ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?

Public TV
2 Min Read
lingesh shivaram suresh beluru

ಹಾಸನ: ಬೇಲೂರು ಹಾಸನ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಯಗಚಿ ನದಿಯ ದಂಡೆಯಲ್ಲಿರುವ ಬೇಲೂರು ಚನ್ನಕೇಶವ ದೇವಾಲಯಕ್ಕೆ ಪ್ರಸಿದ್ಧಿ. ಹೊಯ್ಸಳರ ಕಾಲದ ಈ ದೇವಾಲಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ತನ್ನದೇ ಆದ ಇತಿಹಾಸ ಹೊಂದಿರುವ ಬೇಲೂರು ಈಗ ರಾಜಕೀಯವಾಗಿ ಸುದ್ದಿಯಲ್ಲಿದೆ. 2023ರ ಚುನಾವಣೆಗೆ ಬೇಲೂರು ಕ್ಷೇತ್ರ ಸಜ್ಜಾಗಿದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳ ಹುರಿಯಾಳುಗಳು ಅಖಾಡಕ್ಕೆ ಇಳಿದಿದ್ದಾರೆ.

ಈ ಕ್ಷೇತ್ರದಲ್ಲಿ 8 ಬಾರಿ ಕಾಂಗ್ರೆಸ್, ತಲಾ ಮೂರು ಬಾರಿ ಜನತಾ ಪಕ್ಷ ಮತ್ತು ಜೆಡಿಎಸ್, ಒಮ್ಮೊಮ್ಮೆ ಬಿಜೆಪಿ ಮತ್ತು ಸ್ವತಂತ್ರರು ಗೆದ್ದಿದ್ದಾರೆ. ಇದನ್ನೂ ಓದಿ: ‘ಹೊಳೆ’ಯನ್ನು ಈಜಿ ‘ನರಸೀಪುರ’ ದಡ ಸೇರುವವರ‍್ಯಾರು?

Hassana beluru temple

ಕಣದಲ್ಲಿರುವ ಪೈಲ್ವಾನರು
ಕೆ.ಎಸ್.ಲಿಂಗೇಶ್ (ಜೆಡಿಎಸ್)
ಬಿ.ಶಿವರಾಂ (ಕಾಂಗ್ರೆಸ್)
ಹುಲ್ಲಹಳ್ಳಿ ಸುರೇಶ್ (ಬಿಜೆಪಿ)

ಅಭ್ಯರ್ಥಿಗಳ ಪ್ಲಸ್‌, ಮೈನಸ್‌
ಕೆ.ಎಸ್.ಲಿಂಗೇಶ್: ವೀರಶೈವ ಸಮುದಾಯದ ಪ್ರತಿನಿಧಿ. ಕಳೆದ ಬಾರಿ ಮೊದಲ ಬಾರಿಗೆ ಶಾಸಕರಾಗಿ ಪರವಾಗಿಲ್ಲ ಎಂಬಂತೆ ಕೆಲಸ ಮಾಡಿರುವುದು. ಬಂಡಾಯ ಇಲ್ಲದೇ ಇರುವುದು. ರಣಘಟ್ಟ ಯೋಜನೆ ಕಾರ್ಯಗತ ಮಾಡಿದ್ದು ಇವರಿಗೆ ಚುನಾವಣೆಯಲ್ಲಿ ಮತ ಸೆಳೆಯಲು ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನು ಮೈನಸ್‌ ಅಂಶವೆಂದರೆ, ರಬ್ಬರ್ ಸ್ಟಾಂಪ್ ರೀತಿ ಕೆಲಸ ಮಾಡುತ್ತಾರೆ. ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳಲ್ಲ ಎಂಬುದಾಗಿದೆ.

Congress BJP JDS

ಬಿ.ಶಿವರಾಂ: ಹಿರಿಯ ರಾಜಕಾರಣಿ, ಮಾಜಿ ಸಚಿವರು, ಪಕ್ಷದ ಹಿನ್ನೆಲೆ ಇವರಿಗೆ ವರದಾನವಾಗಲಿದೆ. ನಕಾರಾತ್ಮಕ ಅಂಶಗಳೆಂದರೆ, ಹೊರಗಿನವರು ಎಂಬ ದೂರು. ಎಲ್ಲರಿಗೂ ಸ್ಪಂದಿಸಲ್ಲ, ಎಲ್ಲರೊಂದಿಗೂ ಬೆರೆಯಲ್ಲ ಎಂಬ ಆರೋಪವಿದೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರದಲ್ಲಿ ಇವರ ವಿರುದ್ಧವಾಗಿ ಬಂಡಾಯ ಪ್ರಬಲ ಆಗಿದೆ. ಇದನ್ನೂ ಓದಿ: ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಿಲ್ಲ – ಯಾರ ಪಾಲಾಗಲಿದೆ ಅರಕಲಗೂಡು ಕ್ಷೇತ್ರ?

ಹುಲ್ಲಹಳ್ಳಿ ಸುರೇಶ್: ಕಳೆದ ಬಾರಿಯ ಸೋಲಿನ ಅನುಕಂಪ, ಕೊರೊನಾ ಇತ್ಯಾದಿ ಸಂದರ್ಭದಲ್ಲಿ ಸಹಾಯ ಮಾಡಿರುವುದು ಇವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಮೈನಸ್‌ ಅಂಶವೆಂದರೆ, ಬಂಡಾಯದ ಬೇಗುದಿ. ಹೊರಗಿನವರು ಎಂಬ ಕೂಗಿದೆ. ಈ ಕ್ಷೇತ್ರದಲ್ಲಿ ಹೊರಗಿನವರು ಮತ್ತು ಒಳಗಿನವರು ಎಂಬ ವಿಷಯ ಮತ್ತು ಅಭಿವೃದ್ಧಿ ವಿಚಾರವೇ ಮುಖ್ಯವಾಗಲಿದೆ.

ಜಾತಿ ಲೆಕ್ಕಾಚಾರ ಏನು?
ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ಲಿಂಗಾಯತ ಸಮುದಾಯದ 54,000 ಮತದಾರರಿದ್ದಾರೆ. ಎರಡನೇ ಸ್ಥಾನದಲ್ಲಿ ಎಸ್‌ಸಿ 28,000, ಎಸ್ಟಿ 17,000 ಸಾವಿರ ಸೇರಿ ಪರಿಶಿಷ್ಟ ಜಾತಿ/ಪಂಗಡದ 45 ಸಾವಿರ ಮತದಾರರಿದ್ದಾರೆ. ನಂತರದ ಸ್ಥಾನದಲ್ಲಿ 30 ಸಾವಿರ ಒಕ್ಕಲಿಗ ಮತದಾರರಿದ್ದಾರೆ. ಉಳಿದಂತೆ ಕುರುಬ 15,000, ಮುಸ್ಲಿಮರ ಮತ 10,000 ಇದೆ. ಒಟ್ಟು 1,79,330 ಮತದಾರರಿರುವ ಕ್ಷೇತ್ರದಲ್ಲಿ 91,236 ಮಂದಿ ಪುರುಷ, 88,094 ಮಂದಿ ಮಹಿಳಾ ಮತದಾರರಿದ್ದಾರೆ.

Share This Article