ಕಲಬುರಗಿ: ಚುನಾವಣೆಯಲ್ಲಿ ಗೆಲ್ಲಬೇಕಾದರೆ ಸಮುದಾಯದ ಜನರ ಸಂಖ್ಯೆ ಹೆಚ್ಚಿರಬೇಕು ಎಂಬ ಮಾತು ಪ್ರಚಲಿತದಲ್ಲಿದೆ. ಆದರೆ ಸೂಫಿ ಸಂತರ ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿ (Kalaburagi) ಜಿಲ್ಲೆಯ ಹಲವು ನಾಯಕರು ಅವರ ಸಮುದಾಯದ (Community) ಮತಗಳು ಬೆರಳೆಣಿಕೆಯಷ್ಟಿದ್ದರೂ ಕ್ಷೇತ್ರದಲ್ಲಿ ಹಲವು ಬಾರಿ ಜಯಗಳಿಸಿದ್ದಾರೆ. ಅಂತಹ ಸಾಲಿಗೆ ಮಾಜಿ ಸಿಎಂ ದಿವಂಗತ ಧರಂ ಸಿಂಗ್ ಆಳಂದ ಶಾಸಕ ಸುಭಾಶ್ ಗುತ್ತೇದಾರ ಹಾಗೂ ಹಾಲಿ ಜೇವರ್ಗಿ ಶಾಸಕ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಸಮುದಾಯ ನಂಬದೇ ಅಭಿವೃದ್ಧಿ ಕೆಲಸಗಳಿಂದ ಜಯಗಳಿಸಿದವರು ಎಂದರೇ ತಪ್ಪಾಗಲಾರದು.
ಧರಂಸಿಂಗ್: ರಾಜಕೀಯದಲ್ಲಿ ಅಜಾತ ಶತ್ರು ಎಂದೇ ಖ್ಯಾತಿ ಹೊಂದಿದ ಮಾಜಿ ಸಿಎಂ ಧರಂಸಿಂಗ್ (Dharam Singh) ಜೇವರ್ಗಿ ಕ್ಷೇತ್ರದಿಂದ ಸತತ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಧರಂ ಸಿಂಗ್ ಅವರ ರಜಪೂತ ಜನಾಂಗದ ಮತಗಳು ಇರುವ ಮನೆಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ ಇದೆ. ಹೀಗಿದ್ದರೂ ಧರಂಸಿಂಗ್ ಅವರು ಜನಪರ ಕಾಳಜಿ ಹಾಗೂ ಅಭಿವೃದ್ಧಿ ಹೆಚ್ಚು ಒತ್ತು ನೀಡಿದ್ದರು. ಎಲ್ಲಾ ಸಮುದಾಯದ ಜೊತೆ ಉತ್ತಮ ಸಂಬಂಧದಿಂದ ಅವರ ಸಮುದಾಯದ ಜನಸಂಖ್ಯೆ ಇಲ್ಲದಿದ್ದರೂ ಸತತ ಜಯಗಳಿಸಿದ್ದರು. ಇದನ್ನೂ ಓದಿ: ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರರದ್ದೇ ನಿರ್ಣಾಯಕ ಪಾತ್ರ – ಈ ಬಾರಿ ಶಿವಶಂಕರ ರೆಡ್ಡಿ ಗೆಲ್ತಾರಾ?
ಸುಭಾಶ್ ಗುತ್ತೇದಾರ್: ಸದ್ಯ ಬಿಜೆಪಿಯ (BJP) ಆಳಂದ ಕ್ಷೇತ್ರದ ಶಾಸಕರಾದ ಸುಭಾಶ್ ಗುತ್ತೇದಾರ್ (Subhash Guttedar) ಅವರು ಈಡಿಗ ಸಮುದಾಯಕ್ಕೆ ಸೇರಿದ್ದಾರೆ. ಆಳಂದ ಕ್ಷೇತ್ರದಲ್ಲಿ 500 ರಿಂದ 600 ಮತಗಳು ಮಾತ್ರ ಅವರ ಸಮುದಾಯಕ್ಕೆ ಸೇರಿದ ಮತಗಳಾಗಿವೆ. ಆದರೆ ಸಮುದಾಯದ ಮತ ಇಲ್ಲದಿದ್ದರೂ ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತ, ದಲಿತ ಸೇರಿದಂತೆ ಹಿಂದುಳಿದ ವರ್ಗದ ಮತ ಪಡೆದು ಕ್ಷೇತ್ರದಲ್ಲಿ ಇಲ್ಲಿಯವರೆಗೆ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.
ಅಜಯ್‌ಸಿಂಗ್: ಸದ್ಯ ಜೇವರ್ಗಿ (Jevargi) ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ (Dr Ajay Singh) ಸಹ ತಂದೆ ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾಗಿದ್ದು, ತಂದೆಯ ಬಳಿಕ ಎರಡನೇ ಬಾರಿ ಜೇವರ್ಗಿ ಕ್ಷೇತ್ರದ ಶಾಸಕರಾಗಿದ್ದಾರೆ. 2023ರಲ್ಲಿ ಮತ್ತೆ ಸ್ಪರ್ಧಿಸಿ ಹ್ಯಾಟ್ರಿಕ್ ಜಯಗಳಿಸಲು ಪ್ರಯತ್ನಿಸುತ್ತಿದ್ದಾರೆ.