– ರಾಜ್ಯದಲ್ಲಿ ಒಟ್ಟು 25 ಮಂದಿ ಬಿಡುಗಡೆ
– ಮೊದಲ ಬಾರಿಗೆ ಮಂಡ್ಯ, ಗದಗದಲ್ಲಿ ಕೊರೊನಾ ಪತ್ತೆ
– 4,030 ಐಸೋಲೇಷನ್ ಬೆಡ್‍ಗಳು ಸಿದ್ಧ
ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಪ್ರಕರಣಗಳು ಕೇಳಿ ಬಂದಿದ್ದರಿಂದ ಮಸೀದಿಗೆ ಬರಲೇಬಾರದು. ಅಷ್ಟೇ ಅಲ್ಲದೆ ಗೇಟ್ ಹತ್ತಿರಕ್ಕೂ ಬಿಡಬಾರದು ಅಂತ ವಕ್ಫ್ ಬೋರ್ಡ್ ನಿಂದ ಆದೇಶವಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಒಟ್ಟು 175 ಕೊರೊನಾ ಸೋಂಕಿತರಿದ್ದಾರೆ. ಮಂಗಳವಾರ ಸಂಜೆಯ ಸಿಕ್ಕ ಮಾಹಿತಿ ಪ್ರಕಾರ ಒಂದೇ ದಿನದಲ್ಲಿ 12 ಜನರಿಗೆ ಪಾಸಿಟಿವ್ ಬಂದಿದೆ. ವಿದೇಶದಿಂದ ಬಂದವರೆಲ್ಲರ ಹೋಂ ಕ್ವಾರಂಟೈನ್ ಮುಕ್ತಾಯವಾಗಿದೆ. ಈಗ ಯಾರು ಹೋಂ ಕ್ವಾರಂಟೈನ್‍ನಲ್ಲಿ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಅವರ ಮೇಲೆ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ರಾಜ್ಯದಲ್ಲಿ 9 ಡೆಡಿಕೇಟ್ ಕೋವಿಡ್-19 ಹಾಸ್ಪಿಟಲ್‍ಗಳು ಇದ್ದವು. ಈಗ ಮತ್ತೆ 8 ಆಸ್ಪತ್ರೆಗಳು ಸೇರ್ಪಡೆ ಆಗಿದ್ದು, ಒಟ್ಟು 17 ಆಸ್ಪತ್ರೆಗಳು ಕೋವಿಡ್ ಹಾಸ್ಪಿಟಲ್‍ಗಳಾಗಿವೆ. ರಾಜ್ಯದಲ್ಲಿ 4,030 ಐಸೋಲೇಷನ್ ಬೆಡ್‍ಗಳನ್ನು ಸಿದ್ಧಪಡಿಕೊಳ್ಳಲಾಗಿದೆ, 494 ಐಸಿಯುಗಳು ಇವೆ ಎಂದು ಹೇಳಿದರು.
Advertisement
ಭಟ್ಕಳ, ನಂಜನಗೂಡು, ಗೌರಿಬಿದನೂರು ಹಾಟ್‍ಸ್ಪಾಟ್‍ನಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಸೋಂಕು ಪೀಡಿತ ಪ್ರದೇಶದಲ್ಲಿ ಯಾರಿಗಾದ್ರೂ ಪ್ಲೂನಂತಹ ಲಕ್ಷಣ ಕಂಡುಬಂದರೆ ಅವರಿಗೆ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಆಹಾರಧಾನ್ಯ ದಾಸ್ತುನು ಇದೆ. ಎಲ್ಲೂ ಕೊರತೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
Advertisement
ಲಾಕ್‍ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಡಾ.ದೇವಿಶೆಟ್ಟಿ, ಜಯದೇವ ಮಂಜುನಾಥ್ ಬಳಿ ನಾವು ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಗದಗ ಹಾಗೂ ಕಲಬುರಗಿಯ ವ್ಯಕ್ತಿಗಳಿಗೆ ಕೊರೊನಾ ಪಾಸಿಟಿವ್ ವಿಚಾರವಾಗಿ ಮಾತನಾಡಿ ಸಚಿವರು, ಈಗಾಗಲೇ ಉಸಿರಾಟದ ತೊಂದರೆಯಿದ್ದವರ ಸ್ಯಾಂಪಲ್ಸ್ ಕಲೆಕ್ಟ್ ಮಾಡಿದ್ವಿ. ಆಗ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈಗ ವೈದ್ಯಕೀಯ ತನಿಖೆ ಶುರುಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಇಂದು 12 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಮಂಡ್ಯದಲ್ಲಿ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋದವರ ನಿರ್ಲಕ್ಷ್ಯದಿಂದ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೂ ಕೊರೊನಾ ಪಾಸಿಟಿವ್ ಕಂಡು ಬರುತ್ತಿದೆ.
ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ನಿಜಾಮುದ್ದೀನ್‍ಗೆ ಹೋಗಿ ಬಂದವರ ಸಂಪರ್ಕದಲ್ಲಿರುವವರಿಗೆ ಕೊರೊನಾ ಸೋಂಕು ತಗಲಿದ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ನಿಜಾಮುದ್ದೀನ್‍ಗೆ ಹೋಗಿ ಬಂದವರು ಸರಿಯಾಗಿ ಕ್ವಾರಂಟೈನ್ ಆಗದ ಪರಿಣಾಮ ಈಗ ಅವರ ಜೊತೆ ಸಂಪರ್ಕದಲ್ಲಿದ್ದವರಿಗೂ ಕೊರೋನಾ ಭೀತಿ ಉಂಟಾಗಿದೆ.
ಕೊರೊನಾ ಸೋಂಕಿತರ ವಿವರಗಳು
ರೋಗಿ 164 – 33 ವರ್ಷದ ಪುರುಷನಾಗಿದ್ದು, ಬಾಗಲಕೋಟೆಯ ಮುಧೋಳ್ ನಿವಾಸಿ. ಮಾರ್ಚ್ 13 ರಿಂದ 18ರವರೆಗೆ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದ್ಯಕ್ಕೆ ಬಾಗಲಕೋಟೆಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 165 – 41 ವರ್ಷದ ಮಹಿಳೆಯಾಗಿದ್ದು ಬಾಗಲಕೋಟೆ ನಿವಾಸಿಯಾಗಿದ್ದಾರೆ. ಇವರು 125ರ ಸೋಂಕಿತ ರೋಗಿಯ ನೆರೆಹೊರೆಯವರು. ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗಿ 166 – 80 ವರ್ಷ ವೃದ್ಧೆಯಾಗಿದ್ದು, ಗದಗ ನಿವಾಸಿ ಜಿಲ್ಲೆಯವರಾಗಿದ್ದಾರೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಸೋಂಕಿತರ ಜೊತೆ ಸಂಪರ್ಕವೂ ಇಲ್ಲ. ಆದರೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಬಂದಿದೆ. ಗದಗ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 167 – 29 ವರ್ಷದ ಪುರುಷನಾಗಿದ್ದು, ಬೆಂಗಳೂರು ನಗರದ ನಿವಾಸಿ. ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 168 – 50 ವರ್ಷದ ವ್ಯಕ್ತಿ ಬೆಂಗಳೂರು ನಗರದ ನಿವಾಸಿಯಾಗಿದ್ದು, ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ರೋಗಿ 169 – 35 ವರ್ಷದ ಬೆಂಗಳೂರು ನಗರದ ನಿವಾಸಿಯಾಗಿದ್ದು, ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ರೋಗಿ 170 – 68 ವರ್ಷ ವೃದ್ಧನಾಗಿದ್ದು, ಬೆಂಗಳೂರಿನ ಬಿಬಿಎಂಪಿ ನಿವಾಸಿಯಾಗಿದ್ದಾರೆ. ದುಬೈನಿಂದ ಬಂದಿರುವ ಇತಿಹಾಸವಿದೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 171 – 32 ವರ್ಷದ ಪುರುಷನಾಗಿದ್ದು, ಮಂಡ್ಯ ನಿವಾಸಿ. ಇವರು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 172 – 36 ವರ್ಷದ ಪುರುಷನಾಗಿದ್ದು, ಮಂಡ್ಯ ನಿವಾಸಿ. ಇವರು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಕೊರೊನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 173 – 65 ವರ್ಷದ ವ್ಯಕ್ತಿ, ಮಂಡ್ಯ ನಿವಾಸಿ. ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 174 – 28 ವರ್ಷದ ಮಹಿಳೆಯಾಗಿದ್ದು, ಕಲಬುರಗಿ ನಿವಾಸಿಯಾಗಿದ್ದಾರೆ. ಕೊರೊನಾ ರೋಗಿ 124 ಸೋಂಕಿತರ ಸಂಪರ್ಕದಲ್ಲಿದ್ದರು. ಅಲ್ಲದೇ ಈ ರೋಗಿಯ ಸೊಸೆಯಾಗಿದ್ದಾರೆ. ಸದ್ಯಕ್ಕೆ ಕಲಬುರಗಿಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.
ರೋಗಿ 175 – 57 ವರ್ಷದ ಪುರುಷನಾಗಿದ್ದು, ಕಲಬುರಗಿ ನಿವಾಸಿ. ಟ್ರಾವೆಲ್ ಹಿಸ್ಟರಿ ಇರದೇ ಇದ್ದರೂ ಅತಿ ಹೆಚ್ಚು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಲಬುರಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗದಗ ಹಾಗೂ ಕಲಬುರಗಿಯ ಎರಡು ಹೊಸ ಪ್ರಕರಣದಿಂದ ಆರೋಗ್ಯ ಇಲಾಖೆಗೆ ಆತಂಕ ಶುರುವಾಗಿದೆ. ಯಾಕೆಂದರೆ ಗದಗ ಹಾಗೂ ಕಲಬುರ್ಗಿ ಇಬ್ಬರು ಸೋಂಕಿತರಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲ, ಸೋಂಕಿತರ ಜೊತೆ ಸಂಪರ್ಕವೂ ಇಲ್ಲ. ಆದರೂ ಉಸಿರಾಟದ ತೊಂದರೆ ಮತ್ತು ಶ್ವಾಸಕೋಶ ಸಮಸ್ಯೆ ಇದೆ. ಇಂತಹವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಮೂಲಕ ಉಸಿರಾಟದ ತೊಂದರೆ ಇರುವವರಿಗೆ ಅತೀ ಬೇಗ ಕೊರೊನಾಗೆ ತುತ್ತಾಗುತ್ತಿರುವ ಪ್ರಕರಣ ಕಂಡುಬರುತ್ತಿದೆ.