ಬಾಗಲಕೋಟೆ ಬಿಜೆಪಿಯಲ್ಲಿ ಗೊಂದಲ – ಹಾಲಿ ಶಾಸಕನ ವಿರುದ್ಧವೇ ತೊಡೆತಟ್ಟಿದ ಸಹೋದರ

Public TV
2 Min Read
Karnataka Election 2023 bagalkot assembly constituency veeranna charantimath internal fight between BJP leaders

ಬಾಗಲಕೋಟೆ: ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ವಿಚಾರ ಹತ್ತಿರವಾಗುತ್ತಿದ್ದಂತೆ ಬಿಜೆಪಿಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿಯ ಕೋಟೆ ಎಂಬಂತಿದ್ದ ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಈ ಬಾರಿ ಗೊಂದಲದ ಗೂಡಾಗಿದೆ. ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ 2004ರಿಂದ ಬಿಜೆಪಿ ಬಲಿಷ್ಠವಾಗಿ ಬೆಳೆಯತೊಡಗಿತು. ಪಕ್ಷದ ಅಭ್ಯರ್ಥಿಗಳು ಬದಲಾದರೂ ಗೆಲುವು ಮಾತ್ರ ಬಿಜೆಪಿಗೆ ಎನ್ನುವಷ್ಟರ ಮಟ್ಟಿಗೆ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಾಣವಾಗಿತ್ತು.

ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಎಂಬ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ವೀರಣ್ಣ ಚರಂತಿಮಠ ಬಾಗಲಕೋಟೆ ಶಾಸಕರಾದ ಬಳಿಕ ತಕ್ಕಮಟ್ಟಿಗೆ ಕ್ಷೇತ್ರ ಅಭಿವೃದ್ಧಿಯಾಗಿದೆ. ಆದರೆ ಇದುವರೆಗೂ ಒಗ್ಗಟ್ಟಾಗಿದ್ದ ಬಿಜೆಪಿಯ ಕುಟುಂಬ ಇತ್ತೀಚೆಗೆ ಗೊಂದಲದ ಗೂಡಾಗಿದೆ. ಸ್ಥಳೀಯ ಹಾಲಿ ಶಾಸಕ ವೀರಣ್ಣ ಚರಂತಿಮಠಗೆ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರೇ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.  ಇದನ್ನೂ ಓದಿ: ಟೈಟಲ್ ವಿವಾದ : ನಟಿ ರಮ್ಯಾ ಪರವಾಗಿ ಕೋರ್ಟ್ ತೀರ್ಪು

ಮೊದಲು ಮಲ್ಲಿಕಾರ್ಜುನ ಚರಂತಿಮಠ ಸೇರಿದಂತೆ ಕೆಲ ಮುಖಂಡರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಮೂಲಕ ಪಕ್ಷದಲ್ಲಿ ತಮ್ಮದೇ ಹಿಡಿತವಿದೆ ಎಂಬುದನ್ನ ಶಾಸಕರು ಸಾಬೀತುಪಡಿಸಿದ್ದರು. ಇದು ಉಚ್ಚಾಟಿತ ಸಹೋದರ ಹಾಗೂ ಮುಖಂಡರಿಗೆ ಇರಿಸುಮುರಿಸು ಉಂಟಾಗುವಂತೆ ಮಾಡಿತ್ತು. ಆದರೆ ಈ ಮುಸುಕಿನ ಗುದ್ದಾಟ ಇಲ್ಲಿಗೆ ನಿಲ್ಲದೇ ಹಾಲಿ ಶಾಸಕರಾಗಿರುವ ವೀರಣ್ಣ ಚರಂತಿಮಠಗೆ ಟಿಕೆಟ್ ನೀಡಬೇಡಿ ಎಂದು ಸ್ವತಃ ಅವರ ಸಹೋದರ ಒಂದು ಗುಂಪು ಕಟ್ಟಿಕೊಂಡು ಈಗ ನೇರಾ ನೇರ ಸಮರವನ್ನೇ ಸಾರಿದ್ದಾರೆ. ಒಂದು ವೇಳೆ ಹಾಲಿ ಶಾಸಕ ವೀರಣ್ಣ ಚರಂತಿಮಠ್‌ ಅವರಿಗೆ ಪಕ್ಷ ಟಿಕೆಟ್ ನೀಡಿದ್ದೇ ಆದಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾನು ಕಣದಲ್ಲಿ ಇರುತ್ತೇನೆ ಎನ್ನುವ ಮೂಲಕ ಅಣ್ಣನ ವಿರುದ್ಧವೇ ತಮ್ಮ ತೊಡೆತಟ್ಟಿದ್ದಾರೆ.

ಅಣ್ಣ ತಮ್ಮನ ಜಗಳ ಒಂದು ಕಡೆಯಾದರೆ ಹಳೆ ಹುಲಿ ಬಿಜೆಪಿ ಹಾಲಿ ಪರಿಷತ್ ಶಾಸಕ ಪಿ.ಎಚ್ ಪೂಜಾರ್ ಸಹ ಶಾಸಕ ಚರಂತಿಮಠ ವಿರುದ್ಧ ಸಮರ ಸಾರಿದ್ದಾರೆ. ನಾನು ಸಹ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎನ್ನುವ ಮೂಲಕ ಹಾಲಿ ಶಾಸಕ ಚರಂತಿಮಠ್‌ಗೆ ಠಕ್ಕರ್ ಕೊಟ್ಟಿದ್ದಾರೆ.

ಚರಂತಿಮಠ ಅವರೊಂದಿಗೆ ಇದ್ದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮೋಹನ ನಾಡಗೌಡ ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್‌ ಕೊಡುವುದು ಬೇಡ ಎಂದಿದ್ದಾರೆ. ಮತ್ತೆ ಚರಂತಿಮಠ ಅವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ನಾನು ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಈ ಹಿಂದಿನ ಚುನಾವಣೆಯಲ್ಲಿ ಒಂದಾಗಿದ್ದ ಬಿಜೆಪಿ ಕುಟುಂಬ ಸದ್ಯ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

Share This Article