Connect with us

Bellary

ರಾಜ್ಯದಲ್ಲಿ ಅಕಾಲಿಕ ಮಳೆ- ವರುಣನ ಅಬ್ಬರಕ್ಕೆ ನೆಲಕ್ಕುರುಳಿದ ಬಾಳೆ, ವಿದ್ಯುತ್ ಕಂಬಗಳು

Published

on

-ಸಿಡಿಲು ಬಡಿದು ಹೊತ್ತಿ ಉರಿದ ಮರ

ಬೆಂಗಳೂರು: ರಾಮನಗರ, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆ ಅಕಾಲಿಕ ಮಳೆಯಾಗಿದ್ದು, ವರುಣನ ಅಬ್ಬರಕ್ಕೆ ಬಾಳೆ, ವಿದ್ಯುತ್ ಕಂಬಗಳು ಧರಗೆ ಉರುಳಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ರಾಮನಗರ ಜಿಲ್ಲೆಯಾದ್ಯಂತ ಹಲವೆಡೆ ರಾತ್ರಿ ಭರ್ಜರಿಯಾಗಿ ಮಳೆ ಸುರಿದಿದ್ದು, ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ರಾಮನಗರ ತಾಲೂಕಿ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಹಾನಿಯುಂಟಾಗಿದೆ. ಸತತ ಎರಡು ಗಂಟೆಗಳ ಕಾಲ ಸುರಿದ ಮಳೆ ಬೇಸಿಗೆ ಬಿಸಿಲ ಬೇಗೆ ಇಳೆಗೆ ಮಳೆಯು ತಂಪನೆರೆದಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆರಡು ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ವರುಣನ ಅಬ್ಬರದಿಂದಾಗಿ ಬಿಡದಿ ಸಮೀಪದ ತಾಳಕುಪ್ಪೇ ಗ್ರಾಮದ ಶಿವಣ್ಣ ಎಂಬವರ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣವಾಗಿ ನೆಲಸಮವಾಗಿದೆ. ಸುಮಾರು 18 ಲಕ್ಷ ರೂ. ಮೌಲ್ಯದ ಬಾಳೆ ಬೆಳೆ ಹಾನಿಯುಂಟಾಗಿದೆ. ಇದೇ ಗ್ರಾಮದ ಸಂಪತ್ ಎಂಬವರ ಮನೆಯ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿವೆ. ಮನೆಯಿಲ್ಲದೇ ಕೊರಗುತ್ತಿದ್ದ ಸಂಪತ್ ಅವರ ಕುಟುಂಬಕ್ಕೆ ಗ್ರಾಮಸ್ಥರೇ ರಕ್ಷಣೆ ನೀಡಿದ್ದಾರೆ. ಬೈಚುಹಳ್ಳಿ ವ್ಯಾಪ್ತಿಯಲ್ಲಿ ಒಂದು ಟ್ರಾನ್ಸ್‍ಫರ್ಮರ್ ಸೇರಿದಂತೆ 7 ವಿದ್ಯುತ್ ಕಂಬಗಳು ಮಳೆಯಿಂದಾಗಿ ಧರೆಗೆ ಉರುಳಿವೆ.

ಮಾಗಡಿ ತಾಲೂಕಿನ ಕುದೂರು ತಿಪ್ಪಸಂದ್ರದಲ್ಲಿ ಮಾಡ್ಬಾಳ್ ಗ್ರಾಮಗಳ ಭಾಗದಲ್ಲಿ ಜೋರು ಮಳೆಯಾಗಿದ್ದು ಅಣ್ಣೇಶಾಸ್ತ್ರಿ ಪಾಳ್ಯದಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕನಕಪುರ ಮತ್ತು ಚನ್ನಪಟ್ಟಣದಲ್ಲೂ ಭಾರೀ ಮಳೆಯಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ಚಿಕ್ಕಬಳ್ಳಾಪುರ:
ಜಿಲ್ಲೆಯ ಹಲವೆಡೆ ಸೇರಿದಂತೆ ಕೊರೊನಾ ಹಾಟ್‍ಸ್ಪಾಟ್ ಗೌರಿಬಿದನೂರು ನಗರದ ಸುತ್ತಮುತ್ತಲೂ ಧಾರಕಾರ ಮಳೆಯಾಗಿದೆ. ಚಿಕ್ಕಬಳ್ಳಾಪುರ ನಗರ ಸೇರಿದಂತೆ ಸುತ್ತಮುತ್ತಲೂ ಸಹ ಸಂಜೆ ಉತ್ತಮ ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದ ಜನರಿಗೆ ಮಳೆ ತಂಪು ನೀಡಿದೆ. ಆದರೆ ಗೌರಿಬಿದನೂರು ನಗರವು ಕೊರೊನಾ ಹಾಟ್‍ಸ್ಟಾಟ್ ಕೇಂದ್ರವಾಗಿದ್ದು ಮಳೆ ಬಿದ್ದ ಪರಿಣಾಮ ವೈರಸ್ ಹರಡುಬಹದು ಎನ್ನುವ ಅನುಮಾನದ ಆತಂಕವೂ ಜನರಿಗೆ ಕಾಡತೊಡಗಿದೆ.

ಕೆಲೆವೆಡೆ ತರಕಾರಿ, ಹೂ, ಹಣ್ಣು ಸಹ ಮಳೆಯಿಂದ ಹಾನಿಯಾಗಿರುವ ಮಾಹಿತಿ ಸಿಕ್ಕಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ವೆನ್‍ಸೈಟ್ ಮಾಹಿತಿಯಂತೆ ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿಯಲ್ಲಿ 70 ಮಿಲಿ ಮೀಟರ್ ಮಳೆಯಾಗಿದೆ. ಗೌರಿಬಿದನುರು ನಗರದಲ್ಲಿ 70 ಹಾಗೂ ತಾಲೂಕಿನ ಮುದುಗೆರೆಯಲ್ಲಿ 76 ಮಿಲಿಮೀಟರ್ ಮಳೆ ಪ್ರಮಾಣ ದಾಖಲಾಗಿದೆ.

ಬಳ್ಳಾರಿ:
ಗಣಿನಾಡು ಬಳ್ಳಾರಿಯಲ್ಲಿ ಇಂದು ಸಾಧಾರಣ ಮಳೆ ಸುರಿದಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿರುಬಿಸಿಲಿನ ವಾತಾವರಣ ಇದ್ದರೂ, ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಆವರಿಸಿತು. ಆ ಬಳಿಕ ಗುಡುಗು ಸಹಿತ ಸಾಧಾರಣ ಮಳೆ ಒಂದು ಗಂಟೆ ಸುರಿಯಿತು. ಕೊರೊನಾ ವೈರಸ್ ಎಫೆಕ್ಟ್ ನಿಂದ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಬಂದೋಬಸ್ತ್ ನಲ್ಲಿದ್ದ ಪೊಲೀಸರು ಆಶ್ರಯ ಪಡೆಯಲು ಪರದಾಡಿದರು.

ಕೊಪ್ಪಳ:
ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿ, ತಾವರಗೆರ, ಸೇರಿದಂತೆ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ಕನಕಗಿರಿ ತಾಲೂಕಿನ ಗುಳದಾಳ ಗ್ರಾಮದ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ಪರಿಣಾಮ ಭತ್ತ ಬೆಳೆದ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಕೊರೊನಾ ಭೀತಿಯಿಂದ ರೈತರು, ಕೂಲಿ ಕಾರ್ಮಿಕರು, ಬಡವರು ಕಂಗೆಟ್ಟು ಹೋಗಿದ್ದಾರೆ. ಈ ಬೆನ್ನಲ್ಲೇ ಇನ್ನೇನು ಬೆಳೆ ಬೆಳೆದು ಕೈಗೆ ಸೇರುತ್ತೆ ಎನ್ನುವಷ್ಟರಲ್ಲೇ ಇಂದು ಸುರಿದ ಅಕಾಲಿಕ ಮಳೆಯಿಂದ ಭತ್ತ ನೆಲ ಕಚ್ಚಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿ ಭಾಗದಲ್ಲಿ ಭತ್ತದ ಬೆಳಗಾರರಿಗೆ ಗಾಯದ ಮೇಲೆ ಬರೆ ಎಳೆದಂತೆಯಾಗಿದೆ. ಗಂಗಾವತಿ ತಾಲೂಕಿನ ಗುಳದಾಳ, ಹೇರೂರು, ಗೋನಾಳ, ಕಲ್ಲಗುಡಿ, ಸಿಂಗನಾಳ, ಹೊಸ್ಕೇರಾ, ಸಂಗಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ಹೆಕ್ಟೇರ್ ನಲ್ಲಿ ಭತ್ತ ನೆಲ ಕಚ್ಚಿದೆ.

ರಾಯಚೂರು:
ಅಕಾಲಿಕ ಮಳೆಗೆ ರಾಯಚೂರಿನ ರೈತರು ತತ್ತರಿ ಹೋಗಿದ್ದಾರೆ. ಮಸ್ಕಿ ಹಾಗೂ ಲಿಂಗಸುಗೂರು ತಾಲೂಕಿನಲ್ಲಿ ಎಡೆಬಿಡದ ಮಳೆ ಸುರಿದಿದ್ದು, ಮಸ್ಕಿ ತಾಲೂಕಿನ ತೀರ್ಥಬಾವಿ ಗ್ರಾಮದಲ್ಲಿ ಆಲಿಕಲ್ಲು ಹೊಡೆತಕ್ಕೆ ಪಪ್ಪಾಯ ಬೆಳೆ ನೆಲಕ್ಕುರುಳಿದೆ. ಬಸನಗೌಡ ಹಾಗೂ ಚಂದ್ರಶೇಖರ ಅವರಿಗೆ ಸೇರಿದ್ದ 6 ಎಕರೆ ಹೊಲದಲ್ಲಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಬೆಳೆ ಸಂಪೂರ್ಣ ಹಾಳಾಗಿದೆ. ಅಷ್ಟೇ ಅಲ್ಲದೆ ಜಿಲ್ಲೆಯ ವಿವಿಧೆಡೆ ನೂರಾರು ಎಕರೆ ಭತ್ತದ ಬೆಳೆಯೂ ಹಾನಿಯಾಗಿದೆ.

ರಾಯಚೂರಿನ ಶ್ರೀರಾಮನಗರ ಕಾಲೋನಿಯ ಕೊದಂಡರಾಮ ದೇವಾಲಯದ ಆವರಣದಲ್ಲಿನ ಬನ್ನಿಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತ್ತು. ಸಂಜೆ ವಾಕಿಂಗ್ ಮಾಡುತ್ತಿದ್ದ ಜನ ಗಾಳಿಯಿಂದ ಮನೆ ತೆರಳಿದ್ದರು. ಹೀಗಾಗಿ ಭಾರೀ ಅನಾಹುತ ತಪ್ಪಿದೆ.

ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ವರುಣ ಅಬ್ಬರಿಸಿದ್ದಾನೆ. ಮಂಗಳೂರು ಹೊರವಲಯದ ಸುರತ್ಕಲ್, ಬಂಟ್ವಾಳ, ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕಿನ ವಿವಿಧೆಡೆ ಅಕಾಲಿಕ ಮಳೆಯಾಗಿದೆ.

ಯಾದಗಿರಿ/ ಗದಗ:
ಯಾದಗಿರಿ ಜಿಲ್ಲೆಯ ಶಹಪುರ, ಸುರಪುರ, ಗುರುಮಿಠಕಲ್ ಸೆರಿದಂತೆ ವಿವಿಧೆಡೆ ಮಳೆರಾಯ ಭಾರೀ ಸದ್ದು ಮಾಡಿದ್ದಾನೆ. ಗುಡುಗು, ಸಿಡಿಲು ಸಹಿತ ವರುಣ ಆರ್ಭಟಿಸಿದ್ದು, ಆಲೆಕಲ್ಲು ಮಳೆಯಾಗಿದೆ. ಗದಗ ನಗರ ಸೇರಿದಂತೆ ಜಿಲ್ಲೆಯ ನರಗುಂದ, ಗಜೇಂದ್ರಗಡ, ಮುಂಡರಗಿ ಭಾಗದಲ್ಲಿ ಭಾರೀ ಮಳೆಯಾಗಿದೆ.

Click to comment

Leave a Reply

Your email address will not be published. Required fields are marked *