ಕರ್ನಾಟಕ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ಸಮಾವೇಶ, ರೋಡ್ ಶೋಗಳು ಬಿರುಸಾಗಿ ನಡೆಯುತ್ತಿದೆ. ಪಕ್ಷಗಳ ನಾಯಕರು ತೆರೆಯಲ್ಲಿ ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದರೆ ಪಕ್ಷಗಳ ಕಾರ್ಯಕರ್ತರು, ನಾಯಕರ ಹಿಂಬಾಲಕರು ತೆರೆಮರೆಯಲ್ಲಿ ಡಿಜಿಟಲ್ ಮೂಲಕ ಪ್ರಚಾರ ಮಾಡುತ್ತಿದ್ದಾರೆ.
ಈ ವಿಧಾನಸಭಾ ಚುನಾವಣೆ ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆಯಿದೆ. 2014ರ ಲೋಕಸಭೆ, 2018ರ ವಿಧಾನಸಭೆ, 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಡಿಜಿಟಲ್ ಮೀಡಿಯಾ ಕೆಲಸ ಮಾಡಿತ್ತು. ಆದರೆ ಈ ಬಾರಿ ಭಾರೀ ಪ್ರಮಾಣದಲ್ಲಿ ಡಿಜಿಟಲ್ ಪ್ರಚಾರ ಪ್ರಭಾವ ಬೀರಲಿದ್ದು ಯಾರಿಗೆ ಹೊಡೆತ ನೀಡಲಿದೆ ಎನ್ನುವುದು ಮೇ 13ರಂದು ತಿಳಿಯಲಿದೆ.
Advertisement
ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ನಡೆದ 2014ರ ಚುನಾವಣೆ ಸಂದರ್ಭದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್ ಮಾತ್ರ ಜನಪ್ರಿಯವಾಗಿತ್ತು. ಬೇರೆ ರಾಜಕೀಯ ಪಕ್ಷಗಳು ಇವುಗಳು ಭಾರತದ ಚುನಾವಣೆಯಲ್ಲಿ ಕೆಲಸ ಮಾಡುತ್ತಾ ಎಂದು ಪ್ರಶ್ನಿಸುತ್ತಿದ್ದರೆ ಇತ್ತ ಬಿಜೆಪಿಯ ಡಿಜಿಟಲ್ ತಂಡ ಆಗಲೇ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿ ಯುಪಿಎ ಸರ್ಕಾರವನ್ನೇ ಕೆಡವಿ ಹಾಕಿತ್ತು.
Advertisement
Advertisement
ಲೋಕಸಭೆ ಚುನಾವಣೆಯ ನಂತರ ಎಲ್ಲಾ ಪಕ್ಷಗಳು ಡಿಜಿಟಲ್ ತಂಡವನ್ನು ಕಟ್ಟಿದವು. ನಾಯಕರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾದರು. ಹಾಗೇ ನೋಡಿದರೆ ಕರ್ನಾಟಕದಲ್ಲಿ 2019ರ ಲೋಕಸಭಾ ಚುನಾವಣೆಯವರೆಗೂ ಡಿಜಿಟಲ್ ಮೀಡಿಯಾದಲ್ಲಿ ಬಿಜೆಪಿಯೇ ಮುಂದಿತ್ತು. ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾದ ಬೆನ್ನಲ್ಲೇ ಕಾಂಗ್ರೆಸ್, ಆಪ್, ಜನತಾ ದಳ ಸಾಮಾಜಿಕ ಜಾಲತಾಣ ಬಳಕೆಗೆ ಹೆಚ್ಚು ಒತ್ತು ನೀಡಿದ್ದು ಈ ಬಾರಿ ಮೂರು ಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ಹಿಂದೆಂದಿಗಿಂತಲೂ ಬಹಳ ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತಿವೆ. ರಾಜ್ಯದ ಕೆಲ ನಾಯಕರು ತಮ್ಮ ಬ್ರ್ಯಾಂಡ್ ಪ್ರಚಾರಕ್ಕೆ ಕಂಪನಿಗಳ ಮೊರೆಯನ್ನು ಹೋಗಿರುವುದು ವಿಶೇಷ.
Advertisement
ಡಿಜಿಟಲ್ ಮೀಡಿಯಾ ಜಾಹೀರಾತು ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಮುಂದಿದೆ. ಪರಿಣಾಮಕಾರಿಯಾಗಿ ಯೂಟ್ಯೂಬ್, ಫೇಸ್‌ಬುಕ್ ಜೊತೆಗೆ ನ್ಯೂಸ್ ವೆಬ್‌ಸೈಟ್‌ಗಳಲ್ಲೂ ಜಾಹೀರಾತು ನೀಡುತ್ತಿದೆ. ಈ ಎಲ್ಲಾ ಪ್ರಚಾರಗಳು ತೆರೆಯಲ್ಲಿ ಕಾಣುತ್ತಿದ್ದರೆ ತೆರೆ ಮರೆಯಲ್ಲಿ ಪಕ್ಷಗಳು ವಾಟ್ಸಪ್, ರೀಲ್ಸ್ ಮೂಲಕ ಪ್ರಚಾರ ನಡೆಸುತ್ತಿವೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಡೇಟಾ ಪ್ರಕಾರ ಭಾರತದಲ್ಲಿ ಪ್ರತಿ 100 ಮಂದಿಯಲ್ಲಿ 61 ಮಂದಿ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದರೆ ಕರ್ನಾಟಕದಲ್ಲಿ 74 ಮಂದಿ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ. ಟ್ರಾಯ್ ಮಾರ್ಚ್ 31 ರಂದು ಬಿಡುಗಡೆ ಮಾಡಿದ ಡೇಟಾ ಪ್ರಕಾರ ಕರ್ನಾಟಕದಲ್ಲಿ ಒಟ್ಟು 6,62,09,245 ಮೊಬೈಲ್ ಚಂದದಾರರು ಇದ್ದಾರೆ. ಇದರಲ್ಲಿ ಹೊರ ರಾಜ್ಯದವರು, ಒಬ್ಬರೇ ಎರಡು ಸಿಮ್ ಬಳಕೆ ಮಾಡುವರು ಎಂದು 1 ಕೋಟಿ ಸಂಖ್ಯೆಯನ್ನು ತೆಗೆದರೂ ಈ ಸಂಖ್ಯೆಗೆ 5.62 ಕೋಟಿ ಆಗುತ್ತದೆ. ಈ ಕಾರಣದಿಂದಾಗಿ ಎಲ್ಲಾ ರಾಜಕೀಯ ಪಕ್ಷಗಳು ಡಿಜಿಟಲ್ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುತ್ತಿವೆ.
ಕರ್ನಾಟಕದಲ್ಲಿ ಫೇಸ್‌ಬುಕ್, ಟ್ವಿಟ್ಟರ್ ಖಾತೆಗಳು ಇಲ್ಲದ ಮನೆ ಇರಬಹುದು. ಆದರೆ ವಾಟ್ಸಪ್ ಇಲ್ಲದ ಮನೆಯನ್ನು ತೋರಿಸುವುದು ಇಂದು ಬಹಳ ಕಷ್ಟ. ಕೋವಿಡ್ ಸಮಯದಲ್ಲಿ ಶಾಲೆಗಳು ಬಂದ್ ಆದ ಹಿನ್ನೆಲೆಯಲ್ಲಿ ಸ್ಮಾರ್ಟ್‌ಫೋನ್ ಇಲ್ಲದವರು ಸಹ ಮಕ್ಕಳಿಗಾಗಿ ಫೋನ್ ಖರೀದಿಸಿದ್ದರಿಂದ ಪ್ರತಿ ಮನೆಯಲ್ಲಿ ಕನಿಷ್ಠ ಒಂದಾದರೂ ವಾಟ್ಸಪ್ ಇದೆ. ಮನೆ ಮನೆಗೆ ಹೋಗಿ ಪ್ರಚಾರ ನಡೆಸುವುದು ಇಂದು ಕಷ್ಟ. ಈ ಕಾರಣಕ್ಕೆ ರಾಜಕೀಯ ಪಕ್ಷಗಳು ಇಂದು ಡಿಜಿಟಲ್ ಮೀಡಿಯಾ ಅದರಲ್ಲೂ ವಾಟ್ಸಪ್ ಮೂಲಕ ಪ್ರಚಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿವೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆತ
ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಮಾಧ್ಯಮಗಳು, ರಾಜಕೀಯ ಪಕ್ಷಗಳ ನಾಯಕರು ಹೇಳಿದ್ದು ಸರಿ ಎನ್ನುವ ಕಾಲ ಹೊರಟು ಹೋಗಿದೆ. ಯಾರು ಸರಿ? ಯಾರು ತಪ್ಪು ಎನ್ನುವುದು ಕ್ಷಣ ಮಾತ್ರದಲ್ಲಿ ಬಯಲಾಗುತ್ತದೆ ಮತ್ತು ಪ್ರತಿಯೊಂದಕ್ಕೂ ಸಾಕ್ಷ್ಯವಾಗಿ ಹಳೆಯ ವೀಡಿಯೋ ಸಿಗುತ್ತದೆ. ಪಕ್ಷಗಳ ಡಿಜಿಟಲ್ ತಂಡಗಳು ಹೊಸ ಹೇಳಿಕೆ, ಹಳೆಯ ಹೇಳಿಕೆಯನ್ನು ಜೋಡಿಸಿ ವೀಡಿಯೋ ಮಾಡುತ್ತಿರುವುದು ಇದು ಜನರ ಮೇಲೆ ಜಾಸ್ತಿ ಪ್ರಭಾವ ಬೀರುತ್ತಿದೆ. ಇದರ ಜೊತೆ ಪಕ್ಷದ ನಾಯಕರು ಸುಳ್ಳು ಹೇಳಿದರೆ ನೆಟ್ಟಿಗರೇ ಸಾಕ್ಷ್ಯವನ್ನು ತೆಗೆದು ನೀವು ಹೇಳುತ್ತಿರುವುದು ಸುಳ್ಳು ಎಂದು ಅಲ್ಲೇ ಕೌಂಟರ್ ಕೊಡುತ್ತಿದ್ದಾರೆ.
ಉದಾಹರಣೆಗೆ ನಮ್ಮಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಬಿಜೆಪಿಯವರು ಹೇಳಿದ್ದಕ್ಕೆ ಈ ಬಾರಿ ಟಿಕೆಟ್ ಯಾವೆಲ್ಲ ಕುಟುಂಬಕ್ಕೆ ಮತ್ತು ನಾಯಕರಿಗೆ ನೀಡಲಾಗಿದೆ ಎಂಬುದನ್ನೇ ಅಲ್ಲೇ ಪೋಸ್ಟ್ ಮಾಡುತ್ತಾರೆ. ಉಳಿದ ರಾಜ್ಯಗಳಲ್ಲಿ ಚುನಾವಣೆಯ ಮೊದಲು ಘೋಷಣೆ ಮಾಡಿದ ಗ್ಯಾರಂಟಿ ಇನ್ನೂ ಜಾರಿಯಾಗಿಲ್ಲ? ಇಲ್ಲಿ ನೀವು ಜಾರಿ ಹೇಗೆ ಮಾಡ್ತೀರಿ ಎಂದು ಕಾಂಗ್ರೆಸ್‌ಗೆ ಕೇಳುತ್ತಾರೆ. ನಿಮ್ಮದು ಜಾತ್ಯತೀತ ಪಕ್ಷವಲ್ಲ, ನಿಮ್ಮದು ಕುಟುಂಬದ ಪಕ್ಷ ಎಂದು ಜೆಡಿಎಸ್‌ಗೆ ತಿರುಗೇಟು ನೀಡುತ್ತಾರೆ. ಕಾಂಗ್ರೆಸ್ ಐಸಿಯುನಲ್ಲಿದೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಜಗದೀಶ್ ಶೆಟ್ಟರ್ ಅವರಿಗೆ ಟಾಂಗ್ ನೀಡುತ್ತಿದ್ದಾರೆ.
2019ರ ಚುನಾವಣೆಯವರೆಗೆ ಮಾಧ್ಯಮಗಳು ಮಾತ್ರ ಚುನಾವಣೆಯ ಸಮಯದಲ್ಲಿ ಲೋಗೋ ಹಿಡಿದುಕೊಂಡು ಜನರ ಅಭಿಪ್ರಾಯವನ್ನು ಕೇಳುತ್ತಿದ್ದವು. ಆದರೆ ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ತೆರೆಯಲ್ಪಟ್ಟ ಪೇಜ್‌ಗಳು ಒಂದೊಂದು ಕ್ಷೇತ್ರವನ್ನು ಟಾರ್ಗೆಟ್ ಮಾಡಿ ಜನರ ಬಳಿ ಹೋಗಿ ಅಭಿಪ್ರಾಯವನ್ನು ಸಂಗ್ರಹಿಸುತ್ತಿರುವುದು ವಿಶೇಷ. ಮಾಧ್ಯಮಗಳಲ್ಲಿ ಬರುವ ಅಭಿಪ್ರಾಯಗಳು ಪರ/ ವಿರೋಧ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ತೆರೆಯಲ್ಪಟ್ಟ ಮಾಧ್ಯಮ ಸಂಸ್ಥೆಗಳ ವೀಡಿಯೋಗಳು ಒಂದೇ ಪಕ್ಷದ ಪರವಾಗಿ ಬರುತ್ತಿವೆ. ಈ ವೀಡಿಯೋಗಳು 24 ಗಂಟೆಯ ಒಳಗಡೆ ಲಕ್ಷಗಟ್ಟಲೇ ವ್ಯೂ ಪಡೆಯುತ್ತಿದೆ. ಜೊತೆಗೂ ಈ ವೀಡಿಯೋಗಳನ್ನು ವಾಟ್ಸಪ್ ಮೂಲಕವೂ ಹರಿಬಿಡಬಹುದು. ನಾಯಕರ ಬಹಿರಂಗ ಪ್ರಚಾರ, ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಕ್ಕಿಂತಲೂ ಜನರ ಅಭಿಪ್ರಾಯ ಇರುವ ಈ ವಿಡಿಯೋಗಳು ಆ ಕ್ಷೇತ್ರದ ಮತದಾರರ ಮೇಲೆ ಬಹಳ ಬೇಗ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂದು ವೇಳೆ ಇದು ಯಶಸ್ವಿಯಾದರೆ ಸಮೀಕ್ಷೆಗಳು ತಲೆಕೆಳಗೆ ಆಗುವುದರಲ್ಲಿ ಅನುಮಾನವೇ ಇಲ್ಲ.
ಹಿಂದೆ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ವಿಷಯ ಟ್ರೆಂಡಿಂಗ್ ಆದರೆ ಅದೇ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಈಗ ಈ ಟ್ರೆಂಡಿಂಗ್‌ಗೆ ಮಹತ್ವ ಕಳೆದುಕೊಂಡಿದೆ. ಯಾಕೆಂದರೆ ಹೊರ ರಾಜ್ಯದಲ್ಲಿ, ವಿದೇಶದಲ್ಲಿ ಕುಳಿತು ಆ ಹ್ಯಾಶ್ ಟ್ಯಾಗ್ ಬಳಕೆ ಮಾಡಿ ಟ್ರೆಂಡ್ ಮಾಡುತ್ತಾರೆ. ಇದರ ಜೊತೆ ನಕಲಿ ಖಾತೆಗಳೇ ಜಾಸ್ತಿ ಇರುತ್ತದೆ. ರಾಜಕೀಯ ಪಕ್ಷಗಳ ಬಣ್ಣಗಳು ಅಲ್ಲೇ ರಿವೀಲ್ ಆಗುವುದರಿಂದ ಟ್ರೆಂಡಿಂಗ್ ಟಾಪಿಕ್‌ಗಳಿಗೆ ಮೊದಲು ಇದ್ದಷ್ಟು ಮಹತ್ವ ಈಗ ಇಲ್ಲ.
ಈ ಚುನಾವಣೆ ಸೇರಿದಂತೆ ಇಲ್ಲಿಯವರೆಗೆ ಕರ್ನಾಟಕ ಚುನಾವಣೆಯಲ್ಲಿ ಜಾಸ್ತಿ ಚರ್ಚೆಯಾಗುವುದು ಜಾತಿ. ಒಂದು ಜಾತಿಯ ಮತದಾರರ ಸಂಖ್ಯೆ ಜಾಸ್ತಿ ಇದ್ದರೆ ಆ ಜಾತಿಯ ವ್ಯಕ್ತಿಗೆ ಟಿಕೆಟ್ ನೀಡಲಾಗುತ್ತದೆ. ಡಿಜಿಟಲ್ ಮೀಡಿಯಾದ ಪ್ರಭಾವ ಹೆಚ್ಚಾಗುತ್ತಿದ್ದಂತೆ ಈ ಚಿಂತನೆಗಳು ನಿಧಾನವಾಗಿ ಕಡಿಮೆ ಆಗುತ್ತಿದ್ದು ಜಾತಿ ನೋಡಿ ಮತವನ್ನು ಹಾಕದೇ ವ್ಯಕ್ತಿಯ ಆರ್ಹತೆ, ಕೆಲಸ ನೋಡಿ ಮತ ಹಾಕುವುದಾಗಿ ಜನತೆ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನಾವು ಗಮನಿಸಬಹುದು. ಹಿರಿಯ ಮತದಾರರು ಅಭ್ಯರ್ಥಿಯ ಜಾತಿಯನ್ನು ನೋಡಿ ಪಕ್ಷಗಳನ್ನು ಈಗಲೂ ಬೆಂಬಲಿಸಿದರೆ ವಿಶೇಷವಾಗಿ ಯುವ ಮತದಾರರು ಅಭಿವೃದ್ಧಿ ವಿಚಾರ ನೋಡಿ ಮತ ಹಾಕುವುದಾಗಿ ಹೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣವನ್ನು ಯುವ ಜನತೆಯೇ ಹೆಚ್ಚು ಬಳಕೆ ಮಾಡುತ್ತಿರುವ ಕಾರಣ ಡಿಜಿಟಲ್ ಮೀಡಿಯಾದಲ್ಲಿ ಯಾರು ಚೆನ್ನಾಗಿ 40 ವರ್ಷದ ಒಳಗಿನ ಯುವ ಮತದಾರರನ್ನು ಸೆಳೆಯುತ್ತಾರೋ ಅವರಿಗೆ ಈ ಚುನಾವಣೆಯಲ್ಲಿ ಗೆಲುವು ಸಿಗುವ ಸಾಧ್ಯತೆ ಹೆಚ್ಚಿದೆ.
– ಅಶ್ವಥ್ ಸಂಪಾಜೆ