. ಹೀಗಾಗಿ ಮರಾಠ ಮುಖಂಡನಾದ ನನಗೆ ಮತ ನೀಡಬೇಕು ಎಂದು ಜನತೆಯ ಮುಂದೆ ಹೋಗುತ್ತಿದ್ದಾರೆ.
ಈ ಹಿಂದೆ ದೇಶಪಾಂಡೆಯವರನ್ನು ಬೆಳೆಸಿದ್ದ ಜನತಾದಳ ಅವರನ್ನು ಸೋಲಿಸಲು ಸಹ ಕಾರಣವಾಗಿತ್ತು. ಇದೀಗ ಮತ್ತೆ ಜೆಡಿಎಸ್ ಇವರನ್ನು ಸೋಲಿಸಲು ಸಿದ್ಧತೆ ಮಾಡಿಕೊಂಡಿದೆ. ಒಟ್ಟಿನಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮ, ಜಾತಿ, ಜ್ಯಾತ್ಯಾತೀತತೆ ಎನ್ನುವ ಮಾನದಂಡದಡಿ ಗುರುಶಿಷ್ಯರು ಸೆಣಸಾಟದಲ್ಲಿ ನಿಂತಿದ್ದು, ಸೋಲು ಕಾಣದ ಸರದಾರ ಆರ್.ವಿ ದೇಶಪಾಂಡೆ ತಮ್ಮ 76ನೇ ಇಳಿ ವಯಸ್ಸಿನಲ್ಲಿ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ನಿಂತಿದ್ದಾರೆ. ಒಂದು ವೇಳೆ ಮತ್ತೊಮ್ಮೆ ಗೆದ್ದರೆ ರಾಜ್ಯದಲ್ಲೇ ಅತೀ ಹೆಚ್ಚು ಬಾರಿ ಗೆದ್ದ ರಾಜಕಾರಣಿ ಜೊತೆ ಹಿರಿಯ ರಾಜಕಾರಣಿ ಎಂಬ ಹೆಗ್ಗಳಿಕೆ ಸಹ ಇವರದ್ದಾಗಲಿದೆ.