ಮೂಡಿಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ – ಕಣ್ಣೀರಿಟ್ಟ ಕುಮಾರಸ್ವಾಮಿ

Public TV
1 Min Read
Mudigere BJP MLa MP Kumaraswamy

ಚಿಕ್ಕಮಗಳೂರು: ಮೀಸಲು ವಿಧಾನಸಭಾ ಕ್ಷೇತ್ರ ಮೂಡಿಗೆರೆ (Mudigere) ತಾಲೂಕಿನಲ್ಲಿ ತನ್ನ ವಿರುದ್ಧ ಕಾರ್ಯಕರ್ತರು ಆಕ್ರೋಶಗೊಂಡ ಹಿನ್ನೆಲೆ ಘಟನೆಯನ್ನು ನೆನೆದು ಶಾಸಕ ಕುಮಾರಸ್ವಾಮಿ(M P Kumaraswamy) ಕಣ್ಣೀರಿಟ್ಟಿದ್ದಾರೆ.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಗುರುವಾರ ಮೂಡಿಗೆರೆ ತಾಲೂಕಿಗೆ ಆಗಮಿಸಿತ್ತು. ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಹಾಗೂ ಸದಾನಂದಗೌಡ (Sadananda Gowda) ಕೂಡ ಆಗಮಿಸಿದ್ದರು.

ಈ ವೇಳೆ ಸಾವಿರಾರು ಕಾರ್ಯಕರ್ತರು ಕುಮಾರಸ್ವಾಮಿಗೆ ಟಿಕೆಟ್ ಬೇಡವೇ ಬೇಡ ಎಂದು ಆಕ್ರೋಶ ಹೊರಹಾಕಿದರು. ಬಿಎಸ್‌ವೈ ಬಂದ ದಾರಿಯಲ್ಲೇ ರೋಡ್ ಶೋ ನಡೆಸದೇ ಹಾಗೇ ತೆರಳಿದರು. ಸುಮಾರು ಅರ್ಧಗಂಟೆಗಳ ಕಾಲ ರಸ್ತೆ ಮಧ್ಯೆ ಹೈಡ್ರಾಮಾವೇ ಏರ್ಪಟ್ಟಿತ್ತು. ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಘಟನೆಯನ್ನು ನೆನೆದು ಕಣ್ಣೀಟ್ಟಿದ್ದಾರೆ.

 

ನಾನು ದಲಿತನಾಗಿದ್ದಕ್ಕೆ ಹೀಗೆಲ್ಲಾ ಮಾಡಿದ್ದಾರೆ. ಬೇರೆ ಸಾಮಾನ್ಯ ವರ್ಗದ ಶಾಸಕ, ಪರಿಷತ್‌ ಸದಸ್ಯರಾಗಿದ್ದರೆ ಹೀಗೆ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದ್ದಾರೆ. ಕೆಲವರು ಬೇಕು ಎಂದೇ ಹೀಗೆ ಮಾಡಿದ್ದಾರೆ. ಅವರು ಕಳೆದ 20 ವರ್ಷದಿಂದಲೂ ಇದ್ದಾರೆ. ಅಂದು ಇದ್ದವರೆ ಇಂದು ಇದ್ದದ್ದು. ಯಡಿಯೂರಪ್ಪ ನನ್ನನ್ನು 100 ಮೀಟರ್ ದೂರಕ್ಕೆ ಕರೆದೊಯ್ದು ಸಮಾಧಾನ ಮಾಡಿದ್ದಾರೆ. ಟಿಕೆಟ್ ನಿನಗೆ ಸಿಗಲಿದೆ. ನೀನೇ ಗೆಲ್ಲುವುದು ಎಂದಿದ್ದಾರೆ ಎಂದರು.

2013ನೇ ಇಸವಿಯಲ್ಲಿ ನಾನು ಸ್ವಲ್ಪ ಮೈಮರೆತಿದ್ದಕ್ಕೆ 1000 ಮತಗಳ ಅಂತರದಿಂದ ಸೋತಿದ್ದೆ. ಈಗ ಮತ್ತೆ ಅವರೇ ಅದೇ ವರಸೆ ಆರಂಭಿಸಿದ್ದಾರೆ. ಇದೆಲ್ಲಾ ಬೇಕೆಂದೇ ಕೆಲವರು ಮಾಡಿಸುತ್ತಿರುವ ಪಿತೂರಿ ಎಂದು ದೂರಿದರು. ಇದನ್ನೂ ಓದಿ: ರಸ್ತೆ ಮಧ್ಯೆಯೇ ಯಡಿಯೂರಪ್ಪರನ್ನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು

ನನಗೆ ಹೆಂಡತಿ-ಮಕ್ಕಳು ಇಲ್ಲ. ಪಕ್ಷಕ್ಕಾಗಿ ದುಡಿದು-ಹೋರಾಡಿದ್ದೇನೆ. ಘಟನೆಯ ಬಗ್ಗೆ ಬಿಎಸ್‌ವೈ ಹಾಗೂ ಸದಾನಂದಗೌಡರಿಗೆ ಕ್ಷಮೆ ಕೇಳುತ್ತೇನೆ. ಮೂಡಿಗೆರೆಯಲ್ಲಿ ನಾನೇ ಗೆಲ್ಲುತ್ತೇನೆ ಎಂದು ಎಲ್ಲಾ ವಾಹಿನಿಗಳ ಸಮೀಕ್ಷೆ ತಿಳಿಸಿದೆ. ನನ್ನ ಗೆಲುವನ್ನು ಸಹಿಸಿಕೊಳ್ಳದವರು ಈ ರೀತಿ ಮಾಡುತ್ತಿದ್ದಾರೆ ಎಂದು ತೆರೆಮರೆ ಹಿಂದಿನ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ಪಕ್ಷದಲ್ಲಿ ಇದ್ದವರು ಯಾರೂ ಇಲ್ಲ. ಎಲ್ಲಾ ಮನೆಯಿಂದ ಕೆಲಸ-ಕಾರ್ಯಬಿಟ್ಟು ಬಂದವರೇ ಹೆಚ್ಚು ಎಂದರು.

Share This Article
Leave a Comment

Leave a Reply

Your email address will not be published. Required fields are marked *