Connect with us

Dakshina Kannada

ಸಾಧನೆಗಿಲ್ಲ ಅಂಗವಿಕಲತೆ- ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ಚಾಂಪಿಯನ್

Published

on

ಮಂಗಳೂರು: ಬಲಿಷ್ಠರ ಆಟವೆಂದೇ ಹೆಸರು ಗಳಿಸಿರುವ ಕಬಡ್ಡಿಯನ್ನು ಈಗ ವಿಕಲ ಚೇತನರೂ ಆಡಲಾರಂಭಿಸಿದ್ದು, ರಾಷ್ಟ್ರಮಟ್ಟದ ವಿಕಲ ಚೇತನರ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡ ಪ್ರಶಸ್ತಿಯನ್ನು ಗೆದ್ದಿದೆ.

ಒಂದು ಕೈ ಊನ ಇದ್ದವರು, ಕೈ ಅರ್ಧಕ್ಕೆ ಕಳಕೊಂಡವರು, ಒಂದು ಕಾಲು ಸಪೂರ ಇದ್ದವರು, ಒಂದು ಕಾಲೇ ಇಲ್ಲದವರು ಹೀಗೆ ನಾನಾ ತೆರನಾದ ದೈಹಿಕ ಊನವುಳ್ಳವರು ನಿರಾಯಾಸವಾಗಿ ಕಬಡ್ಡಿ ರೈಡ್ ಮಾಡ್ತಿರೋದನ್ನು ನೋಡಿದರೆ ಅಚ್ಚರಿಯಾಗುತ್ತೆ. ಆದ್ರೆ ದೈಹಿಕ ಬಲ ಮತ್ತು ಯುಕ್ತಿಯಿಂದಲೇ ಆಡೋ ಕಬಡ್ಡಿ ಆಟವನ್ನು ವಿಕಲಚೇತನರು, ತಾವು ಇತರೇ ಆಟಗಾರರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಅನ್ನುವಂತೆ ಆಡಿ ತೋರಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ವಿಕಲ ಚೇತನರ ಕಬಡ್ಡಿ ಕೂಟದಲ್ಲಿ 12 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ವಿಪರ್ಯಾಸ ಅಂದರೆ, ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ ನಡೆಯಿತು. ರಾಷ್ಟ್ರ ಮಟ್ಟದಲ್ಲಿ ಕೂಟ ನಡೆಯುತ್ತಿದ್ದರೂ ಪ್ರಚಾರ ಇಲ್ಲದ ಕಾರಣ ಸೀಮಿತ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದರು.

ವಿಕಲಚೇತನರು ಎಂದರೆ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವವರೇ ಹೆಚ್ಚು. ಆದರೆ ಸಾಧಿಸಬೇಕೆಂಬ ಛಲವೊಂದಿದ್ದರೆ ಎಂತವರೂ ಏನನ್ನಾದರೂ ಸಾಧಿಸಬಹುದು ಅನ್ನೋದನ್ನ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿದ್ದ ವಿಕಲಚೇತನರು ತೋರಿಸಿಕೊಟ್ಟಿದ್ದಾರೆ. ದೈಹಿಕವಾಗಿ ಬಲಿಷ್ಠರಾಗಿರುವರು ಆಡುವ ಪ್ರೋ ಕಬಡ್ಡಿಯನ್ನು ನೋಡೋರು, ಅಂಗವೈಕಲ್ಯತೆ ಇರುವವರು ತಾವೇನೂ ಕಮ್ಮಿಯಿಲ್ಲ ಎಂದು ಕಬಡ್ಡಿ ಆಡಿ ದೇಶಕ್ಕೆ ಚಾಂಪಿಯನ್ ಆಗಿದ್ದಾರೆ.

ಸಾಮಾನ್ಯವಾಗಿ ಅಂಗ ವಿಕಲಚೇತರೆಂದರೆ ವೀಲ್ ಚೇರ್ ಕೊಟ್ಟು ಬದಿಗಿರಿಸುತ್ತಾರೆ. ಆದರೆ, ಅವರಲ್ಲೂ ಆಡೋ ಹುಮ್ಮಸ್ಸು ಇರುತ್ತೆ ಅನ್ನುವುದನ್ನು ಯಾರೂ ಮನಗಾಣುವುದಿಲ್ಲ. ಪ್ಯಾರಾ ಒಲಿಂಪಿಕ್ಸ್ ಅನ್ನುವ ಪ್ರತ್ಯೇಕ ವಿಭಾಗ ಇದ್ದರೂ, ಕಬಡ್ಡಿ ಆಡಿಸಿ ನೋಡಿದ್ದಿಲ್ಲ. ಆದರೆ ಬಾಗಲಕೋಟೆ, ವಿಜಾಪುರ, ಕೊಪ್ಪಳದಂತಹ ಹಳ್ಳಿ ಹುಡುಗರೇ ಕರ್ನಾಟಕ ತಂಡದಲ್ಲಿದ್ದು ಇದೇ ಮೊದಲ ಬಾರಿಗೆ ನಡೆದ ರಾಷ್ಟ್ರೀಯ ವಿಕಲ ಚೇತನರ ಕಬಡ್ಡಿ ಪಂದ್ಯಾವಳಿಯ ಫೈನಲಿನಲ್ಲಿ ರಾಜಸ್ಥಾನ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದ್ದಾರೆ.

ಇಷ್ಟಕ್ಕೂ ಕರ್ನಾಟಕ ತಂಡವನ್ನು ಕಟ್ಟಿ ಬೆಳೆಸಿದ ಕೀರ್ತಿ ಕೋಚ್  ಶೇಖರ್ ಗೆ ಸಲ್ಲುತ್ತದೆ. ದೈಹಿಕ ಊನ ಇದ್ದವರನ್ನು ಸ್ಫೂರ್ತಿ ಕೊಟ್ಟು 18 ವರ್ಷಗಳ ಹಿಂದೆ ತಂಡ ಕಟ್ಟಿದ ಶೇಖರ್ ಸದ್ಯ ತಂಡದ ಕೋಚ್ ಆಗಿದ್ದಾರೆ. ಬಲಿಷ್ಠರ ಕ್ರೀಡೆಗೆ ವಿಕಲ ಚೇತನರ ಎಂಟ್ರಿಯಾಗಿದ್ದಾರೆ. ಸಮಾಜ ಹಾಗೂ ಸರ್ಕಾರದ ಕಡೆಯಿಂದ ಸಹಕಾರ ಸಿಕ್ಕರೆ ಇಂಥವರೂ ರಾಷ್ಟ್ರ ಮಟ್ಟದಲ್ಲಿ ಮಿಂಚಬಲ್ಲರು ಅನ್ನುವುದನ್ನು ತೋರಿಸಿದ್ದಾರೆ. ಒಟ್ಟಿನಲ್ಲಿ ಸಾಧಿಸಬೇಕೆಂಬ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಅನ್ನೋದನ್ನು ಈ ಸಾಹಸಿಗರು ನಾಡಿಗೆ ತೋರಿಸಿಕೊಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *