– ವಿಷ ಕುಡಿಯುವ ಪರಿಸ್ಥಿತಿ ಬಂದಿದೆ ಅಂತ ಅಳಲು
ಹುಬ್ಬಳ್ಳಿ: ಕಳೆದ ಎರಡೂವರೇ ವರ್ಷದಿಂದ ಒಂದು ರೂಪಾಯಿ ಲಾಭ ಆಗಿಲ್ಲ, ಸಾಲ ಸೋಲ ಮಾಡಿ ಟೆಂಡರ್ನಲ್ಲಿ (Tender) ಪಾಲ್ಗೊಂಡು ಕಾಮಗಾರಿ ನಡೆಸಿ ಇದೀಗ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ಹೀಗಾಗಿ ಬಾಕಿ ಬಿಲ್ 37 ಸಾವಿರ ಕೋಟಿ ರೂ. ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 6 ರಂದು ಬೆಂಗಳೂರಿನಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ (Karnataka Contractors Association) ಅಧ್ಯಕ್ಷ ಆರ್. ಮಂಜುನಾಥ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಮಾ. 5 ದು ಧರಣಿಗೆ ನಿರ್ಧರಿಸಲಾಗಿತ್ತು. ಪೊಲೀಸ್ ಅನುಮತಿ ಇತ್ಯಾದಿ ಕಾರಣಕ್ಕೆ ಒಂದು ದಿನ ಮುಂದೂಡಲಾಗಿದೆ. ಅಂದು ರಾಜ್ಯಾದ್ಯಂತ ಸುಮಾರು 30 ಸಾವಿರ ಗುತ್ತಿಗೆದಾರರು ಸೇರಿ ಪ್ರತಿಭಟನೆ ನಡೆಸುತ್ತೇವೆ. ಇದಕ್ಕೆ ಸರ್ಕಾರ ಸ್ಪಂದಿಸದೇ ಇದ್ದರೆ ಏಪ್ರಿಲ್ನಲ್ಲಿ ಅನಿರ್ದಿಷ್ಠಾವಧಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗುವುದು ಎಂದರು.
ಬಾಕಿ ಬಿಲ್ ಬಿಡುಗಡೆಗಾಗಿ ನೂರಾರು ಸಲ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಲಾಗಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಅಧಿಕೃತವಾಗಿ ಗುತ್ತಿಗೆದಾರರ ಸಂಘದೊಂದಿಗೆ ಸಭೆ ನಡೆಸಿದರೆ ಶೇ. 75 ರಷ್ಟು ಸಮಸ್ಯೆ ಬಗೆಹರಿಯುತ್ತವೆ. ಈ ಹಿಂದೆ 2-3 ಸಲ ಸಭೆ ಕರೆದು ಸಿಎಂ ಮುಂದೂಡಿದ್ದಾರೆ. ರಾಜ್ಯದ 1.50 ಲಕ್ಷ ಬಡ, ಮಧ್ಯಮ ಗುತ್ತಿಗೆದಾರರ ನೋವು, ಸಂಕಟವನ್ನ ಸರ್ಕಾರ ಏಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರಮುಖವಾಗಿ ನಗರಾಭಿವೃದ್ಧಿ, ವಸತಿ, ವಕ್ಫ್ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳು ಮಧ್ಯವರ್ತಿಗಳ ಮೂಲಕ ಅಧಿಕಾರ ನಡೆಸುತ್ತಿವೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನಮ್ಮ ಸಮಸ್ಯೆಗೆ ಒಂದಿಷ್ಟು ಸ್ಪಂದಿಸಿದ್ದಾರೆ. ಅವರಿಗೆ ನಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದೇವೆ ಎಂದರು.
ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹಣ ಬಾಕಿ?
ಲೋಕೋಪಯೋಗಿ ಇಲಾಖೆಯ 8,300 ಕೋಟಿ ರೂ. ಜಲ ಸಂಪನ್ಮೂಲ 13,000 ಕೋಟಿ, ಗ್ರಾಮೀಣಾಭಿವೃದ್ಧಿ 3,800 ಕೋಟಿ, ನಗರಾಭಿವೃದ್ಧಿ ಇಲಾಖೆ 2,000 ಕೋಟಿ, ವಸತಿ ಮತ್ತು ವಕ್ಫ್ ಇಲಾಖೆಯಲ್ಲಿ 2,800 ಕೋಟಿ, ಬಿಬಿಎಂಪಿ 1,600 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ ಗುತ್ತಿಗೆದಾರರಿಂದ ಯಾವುದೇ ಕಮಿಷನ್ ತೆಗೆದುಕೊಳ್ಳುವುದಿಲ್ಲ. ನಿಮ್ಮ ಬಿಲ್ ಪಾವತಿಸುತ್ತೇವೆ ಎಂದು ಸ್ವತಃ ಸಿದ್ದರಾಮಯ್ಯ ಅವರು ಹೇಳಿದ್ದರು. ಆದರೆ, ಕಳೆದ ಸರ್ಕಾರಕ್ಕಿಂತ ಹಣ ಬಿಡುಗಡೆ ವಿಚಾರದಲ್ಲಿ ಹೆಚ್ಚಿನ ಕಮಿಷನ್ ನೀಡಬೇಕಾಗಿ ಬಂದಿರುವುದು ದುರ್ದೈವದ ಸಂಗತಿ ಎಂದು ಬೇಸರಿಸಿದರು.
ಪ್ಯಾಕೇಜ್ ಟೆಂಡರ್ಗಳಿಗೆ ಹೊರ ರಾಜ್ಯದವರಿಗೆ ಮಣೆ ಹಾಕಲಾಗುತ್ತಿದೆ. ಕಮಿಷನ್ ಜಾಸ್ತಿ ಇರುವುದೇ ಇದಕ್ಕೆ ಕಾರಣ ಇರಬಹುದು. ಹಣ ಬಿಡುಗಡೆ ವಿಳಂಬವಾಗುವ ಟೆಂಡರ್ಗಳನ್ನು ಮಾತ್ರ ನಮಗೆ ನೀಡಲಾಗುತ್ತಿದೆ. ಇದು ನಿಲ್ಲಬೇಕು. ರಾಜ್ಯದ ಹಲವು ಕಡೆಗಳಲ್ಲಿ ಕಾಮಗಾರಿ ಆರಂಭಕ್ಕೆ ಪೂಜೆ ನೆಪದಲ್ಲಿ ಕೆಲ ಶಾಸಕರು ಆರು ತಿಂಗಳು ವರ್ಷಗಟ್ಟಲೇ ಕಾಯಿಸುತ್ತಾರೆ. ಇದರಿಂದ ಉಂಟಾಗುವ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರನ್ನೇ ಹೊಣೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

