ಚಿಕ್ಕಬಳ್ಳಾಪುರ: ಗೌರಿಬಿದನೂರು ವಿಧಾನಸಭಾ ಕ್ಷೇತ್ರ (Gauribidanur Assembly Constituency) ಖಂಡಿತವಾಗಿ ಈ ಹಿಂದಿನಂತಿಲ್ಲ. ಪ್ರಬಲ ಮೂರು ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಪಕ್ಷೇತರ ಅಭ್ಯರ್ಥಿಗಳ ಪಾತ್ರವೇ ನಿರ್ಣಾಯಕವಾಗಲಿದ್ದು ಪ್ರಬಲ ಪೈಪೋಟಿ ನೀಡುವ ಸುಳಿವು ನೀಡಿದ್ದಾರೆ.
ಕೆಎಚ್‌ಪಿ ಫೌಂಡೇಷನ್ ಮೂಲಕ ಉದ್ಯಮಿ ಪುಟ್ಟಸ್ವಾಮಿಗೌಡ (Puttaswamy Gowda) ಈ ಬಾರಿ ಪ್ರಬಲ ಪೈಪೋಟಿಯಲ್ಲಿದ್ದಾರೆ. ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಗೌರಿಬಿದನೂರಿಗೆ ಎಂಟ್ರಿ ಕೊಟ್ಟ ಉದ್ಯಮಿ ಪುಟ್ಟಸ್ವಾಮಿ ಗೌಡರಿಗೆ ಕಾರಣಾಂತರಗಳಿಂದ ರಾಜಕೀಯ ಇಚ್ಚೆ ಇಲ್ಲದಿದ್ದರೂ ಈಗ ಧುಮುಕಿದ್ದಾರೆ.
Advertisement
ಸುತ್ತಲೂ ರೆಡ್ಡಿಗಳ ವಿರೋಧ ಬಣದವರನ್ನು ಜೊತೆಯಲ್ಲಿಟ್ಟುಕೊಂಡು ರಾಜಕಾರಣಕ್ಕೆ ಇಳಿದಿರುವ ಪುಟ್ಟಸ್ವಾಮಿಗೌಡ, ಶತಾಯಗತಾಯ ಈ ಬಾರಿ ಗೌರಿಬಿದನೂರಿನಲ್ಲೇ ತಾವೇ ಶಾಸಕರಾಗಬೇಕು ಅಂತ ಟೊಂಕ ಕಟ್ಟಿ ನಿಂತು ಹಗಲು ರಾತ್ರಿ ಅನ್ನದೇ ಚುನಾವಣಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ.
Advertisement
Advertisement
ಕೊರೊನಾ ಕಾಲದಲ್ಲಿ ಪುಡ್ ಕಿಟ್, ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ, ಉಚಿತ ಬಸ್ ಪಾಸ್ ಸೌಲಭ್ಯ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ಶ್ರೀನಿವಾಸ ಕಲ್ಯಾಣೋತ್ಸವ, ಗೌರಿ ಗಣೇಶ ಹಬ್ಬಕ್ಕೆ ಮನೆ ಮನೆಗೆ ಭೇಟಿ ನೀಡಿ ಸೀರೆ-ಪಂಚೆ- ಅಂತ ಉಡುಗೊರೆ, ಈಗ ಯುಗಾದಿ ಹಬ್ಬಕ್ಕೆ ಹಳ್ಳಿ ಹಳ್ಳಿಗೂ ಹೋಗಿ ಡೈನಿಂಗ್ ಪಾತ್ರೆ ಸೆಟ್ ಕೊಟ್ಟು ಮತಯಾಚನೆ ಮಾಡುತ್ತಿದ್ದಾರೆ.
Advertisement
ಈ ನಡುವೆಯೇ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವ ಕೆಂಪರಾಜು ಸಹ ನಾನೇನು ಕಡಿಮೆ ಇಲ್ಲ ಎಂಬಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಮನೆ ಮನೆಗೆ ತೆರಳಿ ಮತಯಾಚನೆ ಮಾಡ್ತಿದ್ದಾರೆ. ಕುಕ್ಕರ್ ಕೊಟ್ಟು ವೋಟ್ ಕೇಳ್ತಿದ್ದು, ಕೈ ಮುಗಿದು ಕಾಲಿಗೆ ಬಿದ್ದು ಈ ಬಾರಿ ನಾನೇ ಶಾಸಕ ಅಂತ ವಿಶ್ವಾಸದ ಮಾತಗಳನ್ನಾಡಿಕೊಳ್ತಿದ್ದಾರೆ.
ಕಾಂಗ್ರೆಸ್ ಭದ್ರಕೋಟೆ:
ಗೌರಿಬಿದನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ (Congress) ಭದ್ರಕೋಟೆಯಾಗಿದ್ದು ಇದಕ್ಕೆ ಕಾರಣ ಶಿವಶಂಕರ ರೆಡ್ಡಿ. ತಮ್ಮ ರಾಜಕೀಯ ಗುರು ಅಶ್ವತ್ಥನಾರಾಯಣರೆಡ್ಡಿ ವಿರುದ್ದವೇ ಗುಡುಗಿ ಪಕ್ಷೇತರರಾಗಿ ಕಣಕ್ಕಿಳಿದ್ದು ಗೆದ್ದು ಬೀಗಿದ್ದ ಶಿವಶಂಕರ ರೆಡ್ಡಿ (Shivashnkar Reddy) ತದನಂತರ ಕಾಂಗ್ರೆಸ್ ಸೇರ್ಪಡೆಯಾಗಿ ಅಂದಿನಿಂದ ಇದುವರೆಗೂ ಸುದೀರ್ಘ 5 ಬಾರಿ 24 ವರ್ಷಗಳ ಕಾಲ ಶಾಸಕರಾಗಿ ಮುಂದುವರೆದಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಇವರು ಹಣದ ರಾಜಕಾರಣಕ್ಕಿಂತ ಅಭಿವೃದ್ದಿಯೇ ರಾಜಕಾರಣವೇ ಮುಖ್ಯ ಅಂತ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಹಣ ಖರ್ಚು ಮಾಡದೇ ಗೆದ್ದು ಬೀಗುತ್ತಿದ್ದ ಶಿವಶಂಕರರೆಡ್ಡಿಯವರಿಗೆ ಈ ಬಾರಿ ಪಕ್ಷೇತರರ ಹಣದ ಹೊಳೆ ಮುಂದೆ ಎದುರಿಸೋದು ಸಹ ಚಿಂತೆಯಾಗಿ ಕಾಡಲು ಶುರುವಾಗಿದೆ.
ಏನೇ ಖರ್ಚು ಮಾಡಿದರೂ ಎಷ್ಟೇ ಅಮಿಷ ಒಡ್ಡಿದರೂ ಹೊರಗಿನವರಿಗೆ ಕ್ಷೇತ್ರದ ಜನ ಮಣೆ ಹಾಕಲ್ಲ ಎಂಬ ಅತೀವ ನಂಬಿಕೆಯನ್ನು ಶಿವಶಂಕರ ರೆಡ್ಡಿ ಹೊಂದಿದ್ದಾರೆ. ಇವೆಲ್ಲದರ ನಡುವೆ ಕ್ಷೇತ್ರದ್ಯಂತ ಪಂಚಾಯತಿ ಮಟ್ಟದಲ್ಲಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಚುನಾವಣಾ ಪ್ರಚಾರ ಮಾಡುತ್ತಾ ಈ ಬಾರಿಯೂ ತಮ್ಮ ಮತ ತನಗೆ, ಕಾಂಗ್ರೆಸ್ ಗೆ ಕೊಡಬೇಕು ಅಂತ ಪ್ರಚಾರ ಸಭೆಗಳನ್ನ ಕೈಗೊಳ್ಳುತ್ತಿದ್ದಾರೆ. ಪಕ್ಷೇತರರ ಮತ ವಿಭಜನೆಯಿಂದ ಈ ಬಾರಿಯೂ ಸುಲಭವಾಗಿ ಗೆಲ್ಲಬಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಜೆಡಿಎಸ್ ಅಭ್ಯರ್ಥಿ ಯಾರು?
ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಹಾಗೂ ಜನತಾ ಪಾರ್ಟಿ ನಡುವೆಯೇ ರಾಜಕೀಯ ಸಂಘರ್ಷ. ಜನತಾ ಪಾರ್ಟಿಯಿಂದ 1983 ರಲ್ಲಿ ಲಕ್ಷ್ಮೀಪತಿ ಹಾಗೂ 1985ರಲ್ಲಿ ಕಲಾವಿದರಾದ ಮುಖ್ಯಮಂತ್ರಿ ಚಂದ್ರು ಅವರು ಸಹ ಇದೇ ಗೌರಿಬಿದನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಇತಿಹಾಸವಿದೆ.
ತದನಂತರ ಜೆಡಿಎಸ್ (JDS) ನಿಂದ ರೆಡ್ಡಿಗಳ ಕುಟುಂಬದ ಹೆಣ್ಣು ಮಗಳು ಜ್ಯೋತಿರಡ್ಡಿ ಜೆಡಿಎಸ್‌ನಿಂದ ಶಾಸಕಿಯಾಗಿ ಆಯ್ಕೆಯಾದ ನಿದರ್ಶನವಿದೆ. ಹಾಗಾಗಿ ಕ್ಷೇತ್ರದಲ್ಲಿ ಜೆಡಿಎಸ್ ತನ್ನದೇ ಆದ ವೋಟ್ ಬ್ಯಾಂಕ್, ವರ್ಚಸ್ಸು, ಹಿಡಿತ ಹೊಂದಿದೆ. ಜೊತೆಗೆ ಸಾಧರು ಸಮುದಾಯದ ಅಭ್ಯರ್ಥಿ ಜೆಡ್ ಪಿ ನರಸಿಂಹಮೂರ್ತಿ ಅಂತಲೇ ಫೇಮಸ್ ಆಗಿರುವ ಮಾಜಿ ಸೈನಿಕ ಚಂದನದೂರು ಗ್ರಾಮದ ನರಸಿಂಹಮೂರ್ತಿಯೇ ಈ ಬಾರಿಯೂ ಜೆಡಿಎಸ್ ಅಭ್ಯರ್ಥಿ ಅಂತ ಪಂಚರತ್ನ ಯಾತ್ರೆ ವೇಳೆ ಎಚ್‌ಡಿಕೆ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಡಿನೋಟಿಫಿಕೇಶನ್ ಕೇಸ್ – ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್ ವಿಚಾರಣೆಗೆ ಎಚ್‌ಡಿಕೆ ಗೈರು
ಸಮುದಾಯದ ಮತ ಬ್ಯಾಂಕ್, ಕ್ಷೇತ್ರದ ಮೇಲಿನ ಹಿಡಿತ, ಹಳ್ಳಿ ಹಳ್ಳಿಯಲ್ಲೂ ಕಾರ್ಯಕರ್ತರ ಬೆಂಬಲಿತರ ಪಡೆ ಹೊಂದಿರುವ ನರಸಿಂಹಮೂರ್ತಿ ಕಳೆದ ಬಾರಿ ಶಿವಶಂಕರರೆಡ್ಡಿ ತಿರುಗಿ ನೋಡಿಕೊಳ್ಳುವಂತಹ ಫೈಟ್ ನೀಡಿದ್ದರು. 9,168 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು. ಸ್ವಲ್ಪ ದುಡ್ಡು ಖರ್ಚು ಮಾಡಿದರೆ ಗೆದ್ದುಬಿಡುತ್ತಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಬಾರಿ ಅದೇ ಫೈಟ್ ಕೊಡ್ತಾರಾ ಎನ್ನುವುದು ಅನುಮಾನ ಮೂಡಿಸಿದೆ. ಕಾರಣ ಪಕ್ಷೇತರರ ಅಬ್ಬರದಿಂದ ಮತಗಳ ವಿಭಜನೆ, ಪ್ರಮುಖವಾಗಿ ಹಣ ಬಲ ಇಲ್ಲದೇ ಇರುವುದು ಜೆಡಿಎಸ್ ಅಭ್ಯರ್ಥಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಬಿಜೆಪಿಯಲ್ಲಿ ಅಭ್ಯರ್ಥಿ ಯಾರು?
ಗೌರಿಬಿದನೂರು ಕ್ಷೇತ್ರದಿಂದ ಬಿಜೆಪಿ (BJP) ಪಕ್ಷದಲ್ಲಿ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಒಂದು ಕಡೆ ಎಚ್.ವಿ.ಶಿವಶಂಕರ್ ಹಾಗೂ ಮತ್ತೊಂದು ಕಡೆ ಮಾನಸ ಸಮೂಹ ಆಸ್ಪತ್ರೆಗಳ ವೈದ್ಯರು ಡಾ.ಎಚ್.ಎಸ್.ಶಶಿಧರ್ ಕುಮಾರ್ ಅವರ ಹೆಸರು ರೇಸ್‍ನಲ್ಲಿದೆ. ಆದರೆ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸಬೇಕಿದೆ. ಬಿಜೆಪಿಯಲ್ಲಿ ರೆಡ್ಡಿ ಕುಟುಂಬದ ರವಿನಾರಾಯಣರೆಡ್ಡಿ ಪ್ರಭಾವ ಇದ್ದು ಬಿಜೆಪಿ ತನ್ನದೇ ಆದ ಮತಬ್ಯಾಂಕ್‍ನ್ನು ಹೊಂದಿದ್ದು ಈ ಬಾರಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಭರ್ಜರಿ ಪೈಫೋಟಿ ನೀಡುವ ಯತ್ನ ನಡೆಸುತ್ತಿದೆ.
ಈ ಬಾರಿಯೂ ಜೈಪಾಲ್ ರೆಡ್ಡಿ ಸ್ಪರ್ಧೆ
ದಶಕಗಳಿಂದ ತಾನು ಕೂಡ ಶಾಸಕನಾಗಬೇಕು ಅಂತ ಹಾಲಿ ಪಕ್ಷೇತರರಿಗಿಂತ ಮೊದಲೇ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಜೈಪಾಲ್ ರೆಡ್ಡಿ ಹೆಸರು ಕ್ಷೇತ್ರದಲ್ಲಿ ಚಿರಪರಿಚಿತ. ಬರಗಾಲದ ಸಂದರ್ಭದಲ್ಲಿ ಟ್ಯಾಂಕರ್ ಗಳ ಮೂಲಕ ಉಚಿತವಾಗಿ ನೀರು, ಉಚಿತ ಅನ್ನದಾಸೋಹ ಹಲವು ಸಮಾಜಮುಖಿ ಸೇವೆಗಳ ಜೊತೆಗೆ ಯುವಕರ ಪಡೆ ಹೊಂದಿರುವ ಜೈಪಾಲ್ ರೆಡ್ಡಿ 2013 ರ ಚುನಾವಣೆಯಲ್ಲಿ ಶಿವಶಂಕರೆರಡ್ಡಿಯವರ ಎದುರು ಕೇವಲ 6,075 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಆದರೆ ಸೋತ ನಂತರ ಕ್ಷೇತ್ರದಿಂದ ದೂರವಾಗಿರುವ ಜೈಪಾಲ್ ರೆಡಿ ಎಲೆಕ್ಷನ್ ಹತ್ತಿರ ಬಂದಾಗ ಮತ್ತೆ ಸಕ್ರಿಯವಾಗುತ್ತಾರೆ. ಅದೇ ರೀತಿ ಈ ಬಾರಿಯೂ ಕಳೆದ 2 ತಿಂಗಳ ಹಿಂದೆ ಎಂಟ್ರಿ ಕೊಟ್ಟು ಗೌರಿಬಿದನೂರು ನಗರದಲ್ಲಿ ಪ್ರತಿ ನಿತ್ಯ ನೂರಾರು ಮಂದಿಗೆ ಉಚಿತ ಊಟದ ವ್ಯವಸ್ಥೆ ಮಾಡಿರುವ ಜೈಪಾಲ್ ರೆಡ್ಡಿ ಚುನಾವಣಾ ಪ್ರಚಾರ ನಡೆಸುತ್ತಿಲ್ಲ. ಹಾಗಾಗಿ ಈ ಬಾರಿ ಸ್ಫರ್ಧೆ ಮಾಡುತ್ತಾರಾ ಇಲ್ಲವಾ ಎಂಬ ಗೊಂದಲ ಮನೆ ಮಾಡಿದ್ದು ಸ್ಪಷ್ಟತೆ ಇಲ್ಲವಾಗಿದೆ.
ಗೌರಿಬಿದನೂರು ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ?
ಒಟ್ಟು ಮತದಾರರು – 2,06,241
ಪುರುಷರು – 1,02,062
ಮಹಿಳೆಯರು – 1,04,179
ಜಾತಿವಾರು ಲೆಕ್ಕಾಚಾರ
ಎಸ್‌ಸಿ – 30 ಸಾವಿರ, ಎಸ್‌ಟಿ-40 ಸಾವಿರ , ಸಾಧರ ಗೌಡರು-20 ಸಾವಿರ, ರೆಡ್ಡಿ-ಒಕ್ಕಲಿಗ-18 ಸಾವಿರ, ಅಲ್ಪಸಂಖ್ಯಾತರು-8 ಸಾವಿರ, ಬಲಜಿಗರು-17 ಸಾವಿರ, ಕುರುಬರು-25 ಸಾವಿರ, ಇತರೆ 30 ಸಾವಿರ
ಗೆಲುವಿನ ಅಂತರ ಎಷ್ಟು?
2008 ಶಿವಶಂಕರರೆಡ್ಡಿ 11,168 ಮತಗಳಿಂದ ಬಿಜೆಪಿಯ ರವಿನಾರಾಯಣರೆಡ್ಡಿ ವಿರುದ್ಧ ಗೆದ್ದಿದ್ದರೆ 2013ರಲ್ಲಿ ಪಕ್ಷೇತರ ಅಭ್ಯರ್ಥಿ ಜೈಪಾಲ್ ರೆಡ್ಡಿ ವಿರುದ್ಧ 6,075 ಮತಗಳಿದ್ದ ಗೆದ್ದಿದ್ದರು. 2018ರಲ್ಲಿ ಜೆಡಿಎಸ್‌ನ ಸಿ.ಆರ್.ನರಸಿಂಹಮೂರ್ತಿ ವಿರುದ್ಧ 9,168 ಮತಗಳಿಂದ ಜಯಗಳಿಸಿದ್ದರು.