ಬೆಂಗಳೂರು: ಗುಜರಾತ್ ದಾಖಲೆಯನ್ನು ಕರ್ನಾಟಕ ಬಿಜೆಪಿ (Karnataka BJP) ಮುರಿದಿದ್ದು ಈ ಬಾರಿ 70ಕ್ಕೂ ಹೆಚ್ಚು ಹೊಸ ಮುಖಗಳಿಗೆ ಟಿಕೆಟ್ ನೀಡಿದೆ.
ಬಿಜೆಪಿ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ 6 ಮಂದಿ ಹೊಸಬರು ಸೇರಿ ಒಟ್ಟು ಇಲ್ಲಿಯವರೆಗೆ 72 ಹೊಸಬರಿಗೆ ಟಿಕೆಟ್ ನೀಡಿದೆ. ಕರ್ನಾಟಕದಲ್ಲಿ ಇಷ್ಟೊಂದು ದಾಖಲೆ ಮಟ್ಟದಲ್ಲಿ ಹೊಸಬರಿಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದು ಇದೇ ಮೊದಲು. ಈ ಸಲ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು (Women Candidate) ಬಿಜೆಪಿ ಹಾಕಿದ್ದು, ಇಲ್ಲಿಯವರೆಗೆ 12 ಮಹಿಳೆರಿಗೆ ಟಿಕೆಟ್ ನೀಡಿದೆ.
ಒಟ್ಟು 224 ಕ್ಷೇತ್ರಗಳ ಪೈಕಿ ಇಲ್ಲಿಯವರೆಗೆ 222 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದ್ದು ಮಾನ್ವಿ ಮತ್ತು ಈಶ್ವರಪ್ಪ ಪ್ರತಿನಿಧಿಸುತ್ತಿರುವ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಘೋಷಣೆಯಾಗಬೇಕಿದೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ಸನ್ನು ಹೇಗೆ ಒಪ್ಪಿಕೊಂಡಿರಿ: ಶೆಟ್ಟರ್‌ಗೆ ಈಶ್ವರಪ್ಪ ಭಾವನಾತ್ಮಕ ಪತ್ರ
ಗುಜರಾತ್‌ನಲ್ಲಿ ಮಾಡಿದ್ದೇನು?
ಗುಜರಾತಿನಲ್ಲಿ (Gujarat Election) ಸತತ ಏಳನೇ ಅವಧಿಗೆ ಅಧಿಕಾರ ನಡೆಸಲು ಮುಂದಾಗಿದ್ದ ಬಿಜೆಪಿ ಸಮೀಕ್ಷೆಯಲ್ಲಿ ವಿರೋಧದ ಅಲೆ ಕಾಣಿಸಿಕೊಂಡ 42 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರಿಗೂ ಟಿಕೆಟ್ ನೀಡಿರಲಿಲ್ಲ.
ಪಕ್ಷದಿಂದ ಟಿಕೆಟ್ ನೀಡದಿದ್ದಕ್ಕೆ ಏಳು ಮಂದಿ ನಾಯಕರು ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಏಳು ಮಂದಿಯನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಆರು ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು.
ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿ 156, ಕಾಂಗ್ರೆಸ್ 17, ಆಪ್ 5 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿತ್ತು. 45 ಹೊಸ ಮುಖಗಳ ಪೈಕಿ 42 ಮಂದಿ ಚುನಾವಣೆಯಲ್ಲಿ ಗೆದ್ದಿದ್ದರು. ಗೆಲುವಿನ ಸ್ಟ್ರೈಕ್ ರೇಟ್ ಉತ್ತಮವಾಗಿ ಇರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಈ ಪ್ರಯೋಗಕ್ಕೆ ಹೈಕಮಾಂಡ್ ಮುಂದಾಗಿದೆ.