ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕಾಂಗ್ರೆಸ್‍ನಿಂದ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, ಈ ಬಾರಿ ಧ್ರುವನಾರಾಯಣ್ ಪುತ್ರ ದರ್ಶನ್‍ಗೆ (Darshan DhruvaNarayan) ನಂಜನಗೂಡು (Nanjanagudu) ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ.
ರಾಜ್ಯ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ಮೈಸೂರಿನ 11 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಅದರಲ್ಲೂ ಮೈಸೂರಿನ ನಂಜನಗೂಡು ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವುದರ ಬಗ್ಗೆ ತೀವ್ರ ಕುತೂಹಲ ಮೂಡಿಸಿತ್ತು. ನಂಜನಗೂಡು ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್‍ಗೆ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಮತ್ತು ಧ್ರುವನಾರಾಯಣ್ ನಡುವೆ ಫೈಟ್ ಸೃಷ್ಟಿಯಾಗಿತ್ತು. ಇಬ್ಬರಲ್ಲಿ ಯಾರ ಕೈ ಮೇಲಾಗುತ್ತದೋ ಎಂದು ಜನ ಕೂತೂಹಲದಿಂದ ನೋಡುತ್ತಿದ್ದ ಹೊತ್ತಿನಲ್ಲೇ ಧ್ರುವನಾರಾಯಣ್ (R.Dhruvanarayan) ಅವರು ಅಕಾಲಿಕವಾಗಿ ಮರಣ ಹೊಂದಿದ್ದರು. ಇವರ ಮರಣ ನಂತರ ಕ್ಷೇತ್ರದ ಟಿಕೆಟ್ ರೇಸ್‍ನ ವರಸೆಯೇ ಬದಲಾಗಿ ಬಿಟ್ಟಿತು.
ಧ್ರುವನಾರಾಯಣ್ ಅವರ ಹಠಾತ್ ನಿಧನದ ಪರಿಣಾಮ ಕ್ಷೇತ್ರದಲ್ಲಿ ಧ್ರುವನಾರಾಯಣ್ ಕುಟುಂಬದ ಪರ ಅನುಕಂಪದ ಅಲೆ ದೊಡ್ಡ ಮಟ್ಟದಲ್ಲಿ ಎದ್ದಿತ್ತು. ಧ್ರುವನಾರಾಯಣ್ ಪುತ್ರ ದರ್ಶನ್‍ಗೆ ಟಿಕೆಟ್ ಕೊಡಬೇಕೆಂಬ ಕೂಗು ಬಹು ಜೋರಾಗಿಯೆ ಕೇಳಿ ಬಂದಿತ್ತು. ಯಾವಾಗ ಧ್ರುವನಾರಾಯಣ್ ಅವರ ಪುತ್ರನ ಪರ ಕೂಗು ಹೆಚ್ಚಾಯ್ತೋ, ಅನುಕಂಪದ ಅಲೆಯ ಅಬ್ಬರವೂ ಜೋರಾಯ್ತೋ ತಕ್ಷಣವೇ ಮಹದೇವಪ್ಪಗೆ ಭವಿಷ್ಯದ ಅಪಾಯ ಕಣ್ಮುಂದೆ ಬಂದಂತೆ ಕಂಡಿದೆ. ಅನುಕಂಪದ ಅಲೆ ಈ ಮಟ್ಟಕ್ಕೆ ಇರುವಾಗ ಅದನ್ನು ಧಿಕ್ಕರಿಸಿ ಟಿಕೆಟ್ ಪಡೆದರೆ ಅದು ಚುನಾವಣೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ ದಲಿತ ನಾಯಕ ಎನ್ನಿಸಿಕೊಂಡ ಧ್ರುವನಾರಾಯಣ್ ಅವರ ಕುಟುಂಬಕ್ಕೆ ಮಹದೇವಪ್ಪ ಅನ್ಯಾಯ ಮಾಡಿದರು ಎಂಬ ಆರೋಪ ಶಾಶ್ವತವಾಗಿ ಉಳಿದು ಬಿಡುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂದು ಮಹದೇವಪ್ಪ ಯೋಚಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ರಿಲೀಸ್ – 124 ಕ್ಷೇತ್ರಗಳಿಗೆ ಅಭ್ಯರ್ಥಿ
ಎಲ್ಲವನ್ನು ಅಳೆದು ತೂಗಿರುವ ಹೆಚ್.ಸಿ.ಮಹದೇವಪ್ಪ (HC Mahadevappa) ಏಕಾಏಕಿ ಮೈಸೂರಿನಲ್ಲಿನ ಧ್ರುವನಾರಾಯಣ್ ಅವರ ಮನೆಗೆ ಆಗಮಿಸಿ, ಧ್ರುವನಾರಾಯಣ್ ಅವರ ಪುತ್ರನಿಗೆ ಸಾಂತ್ವನ ಹೇಳಿ ತಮ್ಮ ನಿರ್ಧಾರ ಪ್ರಕಟಿಸಿದ್ದರು. ನಾನು ನಂಜನಗೂಡು ಕ್ಷೇತ್ರದ ಟಿಕೆಟ್ ರೇಸ್‍ನಿಂದ ಹಿಂದೆ ಸರಿಯುತ್ತಿದ್ದೇನೆ. ದರ್ಶನ್ ಧ್ರುವನಾರಾಯಣ್‍ಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದರು. ಇದನ್ನೂ ಓದಿ: ಗೊಂದಲಕ್ಕೆ ತೆರೆ- ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ