ಮೈಸೂರು: ಹೊಲಕ್ಕೆ, ತೋಟಕ್ಕೆ ನೀರಿಲ್ಲ ಅಂತಾ ರೈತರು ಕಂಗಾಲಾಗಿರುವುದನ್ನು ನೋಡಿದ್ವೀವಿ. ಆದರೆ ಇಲ್ಲಿ ತೋಟಕ್ಕೆ ನೀರು ಹರಿಯುತ್ತಿರುವುದೇ ರೈತರ ಪಾಲಿಗೆ ಕಂಟಕವಾಗಿದೆ. ನೀರು ಒಂದರ್ಥದಲ್ಲಿ ರೈತರ ಪಾಲಿಗೆ ಮರಣ ಶಾಸನ ಬರೆಯುತ್ತಿದೆ. ಯಾಕಂದ್ರೆ ನೀರುನೀರಾಗಿ ಉಳಿದಿಲ್ಲ ವಿಷವಾಗಿ ಮಾರ್ಪಟ್ಟಿದೆ.
ಈ ಘಟನೆ ನಡೆದಿರೋದು ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾ ವ್ಯಾಪ್ತಿಯ ಬಿದರಗೂಡು ಗ್ರಾಮದಲ್ಲಿ. ಮೈಸೂರು ನಗರಕ್ಕೆ ಕಬಿನಿ ನದಿಯಿಂದ ಕುಡಿಯುವ ನೀರು ಹರಿಸಲು ಬಿದರಗೂಡು ಸಮೀಪ ನೀರು ಶುದ್ಧೀಕರಣ ಘಟಕವನ್ನು ಕರ್ನಾಟಕ ಕುಡಿಯುವ ನೀರು ಸರಬರಾಜು ಇಲಾಖೆ ಸ್ಥಾಪಿಸಿದೆ. ಈ ಘಟಕದಲ್ಲಿ ನೀರು ಶುದ್ಧೀಕರಿಸಿ ಉಳಿಯುವ ಅನುಪಯುಕ್ತ ನೀರನ್ನು ವ್ಯವಸ್ಥಿತವಾಗಿ ವಿಸರ್ಜಿಸದೆ ಆ ನೀರನ್ನು ಅಕ್ಕಪಕ್ಕದ ಜಮೀನುಗಳಿಗೆ ಹರಿಸಲಾಗುತ್ತಿದೆ. ಇದರಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ.
Advertisement
Advertisement
ಕಳೆದ ಐದಾರು ವರ್ಷಗಳಿಂದ ಇದು ನಿರಂತರವಾಗಿ ನಡೆಯುತ್ತಿದೆ. ಅಡಕೆ, ತೆಂಗು, ಶುಂಠಿ, ಬಾಳೆ ಬೆಳೆಯುತ್ತಿದ್ದ ರೈತರು, ಹೀಗೆ ತೋಟಕ್ಕೆ ನೀರು ತುಂಬುತ್ತಿರುವ ಕಾರಣ ಬೆಳೆ ಬೆಳೆಯಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ರೈತರು ನೂರು ಬಾರಿ ದೂರು ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ.
Advertisement
ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಇತ್ತ ಗಮನ ಹರಿಸಿ ರೈತರ ನೆರವಿಗೆ ಧಾವಿಸಬೇಕಿದೆ. ವಿಷದ ನೀರನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕಿದೆ.