ನವದೆಹಲಿ: ಅತೃಪ್ತ ಶಾಸಕರು ಎಬ್ಬಿಸಿದ ಬಿರುಗಾಳಿಯಲ್ಲಿ ತೂರಿಬಂದ ರಾಜೀನಾಮೆ ಚೆಂಡು ಸುಪ್ರೀಂಕೋರ್ಟ್ ಅಂಗಳಕ್ಕೆ ಬಿದ್ದಿದೆ. ರೆಬೆಲ್ ಶಾಸಕರು ತಮ್ಮದೆ ಪಕ್ಷದ ನಾಯಕರು ಒಡ್ಡಿದ ಚಕ್ರವ್ಯೂಹ ಭೇದಿಸಲು ಭಾರೀ ಕಸರತ್ತು ನಡೆಸಿದ್ದಾರೆ.
ನಮ್ಮ ರಾಜೀನಾಮೆ ಅಂಗೀಕರಿಸುವಲ್ಲಿ ವಿಳಂಬ ಧೋರಣೆ ಅನುಸರಿಸ್ತಿದ್ದಾರೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ, ಸ್ಪೀಕರ್, ಸಿಎಂ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅತೃಪ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡಿತ್ತು. ಮುಖ್ಯ ನ್ಯಾ.ರಂಜನ್ ಗೊಗೋಯ್, ದೀಪಕ್ ಗುಪ್ತಾ, ಅನಿರುದ್ಧ್ ಬೋಸ್ ಅವರ ತ್ರಿಸದಸ್ಯ ಪೀಠದ ಎದುರು ಸ್ಪೀಕರ್ ಪರವಾಗಿ ಅಭಿಷೇಕ್ ಸಿಂಘ್ವಿ, ಸಿಎಂ ಪರ ರಾಜೀವ್ ಧವನ್ ಹಾಗೂ ಅತೃಪ್ತರ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ಮೂವರು ವಕೀಲರು ಸುಮಾರು 1 ಗಂಟೆಗಳ ವಾದ ಆಲಿಸಿದ ತ್ರಿಸದಸ್ಯ ಪೀಠ ಮಧ್ಯಾಹ್ನ 12.55ರ ಹೊತ್ತಿಗೆ ಮಧ್ಯಂತರ ಆದೇಶ ಪ್ರಕಟಿಸಿತು.
Advertisement
Advertisement
ಅತೃಪ್ತರ ಪರ ಮೊದಲಿಗೆ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ ಅವರು, ಸ್ಪೀಕರ್ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದರು. ಇದಕ್ಕೆ ಸ್ಪೀಕರ್ ಪರ ವಕೀಲರಾದ ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು. ನಂತರ, ರೋಹ್ಟಗಿ ಅವರಿಗೆ ವಾದ ಮಂಡಿಸಲು ಜಡ್ಜ್ ಅನುವು ಮಾಡಿಕೊಟ್ಟರು.
Advertisement
Advertisement
ಅತೃಪ್ತರ ಪರ ವಕೀಲರ ವಾದ ಏನು?
ಸ್ಪೀಕರ್ ಅವರು ಎರಡು ಕುದುರೆಗಳ ಮೇಲೆ ಸವಾರಿ ಮಾಡಲು ಯತ್ನಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ನನಗೆ ಆದೇಶ ಕೊಡುವಂತೆ ಇಲ್ಲ ಎನ್ನುತ್ತಾರೆ. ಕೋರ್ಟ್ ಆದೇಶದ ಅನ್ವಯ ಶಾಸಕರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ರಾಜೀನಾಮೆ ಅಂಗೀಕಾರ ಮಾಡಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ. ನ್ಯಾಯಾಂಗ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. 8 ಶಾಸಕರ ರಾಜೀನಾಮೆ ನಂತರ ಉದ್ದೇಶಪೂರ್ವಕವಾಗಿಯೇ ಅನರ್ಹತೆ ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಕೂಡಲೇ ಸ್ಪೀಕರ್ ಕೈಗೊಂಡಿರುವ ಅನರ್ಹತೆ ಅರ್ಜಿಯ ವಿಚಾರಣೆಗೆ ತಡೆ ನೀಡಬೇಕು. ಸಂವಿಧಾನದ ವಿಧಿ 32 ಅನ್ವಯ ಶಾಸಕರಿಗೆ ರಿಲೀಫ್ ನೀಡಬೇಕು ಎಂದು ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರು.
ಮುಕುಲ್ ರೋಹ್ಟಗಿ ಅವರ ವಾದ ಆಲಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅವರು, ಸುಪ್ರೀಂಕೋರ್ಟ್ ಪರಮಾಧಿಕಾರವನ್ನು ಸ್ಪೀಕರ್ ಪ್ರಶ್ನಿಸುತ್ತಿದ್ದಾರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಇಲ್ಲ ಸರ್. ಆ ರೀತಿ ಏನಿಲ್ಲ. ರಮೇಶ್ ಕುಮಾರ್ ಅವರು ಹಾಗೆ ಹೇಳಿಲ್ಲ ಎಂದು ತಮ್ಮ ವಾದವನ್ನು ಆರಂಭಿಸಿದರು.
ಸ್ಪೀಕರ್ ಪರ ವಕೀಲರ ವಾದ ಏನು?
1974ರ ತಿದ್ದುಪಡಿ ಅನ್ವಯ ಶಾಸಕರ ರಾಜೀನಾಮೆಯನ್ನು ವಿಚಾರಣೆ ಮಾಡಿಯೇ ಸ್ಪೀಕರ್ ಅಂಗೀಕರಿಸಬೇಕು. ಅನರ್ಹತೆ ಅರ್ಜಿಯ ವಿಚಾರಣೆ ಶುರುವಾದ ಮೇಲೆ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಅನರ್ಹತೆಯ ತೂಗುಗತ್ತಿಯಿಂದ ಪಾರಾಗುವ ಸಲುವಾಗಿಯೇ ಈ ಶಾಸಕರು ರಾಜೀನಾಮೆ ನೀಡಿದ್ದಾರೆ. ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೋ? ಇಲ್ಲವೋ ಎಂದು ಸ್ಪೀಕರ್ ಪರಿಶೀಲಿಸಬೇಕು. ಹೀಗಾಗಿ ಇಂತಿಷ್ಟೇ ಅವಧಿಯಲ್ಲಿ ರಾಜೀನಾಮೆ ಅಂಗೀಕರಿಸಿ ಅಂತ ಗಡುವು ವಿಧಿಸಬೇಡಿ. ರಮೇಶ್ ಕುಮಾರ್ ಅವರ ವಿರುದ್ಧ ಅತೃಪ್ತರು ಮಾಡಿರುವ ಆರೋಪ ಸರಿಯಲ್ಲ. ಸಂವಿಧಾನದ ಪರಿಧಿಯಲ್ಲಿಯೇ ಸ್ಪೀಕರ್ ಕೆಲಸ ಮಾಡುತ್ತಿದ್ದಾರೆ. ಅವರು ಸದನದ ಹಿರಿಯರಿದ್ದಾರೆ. ಅವರಿಗೆ ಸಂವಿಧಾನದ ಅರಿವಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಸಿಎಂ ಪರ ವಕೀಲರ ವಾದ ಏನಿತ್ತು?
ಸರ್ಕಾರ ಹಗರಣಗಳಲ್ಲಿ ಮುಳುಗಿದೆ ಎಂದು ಅತೃಪ್ತರು ಹೇಳಿರುವುದು ಸುಳ್ಳು. ರಾಜೀನಾಮೆ ನೀಡಿದ ಶಾಸಕರೊಬ್ಬರ ಹೆಸರು ಹಗರಣವೊಂದರಲ್ಲಿ ಕೇಳಿಬಂದಿದೆ. ಇದು ರಾಜಕೀಯ ಪ್ರೇರಿತ ದೂರು. ಇದನ್ನು ಮಾನ್ಯ ಮಾಡಬೇಡಿ. ಅತೃಪ್ತ ಶಾಸಕರ ದೂರಿನ ಸಂಬಂಧ ಯಾವುದೇ ತೀರ್ಪು ಹೊರಡಿಸಬೇಡಿ. ಸ್ಪೀಕರ್ ಗೆ ರಾಜೀನಾಮೆ ಅರ್ಜಿಗಳನ್ನು ಇತ್ಯರ್ಥಪಡಿಸಲು ಗಡುವು ನೀಡಬೇಡಿ. ಹರ್ಯಾಣ ಪ್ರಕರಣದಲ್ಲಿ ಸ್ಪೀಕರ್ ಗೆ ಹೈಕೋರ್ಟ್ 4 ತಿಂಗಳು ಗಡುವು ನೀಡಿತ್ತು ಎಂದು ರಾಜೀವ್ ಧವನ್ ಅವರು ಪ್ರಸ್ತಾಪಿಸಿದರು.
ಈ ಮೂವರ ವಾದ ಆಲಿಸಿದ ಸಿಜೆ ಗೊಗೊಯ್ ನೇತೃತ್ವದ ಪೀಠ, ಶಾಸಕರ ಅನರ್ಹತೆ ಬಗ್ಗೆ ಉಲ್ಲೇಖಿಸಲಾಗಿರುವ ಸಂವಿಧಾನದ 190 ವಿಧಿ ಮತ್ತು ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಇರುವ 361ನೇ ವಿಧಿಯ ಬಗ್ಗೆ ಇಲ್ಲಿ ಹಲವು ಪ್ರಶ್ನೆಗಳು ಎದ್ದಿದೆ. ಸ್ಪೀಕರ್ ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬಹುದೋ. ಬೇಡವೋ ಎಂಬ ಪ್ರಶ್ನೆ ಎದ್ದಿದೆ. ಸಾಂವಿಧಾನಿಕ ಪೀಠದಲ್ಲಿ ಈ ಪ್ರಕರಣದ ವಿಚಾರಣೆಯ ಅಗತ್ಯತೆ ಇದೆಯಾ ಅಂತ ಪರಿಶೀಲಿಸಬೇಕಿದೆ. ಸ್ಪೀಕರ್ ಶಾಸಕರ ರಾಜೀನಾಮೆ, ಅನರ್ಹತೆ ವಿಚಾರಣೆ ಕೈಗೊಳ್ಳಬಾರದು. ಮಂಗಳವಾರದವರೆಗೂ ಸ್ಪೀಕರ್ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮಧ್ಯಂತರ ಆದೇಶ ಹೊರಡಿಸಿತು.