ರಾಯಚೂರು: ಪ್ರಾತ್ಯಕ್ಷಿಕೆ ನೀಡುವ ವೇಳೆ ಮತಯಂತ್ರಗಳಲ್ಲಿ ದೋಷವಿರುವುದು ಕಂಡು ಬಂದಿದ್ದು, ಯಾವುದೋ ಅಭ್ಯರ್ಥಿಗೆ ವೋಟ್ ಹಾಕಿದ್ದರೆ ವಿವಿಪ್ಯಾಟ್‍ನಲ್ಲಿ ಇನ್ಯಾರಿಗೋ ಮತ ಬಿದ್ದಿದೆ.
ರಾಯಚೂರಿನ ಕ್ರಾಫ್ಟ್ ಹಾಲ್‍ನಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತ್ತು ಮಾಧ್ಯಮಗಳಿಗೆ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ವಿವಿಪ್ಯಾಟ್‍ನಲ್ಲಿ ದೋಷಗಳು ಕಂಡುಬಂದಿವೆ. ಈ ದೋಷಕ್ಕೆ ಇವಿಎಂ ಯಂತ್ರದ ಬ್ಯಾಟರಿ ಕಡಿಮೆಯಿರುವುದು ಅಥವಾ ಪ್ರಿಂಟರ್ ಸಮಸ್ಯೆಯಿಂದ ಹೀಗೆ ಆಗುತ್ತದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.
ಆಗಿದ್ದು ಏನು?
ಪ್ರಾತ್ಯಕ್ಷಿಕೆ ವೇಳೆಯಲ್ಲಿ ಆರಂಭದಲ್ಲಿ ಬ್ಯಾಲೆಟ್ ಬಾಕ್ಸ್ ಮೂಲಕ 2 ಮತ ಹಾಕಲಾಯಿತು. ಆದರೆ ವಿವಿಪ್ಯಾಟ್ ನಲ್ಲಿ ಯಾವ ಸಂಖ್ಯೆ ಮತ ಹಾಕಲಾಗಿದೆಯೋ ಆ ಸಂಖ್ಯೆ ಕಾಣಿಸದೇ ಬೇರೆ ಸಂಖ್ಯೆ ಕಾಣಿಸಿದೆ. ಈ ದೋಷ ಕಂಡುಬಂದ ಕೂಡಲೇ ವಿವಿಪ್ಯಾಟ್ ಬದಲಿಸಿ ಬೇರೊಂದು ವಿವಿಪ್ಯಾಟ್ ತಂದು ಪ್ರಾತ್ಯಕ್ಷಿಕೆ ನಡೆಸಲಾಯಿತು. ಒಟ್ಟು 27 ಮತಗಳನ್ನು ಚಲಾವಣೆ ಮಾಡಿದ್ದು ವಿವಿಪ್ಯಾಟ್ ನಲ್ಲಿ ಸರಿಯಾಗಿ ತೋರಿಸಿದೆ. ಕೊನೆಗೆ ಎಲ್ಲ ಮತಗಳನ್ನು ಎಣಿಕೆ ಮಾಡಿದ್ದು ಎಲ್ಲ ಮತಗಳು ಸರಿಯಾಗಿ ಬಿದ್ದಿದೆ.
ಮತಯಂತ್ರಗಳಲ್ಲಿ ದೋಷಕಂಡುಬಂದಿರುವುದಕ್ಕೆ ವಿವಿಧ ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಕ್ರಾಫ್ಟ್ ರೂಂನಲ್ಲಿ ಉತ್ತರಪ್ರದೇಶದಿಂದ ಬಂದಿರುವ ಇವಿಎಂ ವಿವಿ ಪ್ಯಾಟ್ ಮತಯಂತ್ರಗಳನ್ನ ಭದ್ರವಾಗಿ ಇಡಲಾಗಿದೆ.
ಕಳೆದ ಚುನಾವಣೆಯಲ್ಲಿ ಮತದಾನ ಸಂದರ್ಭದಲ್ಲಿ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಮಾತ್ರ ಬಳಸಲಾಗುತ್ತಿತ್ತು. ಆದರೆ ಈ ಬಾರಿ ಕರ್ನಾಟಕ ವಿಧಾನ ಸಭಾ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಮತದಾರರ ಮತ ಖಾತ್ರಿಪಡಿಸುವ ಸಲುವಾಗಿ ವಿವಿಪ್ಯಾಟ್ ಯಂತ್ರವನ್ನು ಬಳಸಲಾಗುತ್ತಿದೆ.
ವಿವಿಪಿಎಟಿ ಅಂದ್ರೇನು?: ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿತ್ತು. ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತದೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರ್ ಅನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ಮತದಾರ ತಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗಡೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನಾವಣಾ ಆಯೋಗಕ್ಕೆ 2016ರಲ್ಲಿ ಸಲಹೆ ನೀಡಿತ್ತು.