ಅರುಣ್ ಸಿ ಬಡಿಗೇರ್
ಬೆಂಗಳೂರು: ಸಾಯುವ ಸ್ಥಿತಿಯಲ್ಲಿ ಬಾಯ್ತೆರೆದು ನಿಂತಿದ್ದಾಳೆ ಧರಿತ್ರಿ. ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಭೂ ತಾಯಿ ಮಕ್ಕಳು. ಇನ್ನೊಂದು ತಿಂಗಳು ಕಳೆದರೆ ಬಿಸಿಲಿನ ಬೇಗುದಿಗೆ ಸುಟ್ಟು ಕರಕಲಾಗಲಿವೆ ದೇಹಗಳು. ಒಣಗಿ ಹೋಗಲಿವೆ ಮರಗಿಡಗಳು. ಅನಾಥ ಶವವಾಗಿ ಬೀಳಲಿವೆ ಪ್ರಾಣಿ ಪಕ್ಷಿಗಳು. ಬತ್ತಿ ಹೋಗಿವೆ ಕೆರೆ ಕಟ್ಟೆಗಳು. ಬರಿದಾಗಿದೆ ನದಿಗಳ ಒಡಲು. ಇಂಗಿ ಹೋಗಿದೆ ಭೂ ಜಲದಗಣ್ಣು. ಕಣ್ಣೀರಿಡಲು ಬತ್ತಿ ಹೋಗಿದೆ ದೇಹದ ನೀರು. ಇದೆಲ್ಲವು ರಾಜ್ಯದ ಭೀಕರ ಬರಗಾಲದ ರೌದ್ರ ಚಿತ್ರಣ. ಬರ ಹೇಗಿದೆ ಎನ್ನುವುದನ್ನು ತಿಳಿಯಲು ರಾಜ್ಯದಲ್ಲಿ 2500 ಕಿಮೀ ಸಂಚರಿಸಿ ಪಬ್ಲಿಕ್ ಟಿವಿಯ ತಂಡ ಪ್ರತ್ಯಕ್ಷ ವರದಿ ಮಾಡಿದೆ. ಈ ಸಂದರ್ಭದಲ್ಲಿ ನಮ್ಮ ತಂಡಕ್ಕೆ ಕಂಡಿರೋ ಬರಗಾಲದ ಸ್ಥಿತಿಯನ್ನ ನಿಮ್ಮ ಮುಂದೆ ಇಡುವ ಪ್ರಯತ್ನವಿದು.
ನೀರಿನ ವಿಷ್ಯದಲ್ಲಿ ಬೆಂಗಳೂರಿಗರು ಪುಣ್ಯವಂತರು. 4-5 ಕಿಮೀ ಬಿಂದಿಗೆ ಹಿಡಿದುಕೊಂಡು ನೀರು ಹೊತ್ತು ತರೋ ಪರಿಸ್ಥಿತಿ ಇಲ್ಲಿಲ್ಲ. ಶಾಲೆಬಿಟ್ಟು ನೀರು ತರಬೇಕಾದ ಅನಿವಾರ್ಯತೆ ಇಲ್ಲಿಲ್ಲ. ನೀರು ತರದೆ ಇದ್ದರೆ ಅಪ್ಪ ಅಮ್ಮನ ಕಡೆ ಹೊಡಿಸಿಕೊಳ್ಳುವಷ್ಟು ಹೀನಾಯ ಸ್ಥಿತಿ ಇಲ್ಲಿನ ಮಕ್ಕಳಿಗೆ ಬಂದಿಲ್ಲ. ಕೆಲಸ ಬಿಟ್ಟು ನೀರಿಗಾಗಿ ಬೋರ್‍ವೆಲ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲೋ ಸ್ಥಿತಿ ಇಲ್ಲಿಲ್ಲ. ನಿದ್ದೆಗೆಟ್ಟು ಕರೆಂಟ್‍ಗಾಗಿ ಕಾದು ರಾತ್ರಿಯೆಲ್ಲ ನೀರಿಗಾಗಿ ಅಲೆದಾಡೋ ಪ್ರಸಂಗ ಬಂದಿಲ್ಲ. ಕುಡಿಯೋ ನೀರಿಗಾಗಿ ಒಂದು ಕಡೆ, ಬಳಸೋ ನೀರಿಗಾಗಿ ಇನ್ನೊಂದು ಕಡೆ ಹೋಗಿ ಬಿಂದಿಗೆ ತುಂಬಿಕೊಂಡು ಬರೋ ದುರ್ದೈವ ಇಲ್ಲಿಲ್ಲ. ನೀರಿಲ್ಲದ ಊರು ಅಂತ ಹೆಣ್ಣು ಕೊಡದೇ ಇರುವಷ್ಟು ಬರಗೆಟ್ಟು ಹೋಗಿಲ್ಲ ಈ ಬೆಂಗಳೂರು. ಬತ್ತಿಹೋದ ನದಿಯಲ್ಲಿ 5 ಅಡಿ ಗುಂಡಿ ತೋಡಿ ಬಂದ ನೀರನ್ನ ಗಂಟೆ ಗಟ್ಟಲೆ ಕುಳಿತು ಒಂದು ಬಿಂದಿಗೆ ತುಂಬಿಸಿಕೊಂಡು 4 ಕಿಮೀ ನಡೆದುಕೊಂಡು ಹೋಗುವ ಹೀನಾಯ ಸ್ಥಿತಿ ಬೆಂಗಳೂರಿನಲ್ಲಿ ಕಾಣಿಸುತ್ತಿಲ್ಲ. ಎಲ್ಲೋ ಹರಿಯೋ ನದಿಯಿಂದ ನೀರನ್ನ ಪಡೆದು ದಾಹ ತೀರಿಸಿಕೊಳ್ಳೋ ಬೆಂಗಳೂರಿನವರಷ್ಟು ಪುಣ್ಯವಂತರು ಹಳ್ಳಿಯ ಜನರಲ್ಲ.
Advertisement
ಜಲಾಶಯಗಳಲ್ಲಿ ವಾಸನೆ ಬರುತ್ತಿದೆ ನೀರು
ಕೆಆರ್‍ಎಸ್, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯ ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರು ಕಪ್ಪಾಗುತ್ತಿದೆ. ಜಲಾಶಯಗಳು ಬರಿದಾಗುವ ಸ್ಥಿತಿ ಬಂದೊದಗಿದೆ. ಜಲಾಶಯದ ಹಿನ್ನಿರಿನ ಹತ್ತಿರ ಹೋಗ್ತಿದ್ದಂತೆ ಮೀನು ಸತ್ತಾಗ ಬರೋ ವಾಸಯಂತೆ ನೀರು ವಾಸನೆ ಬರುತ್ತಿದೆ. ಈ ನೀರನ್ನ ಶುದ್ಧಿಕರಿಸಿ ಬೇಸಿಗೆಯಲ್ಲಿ ಕುಡಿಯೋಕೆ ನೀರು ಸರಬರಾಜು ಮಾಡಲಾಗುತ್ತೆ. ಇನ್ನು ಈ ಜಲಾಶಯದ ನೀರು ನಾಲೆಗಳ ಮೂಲಕ ಮಂಡ್ಯ ಜಿಲ್ಲೆಗೆ ತಲುಪಬೇಕು. ಆದ್ರೆ ನಾಲೆಯಲ್ಲಿ ನೀರನ್ನ ಬಿಡಲಾಗುತ್ತಿಲ್ಲ. ಹಾಗಾಗಿ ನಾಲೆಯನ್ನ ನಂಬಿರೋ ಮಂಡ್ಯ ಜನಕ್ಕೆ ಎಪ್ರಿಲ್ ನಂತರ ಹಾಹಾಕಾರ ಉಂಟಾಗೋದ್ರಲ್ಲಿ ಯಾವುದೇ ಡೌಟೇ ಇಲ್ಲ.
Advertisement
ನಾಗರಹೊಳೆ ಹಾಗೂ ಬಂಡಿಪುರ ಕಾಡು ಪ್ರಾಣಿಗಳು ನಂಬಿರೋ ಕಬಿನಿ ಜಲಾಶಯದ ನೀರು ಬರಿದಾಗುತ್ತಾ ಸಾಗಿದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಕಾಡು ಪ್ರಾಣಿಗಳ ಸ್ಥಿತಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ದುರ್ದೈವ ಅಂದ್ರೆ ಜಲಾಶಯದ ಪಕ್ಕದಲ್ಲೆ ಇರೋ ಹತ್ತಾರು ಹಳ್ಳಿಗಳಿಗೆ ಕುಡಿಯೋಕೆ ನೀರು ಸಿಗೋದೆ ಇಲ್ಲ. ಜಲಾಶಯದಿಂದ ಸುತ್ತಲಿರೋ ಹಳ್ಳಿಗಳ ಕೆರೆಗಳಿಗೆ ನೀರನ್ನ ತುಂಬಿಸಬೇಕು ಅನ್ನೋ ಕನಿಷ್ಟ ಜ್ಞಾನವೂ ನಮ್ಮ ಜನಪ್ರತಿನಿಧಿಗಳಿಗಿಲ್ಲ.
Advertisement
Advertisement
ಜಲಾಶಯವೇ ಬತ್ತಿ ಹೋದಾಗ
50 ವರ್ಷದ ಇತಿಹಾಸ ಹೊಂದಿರೋ ಚಾಮರಾಜನಗರ ಜಿಲ್ಲೆ ಚಿಕ್ಕಹೊಳೆ ಜಲಾಶಯ ಸಂಪೂರ್ಣ ಬರಿದಾಗಿದೆ. ಧರಿತ್ರಿ ಹನಿ ನೀರಿಗೆ ಬಾಯ್ತೆರೆದು ಬಿಸಿಲಿನ ದವಡೆಯಲ್ಲಿ ಒದ್ದಾಡುತ್ತಿದ್ದಾಳೆ. ಸುತ್ತಮುತ್ತಲಿನ 21 ಹಳ್ಳಿಗಳ ಜನರ ದಾಹ ನೀಗಿಸುತ್ತಿದ್ದ ಈ ಜಲಾಶಯದ ದಾಹ ತೀರಿಸುವವರು ಯಾರು. ಈ ಜಲಾಶಯದ ಸುತ್ತಲಿರೋ ಕಾಡು ಪ್ರಾಣಿಗಳಂತೂ ನೀರಿಲ್ಲದೆ ಸಾವಿನ ದವಡೆಯಲ್ಲಿವೆ. ಒಂದು ಕಡೆ ಕಾಡ್ಗಿಚ್ಚು ಇನ್ನೊಂದು ಕಡೆ ನೀರಿನ ಬವಣೆ. ಇದರ ಮಧ್ಯೆ ಕಾಡು ಪ್ರಾಣಿಗಳು ದಿಕ್ಕು ಕಾಣದೆ ಸಾಯೋ ಸ್ಥಿತಿಗೆ ಬಂದು ತಲುಪಿವೆ. ಮನುಷ್ಯರೇನೋ ಟ್ಯಾಂಕರ್ ತರಿಸಿ ನೀರು ಕುಡಿತಾರೆ, ಆದ್ರೆ ಪ್ರಾಣಿಗಳ ಸ್ಥಿತಿ ಏನು..?
ಮರಳು ದಂಧೆಗೆ ಬೀಳುತ್ತಾ ಕಡಿವಾಣ?
ಕಾವೇರಿ ಉಗಮ ಸ್ಥಾನದಲ್ಲಿ ಹೆಚ್ಚು ಮಳೆ ಸುರಿದಾಗ ನಮ್ಮ ಆಸ್ತಿ ಪಾಸ್ತಿ ಹಾನಿಯಾಗುತ್ತೆ, ಬೆಳೆದ ಬೆಳೆ ನಾಶವಾಗುತ್ತೆ. ಆಗ ನಮ್ಮನ್ನ ನೋಡೋರೆ ದಿಕ್ಕಿರಲ್ಲ. ಆಗ ಮಂಡ್ಯದ ಜನ ಖುಷಿ ಪಡುತ್ತಾರೆ. ಕಾವೇರಿ ತುಂಬಿ ಹರಿಯುತ್ತಿದ್ದಾಳೆಂದು ಸಂಭ್ರಮಿಸ್ತಾರೆ. ಆದ್ರೆ ನಾವಿಲ್ಲ ಕಣ್ಣೀರು ಹಾಕ್ತೀವಿ ಅಂತಾ ಕೊಡಗಿನ ಭಾಗಮಂಡಲದ ಜನ ನೋವಿನಿಂದ ಹೇಳಿಕೊಳ್ತಾರೆ. ಇದಲ್ಲದೆ ಕಾವೇರಿ ಒಡಲಲ್ಲಿ ಮರಳುದಂಧೆ ಕೂಡ ಎಗ್ಗಿಲ್ಲದೆ ಸಾಗಿದೆ, ಇದೆಲ್ಲದಕ್ಕಿಂತ ಹೆಚ್ಚಾಗಿ ಕಾವೇರಿ ನದಿಯ ಒತ್ತುವರಿ ಮಾಡಿ ಕಟ್ಟಡಗಳನ್ನ ಕಟ್ಟಿಕೊಳ್ಳೋಕೆ ಜನ ಶುರು ಮಾಡಿದ್ದಾರೆ. ಚರಂಡಿ ನೀರನ್ನೆಲ್ಲ ಕಾವೇರಿ ನದಿಗೆ ಹರಿಯಬಿಡ್ತಿದ್ದಾರೆ. ಇದರ ಮಧ್ಯೆ ಕಾವೇರಿ ಕಲುಷಿತಗೊಂಡು ಬತ್ತಿ ಹೋಗುತ್ತಿದ್ದಾಳೆ. ಈಗಲೇ ಇದರ ಸಂರಕ್ಷಣೆ ಮಾಡದೇ ಇದ್ದರೆ ಗಂಗಾ ನದಿಯಂತೆ ಸಂಪೂರ್ಣ ಮಲೀನವಾಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.
ಎಲ್ಲೆಲ್ಲೂ ಜಾನುವಾರುಗಳ ಮೂಳೆಗಳೆ ಪತ್ತೆ
ಇನ್ನು ನಮ್ಮ ತಂಡ ತೆರಳಿದ ಹಲವು ಜಲಾಶಯಗಳು, ಬತ್ತಿಹೋದ ನದಿ, ಹೊಳೆ, ಕಾಲುವೆ, ಕೆರೆ ಪಕ್ಕದಲ್ಲಿ ಪ್ರಾಣಿಗಳ ಮೂಳೆಗಳು ಕಂಡುಬಂದ್ವು. ಒಂದು ಕಡೆ ಮಳೆ ಇಲ್ಲದೆ ಹಸಿರೆಲ್ಲ ಮರೆಯಾಗಿದೆ. ಇನ್ನೊಂದು ಕಡೆ ಬಿಸಿಲಿನ ಝಳ. ಇದರ ಮಧ್ಯೆ ಕುಡಿಯೋಕೆ ನೀರಿಲ್ಲದೆ ಅನೇಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಪ್ರಾಣಿಗಳ ಅವಶೇಷ ನೋಡ್ತಾ ಇದ್ರೆ ಕಣ್ಣಂಚಲ್ಲಿ ನೀರು ಬರದೆ ಇರದು. ಇನ್ನೂ ಕೆಲವು ಕಡೆಯಲ್ಲಂತೂ ನೀರಿಲ್ಲದೆ ಮೀನುಗಳ ಮಾರಣಹೋಮ ನಡೆಯುತ್ತಿದೆ. ಜಲಚರಗಳು ಜೀವನ್ಮರಣದ ಮಧ್ಯೆ ಹೋರಾಡುತ್ತಿವೆ. ಬುದ್ಧಿ ಜೀವಿ ಮನುಷ್ಯ ಮಾತ್ರ ದುಡ್ಡುಕೊಟ್ಟು ನೀರು ಖರೀದಿಸ್ತಾನೆ. ಆದ್ರೆ, ಮೂಖ ಪ್ರಾಣಿಗಳ ವೇದನೆಯನ್ನ ಕೇಳೋರಾದ್ರು ಯಾರು..?
ಪ್ರಾಣಿಗಳಿಗಾಗಿ ಟ್ಯಾಂಕರ್ ನೀರು.
ಕುಡಿಯೋಕೆ ನೀರು ಸಿಕ್ರೆ ಸಾಕು ಅನ್ನೋ ಈ ಕಾಲದಲ್ಲಿ ಒಂದು ವಿಶೇಷ ಗ್ರಾಮವೊಂದಿದೆ. ಈ ರಂಗಪುರ ಗ್ರಾಮ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿದೆ. ಈ ಗ್ರಾಮದ ಜನರಿಗೆ ಕುಡಿಯೋಕೆ ನೀರಿನ ಸಮಸ್ಯೆ. ಆದ್ರೆ, ಈ ಗ್ರಾಮದ ಜನ ಮಾತ್ರ ತಮಗೆ ಎಷ್ಟೆ ಕಷ್ಟವಾದ್ರು ಚಿಂತೆಯಿಲ್ಲ ಪ್ರಾಣಿಗಳು ನೀರಿಲ್ಲದೆ ಸಾವನ್ನಪ್ಪಬಾರದು ಅಂತಾ ಒಣಗಿ ಹೋಗಿರೋ ಕೆರೆಗೆ ವಾರಕ್ಕೊಮ್ಮೆ ಟ್ಯಾಂಕರ್‍ನಿಂದ ನೀರು ಸುರಿಯುತ್ತಿದ್ದಾರೆ. ಕೆರೆ ತುಂಬಿಸೋಕೆ ಸಾಧ್ಯವಾಗದೆ ಇದ್ದರು ಕುರಿ, ದನಕರುಗಳು, ಮಂಗಗಳು, ನಾಯಿಗಳು, ಪಕ್ಷಿಗಳು ತಮ್ಮ ದಾಹ ತೀರಿಸಿಕೊಳ್ಳುತ್ತಿವೆ.
ಗೋ ಶಾಲೆಗಳು
ನಮ್ಮ ತಂಡ ಹೋದ ಕೆಲವು ಕಡೆ ಗೋ ಶಾಲೆಗಳು ಸಿಕ್ವು. ಸರ್ಕಾರವೇನೋ ಗೋ ಶಾಲೆಗಳ ವ್ಯವಸ್ಥೆ ಮಾಡ್ತಿದೆ. ಆದ್ರೆ, ಕೆಲ ಗೋ ಶಾಲೆಗಳಲ್ಲಿ ಚಿರತೆ ಕಾಟವಿದೆ. ಇನ್ನೂ ಕೆಲವು ಕಡೆ ರಾತ್ರಿ ವಿದ್ಯುತ್ ಸಂಪರ್ಕವೇ ಇಲ್ಲ. ಗೋವುಗಳ ಜೊತೆ ಬಂದ ಮಾಲೀಕರು ಕತ್ತಲಲ್ಲೆ ರಾತ್ರಿ ಕಳೆಯೋ ಹಾಗಾಗಿದೆ. ಹಾವುಗಳ ಕಾಟ ಬೇರೆ ಇದೆ. ಗೋವುಗಳಿಗೆ ನೀರಿನ ವ್ಯವಸ್ಥೆ ಏನೋ ಮಾಡಿದ್ದಾರೆ. ಆದ್ರೆ ಗೋವುಗಳ ಜೊತೆ ಬಂದವರು ಉಪವಾಸ ಕೂರುವಂತಾಗಿದೆ. ಮನೆಗೆ ಹೋಗಿ ಬರಬೇಕಂದ್ರೆ ಹಳ್ಳಿಯಿಂದ 30-40 ಕಿಮೀ ದೂರದಲ್ಲಿದ್ದಾರೆ. ಹೋಗಿ ಬರೋದಕ್ಕೂ ವ್ಯವಸ್ಥೆ ಇಲ್ಲ. ಯಾಕಂದ್ರೆ ಬಹಳಷ್ಟು ಗೋ ಶಾಲೆಗಳಿರೋದು ಮುಖ್ಯ ರಸ್ತೆಯಿಂದ ಬಹುದೂರ ಒಳಗಡೆ. ಅಲ್ಲಿ ಬಸ್ ಸೌಲಭ್ಯವಂತೂ ಇಲ್ಲವೆ ಇಲ್ಲ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ಆದ್ರೂ ಸಂಬಂಧ ಪಟ್ಟವರು ಸ್ವಲ್ಪ ವ್ಯವಸ್ಥೆ ಮಾಡಿದ್ರೆ ಒಳ್ಳೆಯದಾಗುತ್ತೆ.