Connect with us

ಮೌಲ್ಯಮಾಪನ ಬಹಿಷ್ಕರಿಸಿದ್ರೆ ಜೈಲು ಶಿಕ್ಷೆ – ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ಮೌಲ್ಯಮಾಪನ ಬಹಿಷ್ಕರಿಸಿದ್ರೆ ಜೈಲು ಶಿಕ್ಷೆ – ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ಬೆಂಗಳೂರು: ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರು, ಶಿಕ್ಷಕರಿಗೆ ಜೈಲು ಶಿಕ್ಷೆ ಹಾಗೂ ಮೌಲ್ಯಮಾಪನ ಬಹಿಷ್ಕಾರ ಬೆಂಬಲಿಸುವ ಸಂಘಟನೆಗಳ ಮೇಲೂ ಕ್ರಮ ಕೂಗೊಳ್ಳುವ ಬಗ್ಗೆ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಮಂಡಿಸಿದ ಮಹತ್ವದ ಮಸೂದೆ ಅಂಗೀಕಾರವಾಗಿದೆ.

ವಿಧಾನಸಭೆಯಲ್ಲಿ ಕರ್ನಾಟಕ ಶಿಕ್ಷಣ ತಿದ್ದುಪಡಿ ಮಸೂದೆ ಅಂಗೀಕಾರವಾಗಿದ್ದು, ಬಜೆಟ್ ಅಧಿವೇಶನದ ವೇಳೆ ಪರಿಷತ್‍ನಲ್ಲಿ ಅಂಗೀಕಾರ ಪಡೆದುಕೊಳ್ಳಲು ಸರ್ಕಾರದ ನಿರ್ಧಾರಿಸಿದೆ.

ವಿಧೇಯಕದ ಅಂಶಗಳು: 
* ವಿಧೇಯಕದ 23 ಡಿ ತಿದ್ದುಪಡಿ.
* ಮೌಲ್ಯಮಾಪಕ ಮೌಲ್ಯಮಾಪನದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತವರು ಮೌಲ್ಯಮಾಪನ ಸ್ಕೀಂ ಉಲ್ಲಂಘನೆ ಮಾಡುವಂತಿಲ್ಲ.
* ಮೌಲ್ಯಮಾಪನ ಬಹಿಷ್ಕಾರ ಮಾಡುವಂತಿಲ್ಲ ಹಾಗೂ ಮೌಲ್ಯಮಾಪಕರು, ಮೇಲ್ವೀಚಾರಕರಿಗೆ ಕೆಲಸ ಮಾಡದಂತೆ ಯಾರೂ ಪ್ರಚೋದನೆ ಮಾಡುವಂತಿಲ್ಲ. ಅಂದ್ರೆ ಪ್ರತಿಭಟನೆ ಮಾಡುವಂತೆ ಪ್ರಚೋದಿಸುವಂತಿಲ್ಲ.
* ಹೀಗೆ ಮಾಡಿದ್ರೆ ಮೌಲ್ಯಮಾಪನ ಬಹಿಷ್ಕಾರ ಮಾಡಿದವರಿಗೂ, ಪ್ರಚೋದನೆ ನೀಡುವವರಿಗೂ ಐದು ವರ್ಷ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಐದು ಲಕ್ಷ ರೂ.ವರೆಗೆ ಜುಲ್ಮಾನೆ.
* ಅಥವಾ ಜುಲ್ಮಾನೆ ಶಿಕ್ಷೆ ಎರಡೂ ವಿಧಿಸುವ ಕಾನೂನು.

ರಾಜ್ಯ ಸರ್ಕಾರದ ಈ ನಡೆಗೆ ಉಪನ್ಯಾಸಕರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೋರಾಟ ಮಾಡಿದ್ರೆ ಜೈಲಿಗೆ ಹಾಕೋದು ಎಷ್ಟು ಸರಿ? ಸರ್ಕಾರ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡ್ತಿದೆ. ನಮ್ಮ ಬೇಡಿಕೆ ಈಡೇರಿಸದೆ ಕಾನೂನು ಪ್ರಯೋಗಿಸಿ ನಮ್ಮನ್ನ ನಿಯಂತ್ರಣ ಮಾಡಲು ಮುಂದಾಗಿದೆ. ಈ ವಿಧೇಯಕ ಒಪ್ಪಲು ಸಾಧ್ಯವಿಲ್ಲ. ಇದು ಶಿಕ್ಷಕರಿಗೆ ಮಾಡ್ತಿರುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲು ನಮ್ಮ ಬೇಡಿಕೆ ಈಡೇರಿಸಿ ಅಮೇಲೆ ಕಾನೂನು ತನ್ನಿ. ನಿರಂತರ ಹೋರಾಟ ಮಾಡಿದ್ರೂ ಭರವಸೆ ಈಡೇರಿಸುತ್ತಿದ್ದೀರಾ? ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀಕಂಠೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ವಿಧೇಯಕ ವಾಪಸ್ ಪಡೆಯದಿದ್ರೆ ಹೋರಾಟ ಮಾಡಬೇಕಾಗುತ್ತೆ ಅಂತ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.

Advertisement
Advertisement