ಚಿತ್ರದುರ್ಗ: ಎಸ್‌ಟಿ ಮೀಸಲಾತಿ ಕ್ಷೇತ್ರವಾಗಿರುವ ಚಳ್ಳಕೆರೆ (Challakere) ಈ ಹಿಂದೆ ಛೋಟಾಬಾಂಬೆ ಎಂದೇ ಪ್ರಖ್ಯಾತಿಯಾಗಿತ್ತು. ಇತ್ತೀಚೆಗೆ ಡಿಆರ್‌ಡಿಒ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಎಂಜಿನಿಯರಿಂಗ್ ಕಾಲೇಜು ಆರಂಭದಿಂದಾಗಿ ಸೈನ್ಸ್ ಸಿಟಿಯಾಗಿ ಪರಿವರ್ತನೆಯಾಗಿದೆ. ಚಳ್ಳಕೆರೆಯಲ್ಲಿ ಹಿಂದೆ ಇದ್ದಂತಹ ಆಯಿಲ್ ಮಿಲ್‌ಗಳ ಬೃಹತ್ ಉದ್ಯಮ ಬಂದ್‌ಆಗಿದೆ.
ಈ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ (Congress) ಭದ್ರ ಕೋಟೆ. 2013 ರಿಂದ ಸತತ ಎರಡು ಭಾರಿ ಶಾಸಕರಾಗಿ ಆಯ್ಕೆಯಾಗಿರುವ ಟಿ ರಘುಮೂರ್ತಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಭಾಗದ ಅಭಿವೃದ್ದಿ ಮತ್ತು ಜನೋಪಯೋಗಿ ಶಾಸಕ ಎಂಬ ಖ್ಯಾತಿ ಪಡೆದಿರುವ ಶಾಸಕ ರಘುಮೂರ್ತಿಗೆ ಬದ್ದ ಎದುರಾಳಿ ಮಾಜಿ ಸಚಿವ ತಿಪ್ಪೇಸ್ವಾಮಿ ಪುತ್ರ ಕೆಟಿ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರೋದು ಬಾರಿ ತಲೆನೋವಾಗಿ ಪರಿಣಮಿಸಿದೆ.
Advertisement
ಜೆಡಿಎಸ್ (JDS) ಅಭ್ಯರ್ಥಿ ರವೀಶ್ ಕುಮಾರ್ ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಿಂದ ಸೋತರೂ ಸಹ ಮತ್ತೆ ಚುನಾವಣೆ ಬರುವವರೆಗೆ ಕ್ಷೇತ್ರದತ್ತ ತಲೆಹಾಕಿಲ್ಲ ಎಂಬ ಆರೋಪವಿದೆ. ಅಲ್ಲದೇ ಸ್ಥಳಿಯರಾದ ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಸಹ ಕಳೆದ ಬಾರಿ ಸಾಂಸಾರಿಕ ಸಮಸ್ಯೆಯಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿ ಚುನಾವಣೆಗೂ ಮುನ್ನವೇ ಕಣದಿಂದ ಹಿಂದೆ ಸರಿದಿದ್ದರು. ಇದೇ ಕೊರಗಿನಿಂದಾಗಿ ಅವರ ತಂದೆ ಮಾಜಿ ಸಚಿವ ತಿಪ್ಪೇಸ್ವಾಮಿ ಮೃತಪಟ್ಟಿದ್ದರು. ಕುಮಾರಸ್ವಾಮಿ ತಾಯಿ ಸಹ ಮಗನಿಂದ ಐದು ವರ್ಷಕಾಲ ಮಾತನಾಡಿಸಿರಲಿಲ್ಲ.
Advertisement
ಈ ಬಾರಿ ತಾಯಿಮಗ ಒಟ್ಟಾಗಿದ್ದಾರೆ. ತಂದೆಯ ಚಿರಶಾಂತಿಗಾಗಿ ಚುನಾವಣೆಯಲ್ಲಿ ಗೆಲ್ಲಬೇಕೆಂದೇ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ಮಾರಾಟ ಮಾಡಿ ಕಣದಲ್ಲಿದ್ದಾರೆ. ಹಣದ ಕೊರತೆಯು ಇಲ್ಲದಂತೆ ಜನರೊಂದಿಗೆ ಪ್ರಚಾರದಲ್ಲಿ ಇರುವ ಪಕ್ಷೇತರ ಅಭ್ಯರ್ಥಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಘುಮೂರ್ತಿ ಮಧ್ಯೆ ಬಾರಿ ಸ್ಪರ್ಧೆ ಏರ್ಪಟ್ಟಿದೆ.
Advertisement
ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಈ ಕ್ಷೇತ್ರಕ್ಕೆ ಹೊಸ ಮುಖವೆನಿಸಿದ್ದು ಕಾರ್ಯಕರ್ತರನ್ನು ಒಗ್ಗೂಡಿಸುವುದೇ ಕಷ್ಟಕರವಾಗಿದೆ. ಈವರೆಗೆ ಮತದಾರರನ್ನು ತಲಪಲು ಆಗಿಲ್ಲ. ಫೇಸ್ ವಾಲ್ಯೂ ಸಹ ಇಲ್ಲದ ಅನಿಲ್ ಕುಮಾರ್ ಗೆ ಚಳ್ಳಕೆರೆ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ. ಉಳಿದಂತೆ ಯಾವುದೇ ಬಲ ಬಿಜೆಪಿಗಿಲ್ಲ.
Advertisement
ಅನಿಲ್ ಕುಮಾರ್ ಧನಾತ್ಮಕ ಅಂಶಗಳು:
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಲಾಭ ತಂದುಕೊಡಬಹುದು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ನಡುವೆ ಅಸಮಧಾನದ ಹೊಗೆ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಯಾದವ ಸಮುದಾಯ ಆಗಿರುವುದರಿಂದ ಯಾದವ ಸಮುದಾಯದ ಮತದಾರರನ್ನು ಸೆಳೆಯುತ್ತಾರೆ. ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಇರುವುದರಿಂದ ದಲಿತ ಸಮುದಾಯದ ಮತಗಳು ಒಂದೆಡೆ ಸೇರುವ ಸಾಧ್ಯತೆ. ಭದ್ರ ಮೇಲ್ದಾಂಡೆ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂ ಹಣವನ್ನು ಮೀಸಲು ಇಟ್ಟಿದೆ. ಬಿಜೆಪಿ ಮುಖಂಡರು ಒಗ್ಗಟ್ಟಿನ ಬಲ ಪ್ರದರ್ಶಿಸಿದರೆ ಗೆಲುವು ಸಿಗಬಹುದು.
ಋಣಾತ್ಮಕ ಅಂಶಗಳು:
ಬಿಜೆಪಿ ಸಮರ್ಥ ನಾಯಕರ ಮುಖಂಡರ ಕೊರತೆ, ಶಾಸಕ ಟಿ ರಘುಮೂರ್ತಿ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯ ಕೊರತೆ. ವಲಸಿಗ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಶಾಸಕ ಬಸವರಾಜ್ ಮಂಡಿಮಠ್ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ಕೆಟಿ ಕುಮಾರಸ್ವಾಮಿ ಬಿಜೆಪಿಯಿಂದ ಟಿಕೆಟ್ ತಪ್ಪಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿರುವುದು.
ಕಾಂಗ್ರೆಸ್ ಅಭ್ಯರ್ಥಿ ರಘುಮೂರ್ತಿ ಧನಾತ್ಮಕ ಅಂಶಗಳು:
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವ ಏಕೈಕ ಆಭ್ಯರ್ಥಿ ಶಾಸಕ ಟಿ ರಘುಮೂರ್ತಿ. ಚಳ್ಳಕೆರೆ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯ ಶಾಸಕರ ಹೆಗಲಿಗಿವೆ. ಶಾಸಕ ರಘುಮೂರ್ತಿ ಪ್ರಯತ್ನದಿಂದ 51 ಕೆರೆಗಳ ನೀರು ತುಂಬಿಸುವ ಯೋಜನೆಗೆ ಸೇರ್ಪಡೆಯಾಗಿದೆ. ಪರುಶುರಾಂಪುರ ಭಾಗದಲ್ಲಿ ಹರಿಯುವ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಆರು ಚೆಕ್ ಡ್ಯಾಂಗಳ ನಿರ್ಮಾಣದಿಂದ 365 ದಿನ ಕೃಷಿಚಟುವಟಿಕೆಗೆ ದಾರಿ.
ಗ್ರಾಮಾಂತರ ಪ್ರದೇಶಗಳಲ್ಲಿ ಭವನಗಳು, ಸಿಸಿ ರಸ್ತೆಗಳು, ಶುದ್ದ ನೀರು ಘಟಕ ಸ್ಥಾಪನೆಯಾಗಿದೆ. ಸ್ವಂತ ಕಟ್ಟಡಗಳ ಶಾಲೆಗಳ ನಿರ್ಮಾಣ, ಸರ್ಕಾರಿ ಕಟ್ಟಡಗಳು, ಹಾಸ್ಟೆಲ್ ನಿರ್ಮಾಣ. ಚಳ್ಳಕೆರೆ ನಗರಸಭೆ 16 ವಾರ್ಡ್ ಕೈ ವಶದಲ್ಲಿದೆ. ಚಳ್ಳಕೆರೆ ಉದ್ಯಮಿ ವೀರೇಂದ್ರ ಪಪ್ಪಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರ ಸಂಪರ್ಕದಲ್ಲಿದ್ದರು ಮತ್ತು ಕ್ಷೇತ್ರದ ಅನೇಕ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಋಣಾತ್ಮಕ ಅಂಶಗಳು:
ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ. ಚುನಾವಣೆ ಘೋಷಣೆ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ. ನಗರ ಅಧ್ಯಕ್ಷ ಕೆ ವೀರಭದ್ರಯ್ಯಸ್ಥಾನಕ್ಕೆ ದಲಿತ ಸಮುದಾಯ ಮತ್ತು ಪರುಶುರಾಮಪುರ ಭಾಗಕ್ಕೆ ಜಿಟಿ ಶಶಿಧರ ಆಯ್ಕೆಯಿಂದ ಪಕ್ಷದ ಹಿರಿಯರ ಅಸಮಧಾನ ಸ್ಪೋಟ. ಕ್ಷೇತದಲ್ಲಿ ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ ರಘುಮೂರ್ತಿ ಮತ್ತು ಶಾಸಕ ನಡುವಿನ ಭಿನ್ನಾಭಿಪ್ರಯಗಳು. ಕಾಮಗಾರಿ ವಿಚಾರದಲ್ಲಿ ಕಂಟ್ರಾಕ್ಟರ್ ಹಾಗೂ ಶಾಸಕರ ಮಧ್ಯೆ ಭಿನ್ನಾಭಿಪ್ರಾಯ. ಎಲ್ಲಾ ಕಾಮಗಾರಿಗಳನ್ನು ಶಾಸಕರೇ ನಿರ್ವಹಣೆ ಮಾಡಿರುವುದಕ್ಕೆ ಅಸಮಾಧಾನ.
ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಧನಾತ್ಮಕ ಅಂಶಗಳು
ಕಳೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಕೊನೆ ಸಮಯದಲ್ಲಿ ಬಿಜೆಪಿ ಆಭ್ಯರ್ಥಿ ತಟಸ್ಥವಾದ ಕಾರಣ ಜೆಡಿಎಸ್ ನ ಮತ ಪ್ರಮಾಣ ಹೆಚ್ಚಾಗಿತ್ತು. 30 ಸಾವಿರಕ್ಕೂ ಅಧಿಕ ಮತ ಗಳಿಸಿದ್ದ ಜೆಡಿಎಸ್ ಅಭ್ಯರ್ಥಿ ರವೀಶ್ ಇದನ್ನೇ ಬಲವರ್ಧನೆ ಮಾಡಿಕೊಂಡು ಗೆಲುವಿನ ಹಮ್ಮಸ್ಸಿನಲ್ಲಿದ್ದಾರೆ. ಸಕ್ರಿಯವಾಗಿ ಚುನಾವಣೆ ಚಟುವಟಿಕೆಯಲ್ಲಿದ್ದಾರೆ. ಇದನ್ನೂ ಓದಿ: ಟಿಕೆಟ್ ವಂಚಿತ ಶಾಸಕ ರಾಮದಾಸ್‌ರನ್ನು ತಬ್ಬಿ ಬೆನ್ನು ತಟ್ಟಿದ ಅಮಿತ್ ಶಾ
ಋಣಾತ್ಮಕ ಅಂಶಗಳು:
ಖಾಯಂ ನಾಯಕರನ್ನು ಹೊರತುಪಡಿಸಿ ಕ್ಷೇತ್ರದ ಮುಖಂಡರು ನಾಯರನ್ನು ಸಂಪರ್ಕಿಸಲಾಗುತ್ತಿಲ್ಲ. ವಾಣಿಜ್ಯೋದ್ಯಮಿ ಮತ್ತು ಪಕ್ಷದ ಪ್ರಭಾವಿ ನಾಯಕ ಎನಿಸಿಕೊಂಡಿದ್ದ ಕೆಸಿ ವೀರೆಂದ್ರ ಪಪ್ಪಿ ಕಾಂಗ್ರೆಸ್ ಗೆ ಸೇರಿರುವುದು ದೊಡ್ಡ ಹೊಡೆತ. ಮಾಜಿ ಶಾಸಕ ಬಸವರಾಜ್ ಮಂಡಿಮಠ್ ಬಿಜಿಪಿಯಿಂದ ಜೆಡಿಎಸ್‌ಗೆ ಬಂದ್ದಿರೂ ಸಹ ನಿರೀಕ್ಷೆಯಷ್ಟು ಲಾಭ ಇಲ್ಲ. ಜೆಡಿಎಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಕೆಟಿ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ.
ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಧನಾತ್ಮಕ ಅಂಶಗಳು:
ಸ್ಥಳಿಯ ಅಭ್ಯರ್ಥಿ ಎಂಬ ಹಣೆಪಟ್ಟಿ. ಮಾಜಿ ಸಚಿವ ದಿ ತಿಪ್ಪೇಸ್ವಾಮಿ ಸೇವೆ ಕೆಟಿಕೆಗೆ ವರದಾನವಾಗಿದೆ. ಎರಡು ಬಾರಿ ಸೋತಿರುವ ಅನುಕಂಪ ಕುಮಾರಸ್ವಾಮಿ ಮೇಲಿದೆ. ವಲಸಿಗರಿಗಿಂತ ಕುಮಾರಸ್ವಾಮಿ ಪರ ಸ್ಥಳೀಯ ನಾಯಕರ ಬ್ಯಾಟಿಂಗ್.
ಕುಮಾರಸ್ವಾಮಿ ಋಣಾತ್ಮಕ ಅಂಶಗಳು:
ಕಳೆದ ಚುನಾವಣೆವೇಳೆ ಕಣದಿಂದ ಪಲಾಯನ. ಮತದಾರರನ್ನು ತಲುಪದೇ ನಿರ್ಲಕ್ಷ ವಹಿಸಿದ್ದ ಅಸಮಾಧಾನ. ತಂದೆಯ ಹೆಸರಿನ ಮೇಲೆ ಗೆಲ್ಲುವ ನಿರೀಕ್ಷೆ. ಕೈನಲ್ಲಿಹಣವಿಲ್ಲದೇ ಆಸ್ತಿ ಮಾರಾಟ ಮಾರಿ ಸ್ಪರ್ಧೆ. ಕಳೆದ ಐದು ವರ್ಷ ಕ್ಷೇತ್ರದ ಜನರ ಒಡನಾಟ ಇರಲಿಲ್ಲ. ಚುನಾವಣೆ ವೇಳೆ ಅಪ್ಪನ ಹೆಸರಿನಲ್ಲಿ ಮತಯಾಚನೆ.
ಮತದಾರರು ಎಷ್ಟಿದ್ದಾರೆ?
ಒಟ್ಟು : 2,20,091
ಪುರುಷರು: 1,09,602
ಮಹಿಳೆಯರು: 1,10,486
ಜಾತಿವಾರು ಲೆಕ್ಕಾಚಾರ
ನಾಯಕ ಸಮುದಾಯ: 47,000
ಎಸ್ಸಿ ಸಮುದಾಯ: 43,000
ಯಾದವ ಸಮುದಾಯ: 37,000
ಲಿಂಗಾಯತ : 18,000
ಮುಸ್ಲಿಂ: 19,000
ಒಕ್ಕಲಿಗ ಸಮುದಾಯ: 18,000
ಇತರೆ: 39,000